ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿತಾಯಿಯ ಒಡಲಾಳ

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರೈತ ಕುಟುಂಬವನ್ನು ಕೇಂದ್ರವಾಗಿಟ್ಟುಕೊಂಡ ಹಳ್ಳಿಯ ಕಥಾವಸ್ತುವನ್ನು ಒಳಗೊಂಡಿರುವ ಚಿತ್ರ `ಭೂಮಿತಾಯಿ~. ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ಈ ಚಿತ್ರದ ಪೂರ್ವಭಾವಿ ಪ್ರದರ್ಶನ ಇತ್ತೀಚೆಗೆ ನಡೆಯಿತು.

`ಬಡರೈತನ ಸಂಕಷ್ಟಗಳನ್ನು ಚಿತ್ರಿಸುತ್ತಲೇ ಮನುಷ್ಯ ಸಂಬಂಧಗಳ ತೀವ್ರತೆ, ಹಳ್ಳಿಯ ನ್ಯಾಯ ವ್ಯವಸ್ಥೆಯ ವಿಪರ್ಯಾಸಗಳನ್ನು ಒಳಗೊಳ್ಳುವ ಚಿತ್ರವಿದು. ಅಧಿಕಾರ ಕೇಂದ್ರದ ವೈರುಧ್ಯಗಳನ್ನೂ ವ್ಯವಸ್ಥೆಯ ಒಳತೋಟಿಗಳನ್ನೂ ಅನಾವರಣಗೊಳಿಸುತ್ತದೆ. ಆದರೆ ಕೇಂದ್ರದಲ್ಲಿ ರೈತ ಕುಟುಂಬವೇ ಇದ್ದು, ಅದೇ ಒಟ್ಟು ಕ್ರಿಯೆಯ ಮೂಲಧಾತುವಾಗಿರುತ್ತದೆ~- ಇದು ಬರಗೂರರು ತಮ್ಮ ಚಿತ್ರದ ಆತ್ಮವನ್ನು ಬಿಚ್ಚಿಟ್ಟ ರೀತಿ.
`ಭೂಮಿತಾಯಿ~ಯ ರೈತ ಸಾಲ ಮತ್ತು ಸಂಕಷ್ಟಗಳಿಗೆ ಈಡಾದರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಈತನ ಮಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮಗ, ಹತ್ಯೆಗೀಡಾಗುತ್ತಾನೆ. ಈ ಹತ್ಯೆ ಮತ್ತು ಆತ್ಮಹತ್ಯೆಗಳಿಂದ ಅಸಹಾಯಕನಾದ ರೈತನಲ್ಲಿ ಆತ್ಮವಿಶ್ವಾಸ ತುಂಬುವುದು ಆತನ ಪತ್ನಿ.

ರೈತ ಮತ್ತು ಆತನ ಪತ್ನಿಯ ಆತ್ಮವಿಶ್ವಾಸದ ನಡೆಯೊಂದಿಗೆ ಮುಕ್ತಾಯವಾಗುವ `ಭೂಮಿತಾಯಿ~ ರೈತರಿಗೆ ಆತ್ಮಹತ್ಯೆಯ ಬದಲು ಆತ್ಮವಿಶ್ವಾಸದ ಆಶಯ ಬಿತ್ತುತ್ತದೆಂದು ಬರಗೂರರು ಚಿತ್ರದ ಉದ್ದೇಶ ಸ್ಪಷ್ಟಪಡಿಸಿದರು.

ಭೂಮಿತಾಯಿಯೆಂದರೆ ಕೇವಲ ಹೊಲವಲ್ಲ. ಹೆಣ್ಣು ಸಹ ಭೂಮಿತಾಯಿ, ನ್ಯಾಯವೆನ್ನುವುದೂ ಭೂಮಿತಾಯಿ ಎಂಬ ಆಯಾಮವನ್ನೂ ಅವರು ಚಿತ್ರಕ್ಕೆ ನೀಡಿದ್ದಾರಂತೆ. `ಭೂಮಿತಾಯಿ~ಯ ಸ್ತ್ರೀ ಪಾತ್ರಗಳು ವಿಭಿನ್ನ ಮಾದರಿಯವಾಗಿದ್ದರೂ ಮನುಷ್ಯ ಸಂಬಂಧಗಳ ವಿಷಯದಲ್ಲಿ ಸಮಾನ ಸಂವೇದನೆ ಉಳ್ಳವರು. ಇದು ಈ ಚಿತ್ರದ ಒಂದು ವಿಶೇಷ ಎನ್ನುವ ಅವರು ಚಿತ್ರದ ನಿರೂಪಣಾ ತಂತ್ರವನ್ನೂ ವಿಭಿನ್ನವಾಗಿಸಿದ್ದಾರೆ.

ರೈತ ಕುಟುಂಬದವರು ಹೊಲದಿಂದ ಮನೆಗೆ ಹೊರಡುವ ಚಿತ್ರಿಕೆಗಳನ್ನು `ಸ್ಲೋಮೋಷನ್~ನಲ್ಲಿ ತೋರಿಸುತ್ತಾ ಒಬ್ಬೊಬ್ಬರ ನೆನಪಿನ ಘಟನೆಗಳನ್ನು ತೆರೆಯ ಮೇಲೆ ಕ್ರಮಬದ್ಧವಾಗಿ ಜೋಡಿಸಿರುವುದು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಪ್ರಯೋಗ. ಅರ್ಧದಷ್ಟು ಹೀಗೇ ನಡೆಯುವ ಚಿತ್ರ ಆನಂತರ ನೇರ ನಿರೂಪಣೆಗೆ ಹೊರಳುತ್ತದೆ.

ನೆನಪಿನ ನಿರೂಪಣೆ ಮತ್ತು ನೇರ ನಿರೂಪಣೆಗಳು ಕ್ರಮವಾಗಿ ಪಾತ್ರಗಳ ಒಳಸುಳಿ ಮತ್ತು ಹೊರಸುಳಿಗಳನ್ನು ಸಂಕೇತಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT