ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಮಸೂದೆಗೆ ಉದ್ಯಮದ ಅತೃಪ್ತಿ

Last Updated 8 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರವು ಎರಡು ಮಹತ್ವದ ಮಸೂದೆಗಳನ್ನು ಅಂಗೀಕರಿಸುವ ಮೂಲಕ ಮೈಕೊಡವಿಕೊಂಡು ಮತದಾರರ ಮನಗೆಲ್ಲುವತ್ತ ಚುರುಕಿನಿಂದ ಕಾರ್ಯಪ್ರವೃತ್ತವಾಗಿದೆ.

ಬಡವರಿಗೆ ಅತ್ಯಂತ ಅಗ್ಗದ ದರಕ್ಕೆ ಆಹಾರ ಧಾನ್ಯಗಳನ್ನು ವಿತರಿಸುವ ಮತ್ತು ಭೂಸ್ವಾಧೀನ ಮಸೂದೆಗಳ ಅಂಗೀಕಾರ ವಿಷಯದಲ್ಲಿ ಸರ್ಕಾರವು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸಫಲವಾಗಿದೆ.

ಆಹಾರ ಭದ್ರತಾ ಮಸೂದೆ
*ಕುಟುಂಬದ ಪ್ರತಿಯೊಬ್ಬ ವ್ಯಕ್ತಿ ತಿಂಗಳಿಗೆರೂ 3ಕ್ಕೆ 1 ಕೆಜಿ ಅಕ್ಕಿ,ರೂ 2ಕ್ಕೆ 1 ಕೆ. ಜಿ ಗೋಧಿ ಮತ್ತುರೂ 1ಕ್ಕೆ 1 ಕೆಜಿ ಉರುಟು ಧಾನ್ಯ ಪಡೆಯಬಹುದು.

*ಅಂತ್ಯೋದಯ ಅನ್ನ ಯೋಜನೆಯಡಿ  ತಿಂಗಳಿಗೆ ಪ್ರತಿ ಕಡು ಬಡ ಕುಟುಂಬಕ್ಕೆ 35 ಕೆಜಿ ಆಹಾರ ಧಾನ್ಯ ಪೂರೈಕೆ
*ಗರ್ಭಿಣಿ, 6ರಿಂದ 14 ವರ್ಷದ ಒಳಗಿನ ಮಕ್ಕಳು, ಅಪೌಷ್ಟಿಕತೆಯಿಂದ ಬಳಸುವ ಮಕ್ಕಳು, ನೈಸರ್ಗಿಕ ಪ್ರಕೋಪ ಸಂತ್ರಸ್ತರು ಮತ್ತು ವಸತಿಹೀನರಿಗೆ ಊಟದ ವ್ಯವಸ್ಥೆ.  ಆಧಾರ್ ಯೋಜನೆಗೆ ತಳಕು ಹಾಕಲಾಗುವುದು
*ಸಾರ್ವಜನಿಕ ಪಡಿತರ ವ್ಯವಸ್ಥೆ ಸುಧಾರಣೆ
*ವರ್ಷಕ್ಕೆ 61.23 ದಶಲಕ್ಷ ಟನ್‌ಗಳಷ್ಟು ಆಹಾರ ಧಾನ್ಯಗಳ ಅಗತ್ಯ ಇದೆ

*ಸರ್ಕಾರದ ಬೊಕ್ಕಸಕ್ಕೆರೂ 1.25 ಲಕ್ಷ ಕೋಟಿ ಹೊರೆ
*ಗ್ರಾಮೀಣ ಪ್ರದೇಶದ ಶೇ 75ರಷ್ಟು ಮತ್ತು ನಗರ ಪ್ರದೇಶದ ಶೇ 50 ರಷ್ಟು ಜನರು ಯೋಜನೆ ವ್ಯಾಪ್ತಿಗೆ.

ಭೂ ಸ್ವಾಧೀನ ಮಸೂದೆ
ಭೂಮಾಲೀಕರು, ರೈತರ ಹಿತಾಸಕ್ತಿ ರಕ್ಷಿಸಲು, ಭೂಸ್ವಾಧೀನದಿಂದ ಅವರ ಬದುಕು ಮೂರಾಬಟ್ಟೆಯಾಗದಂತೆ ತಡೆಯುವ ಉದ್ದೇಶದ ಐತಿಹಾಸಿಕ ಭೂ ಸ್ವಾಧೀನ ಮಸೂದೆಯು ರೈತರ ಸಮ್ಮತಿ  ಇಲ್ಲದೇ ಭೂ ಸ್ವಾಧೀನ ಮಾಡುವಂತಿಲ್ಲ ಎಂದು ನಿರ್ಬಂಧ ವಿಧಿಸುತ್ತದೆ. ಮಸೂದೆಯು ಶತಮಾನದಷ್ಟು ಹಳೆಯದಾದ ಕಾಯ್ದೆ ಬದಲಿಸಲಿದೆ.

ಉದ್ಯಮ ವಲಯದ ಕಳವಳ
ಈ ಎರಡೂ ವಿವಾದಾಸ್ಪದ ಮಸೂದೆಗಳ ಬಗ್ಗೆ ಉದ್ಯಮ ವಲಯ ಮತ್ತು ಬಂಡವಾಳ ಹೂಡಿಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಕುಂಠಿತ ಅರ್ಥವ್ಯವಸ್ಥೆಗೆ ಚೇತರಿಕೆ ನೀಡಲು ಭೂ ಮಂಜೂರಾತಿ ಮತ್ತು ಪರಿಸರ ಅನುಮತಿ ನೀಡುವುದು ತ್ವರಿತಗೊಳಿಸುವ ಅಗತ್ಯ ಇದ್ದಾಗ, ಪರಿಷ್ಕೃತ ಭೂ ಸ್ವಾಧೀನ ಮಸೂದೆಯು ತದ್ವಿರುದ್ಧ ವಾಗಿದೆ ಎನ್ನುವುದು ಉದ್ಯಮ ವಲಯದ ಟೀಕೆಯಾಗಿದೆ.

ಈ ಎರಡೂ ಜನಪ್ರಿಯ ಯೋಜನೆಗಳು ಸರ್ಕಾರದ ಸಬ್ಸಿಡಿ ಹೊರೆಯನ್ನು ಇನ್ನಷ್ಟು ಹೆಚ್ಚಿಸಲಿದ್ದು, ಸರ್ಕಾರದ ವರಮಾನಕ್ಕೂ ಕತ್ತರಿ ಹಾಕಲಿದೆ. ಆಹಾರ ಭದ್ರತೆ ಮಸೂದೆಯು  ದೇಶದ ಆಹಾರ ಅರ್ಥ ವ್ಯವಸ್ಥೆಯನ್ನೂ ಹಾಳು ಮಾಡಲಿದೆ ಎಂಬುದು ಉದ್ಯಮಿಗಳ ಇನ್ನೊಂದು ಆತಂಕವಾಗಿದೆ. ಗರಿಷ್ಠ ಬಡ್ಡಿ ದರ, ಕುಂಠಿತ ಉತ್ಪಾದನೆ, ಯೋಜನೆ ಜಾರಿಯಲ್ಲಿ ವಿಳಂಬ, ಉತ್ಪಾದನಾ ವೆಚ್ಚ ಹೆಚ್ಚಳದಂತಹ ಹಲವು ಬಗೆಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಅರ್ಥವ್ಯವಸ್ಥೆಗೆ ಈಗ ಭೂಸ್ವಾಧೀನವೂ ವಿಳಂಬವಾಗುವುದರಿಂದ ಉತ್ಪಾದನೆ ಇನ್ನಷ್ಟು ಕಡಿಮೆಯಾಗಲಿದೆ.ಗ್ರಾಮೀಣ ಪ್ರದೇಶಗಳಲ್ಲಿ ಭೂ ಮಾಲೀಕರಿಗೆ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಮತ್ತು ನಗರ ಪ್ರದೇಶಗಳಲ್ಲಿ ದುಪ್ಪಟ್ಟು ಪರಿಹಾರ ಒದಗಿಸಬೇಕಾಗಿದೆ.

ನಿರ್ದಿಷ್ಟ ಭೂ ಪ್ರದೇಶ ಖರೀದಿಸುವಾಗ ಸಂತ್ರಸ್ತಕ್ಕೀಡಾಗುವವರಲ್ಲಿ ಶೇ 80ರಷ್ಟು ಜನರ ಸಹಮತಿ ಬೇಕಾಗುತ್ತದೆ. ಇದು ಭೂಸ್ವಾಧೀನ ಪ್ರಕ್ರಿಯೆ ಇನ್ನಷ್ಟು ವಿಳಂಬಗೊಳಿಸುವುದರ ಜತೆಗೆ ಕೈಗಾರಿಕಾ ಘಟಕ ಸ್ಥಾಪನೆಯ ಮತ್ತು ಗೃಹ ನಿರ್ಮಾಣ  ವೆಚ್ಚ ದ್ವಿಗುಣಗೊಳಿಸುತ್ತದೆ.
ಯೋಜನಾ ವೆಚ್ಚದಲ್ಲಿ ಭೂ ಸ್ವಾಧೀನಕ್ಕೆ ಶೇ 10ರಷ್ಟು ವೆಚ್ಚ ತಗಲುತ್ತದೆ. ಸಂತ್ರಸ್ತರ ಪುನರ್ವಸತಿ ನಿಯಮಗಳ ಅನ್ವಯ ವಸತಿ, ಉದ್ಯೋಗ ಮತ್ತು ವಾರ್ಷಿಕ ಪರಿಹಾರವನ್ನೂ ನೀಡಬೇಕಾಗುತ್ತದೆ.

ಭೂಸ್ವಾಧೀನ ವಿಷಯದಲ್ಲಿ ಈಗಾಗಲೇ ಸಾಕಷ್ಟು ಸಮಸ್ಯೆಗಳಿದ್ದು, ಹೊಸ ನಿಯಮಗಳು ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಲಿವೆ ಎನ್ನುವುದು ಉದ್ಯಮ ವಲಯದ ಕಳವಳವಾಗಿದೆ.
ಸ್ವಾಧೀನಪಡಿಸಿಕೊಂಡ ಭೂಮಿಯನ್ನು 5 ವರ್ಷಗಳಲ್ಲಿ ಬಳಸದಿದ್ದರೆ ಅದನ್ನು ಮಾಲೀಕರಿಗೆ ಮರಳಿಸಬೇಕಾಗುತ್ತದೆ. ಕೈಗಾರಿಕಾ ಬೆಳವಣಿಗೆಯು ಹಂತ ಹಂತವಾಗಿ ನಡೆಯುವುದರಿಂದ ಇದೊಂದು ಅವಾಸ್ತವಿಕ ನಿಯಮವಾಗಿದೆ ಎನ್ನುವುದು ಉದ್ಯಮ ವಲಯದ ಆಕ್ಷೇಪವಾಗಿದೆ.

ಭೂಮಿ ಮಾರಾಟಕ್ಕಿಂತ ಗುತ್ತಿಗೆ ನೀಡಲೂ ಮಸೂದೆಯಲ್ಲಿ ಅವಕಾಶ ಇದೆ. ಈ ಭೂ ಕಾಯ್ದೆಯು ಈ ಹಿಂದಿನ `ಲೈಸನ್ಸ್ - ಪರ್ಮಿಟ್ - ಕೋಟಾ ರಾಜ್' ವ್ಯವಸ್ಥೆಯನ್ನು ಮರಳಿ ತಂದಂತಾಗಿದೆ. ಎನ್ನುವ ಟೀಕೆಯೂ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT