ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ-ಆಕಾಶ ಒಂದಾಗಿಸಿದ ಮಂಜಿನ ತೆರೆ...

Last Updated 23 ಜುಲೈ 2012, 7:45 IST
ಅಕ್ಷರ ಗಾತ್ರ

ಕಾರ್ಗಲ್: ಶರಾವತಿ ಕಣಿವೆ ಪ್ರದೇಶದ ಮೇಲ್ಭಾಗವಾದ ಕಾರ್ಗಲ್, ಲಿಂಗನಮಕ್ಕಿ, ಇಡುವಾಣಿ ಇನ್ನಿತರ ಪ್ರದೇಶಗಳಲ್ಲಿ 48 ಗಂಟೆಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಶರಾವತಿ ನದಿಯ ಜಲಧಾರೆ ಜೋಗದಲ್ಲಿ ಭಾರೀ ಸದ್ದಿನೊಂದಿಗೆ ಧುಮ್ಮಿಕ್ಕುತ್ತಾ ಪ್ರವಾಸಿಗರನ್ನು ಸೆಳೆಯುತ್ತಿರುವ ದೃಶ್ಯ ಭಾನುವಾರ ಕಂಡುಬಂತು.

ಜಲಪಾತದ ಮೇಲ್ಭಾಗದ ಸೀತಾಕಟ್ಟೆ ಸೇತುವೆಯ ಕೆಳಗೆ ಕೆಂಪು ಬಣ್ಣದಿಂದ ಹರಿಯುವ ಶರಾವತಿ ನದಿ 960 ಅಡಿ ಎತ್ತರದಿಂದ ಜಲಪಾತದಲ್ಲಿ ಧುಮ್ಮಿಕ್ಕುವಾಗ ಬಂಡೆಗಳ ಮೇಲೆ ಅಪ್ಪಳಿಸಿ ಬಿಳಿ ಹಾಲ್ನೊರೆಯಂತೆ ಚಿಮ್ಮುತ್ತಾ ಮತ್ತೆ ಕೆಂಬಣ್ಣದಲ್ಲಿ ಕಣಿಯಾಳದಲ್ಲಿ ಗಂಭೀರವಾಗಿ ಹರಿದು ಹೋಗುವುದನ್ನು ಪ್ರವಾಸಿಗರು ನಿಬ್ಬೆರಗಾಗಿ ನೋಡುತ್ತಾ ನಿಂತಿದ್ದರು.

ಸಾವಿರಾರು ವಾಹನಗಳಲ್ಲಿ ಹತ್ತಾರು ಸಾವಿರ ಪ್ರವಾಸಿಗರು ಜೋಗ ಜಲಪಾತದ ಮುಂಭಾಗದಲ್ಲಿ ಮತ್ತು ಬ್ರಿಟಿಷ್ ಬಂಗ್ಲೆಯ ಸಮೀಪದಲ್ಲಿ ನೆರೆದಿದ್ದರು.

ಜಲಪಾತವು ಬ್ರಿಟಿಷ್ ಬಂಗ್ಲೆಯಿಂದ ಒಂದು ಬಗೆಯಲ್ಲಿ ಕಂಡು ಬರುತ್ತಿದ್ದರೆ, ರಾಣಿ ಜಲಪಾತದ ಮೇಲ್ಭಾಗದಿಂದ ಮತ್ತೊಂದು ರೀತಿಯಲ್ಲಿ ಕಂಡುಬರುತ್ತಿತ್ತು. ಪ್ರಮುಖ ಅತ್ಯಾಕರ್ಷಕ ನೋಟದ ತಾಣವಾದ ಜಲಪಾತದ ಮುಂಭಾಗದಿಂದ ಕಾಣಿಸುವ ಭಂಗಿ ಜಗತ್ಪ್ರಸಿದ್ಧವಾದರೆ, ಕಣಿವೆಯ ಆಳಕ್ಕೆ ಇಳಿಯುವ ಸಾಹಸಿಗರಿಗೆ ಜಲಪಾತ ಕಂಡುಬರುವ ಕೋನವೇ ಬೇರೆಯಾಗಿರುತ್ತದೆ.

ನಾನಾ ಕೋನಗಳಿಂದ ಪ್ರವಾಸಿಗರು ರಾಜಾ, ರೋರರ್, ರಾಕೇಟ್, ರಾಣಿ ಜಲಪಾತಗಳ ದರ್ಶನ ಮಾಡುವಾಗ, ಕಣಿವೆಯ ಆಳದಿಂದ ಮೇಲೇಳುವ ಮಂಜು ಬಿಳಿ ಪರದೆಯಂತೆ ಮೂಡಿ ಭೂಮಿ ಆಕಾಶವನ್ನು ಒಂದುಗೂಡಿಸುತ್ತಾ, ಜಲಪಾತದ ಒಂದೊಂದು ಮಜಲುಗಳನ್ನು ಮುಚ್ಚಿ ತೆರೆಯುತ್ತಾ ಸಾಗುವ ದೃಶ್ಯವನ್ನು  ಪ್ರವಾಸಿಗರು ಮಳೆಯಲ್ಲಿಯೇ ತೊಯ್ದು ಆಸ್ವಾದಿಸುತ್ತಾ ಕುಣಿಯುತ್ತಾ ಕೇಕೆ ಹಾಕುತ್ತಾ ಸಂಭ್ರಮಿಸುವ ದೃಶ್ಯ ಜೋಗದಲ್ಲಿ ಭಾನುವಾರದ ವಿಶೇಷವೇನೋ ಎಂಬಂತೆ ಕಂಡುಬಂದಿತ್ತು.

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕಳೆದ 48 ಗಂಟೆಗಳಲ್ಲಿ 4ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ ಎಂದು ಕೆಪಿಸಿ ಮೂಲಗಳು ತಿಳಿಸಿದೆ.

ಭಾನುವಾರ ಅಣೆಕಟ್ಟೆಯ ನೀರಿನ ಮಟ್ಟ 1,758 ಅಡಿಗೆ ಏರಿಕೆಯಾಗಿದೆ. ಜಲಾಶಯಕ್ಕೆ ಒಳಹರಿವು 34,455 ಕ್ಯೂಸೆಕ್ ಇದ್ದು, ಹೊರಹರಿವು 85 ಕ್ಯೂಸೆಕ್ ಇದೆ. ಜಲಾನಯನ ಪ್ರದೇಶದಲ್ಲಿ 77.8 ಮಿ.ಮೀ. ಮಳೆಯಾಗಿದೆ.

ಕಳೆದ ವರ್ಷದ ನೀರಿನಮಟ್ಟಕ್ಕೆ ಹೋಲಿಸಿದಾಗ ಇಂದು ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು 30 ಅಡಿ ಕಡಿಮೆಯಿದೆ ಎಂದು ಕೆಪಿಸಿ ಮೂಲಗಳು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT