ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ: ಪರಿಹಾರಕ್ಕೆ ಆಗ್ರಹಿಸಿ ಪಾದಯಾತ್ರೆ

Last Updated 10 ಜನವರಿ 2011, 10:55 IST
ಅಕ್ಷರ ಗಾತ್ರ

ದೇವನಹಳ್ಳಿ : ರಾಜ್ಯದಲ್ಲಿ ಕೆಲವು ಕಡೆಗಳಲ್ಲಿ ಕೈಗಾರಿಕೆ ಮತ್ತಿತರ ಉದ್ದೇಶಗಳಿಗಾಗಿ ಮತ್ತು ತಾಲ್ಲೂಕಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಗಲೂರು ಸುತ್ತ ಮುತ್ತಲ ಗ್ರಾಮಗಳಲ್ಲಿ ಸರ್ಕಾರ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಮತ್ತಿತರರ ಸಂಘಟನೆಗಳು ದೇವನಹಳ್ಳಿಯಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಭಾನುವಾರ ಚಾಲನೆ ದೊರೆತಿದೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಡೊಳ್ಳುಬಾರಿಸುವ ಮೂಲಕ ಪಾದಯಾತ್ರೆಗೆ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರಿ ಚಂದ್ರಶೇಖರ ಸ್ವಾಮೀಜಿ  ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಧ್ಯವರ್ತಿಗಳು, ಅಧಿಕಾರಿಗಳು, ರಾಜಕಾರಣಿಗಳು ವಿವಿಧ ರೀತಿಯಲ್ಲಿ ರೈತನ ಬದುಕನ್ನು ಅಸ್ಥಿರಗೊಳಿಸುತ್ತಿದ್ದಾರೆ ಎಂದು ಆಪಾದಿಸಿದರು.

ರೈತರಿಂದ ಕಡಿಮೆ ದರದಲ್ಲಿ ಭೂಮಿ ಸ್ವಾಧೀನಕ್ಕೆ ತೆಗೆದುಕೊಂಡು ಉಳ್ಳವರಿಗೆ ಪರಭಾರೆ ಮಾಡಲಾಗುತ್ತಿದೆ. ಕೆಐಎಡಿಬಿ ಮೂಲಕ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರ ನೀಡದೆ ದಾಖಲೆಗಳಾಗಿ ರೈತರನ್ನು ಕಚೇರಿಗೆ ಅಲೆದಾಡಿಸಲಾಗುತ್ತಿದೆ ಎಂದು ದೂರಿದರು.

ಪಟ್ಟನಾಯಕನಹಳ್ಳಿಯ ಶ್ರಿ ನಂಜಾವಧೂತ ಸ್ವಾಮೀಜಿ ಮಾತನಾಡಿ, ದೇಶದಲ್ಲಿ 70 ರಿಂದ 80 ಕೋಟಿ ರೈತರು ಇದ್ದರೂ ಸಂಕಷ್ಟ ತಪ್ಪಿಲ್ಲ.  ಎಲ್ಲಾ ಸರ್ಕಾರಗಳು ರೈತರನ್ನು ನಿರ್ಲಕ್ಷ್ಯಿಸುತ್ತಲೇ ಬಂದಿವೆ. ಭೂ ಸ್ವಾಧೀನ ನೆಪದಲ್ಲಿ ರೈತರನ್ನು ಒಕ್ಕಲೆಬ್ಬಿಸಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆ. ರೈತರನ್ನು ನಿರ್ಲಕ್ಷಿಸಿದರೆ ಮುಂದೊಂದು ದಿನ ಅಹಾರ ಅಭಾವದಿಂದ ಗಂಡಾಂತರ ತಪ್ಪಿದ್ದಲ್ಲ ಎಂದರು.

ಈಗಾಗಲೇ ಅನೇಕ ಕಡೆಗಳಲ್ಲಿ ವಶಪಡಿಸಿಕೊಂಡ ಸಾವಿರಾರು ಎಕರೆ ಭೂಮಿ ಖಾಲಿಯಾಗಿ ಉಳಿದಿದೆ. ಆದರೂ ಫಲವತ್ತಾದ ಭೂಮಿಯನ್ನು ಸರ್ಕಾರ ಪುನಃ ವಶಪಡಿಸಿಕೊಳ್ಳಲು ಮುಂದಾಗುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಾಮೇಗೌಡ ಮಾತನಾಡಿ, ರಾಜ್ಯದಲ್ಲಿ ವಿವಿಧ ಇಲಾಖೆಗಳಿಗೆ ಸೇರಿದ 12 ಲಕ್ಷಕ್ಕೂ ಅಧಿಕ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಇದು ಪಟ್ಟ ಭದ್ರರ ಕೈಯಲ್ಲಿದೆ. ಇವುಗಳೆಲ್ಲವನ್ನು ಸರ್ಕಾರ ತನಿಖೆ ಮಾಡಿ ಮರಳಿ ಪಡೆಯಬೇಕು. ತಾಲ್ಕೂಕಿನ ಕಾರಹಳ್ಳಿ ಬಳಿ ಖಾಸಗಿ ಕಂಪೆನಿಯ 30 ಎಕರೆ ಸರ್ಕಾರಿ ಭೂಮಿ ಒತ್ತುವರಿ ಪ್ರಕರಣದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ತಾಲ್ಲೂಕಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ  ನೀಡಿರುವ ನಾಲ್ಕು ಸಾವಿರ ಎಕರೆ ಭೂಮಿಗೆ ಇದುವರೆಗೂ ಸೂಕ್ತ ಪರಿಹಾರ ನೀಡಿಲ್ಲ. ಈಗ ಐ.ಟಿ., ಬಿ.ಟಿ ನೆಪದಲ್ಲಿ ರೈತರ 12 ಸಾವಿರ ಎಕರೆ ಭೂಮಿಗೆ ಕುತ್ತು ಬಂದಿದೆ. ರೈತರು ಎಚ್ಚೆತ್ತು ಸಂಘಟಿತರಾಗಿ ಹೋರಾಟ ನಡೆಸಿ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

 ಕಿಮ್ಸ್ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿದರು. ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಇ.ತಿ.ಶ್ರಿನಿವಾಸ್, ರಾಜ್ಯ ಉಪಾಧ್ಯಕ್ಷರಾದ ಎಲ್.ರಾಜು, ಸಿ.ಕೆ.ಎಂ ಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಮಂಗಳಮ್ಮ, ರಾಜ್ಯ ಸಂಚಾಲಕ ಎಚ್.ಜಿ.ವಿರುಪಾಕ್ಷಯ್ಯ, ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗೇಗೌಡ, ಬೆಂ.ಗ್ರಾ ಜಿಲ್ಲಾ ಘಟಕದ ಅಧ್ಯಕ್ಷ ಅರ್ಕೇಶ್, ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ಬಸವರಾಜ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ರಸ್ತೆಯುದ್ದಕ್ಕೂ ರೈತರ ರಕ್ತಕ್ಕಾಗಿ, ರೈತರ ವಿನಾಶಕ್ಕಾಗಿ ಕೆ.ಐ.ಎ.ಡಿ.ಬಿ ಎಂಬ ಘೋಷಣೆಯೊಂದಿಗೆ ಜಾಥಾ ಬೆಂಗಳೂರಿನತ್ತ ತೆರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT