ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯೇ ಚಿನ್ನ; ಕೃಷಿ ಕ್ಷೇತ್ರಕ್ಕೇ ಕನ್ನ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರೀಕರಣ ಭರಾಟೆಯಿಂದ ಕೃಷಿ ಭೂಮಿಯಲ್ಲೇ ತಲೆ ಎತ್ತುತ್ತಿರುವ ಬೃಹತ್ ಕಟ್ಟಡಗಳು, ರಿಯಲ್ ಎಸ್ಟೇಟ್ ದಂಧೆ, ಗಗನಕ್ಕೇರಿದ ಭೂಮಿಯ ಬೆಲೆ, ಗ್ರಾಮೀಣ ಜನತೆ ನಗರದತ್ತ ವಲಸೆ, ಕೂಲಿಕಾರರ ಸಮಸ್ಯೆ, ಕೃಷಿ ಇಳುವರಿ ಕುಸಿತದ ಪರಿಣಾಮದಿಂದಾಗಿ ರಾಜಧಾನಿಗೆ ಹೊಂದಿಕೊಂಡಂತೆ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿ ಪ್ರದೇಶದ ವಿಸ್ತಾರ ತೀವ್ರವಾಗಿ ಕಿರಿದಾಗುತ್ತಿದೆ.

ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಕೃಷಿ ಭೂಮಿಯ ವಿಸ್ತೀರ್ಣ ಗಣನೀಯವಾಗಿ ಕುಸಿದಿದೆ. ನಗರ, ಪಟ್ಟಣ ಪ್ರದೇಶಗಳ ಸಮೀಪದ ಗದ್ದೆಗಳು ವಸತಿ ಸಂಕೀರ್ಣ, ವಾಣಿಜ್ಯ ಬಳಕೆಗೆ ಪರಿವರ್ತನೆಗೊಂಡಿವೆ. `ಅಭಿವೃದ್ಧಿ~ ಹಾದಿಯಲ್ಲಿರುವ ಕೈಗಾರಿಕೆ, ಪ್ರಸ್ತಾವಿತ ನಂದಗುಡಿ ವಿಶೇಷ ಆರ್ಥಿಕ ವಲಯ ಮತ್ತು ಕಟ್ಟಡ ನಿರ್ಮಾಣ ಸಂಸ್ಥೆಗಳು ಕೃಷಿ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿವೆ.

2008ರವರೆಗೆ ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಎಂಟು ತಾಲ್ಲೂಕುಗಳಿದ್ದವು. ಜಿಲ್ಲೆಯ ನಾಲ್ಕು ತಾಲ್ಲೂಕು ಸೇರಿಸಿಕೊಂಡು 2008ರಲ್ಲಿ ರಾಮನಗರ ಜಿಲ್ಲೆ ಉದಯವಾಯಿತು.ಆ ವರ್ಷ ಜಿಲ್ಲೆಯಲ್ಲಿ 72,360 ಎಕ್ಟೇರ್ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಲಾಗಿತ್ತು. ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲ್ಲೂಕುಗಳನ್ನು ಒಳಗೊಂಡ ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ 57,037 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಬರ, ನಗರೀಕರಣ ಮತ್ತಿತರ ಕಾರಣಗಳಿಂದ ಒಂದೇ ವರ್ಷದಲ್ಲಿ ಈ ಭಾಗದ 10 ಸಾವಿರ ಹೆಕ್ಟೇರ್ ಕೃಷಿ ಭೂಮಿ `ಮಾಯ~ವಾಗಿದೆ.

ಅಂತರ್ಜಲ ಕುಸಿತ
ಜಿಲ್ಲೆಯಲ್ಲಿ ನೀರಾವರಿ ಭೂಮಿಯ ಪ್ರಮಾಣ ಶೇ 28ರಷ್ಟಿದೆ. ನೀರಿಗಾಗಿ ಕೆರೆ, ಬೋರ್‌ವೆಲ್ ಮೇಲಿನ ಅವಲಂಬನೆಯೇ ಜಾಸ್ತಿ ಇದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅಂತರ್ಜಲ ಮಟ್ಟ 1,200 ಅಡಿ ಆಳಕ್ಕೆ ಕುಸಿದಿದೆ.

ಒತ್ತುವರಿ ಹಾಗೂ ಹೂಳು ತುಂಬಿಕೊಂಡ ಕಾರಣ ಕೆರೆಗಳು ಮುಚ್ಚಿ ಹೋಗುತ್ತಿವೆ. ಮಳೆಯ ಆಗಮನ ನೋಡಿಕೊಂಡೇ ಬೆಳೆ ನಿರ್ಧಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ವರ್ಷಗಳಿಂದ ಬತ್ತ ಕೃಷಿ ವ್ಯಾಪ್ತಿಯಲ್ಲಿ ಗಣನೀಯ ಕುಸಿತ ಉಂಟಾಗಿದೆ. ಈ ವರ್ಷ ಕೇವಲ 500 ಹೆಕ್ಟೇರ್ ಪ್ರದೇಶದಲ್ಲಿ ಬತ್ತ ನಾಟಿ ಮಾಡಲಾಗಿದೆ.

`ರಾಗಿ ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ರಾಗಿ ಮತ್ತು ಶೇಂಗಾ ಬೆಳೆಯ ವಿಸ್ತೀರ್ಣ ಕಡಿಮೆಯಾಗಿದ್ದು, ಮುಸುಕಿನಜೋಳ ಬೆಳೆಯುವ ಪ್ರದೇಶ ಹೆಚ್ಚಳವಾಗಿದೆ. ಕಾರಣ, ಮುಸುಕಿನ ಜೋಳ ಕೃಷಿಗೆ ಹೆಚ್ಚು ಶ್ರಮ ಅಗತ್ಯವಿಲ್ಲ. ಅಲ್ಲದೆ, ಕೃಷಿ ಭೂಮಿ ಇರುವೆಡೆಯೇ ಖರೀದಿದಾರರು ಬಂದು ಅಧಿಕ ಬೆಲೆ ನೀಡಿ ಇದನ್ನು ಖರೀದಿಸುತ್ತಾರೆ. ಹಾಗಾಗಿ, ಮುಸುಕಿನ ಜೋಳದ ಕೃಷಿಯಲ್ಲಿ ಗಣನೀಯ ಹೆಚ್ಚಳವಾಗಿದೆ~ ಎಂಬುದು ಕೃಷಿತಜ್ಞರ ವಿಶ್ಲೇಷಣೆ.

ಬರಪೀಡಿತ ಜಿಲ್ಲೆ: ಆಗಾಗ ಕಾಡುವ ಬರದಿಂದಾಗಿ ಜಿಲ್ಲೆಯಲ್ಲಿ ಕೃಷಿ ಕೃಶವಾಗುತ್ತಿದೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣ 790 ಮಿ.ಮೀ. ಆದರೆ, 2002ರಲ್ಲಿ ಕೇವಲ 448 ಮಿ.ಮೀ, 2003ರಲ್ಲಿ 516 ಮಿ.ಮೀ, 2006ರಲ್ಲಿ 523 ಮಿ.ಮೀ. ಮಳೆಯಾಗಿದೆ. ಈ ವರ್ಷವೂ ವಾಡಿಕೆಯಷ್ಟು ಮಳೆಯಾಗಿಲ್ಲ. ಪರಿಣಾಮ ಬರಪೀಡಿತ ಜಿಲ್ಲೆ ಎಂದು ಘೋಷಿಸಲಾಗಿದೆ. ಬಿತ್ತನೆಯಲ್ಲಿ ಶೇ 80ರಷ್ಟು ಸಾಧನೆಯಾಗಿದೆ.

ಭೂಮಿಗೆ ಚಿನ್ನದ ಬೆಲೆ: ನಗರೀಕರಣ, ಕೃಷಿ ಭೂಮಿ ಮೇಲೆ ರಿಯಲ್ ಎಸ್ಟೇಟ್ ಕಣ್ಣು ಹಾಗೂ ಕೈಗಾರಿಕೀಕರಣದಿಂದಾಗಿ ಜಿಲ್ಲೆಯಲ್ಲಿ ಭೂಮಿಗೆ ಈಗ ಚಿನ್ನದ ಬೆಲೆ. ನೆಲಮಂಗಲ ತಾಲ್ಲೂಕು ಈಗ ರಿಯಲ್ ಎಸ್ಟೇಟ್ ದಂಧೆಯ ಕೇಂದ್ರ  ಸ್ಥಾನ ಎಂದೇ ಗುರುತಿಸಿಕೊಂಡಿದೆ.
 
ದೇವನಹಳ್ಳಿ ವಿಮಾನ ನಿಲ್ದಾಣದ ಆಸುಪಾಸಿನಲ್ಲಿ ಎಕರೆ ಭೂಮಿಯ ಬೆಲೆ ಕೋಟಿ ಮೌಲ್ಯ ದಾಟಿ ವರ್ಷಗಳೇ ಕಳೆದಿವೆ. ಕೃಷಿ ನಂಬಿ ಕೊರಗುವುದಕ್ಕಿಂತ ಜಾಗ ಮಾರಾಟ ಮಾಡಿ ನಗರದಲ್ಲಿ ವಾಸ ಮಾಡುವುದೇ ನೆಮ್ಮದಿ ಎಂಬ ಭಾವನೆ ಜನರಲ್ಲಿ ಮೂಡಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ವಿಶ್ಲೇಷಿಸಿದರು.

`ರೈತರ ಸ್ಥಿತಿ ದಯನೀಯ~
`ಕೃಷಿಕರು ಈಗ ಸುಖಜೀವಿಗಳಾಗಿದ್ದಾರೆ. ಶ್ರಮ ಪಡದೆ ಅಧಿಕ ಲಾಭ ಬರಬೇಕು ಎಂಬ ಉದ್ದೇಶದಿಂದ ರಾಸಾಯನಿಕ ಗೊಬ್ಬರಗಳನ್ನು ಸುರಿದು ಭೂಮಿಯ ಫಲವತ್ತತೆ ನಾಶ ಮಾಡುತ್ತಿದ್ದಾರೆ. ಗ್ರಾಮಾಂತರ ಜಿಲ್ಲೆಯಲ್ಲಿ ಕೆಲವು ವರ್ಷಗಳ ಹಿಂದೆ ಕೆರೆಗಳ ಫಲವತ್ತಾದ ಹೂಳನ್ನು ಗದ್ದೆಗೆ ಹಾಕುತ್ತಿದ್ದೆವು.
 
ಬಳಿಕ ಹಟ್ಟಿ ಗೊಬ್ಬರ ಹಾಕಿ ಉಳುಮೆ ಮಾಡುತ್ತಿದ್ದೆವು. ಭರ್ಜರಿ ಇಳುವರಿ ಬರುತ್ತಿತ್ತು. ಈಗ ಗದ್ದೆಗಳಿಗೆ ಹೂಳೂ ಇಲ್ಲ, ಗೊಬ್ಬರವಂತೂ ತೀರಾ ಕಡಿಮೆ ಆಗಿದೆ. ಮಳೆಯ ಕಣ್ಣಾಮುಚ್ಚಾಲೆಯಿಂದ ಜಿಲ್ಲೆಯ ರೈತರ ಸ್ಥಿತಿ ದಯನೀಯವಾಗಿದೆ. ಈ ವರ್ಷ ತಿಂಗಳಿಗೊಂದು ಮಳೆ ಬಂದಿದೆ. ಇಂಥ ಸ್ಥಿತಿಯಲ್ಲಿ ಕೃಷಿಯನ್ನು ನೆಚ್ಚಿಕೊಳ್ಳುವುದು ಹೇಗೆ?~.
ಮರಿಗೌಡ, ಅಧ್ಯಕ್ಷ ಸಾವಯವ ಕೃಷಿ ಪರಿವಾರ

`ಸಹಕಾರಿ ಕೃಷಿಗೆ ಆದ್ಯತೆ ನೀಡಿ~
ಕೂಲಿಯಾಳು ಕೊರತೆ, ಅನಿಯಮಿತ ವಿದ್ಯುತ್ ಕಡಿತ, ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಮತ್ತಿತರ ಸಮಸ್ಯೆಗಳಿಂದಾಗಿ ಕೃಷಿ ಕ್ಷೇತ್ರದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಕೃಷಿ ಕ್ಷೇತ್ರದ ಏರಿಳಿತದ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಗರ ವಲಸೆ ಪ್ರವೃತ್ತಿ ಹೆಚ್ಚುತ್ತಿದೆ.

ಅವಿಭಕ್ತ ಕುಟುಂಬಗಳು ಮಾಯವಾಗಿ ಚಿಕ್ಕ ಕುಟುಂಬಗಳ ಸಂಖ್ಯೆ ಅಧಿಕವಾಗಿದೆ. ಮನೆಯವರೇ ಕೃಷಿ ಕೆಲಸ ಮಾಡುತ್ತಿದ್ದ ಸ್ಥಿತಿ ಮಾಯವಾಗಿ ಕೂಲಿಯಾಳುಗಳ ಅವಲಂಬನೆ ಜಾಸ್ತಿ ಆಗಿದೆ. ಈ ಸಮಸ್ಯೆ ಹೋಗಲಾಡಿಸಲು ಸಹಕಾರಿ ಕೃಷಿಗೆ ಒತ್ತು ನೀಡಬೇಕು. ಕೃಷಿ ಉತ್ಪನ್ನಗಳಿಗೆ ಈಗ ಉತ್ತಮ ಬೆಲೆ ಇದೆ. ಆದರೆ, ಕೃಷಿ ಉತ್ಪನ್ನದ ಶೇ 60ರಷ್ಟು ಲಾಭ ದಲ್ಲಾಳಿಗಳ ಪಾಲಾಗುತ್ತಿದೆ. ಇದಕ್ಕೆ ನಿಯಂತ್ರಣ ಹೇರಬೇಕಿದೆ~. 
 ನಾರಾಯಣ ರೆಡ್ಡಿ ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT