ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಕೇಂದ್ರದಲ್ಲಿ ಮಧ್ಯವರ್ತಿಗಳ ಕಾಟ

Last Updated 27 ಅಕ್ಟೋಬರ್ 2011, 9:10 IST
ಅಕ್ಷರ ಗಾತ್ರ

ತುಮಕೂರು: ವಿದ್ಯುತ್ ಸಮಸ್ಯೆ, ಸಿಬ್ಬಂದಿ ಕೊರತೆ ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ತಾಲ್ಲೂಕಿನ ವಿವಿಧ ಹೋಬಳಿ ಕೇಂದ್ರಗಳಲ್ಲಿ ಭೂಮಿ ಕೇಂದ್ರಗಳು ನಾಮಕಾವಸ್ತೆ ಕೆಲಸ ಮಾಡುತ್ತಿರುವುದರಿಂದ ತಾಲ್ಲೂಕು ಕೇಂದ್ರದ ಭೂಮಿ ಕೇಂದ್ರದತ್ತ ರೈತರ ಪ್ರವಾಹವೇ ಹರಿದು ಬರುತ್ತಿದೆ.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿರುವ ಭೂಮಿ ಕೇಂದ್ರದಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 5.30ರ ವರೆಗೆ ರೈತರು ಸರತಿಯಲ್ಲಿ ನಿಂತು ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮ್ಯುಟೇಶನ್‌ಗಳನ್ನು ಸಂಜೆ 5.30ರ ನಂತರ ನೀಡುವ ವ್ಯವಸ್ಥೆ ಜಾರಿ ಮಾಡಿರುವುದರಿಂದ `ಭೂಮಿ~ ಕೇಂದ್ರದ ಕೆಲಸವೆಂದರೆ ಚಿತ್ರಹಿಂಸೆ ಎಂದೇ ರೈತರು ಪರಿಗಣಿಸುತ್ತಾರೆ.

`ಬೆಳೆಸಾಲ, ಬೆಳೆವಿಮೆ, ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ಪಹಣಿ ಕೊಡಲೇಬೇಕು. ಕಂಪ್ಯೂಟರ್‌ನಲ್ಲಿ ಒಂದು ಪ್ರಿಂಟ್‌ಔಟ್ ತೆಗೆದುಕೊಡಲು ಎಷ್ಟೊತ್ತು ಬೇಕು ಸ್ವಾಮಿ. ಇಲ್ಲಿ ದಿನಗಟ್ಟಲೆ ಕಾಯಿಸ್ತಾರೆ. ಮಧ್ಯಾಹ್ನ 3ರ ನಂತರ ಬಂದವರಿಗೆ ಅವತ್ತೇ ಪಹಣಿ ಸಿಗುತ್ತೆ ಎಂಬ ಖಾತ್ರಿಯೇ ಇಲ್ಲ~ ಎಂದು ರೈತ ಶೇಖರಪ್ಪ ಬೇಸರ ವ್ಯಕ್ತಪಡಿಸಿದರು.

ಭೂಮಿ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿಯೂ ಮೇರೆ ಮೀರಿದೆ ಎಂದು ರೈತರು ದೂರಿದರು. `ಕ್ಯಾಬಿನ್‌ನಲ್ಲಿ ಸಿಬ್ಬಂದಿ ಹೊರತು ಪಡಿಸಿ ಅನ್ಯರಿಗೆ ಪ್ರವೇಶವಿಲ್ಲ~ ಎಂಬ ಫಲಕವಿದೆ. ಆದರೆ ಮಧ್ಯವರ್ತಿಗಳು ಬೇಕಾದಂತೆ ಒಳಗೆ ಹೋಗಿ ಕೆಲಸ ಮಾಡಿಸಿಕೊಂಡು ಬರುತ್ತಾರೆ. ಸರ್ಕಾರದ ವಿವಿಧ ಇಲಾಖೆಗಳ ಸಬ್ಸಿಡಿ ಕೊಡಿಸುವ, ಎಲ್ಲೆಡೆ ಸಂಪರ್ಕ ಕೊಂಡಿ ಹೊಂದಿರುವ ಪ್ರಭಾವಿ ಮಧ್ಯವರ್ತಿಗಳಿದ್ದರೆ ನಿಮಗೆ ಪಹಣಿ ಸಿಗುವುದು ಇನ್ನೂ ಸುಲಭ ಎಂದು ರೈತರೊಬ್ಬರು ಆರೋಪಿಸಿದರು.

ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ತಾಳ್ಮೆ ಕಳೆದುಕೊಂಡ ರೈತರು ಮಧ್ಯವರ್ತಿಗಳೊಂದಿಗೆ ವಾಗ್ಯುದ್ಧ ನಡೆಸುವುದು ಇಲ್ಲಿ ಸಾಮಾನ್ಯ ದೃಶ್ಯವಾಗಿದೆ. `ಭೂ ಪ್ರದೇಶದ ಮಾಹಿತಿಯನ್ನು ಇಂಟರ್‌ನೆಟ್‌ಗೆ ಅಪ್‌ಲೋಡ್ ಮಾಡಿದ ನಂತರ ರಿಟೇಲ್ ಏಜೆನ್ಸಿಗಳ ಮೂಲಕ ನಿಗದಿತ ದರ ಪಡೆದು ಪ್ರಿಂಟ್‌ಔಟ್ ತೆಗೆದುಕೊಡುವ ಅಥವಾ ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ ಕಟ್ಟಿಸಿಕೊಂಡು ಪಹಣಿ ವಿತರಿಸುವ ವ್ಯವಸ್ಥೆ ಜಾರಿ ಮಾಡಿದರೆ ಸಮಸ್ಯೆ ಬಹುತೇಕ ಪರಿಹಾರವಾಗುತ್ತದೆ~ ಎಂದು ಸಲಹೆ ನೀಡುತ್ತಾರೆ ವಕೀಲರೂ ಆಗಿರುವ ಯುವ ರೈತ ರವೀಂದ್ರ.

`ಪ್ರತಿದಿನ ನೂರಾರು ರೈತರು ಎಡತಾಕುತ್ತಿರುವ ಭೂಮಿ ಕೇಂದ್ರದಲ್ಲಿ ಕೌಂಟರ್‌ಗಳ ಸಂಖ್ಯೆಯನ್ನು ಶೀಘ್ರ ಹೆಚ್ಚಿಸಬೇಕು. ಪಹಣಿ ಮತ್ತು ಮ್ಯುಟೇಷನ್‌ಗಳನ್ನು ಏಕಕಾಲಕ್ಕೆ ವಿತರಿಸುವ ಪದ್ಧತಿ ಜಾರಿಯಾಗಬೇಕು~ ಎಂದು ಆಗ್ರಹಿಸುತ್ತಾರೆ.
 

ಗುರುತಿಸುವುದು ಕಷ್ಟ...
ಭೂಮಿ ಕೌಂಟರ್‌ನಲ್ಲಿ ರೈತರು ಸದಾಕಾಲ ಕಿಕ್ಕಿರಿದು ತುಂಬಿರುತ್ತಾರೆ. ಯಾರು ಮಧ್ಯವರ್ತಿಗಳು, ಯಾರು ನಿಜವಾದ ರೈತರು ಎಂದು ಗುರುತಿಸುವುದು ಅಸಾಧ್ಯ. ಯಾರನ್ನೂ ಕ್ಯಾಬಿನ್‌ಗೆ ಬಿಡುತ್ತಿಲ್ಲ. ಎಲ್ಲರೂ ಸರತಿಯಲ್ಲಿ ನಿಂತೇ ಪಹಣಿ ಪಡೆಯಬೇಕು ಎಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಪಹಣಿಗಾಗಿ ಪಾಳಿಯಲ್ಲಿ ನಿಂತ ಯಾವ ರೈತರನ್ನು ಹಿಂದಕ್ಕೆ ಕಳಿಹಿಸುತ್ತಿಲ್ಲ. ಸಂಜೆ 7ರ ವರೆಗೆ ಪಹಣಿ ವಿತರಿಸುತ್ತಿದ್ದೇವೆ. ರೈತರ ಬೇಡಿಕೆಯಂತೆ ಕೌಂಟರ್‌ಗಳ ಸಂಖ್ಯೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇನೆ. ಮಧ್ಯವರ್ತಿಗಳ ಹಾವಳಿ ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.
-ಅಹೋಬಲಯ್ಯ, ತಹಶೀಲ್ದಾರ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT