ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಮಂಜೂರಿಗೆ ಹೋರಾಟ

Last Updated 16 ಫೆಬ್ರುವರಿ 2012, 6:15 IST
ಅಕ್ಷರ ಗಾತ್ರ

ಕಾರವಾರ: ಬಗರ್‌ಹುಕುಂ ಸಾಗುವಳಿ ಭೂಮಿ ಮತ್ತು ಅರಣ್ಯ ಭೂಮಿ ಅತಿಕ್ರಮಣ ಸಕ್ರಮ ಮಾಡುವಂತೆ ಒತ್ತಾಯಿಸಿ ವಿಧಾನಸೌಧದ ಎದುರು ಮಾರ್ಚ್, ಏಪ್ರಿಲ್ ಮತ್ತು ಮೇದಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಕಾರ್ಯ ದರ್ಶಿ ಜಿ.ಸಿ.ಬಯ್ಯಾರೆಡ್ಡಿ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಾಜು 31 ಲಕ್ಷ ಎಕರೆ ಯಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರು ವವರು ಭೂಮಿ ಸಕ್ರಮಕ್ಕಾಗಿ ನೀಡಿದ 12.50 ಲಕ್ಷ ಅರ್ಜಿಗಳನ್ನು ಸರ್ಕಾರ ವಜಾ ಮಾಡಿದೆ ಎಂದರು.

ಬಹುತೇಕ ಹಿಂದುಳಿದವರು, ಬಡವರು ಸುಮಾರು 30-40 ವರ್ಷಗಳಿಂದ ಭೂಮಿ ಅತಿಕ್ರಮಿಸಿ ಕೃಷಿ ಚಟುವಟಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದ ಅವರು ಭೂಮಿ ಕೊಡಲು ಅರ್ಹವಿರುವ 4.15 ಲಕ್ಷ ಅರ್ಜಿದಾರರಿಗೆ ಕೂಡಲೇ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಬಡವರಿಗೆ ಭೂಮಿ ಮಂಜೂರು ಮಾಡುವುದನ್ನು ಬಿಟ್ಟ ಸರ್ಕಾರ ರಿಯಲ್ ಎಸ್ಟೇಟ್ ದಂಧೆ ನಡೆಸುವ ರಿಗೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಭೂಮಿ ಮಾರಾಟ ಮಾಡುತ್ತಿದೆ ಎಂದು ಬಯ್ಯಾರೆಡ್ಡಿ ಆರೋಪ ಮಾಡಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣ ಸಕ್ರಮಕ್ಕೆ ಸಲ್ಲಿಸಿದ ಸಾವಿರಾರು ಅರ್ಜಿಗಳನ್ನು ಸರ್ಕಾರ ವಜಾ ಮಾಡಿದೆ. ಕೇವಲ 707 ಬುಡ ಕಟ್ಟು ಜನಾಂಗದವರ ಭೂಮಿಯನ್ನು ಮಾತ್ರ ಸಕ್ರಮ ಮಾಡಲಾಗಿದೆ.

ವಿಚಾರಣೆಗೆ ಬಾಕಿಯಿರುವ ಅರ್ಜಿ ಗಳನ್ನು ಕೂಡಲೇ ವಿಲೇವಾರಿ ಮಾಡ ಬೇಕು. ಅರಣ್ಯ ಭೂಮಿ ಅತಿಕ್ರಮಣಕ್ಕೆ ಇತರ ಸಮುದಾಯಗಳಿಗೆ ಮೂರು ತಲೇಮಾರಿನ ದಾಖಲೆಗಳನ್ನು ಕೇಳಲಾಗಿದೆ. ಇದು ಕಷ್ಟಸಾಧ್ಯ. ಆದ್ದರಿಂದ ಕಾನೂನಿನಲ್ಲಿ ಸ್ವಲ್ಪ ಸಡಿಲಿಕೆ ತರಬೇಕು ಎಂದು ಅವರು ಆಗ್ರಹಿಸಿದರು.

ಈ ಎರಡು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುವುದು. ಮಾರ್ಚ್‌ನಲ್ಲಿ ಮೊದಲ ಹಂತವಾಗಿ ತಾಲ್ಲೂಕು ಮಟ್ಟದಲ್ಲಿ, ಏಪ್ರಿಲ್‌ನಲ್ಲಿ ಕರಾವಳಿ, ಮುಂಬೈ-ಕರ್ನಾಟಕ, ಹೈದರಾಬಾದ್-ಕರ್ನಾಟಕ, ಹಳೆ ಮೈಸೂರು ಭಾಗ ಹೀಗೆ ನಾಲ್ಕು ವಿಭಾಗಳಲ್ಲಿ ಮತ್ತು ಮೇದಲ್ಲಿ ವಿಧಾನಸೌಧದ ಎದುರು ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗು ವುದು. ಅಂದಾಜು 50 ಸಾವಿರ ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳ ಲಿದ್ದಾರೆ ಎಂದು ಬಯ್ಯಾರೆಡ್ಡಿ ನುಡಿದರು.

ಕೈಗಾರಿಕೆ ಬಂದ್: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ದೇಶದ ಎಲ್ಲ ಕಾರ್ಮಿಕ ಸಂಘಟನೆಗಳು ಒಂದಾಗಿ ಫೆ. 28ರಂದು ಪ್ರತಿಭಟನೆ ನಡೆಸಲಿವೆ. ಅಂದು ದೇಶದಾದ್ಯಂತ ಎಲ್ಲ ಕೈಗಾರಿಕೆಗಳು ಬಂದ್ ಆಗಲಿವೆ ಎಂದು ಅವರು ಹೇಳಿದರು.

ಪ್ರಾಂತ ರೈತ ಸಂಘದ ಮಂಜುನಾಥ ಪುಲ್ಕರ್, ವಿಷ್ಣು ನಾಯ್ಕ,ಭೀಮಣ್ಣ ಬೋವಿ, ವಕೀಲ ಜೋಶ, ಶಾಮನಾಥ ನಾಯ್ಕ, ಯಮುನಾ ಗಾಂವಕರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT