ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಹಕ್ಕುದಾರಿಕೆ ಗೊಂದಲ; ಆತಂಕ

Last Updated 18 ಅಕ್ಟೋಬರ್ 2011, 9:40 IST
ಅಕ್ಷರ ಗಾತ್ರ

ಕೃಷ್ಣರಾಜಪೇಟೆ: ಪಟ್ಟಣದ ಜಯನಗರ ಬಡಾವಣೆಯಲ್ಲಿ ಹೊಸಹೊಳಲು ಗ್ರಾಮದ ಸರ್ವೆ ನಂ.141ರಲ್ಲಿ ಹಂಚಿಕೆ ಮಾಡಲಾಗಿದ್ದ ನಿವೇಶನಗಳನ್ನು ಮೂಲ ಭೂಮಿಯ ಹಕ್ಕುದಾರರು ಎಂದು ಹೇಳಿಕೊಂಡ ಕೆಲವರು ಉಳುಮೆ ಮಾಡಿ, ಬಿತ್ತನೆ ಮಾಡಲು ಮುಂದಾಗಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪುರಸಭೆ ವ್ಯಾಪ್ತಿಗೆ ಬರುವ ಪಟ್ಟಣಕ್ಕೆ ಸಮೀಪದ ಹೊಸಹೊಳಲು ಗ್ರಾಮದ ಸರ್ವೆ ನಂ.141ಕ್ಕೆ ಸೇರಿದ ಈ ಭೂಮಿಯನ್ನು ಕಳೆದ 30 ವರ್ಷಗಳ ಹಿಂದೆಯೇ ಸ್ವಾಧೀನ ಪಡಿಸಿಕೊಂಡು ನಿವೇಶನಗಳನ್ನಾಗಿ ಪರಿವರ್ತಿಸಿ, ಹಂಚಿಕೆ ಮಾಡಲಾಗಿತ್ತು. ಆದರೆ, ಈ ಭೂಮಿಯ ಮೂಲ ಮಾಲೀಕರು ಎನ್ನಲಾದ ದಲಿತ ಜನಾಂಗಕ್ಕೆ ಸೇರಿದ ಕೆಲವರು ಈಚೆಗೆ ಟ್ರ್ಯಾಕ್ಟರ್‌ನಲ್ಲಿ ಬಂದು ಭೂಮಿಯನ್ನು ಉಳುಮೆ ಮಾಡಲು ಮುಂದಾದರು.

ಅಲ್ಲದೆ ನಿವೇಶನಗಳ ಹಂಚಿಕೆಯ ಗುರುತಿಗೆ ಹಾಕಿದ್ದ ಕಲ್ಲುಗಳನ್ನು ಕಿತ್ತು ಹಾಕಿ, ಬಳಕೆಯಲ್ಲಿದ್ದ ರಸ್ತೆಗಳನ್ನು ಸಹ ಉತ್ತರು. ಈ ಭೂಮಿ ನಮಗೆ ಸೇರಿದ್ದು, ಇಲ್ಲಿ ಅಕ್ರಮವಾಗಿ ನಿವೇಶನ ವಿತರಿಸಿ, ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಆರೋಪಿಸಿದರು.

ಇದರಿಂದ ಕಂಗಾಲಾದ ಈ ಭಾಗದ ನಿವೇಶನದಾರರು ಸ್ಥಳೀಯ ಪುರಸಭೆ ಹಾಗೂ ಪೋಲೀಸರ ಮೊರೆ ಹೋದರು. ಸ್ಥಳಕ್ಕೆ ಬಂದ ಸಬ್‌ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ್ ಎರಡೂ ಗುಂಪಿನವರನ್ನು ಸಮಾಧಾನಪಡಿಸಿ, ತಮ್ಮ ತಮ್ಮ ಹಕ್ಕುದಾರಿಕೆಯನ್ನು ಸಾಬೀತು ಪಡಿಸುವ ದಾಖಲೆಗಳೊಂದಿಗೆ ಠಾಣೆಗೆ ಬರುವಂತೆ ತಿಳಿಸಿದರು.

ಪುರಸಭೆ ಅಧ್ಯಕ್ಷ ಕೆ.ಎಚ್.ರಾಮಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಪ್ರೇಂಕುಮಾರ್, ಮುಖ್ಯಾಧಿಕಾರಿ ಯೋಗಾನಂದ್, ತಾ.ಪಂ. ಸದಸ್ಯ ರವೀಂದ್ರಬಾಬು, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT