ಲಂಡನ್ (ಪಿಟಿಐ): ಭೂಮಿಯ ಸಮಭಾಜಕ ವೃತ್ತದ ಸುತ್ತಲೂ ತಟ್ಟೆಯಾಕಾರದ ಕಪ್ಪುದ್ರವ್ಯ ಆವರಿಸಿದೆ ಎಂಬ ಕುತೂಹಲಕಾರಿ ಅಂಶವನ್ನು ಜಿಪಿಎಸ್ ಉಪಗ್ರಹಗಳ ನೆರವಿನಿಂದ ಪತ್ತೆ ಹಚ್ಚಲಾಗಿದೆ.
ಭೂಮಧ್ಯ ರೇಖೆಗುಂಟ ಅಂಟಿಕೊಂಡಂತಿರುವ ಕಪ್ಪನೆಯ ವಸ್ತು ಏನು ಎಂಬುದು ವಿಜ್ಞಾನಿಗಳಿಗೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ಕಪ್ಪು ತಟ್ಟೆಯಿಂದಾಗಿಯೇ ಭೂಮಿ ತೂಕ ಈ ಮೊದಲು ನಾವು ಊಹಿಸಿದ್ದಕ್ಕಿಂತಲೂ ಹೆಚ್ಚು ಎಂಬ ಮತ್ತೊಂದು ಅಂಶವನ್ನೂ ಈ ಸಂಶೋಧನೆ ಬಹಿರಂಗಪಡಿಸಿದೆ.
ಜಿಪಿಎಸ್ ಉಪಗ್ರಹಗಳು ಕಳುಹಿಸಿದ ದತ್ತಾಂಶಗಳ ನೆರವಿನಿಂದ ಟೆಕ್ಸಾಸ್ ವಿಶ್ವವಿದ್ಯಾಲಯದ ಬೆನ್ ಹ್ಯಾರಿಸ್ ಈ ಕುತೂಹಲಕಾರಿ ಅಂಶಗಳನ್ನು ಪತ್ತೆ ಹಚ್ಚಿದ್ದಾರೆ. ಸೌರವ್ಯೂಹದಲ್ಲಿರುವ ಶೇ 80ರಷ್ಟು ಕಪ್ಪುವಸ್ತು ಭೂಮಿಯ ಸುತ್ತ ಹರಡಿದೆ. ಇದರಿಂದಾಗಿಯೇ ಭೂಮಿಯ ತೂಕ ನಮ್ಮ ಗ್ರಹಿಕೆಗಿಂತಲೂ ಅನೇಕ ಪಟ್ಟು ಹೆಚ್ಚು (0.005ದಿಂದ 0.008 ಪಟ್ಟು) ಎನ್ನುವ ವಿಷಯವನ್ನು ಹ್ಯಾರಿಸ್ ಪತ್ತೆ ಹಚ್ಚಿದ್ದಾರೆ.
ಭೂಮಿಯ ಸುತ್ತಲೂ ಇರುವ ಕಪ್ಪು ವಸ್ತುವಿನ ತಟ್ಟೆ ಆಕೃತಿ 191 ಕಿ. ಮೀ ದಪ್ಪ ಮತ್ತು 70,000 ಕಿ.ಮೀ ವ್ಯಾಪ್ತಿಯಲ್ಲಿ ಹರಡಿದೆ ಎಂಬುವುದು ಅವರ ವಾದ.
ಡಿಸೆಂಬರ್‌ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಅಮೆರಿಕದ ಖಭೌತವಿಜ್ಞಾನ ಒಕ್ಕೂಟದ ಸಭೆಯಲ್ಲಿ ಅವರು ವರದಿಯನ್ನು ಮಂಡಿಸಿದ್ದಾರೆ.