ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಮಸೂದೆ: ಚರ್ಚೆಗೆ ಆಗ್ರಹ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಭೂಸ್ವಾಧೀನ ಮಸೂದೆಯ ಸಾಧಕ- ಬಾಧಕಗಳ ಬಗ್ಗೆ ದೇಶವ್ಯಾಪಿ ಚರ್ಚೆಗೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಶನಿವಾರ ಇಲ್ಲಿ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಭೂಸ್ವಾಧೀನ ಮಸೂದೆ ಕುರಿತ ಚರ್ಚಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಕೇಂದ್ರ ಸರ್ಕಾರ ರೈತರ ಜಮೀನನ್ನು ವಶಪಡಿಸಿಕೊಳ್ಳುವ ಮೂಲಕ ಕೈಗಾರಿಕೋದ್ಯಮಿಗಳಿಗೆ ಮಾರಾಟ ಮಾಡುವ ಹುನ್ನಾರ ಈ ಮಸೂದೆಯಲ್ಲಿ ಅಡಗಿದೆ~ ಎಂದು ಅವರು ಆರೋಪಿಸಿದರು.

`ಕೈಗಾರಿಕೋದ್ಯಮಿಗಳಿಗೆ ಈ ದೇಶದಲ್ಲಿ ರೈತರ ಭೂಮಿಯನ್ನು ನೀಡಿದ ನಂತರ ಇದುವರೆಗೆ ಎಷ್ಟು ಮಂದಿಗೆ ಉದ್ಯೋಗಾವಕಾಶ ಸಿಕ್ಕಿದೆ. ರೈತರಿಂದ ಸ್ವಾಧೀನಪಡಿಸಿಕೊಂಡಂತಹ ಭೂಮಿಯನ್ನು ರಿಯಲ್ ಎಸ್ಟೇಟ್ ವ್ಯವಹಾರದ ಮೂಲಕ ಎಷ್ಟು ಮಾರಾಟ ಮಾಡಲಾಗಿದೆ. ಈ ಬಗ್ಗೆ ಮೊದಲು ಪರಾಮರ್ಶೆ ನಡೆಯಬೇಕು. ಆನಂತರ ಮಸೂದೆ ಬಗ್ಗೆ ಚರ್ಚೆ ನಡೆಯಬೇಕು~ ಎಂದು ಅವರು ಆಗ್ರಹಿಸಿದರು.

ಅಕ್ವಿಸಿಷನ್ ಬೇಡ, ರಿಕ್ವಿಸಿಷನ್ ಇರಲಿ:  `ಅಕ್ವಿಸಿಷನ್ ಎಂಬ ಪದವೇ ಬ್ರಿಟೀಷರ ವಸಾಹತುಶಾಹಿಗಿಂತ ಅಪಾಯಕಾರಿ. ರೈತರ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳುವ ಪದವೇ ಸರಿಯಲ್ಲ. ಇದರ ಬದಲಿಗೆ ಕೋರಿಕೆ ಮೂಲಕ ರೈತರ ಭೂಮಿಯನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು~ ಎಂದು ಕೋರಿದರು.

`ನಾವು ಕೈಗಾರಿಕೆ ಬೆಳವಣಿಗೆಯ ವಿರೋಧಿಗಳಲ್ಲ. ಆದರೆ, ದೇಶದಲ್ಲಿ ಎಷ್ಟು ಕೈಗಾರಿಕೆಗಳ ಸ್ಥಾಪನೆಗೆ ಎಷ್ಟು ಭೂಮಿಯ ಅಗತ್ಯವಿದೆ ಎಂಬುದರ ಬಗ್ಗೆ ಸರ್ಕಾರ ಚರ್ಚೆ ನಡೆಸಲಿ. ಅದು ಬಿಟ್ಟು ಶೇ 98ರಷ್ಟು ಇಂಗ್ಲಿಷ್ ಗೊತ್ತಿಲ್ಲದ ರೈತರನ್ನು ಮೋಸ ಮಾಡುವುದನ್ನು ಸರ್ಕಾರ ಕೈಬಿಡಬೇಕು~ ಎಂದು ಒತ್ತಾಯಿಸಿದರು.

ಅ. 18ರಂದು ರ‌್ಯಾಲಿ: ಭೂಸ್ವಾಧೀನ ಮಸೂದೆ ವಿರೋಧಿಸಿ ಅಕ್ಟೋಬರ್ 18ರಂದು ನವದೆಹಲಿಯಲ್ಲಿ ನಡೆಯಲಿರುವ ಮೊದಲ ಪ್ರತಿಭಟನಾ ರ‌್ಯಾಲಿಯಲ್ಲಿ ದೇಶದ ವಿವಿಧ ಭಾಗಗಳಿಂದ ಐದು ಲಕ್ಷಕ್ಕೂ ಅಧಿಕ ರೈತರು ಭಾಗವಹಿಸಲಿದ್ದಾರೆ.

ಕರ್ನಾಟಕದಿಂದ ಸಾಂಕೇತಿಕವಾಗಿ ಮೂರ‌್ನಾಲ್ಕು ಸಾವಿರ ರೈತರು ಭಾಗವಹಿಸಲಿದ್ದಾರೆ. ಈ ಬಗ್ಗೆ ಪೂರ್ವಭಾವಿ ಚರ್ಚೆ ನಡೆಸಲು ಸೆ. 10ರಂದು ಹುಬ್ಬಳ್ಳಿಯಲ್ಲಿ ಸಭೆ ನಡೆಸಲಾಗುವುದು. ನವದೆಹಲಿಯಲ್ಲಿ ನಡೆಯಲಿರುವ ರ‌್ಯಾಲಿಯಲ್ಲಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಪತ್ರಕರ್ತ `ಅಗ್ನಿ~ ಶ್ರೀಧರ್ ಮಾತನಾಡಿ, `ಭೂಸ್ವಾಧೀನ ಎಂಬ ಪದವನ್ನೇ ಸರ್ಕಾರ ನಿಷೇಧಿಸಬೇಕು. ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಸಂಬಂಧ ರೈತರು ಹಾಗೂ ಕೈಗಾರಿಕೋದ್ಯಮಿಗಳ ನಡುವೆ ಒಪ್ಪಂದ ನಡೆಯಬೇಕು. ಸರ್ಕಾರ ಕೇವಲ ಸಾಕ್ಷಿ ರೂಪದಲ್ಲಿ ವ್ಯವಹರಿಸಬೇಕು~ ಎಂದು ಒತ್ತಾಯಿಸಿದರು.

`ಭೂಸ್ವಾಧೀನ ಮಸೂದೆ ಜಾರಿಗೆ ರೈತರ ಮಾನಸಿಕ ವಿರೋಧ ಇದೆ. ಆದರೆ, ಯಾರೂ ದನಿಯೆತ್ತುತ್ತಿಲ್ಲ. ಅಣ್ಣಾ ಹಜಾರೆ ಹೋರಾಟವನ್ನು ಕಣ್ಮುಚ್ಚಿ ಬೆಂಬಲಿಸಿದ ರೈತರು, ಭೂಸ್ವಾಧೀನ ಮಸೂದೆ ಜಾರಿ ವಿರುದ್ಧವೂ ಬೀದಿಗಿಳಿದು ಹೋರಾಟ ನಡೆಸಬೇಕಿದೆ. ಏಕೆಂದರೆ ಇದರಲ್ಲಿ ರೈತರ ಹಿತಾಸಕ್ತಿ ಅಡಗಿದೆ~ ಎಂದರು.

ರೈತ ಮುಖಂಡರಾದ ಡಾ. ವೆಂಕಟರೆಡ್ಡಿ, ಡಾ. ಶಿವಸ್ವಾಮಿ, ಪತ್ರಕರ್ತ ಇಂದೂಧರ ಹೊನ್ನಾಪುರ ಸೇರಿದಂತೆ ಹಲವರು ಸಭೆಯಲ್ಲಿ ಮಾತನಾಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT