ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯ ಉಷ್ಣಾಂಶದಲ್ಲಿ ಹೆಚ್ಚಳ

Last Updated 1 ಜೂನ್ 2011, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ 30 ವರ್ಷ ಗಳಲ್ಲಿ ಭೂಮಿಯ ಉಷ್ಣಾಂಶದಲ್ಲಿ ಶೇ 2ರಷ್ಟು ಹೆಚ್ಚಳವಾಗಲಿದೆ. ಮಳೆಯ ಪ್ರಮಾಣ ಕಡಿಮೆಯಾಗಲಿದ್ದು, ಉತ್ತರ ಕರ್ನಾಟಕ ಭಾಗವು ಸೇರಿದಂತೆ 4-5 ಜಿಲ್ಲೆಗಳು ತೀವ್ರ ಬರಗಾಲಕ್ಕೆ ತುತ್ತಾ ಗಲಿವೆ ಎಂಬ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಮಾಜಿ ಸಭಾಪತಿ ಪ್ರೊ.ಬಿ.ಕೆ.  ಚಂದ್ರಶೇಖರ್ ಅಧ್ಯಕ್ಷತೆಯ ಬೆಂಗಳೂರು ಹವಾಮಾನ ವೈಪರೀತ್ಯ ಇನಿಷಿಯೇಟಿವ್-ಕರ್ನಾಟಕ (ಬಿಸಿಸಿಐ-ಕೆ) ಸಿದ್ಧಪಡಿಸಿರುವ ವರದಿಯಲ್ಲಿ ಹಿಂದಿನ 50 ವರ್ಷಗಳ ಹವಾಮಾನ ಪರಿಸ್ಥಿತಿ ಮತ್ತು ಮುಂದಿನ 50 ವರ್ಷಗಳಲ್ಲಿ ಹವಾಮಾನದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಸಮಗ್ರವಾದ ಮಾಹಿತಿ ಸಂಗ್ರಹಿಸಲಾಗಿದೆ.

ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸಮ್ಮುಖದಲ್ಲಿ ಚಂದ್ರಶೇಖರ್ ಮತ್ತು ಅವರ ತಂಡ ಬುಧವಾರ ಇಲ್ಲಿ ವರದಿಯನ್ನು ಸರ್ಕಾರದ ಅಭಿವೃದ್ಧಿ ಆಯುಕ್ತರಾದ ಮೀರಾ ಸಕ್ಸೇನಾ ಅವರಿಗೆ ಸಲ್ಲಿಸಿತ್ತು.
1961ರಿಂದ ಈಚೆಗೆ ಆಗಿರುವ ಮಳೆಯನ್ನು ಆಧರಿಸಿ ಲೆಕ್ಕಾಚಾರ ಹಾಕಲಾಗಿದ್ದು, ಕ್ರಮೇಣ ಮಳೆಯ ಪ್ರಮಾಣ ಕಡಿಮೆ ಆಗುತ್ತಿರುವುದು ಕಂಡು ಬಂದಿದೆ. 2021-2050ರ ಅವಧಿಯಲ್ಲಿ ರಾಜ್ಯದ ಈಶಾನ್ಯ ಭಾಗಗಳಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದ್ದು, ಅದರಲ್ಲೂ ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಇದು ಜಾಸ್ತಿಯಾಗಲಿದೆ ಎಂದು ಅಂದಾಜಿಸಲಾಗಿದೆ.

1951-2004ರ ಅವಧಿಯಲ್ಲಿನ ಅಂಕಿ ಅಂಶಗಳನ್ನು ಗಮನಿಸಿದರೆ ರಾಜ್ಯದಲ್ಲಿ ಒಟ್ಟಾರೆ ಶೇ 6ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಕೋಲಾರ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಬೀಳುವ ಮಳೆಯ ಪ್ರಮಾಣದಲ್ಲಿ ಸಾಕಷ್ಟು ಏರುಪೇರು ಆಗುತ್ತಿರುವುದು ಗೊತ್ತಾಗಿದೆ. ಈ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣದಲ್ಲಿ ಸ್ಥಿರತೆ ಇರುವುದಿಲ್ಲ, ಆಗಾಗ್ಗೆ ಬದಲಾವಣೆ ಆಗುತ್ತಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕರಾವಳಿ ಮತ್ತು ಉತ್ತರ ಒಳನಾ ಡಿನಲ್ಲಿ 1951-2004ರ ಅವಧಿಯಲ್ಲಿ ಮಳೆ ಕಡಿಮೆಯಾಗಿದೆ. ರಾಯಚೂರು, ಗುಲ್ಬರ್ಗ ಮತ್ತು ಯಾದಗಿರಿ ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಬೀದರ್, ಗುಲ್ಬರ್ಗ ಜಿಲ್ಲೆಗಳ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶದಲ್ಲಿ ಬದಲಾವಣೆಗಳು ಆಗುತ್ತಿದ್ದು, ಬರುವ ವರ್ಷಗಳಲ್ಲಿ ವಿಜಾಪುರ, ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಉಷ್ಣಾಂಶ ಮತ್ತಷ್ಟು ಹೆಚ್ಚಾಗಲಿದೆ.

ಮುಂದಿನ ಕೆಲ ದಶಕಗಳಲ್ಲಿ ಬರದ ಪ್ರಮಾಣ ಶೇ 10ರಿಂದ 80ರಷ್ಟು ಹೆಚ್ಚಾಗಲಿದೆ. ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳು ಹೆಚ್ಚು ಬರಗಾಲಕ್ಕೆ ತುತ್ತಾಗಲಿವೆ. ಹವಾಮಾನ ವೈಪರೀತ್ಯದ ಪರಿಣಾಮ ಹೆಚ್ಚಾಗಿ `ಕೃಷ್ಣಾ~ ಮೇಲ್ದಂಡೆ ಯೋಜನಾ ಪ್ರದೇಶ ಮತ್ತು ಈಶಾನ್ಯ ಭಾಗದಲ್ಲಿ ಬೀರಲಿದೆ. ಕಾವೇರಿ ನೀರಾವರಿ ಪ್ರದೇಶದ ವ್ಯಾಪ್ತಿಯಲ್ಲಿ ಸ್ವಲ್ಪ ಕಡಿಮೆ ಇರುತ್ತದೆ.

ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಭಾಗದಲ್ಲಿ ಅರಣ್ಯ ಪ್ರದೇಶದಲ್ಲೂ 2030ರ ವೇಳೆಗೆ ಹವಾ ಮಾನದಲ್ಲಿ ಬದಲಾವಣೆ ಯಾಗಲಿದ್ದು, ಉಷ್ಣಾಂಶ ದಲ್ಲಿ ಹೆಚ್ಚಳವಾಗಲಿದೆ. ಕೇಂದ್ರ ಸರ್ಕಾರದ ಸೂಚನೆ ಅನ್ವಯ ರಾಜ್ಯ ಸರ್ಕಾರ ಕೂಡ ಹವಾಮಾನ ವೈಪರೀತ್ಯ ತಡೆಯಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಮೀರಾ ಸಕ್ಸೇನಾ ತಿಳಿಸಿದರು.

ವಿಶ್ವಬ್ಯಾಂಕ್ ನೆರವಿನಿಂದ ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಮತ್ತಷ್ಟು ಮಾಹಿತಿ ಸಂಗ್ರಹಿಸ ಬೇಕಾಗಿದೆ. ಆದ್ದರಿಂದ ಇದು ಅಂತಿಮ ವರದಿಯಲ್ಲ ಎಂದು ಚಂದ್ರಶೇಖರ್ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT