ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ವಾಪಸ್‌ಗೆ ಆಗ್ರಹಿಸಿ ಪ್ರತಿಭಟನೆ

Last Updated 2 ಜೂನ್ 2011, 10:05 IST
ಅಕ್ಷರ ಗಾತ್ರ

ಹಾಸನ: ವಸತಿ ನಿವೇಶನಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ತಮ್ಮಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸಿರುವುದನ್ನು ವಿರೋಧಿಸಿ ಮತ್ತು ಆ ಜಮೀನನ್ನು ತಮಗೇ ಮರಳಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಬೂವನಹಳ್ಳಿ, ಸಂಕೇನಹಳ್ಳಿ ಹಾಗೂ ದೊಡ್ಡಪುರ ಗ್ರಾಮಗಳ ನಾಗರಿಕರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಉದ್ಭವ ರಾಮೇಶ್ವರ ನೊಂದ ರೈತರ ಸಂಘದ ಆಶ್ರಯದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಇಲ್ಲಿ ವಸತಿ ನಿವೇಶನಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ನಗರಾಭಿವೃದ್ಧಿ ಪ್ರಾಧಿಕಾರದವರು 2002ರ ಡಿ.3ರಂದು ಗ್ರಾಮಸ್ಥರಿಂದ ಜಮೀನನ್ನು ವಶಪಡಿಸಿಕೊಂಡಿತ್ತು.
 
ನಿಯಮಾನುಸಾರ ಜಮೀನು ಸ್ವಾಧೀನಪಡಿಸಿಕೊಂಡ ಬಳಿಕ ಐದು ವರ್ಷದೊಳಗೆ ಅದನ್ನು ಅಭಿವೃದ್ಧಿಪಡಿಸಬೇಕು. ಇಲ್ಲವಾದಲ್ಲಿ ಒಪ್ಪಂದ ಅನೂರ್ಜಿತವಾಗುತ್ತದೆ. ಇದಲ್ಲದೆ ನಿವೇಶನ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿದ್ದ ಜಮೀನನ್ನು ಪ್ರಾಧಿಕಾರದವರು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ರೈತರು ಆರೋಪಿಸಿದರು.

ಆರ್ಥಿಕ ಸಮಸ್ಯೆಯಿಂದಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದೆ ಪ್ರಾಧಿಕಾರದವರು 2006ರ ಸೆಪ್ಟೆಂಬರ್ 29ರಂದು ಸರ್ಕಾರಕ್ಕೆ ಪತ್ರ ಬರೆದು, ಸ್ವಾಧೀನಪಡಿಸಿಕೊಂಡ ಜಾಗವನ್ನು ಸಗಟು ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಕೋರಿತ್ತು.

ಭೂಸ್ವಾಧೀನಕ್ಕಾಗಿ ಪಡೆದ ಸಾಲ ತೀರಿಸಲಾಗದೆ ಪ್ರಾಧಿಕಾರದವರು ಅನಿವಾರ್ಯವಾಗಿ ಈಕ್ರಮ ಕೈಗೊಳ್ಳಬೇಕಾಗಿ ಬಂದಿತ್ತು. ಅದೇ ವರ್ಷ ಅಕ್ಟೋಬರ್ 7ರಂದು ನಡೆದ ಸಂಪುಟ ಸಮಿತಿ ಸಭೆಯಲ್ಲಿ ಜಾಗದ ಸಗಟು ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿತ್ತು.

ಇದಾದ ಬಳಿಕ ಸರ್ಕಾರ ಬೇರೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಸ್ವಾಧೀನಪಡಿಸಿಕೊಂಡಿರುವ 453 ಎಕರೆ ಜಮೀನನ್ನು ಪ್ರಾಧಿಕಾರ ಬೇರೆ ಉದ್ದೇಶಕ್ಕೆ ಬಳಸಲು ಚಿಂತನೆ ನಡೆಸುತ್ತಿದೆ. ವಸತಿ ನಿವೇಶನಗಳನ್ನು ನಿರ್ಮಿಸಲು ಉದ್ದೇಶಿಸಿ ಸ್ವಾಧೀನಪಡಿಸಿಕೊಂಡ ಜಮೀನನ್ನು ಬೇರೆ ಕಾರ್ಯಕ್ಕೆ ಬಳಸಲು ನಾವು ಅವಕಾಶ ನೀಡುವುದಿಲ್ಲ. ಅದರ ಬದಲು ಜಮೀನನ್ನು ಮತ್ತೆ ನಮಗೆ ಮರಳಿಸಬೇಕು.

ಭೂಮಿ ಸ್ವಾಧೀನಪಡಿಸಿಕೊಂಡು  ಒಂಬತ್ತು ವರ್ಷಗಳಾಗಿರುವುದರಿಂದ ಅಂದಿನ ಒಪ್ಪಂದ ಈಗ ಅನೂರ್ಜಿತವಾಗುತ್ತದೆ. ನಮ್ಮ ಜಮೀನನ್ನು ನಮಗೆ ಮರಳಿಸಬೇಕು. ಒಂದು ವೇಳೆ ಪ್ರಾಧಿಕಾರ ನಿವೇಶನ ಅಭಿವೃದ್ಧಿಪಡಿಸಲು ಸಿದ್ಧವಿದ್ದರೆ ಅಭಿವೃದ್ಧಿಪಡಿಸಿದ ನಿವೇಶನಗಳಲ್ಲಿ ಶೇ 50 ರಷ್ಟನ್ನು ರೈತರಿಗೆ ನೀಡಲು ಪ್ರಾಧಿಕಾರ ಒಪ್ಪಬೇಕು.ಇಲ್ಲವಾದಲ್ಲಿ ನಮ್ಮ ಜಮೀನನ್ನು ನೀಡುವುದಿಲ್ಲ~ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ಗ್ರಾಮಗಳಿಂದ ಬಂದಿದ್ದ 50ಕ್ಕೂ ಹೆಚ್ಚು ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಈ ಬಗ್ಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT