ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನಕ್ಕೆ ಯಾವುದೇ ತಕರಾರಿಲ್ಲ: ಬೆಲ್ಲದ

Last Updated 3 ಜನವರಿ 2014, 7:53 IST
ಅಕ್ಷರ ಗಾತ್ರ

ಧಾರವಾಡ: ‘ಹುಬ್ಬಳ್ಳಿ–ಧಾರವಾಡ ಮಧ್ಯೆ ಅನುಷ್ಠಾನಗೊಳ್ಳುತ್ತಿರುವ ಬಿಆರ್‌ಟಿಎಸ್‌ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನಮ್ಮಿಂದ ಯಾವುದೇ ಆಕ್ಷೇಪಣೆ ಇಲ್ಲ. ಆದರೆ, ಯೋಜನೆಯ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಕೆಲವು ಸಲಹೆ ಸೂಚನೆ ನೀಡಿದ್ದೇನೆ’ ಎಂದು ಎಂದು ಶಾಸಕ ಅರವಿಂದ ಬೆಲ್ಲದ ಸ್ಪಷ್ಟಪಡಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುರುರಾಜ ಹುಣಸಿಮರದ ಅವರು, ನಮ್ಮ ಮೇಲೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿದ್ದಾರೆ. ಆದರೆ, ಈ ಯೋಜನೆಯಲ್ಲಿ ನಾವು ಕೆಲವೊಂದಿಷ್ಟು ಉಪಯೋಗವಾಗುವ ಅಂಶಗಳನ್ನು ಅಳವಡಿಸುವ ಉದ್ದೇಶ ಹೊಂದಿದ್ದೇವೆ. ಇದನ್ನೇ ಅವರು ಟೀಕಿಸಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಇದು ಜಾರಿಗೆ ಬಂದಿದೆ. ಇದರ ಕುರಿತಂತೆ ಭೂಸ್ವಾಧೀನಪಡಿಸಿಕೊಳ್ಳುವ ಬಗ್ಗೆ ನನ್ನಿಂದ ಯಾವುದೇ ತಕರಾರಿಲ್ಲ. ಕೆಲವರು ಸ್ವತಃ ನಗರ ಅಭಿವೃದ್ಧಿಯಾಗಬೇಕಾದರೆ ನಾವು ಭೂಮಿಯನ್ನು ದಾನ ಮಾಡಲೇಬೇಕು ಎನ್ನುತ್ತಿದ್ದಾರೆ. ಒಂದು ವೇಳೆ ನಮ್ಮ ಮಾಲೀಕತ್ವದ ಶೋರೂಮ್‌ಗಳು ಭೂಸ್ವಾಧೀನಕ್ಕೆ ಒಳಪಟ್ಟರೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಇದಕ್ಕೆ ನನ್ನಿಂದ ಯಾವುದೇ ತಕರಾರಿಲ್ಲ’ ಎಂದರು.

‘ಧಾರವಾಡ ನವನಗರ ಹಾಗೂ ಹುಬ್ಬಳ್ಳಿಯ ತಮ್ಮ ವ್ಯಾಪ್ತಿಯಲ್ಲಿ ಬರುವ ಕೆಲವು ಪ್ರದೇಶದಲ್ಲಿ ಒಟ್ಟಾರೆಯಾಗಿ ಮೂರು ಕಡೆಗಳಲ್ಲಿ ಸೈಕ್ಲಿಂಗ್‌ ಟ್ರ್ಯಾಕ್‌ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಮೂರು ತಿಂಗಳ ಒಳಗೆ ಮುಗಿಸಿದರೆ ಈ ಯೋಜನೆ ಶೀಘ್ರ ಅನುಷ್ಠಾನಗೊಳ್ಳಲಿದೆ. ಈಗ ಈ ಯೋಜನೆಗೆ ಒಟ್ಟು ₨ 2 ಸಾವಿರ ಕೋಟಿ ವೆಚ್ಚವಾಗಲಿದೆ. ನಾನು ಹೇಳಿದ ಸಲಹೆಗಳನ್ನು ಅಂಗೀಕರಿಸಿದರೆ ₨ 150ರಿಂದ 200 ಕೋಟಿ ಹೆಚ್ಚುವರಿಯಾಗಿ ಖರ್ಚಾಗಲಿದೆ’ ಎಂದರು. ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಪೂರ್ಣಾ ಪಾಟೀಲ, ಶಿವು ಹಿರೇಮಠ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಬಡವರಿಗೆ ಮನೆಗಳ ನಿರ್ಮಾಣ
‘ಇಲ್ಲಿನ ನೆಹರೂನಗರ, ಶಿವಶಕ್ತಿನಗರ, ಆಂಜನೇಯ ನಗರ, ರಾಜೀವ್‌ಗಾಂಧಿ ನಗರದ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಒಟ್ಟು 1,056 ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ತಡಸಿನಕೊಪ್ಪ ಭಾಗದಲ್ಲಿ 1074 ಮನೆಗಳನ್ನು ನಿರ್ಮಿಸಲು ಆಡಳಿತಾತ್ಮಕ ಮಂಜೂರಾತಿ ದೊರೆತಿದೆ. ಇತ್ತೀಚೆಗೆ ಜನ­ಪ್ರಿಯವಾಗುತ್ತಿರುವ ಅಪಾರ್ಟ್‌ಮೆಂಟ್‌ ಶೈಲಿಯ ಎರಡು ಅಂತಸ್ತುಗಳುಳ್ಳ ಮನೆ­ಗಳನ್ನು ನಿರ್ಮಿಸಲು ಯೋಜಿಸಲಾಗಿದೆ.

ಕೊಳೆಗೇರಿಗಳ ಅಭಿವೃದ್ಧಿಗಾಗಿ ₨ 57.53 ಕೋಟಿ ಮಂಜೂರಾಗಿದೆ. ಅಲ್ಲದೇ, ನಗರದ ಪ್ರಮುಖ ರಸ್ತೆಗಳನ್ನು ಶಾಶ್ವತ ಕಾಂಕ್ರೀಟ್‌ ರಸ್ತೆಗಳನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಜನವರಿ ಕೊನೆ­ಯವರೆಗೆ ಈ ಕಾರ್ಯ ಪ್ರಾರಂಭವಾಗಲಿದೆ’ ಎಂದು ಬೆಲ್ಲದ ತಿಳಿಸಿದರು. ‘ಜುಬಿಲಿ ವೃತ್ತದಿಂದ ಶಿವಾಜಿ ವೃತ್ತ ಹಾಗೂ ವಿವೇಕಾನಂದ ವೃತ್ತದಿಂದ ಕೆಸಿಸಿ ಬ್ಯಾಂಕ್‌ವರೆಗೆ ಸಿಮೆಂಟ್‌ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಲು ಒಪ್ಪಿಗೆ ದೊರೆತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT