ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ:ಮಸೂತಿ ಗ್ರಾಮಸ್ಥರ ವಿರೋಧ

Last Updated 13 ಆಗಸ್ಟ್ 2011, 5:20 IST
ಅಕ್ಷರ ಗಾತ್ರ

ಆಲಮಟ್ಟಿ: ಕೂಡಗಿ ಬಳಿ ಕೇಂದ್ರ ಸರಕಾರದ ಎನ್‌ಟಿಪಿಸಿ ಸ್ಥಾಪಿಸಲು ಉದ್ದೇಶಿಸಿರುವ 4000 ಮೆಗಾವ್ಯಾಟ್ ಸಾಮರ್ಥ್ಯದ ಶಾಖೋತ್ಪನ್ನ ಕೇಂದ್ರಕ್ಕೆ ಅಗತ್ಯ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ, ಕೆಲವೆಡೆ ಇನ್ನೂ ಗೊಂದಲವಿದ್ದು, ಗ್ರಾಮಸ್ಥರು, ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಯೋಜನೆಗಾಗಿ ಒಟ್ಟಾರೆ 3000 ಎಕರೆ ಭೂ ಪ್ರದೇಶ ವಶಕ್ಕೆ ಯೋಜಿಸಲಾಗಿದೆ. ಇದರಲ್ಲಿ ಈಗಾಗಲೇ 900 ಕ್ಕೂ ಹೆಚ್ಚು ಎಕರೆಯ ಭೂ ಮಾಲೀಕರು ಪರಿಹಾರ ಪಡೆದಿದ್ದಾರೆ. ವಶಪಡಿಸಿಕೊಳ್ಳುವ ಭೂಮಿಯಲ್ಲಿ ಒಟ್ಟಾರೆ ಮೂರು ರೀತಿಯ ಭೂಮಿಯಿದ್ದು, ಏನೂ ಬೆಳೆಯದ ಬರಡು ಭೂಮಿ, ವ್ಯವಸಾಯ ಮಾಡುವ ಖುಷ್ಕಿ ಭೂಮಿ ಇನ್ನೊಂದು ನೀರಾವರಿ ಭೂಮಿಯಿದೆ. ಬರಡು ಭೂಮಿ ಇರುವವರು ಸ್ಥಾವರ ನಿರ್ಮಾಣಕ್ಕೆ ಈಗಾಗಲೇ ಭೂಮಿಯನ್ನು ಬಿಟ್ಟುಕೊಡುತ್ತಿದ್ದಾರೆ. ಸರಕಾರ ನೀರಾವರಿ ಜಮೀನಿಗೆ ಎಕರೆಗೆ 7 ಲಕ್ಷ ರೂ, ಖುಷ್ಕಿ ಜಮೀನಿಗೆ 5.25 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ.

ಎಲೆ ವ್ಯಾಪಾರ ಬಲುಜೋರು: ಸ್ವಾಧೀನಕ್ಕೆ ಒಳಪಡಲಿರುವ ನೀರಾವರಿ ಪ್ರದೇಶದಲ್ಲಿ ಹೆಚ್ಚಾಗಿ ಎಲೆ ಬಳ್ಳಿ, ಉಳ್ಳಾಗಡ್ಡಿ ಹಾಗೂ ನಿಂಬೆ ಹಣ್ಣು ಬೆಳೆಯಲಾಗುತ್ತದೆ. ಕೂಡಗಿ ಎಲೆ ಎಂದರೇ ನಾಡಿನಾದ್ಯಂತ ಪ್ರಸಿದ್ಧ. ಕೂಡಗಿ ಬಳಿ ಇರುವ ಭೂಮಿ ಬರಡು ಭೂಮಿಯಾಗಿದ್ದು, ಇಲ್ಲಿ ಎಲೆ ಬಳ್ಳಿಯನ್ನು  ವ್ಯಾಪಕವಾಗಿ ಬೆಳೆಯಲಾಗುತ್ತದೆ.

ನಿತ್ಯವೂ ಲಕ್ಷಾಂತರ ರೂಗಳ ಎಲೆ ವ್ಯಾಪಾರ ಇಲ್ಲಿ ಭರ್ಜರಿಯಾಗಿ ನಡೆಯುತ್ತದೆ. ಕಾಲುವೆಯ ನೀರಾವರಿ ಇಲ್ಲದಿದ್ದರೂ, ಪ್ರತಿವರ್ಷವೂ ಎಕರೆಗೆ 4 ರಿಂದ 5 ಲಕ್ಷ ರೂಪಾಯಿವರೆಗೂ ಎಲೆ ಬಳ್ಳಿಯಿಂದ ಹಣ ಗಳಿಸುವ ಇಲ್ಲಿನ ರೈತರು ಈ ಯೋಜನೆಗೆ ಭೂಮಿ ಕೊಡಲು ಒಪ್ಪುತ್ತಿಲ್ಲ.

ಇಲ್ಲಿ ಬೆಳೆದ ಎಲೆಗಳು ಲಾತೂರ್, ಮುಂಬೈ, ಔರಂಗಾಬಾದ್, ಮಾಲೇಗಾಂವ, ಉಸ್ಮಾನಬಾದ್ ಹಾಗೂ ಉತ್ತರ ಕರ್ನಾಟಕದ ಬಹುತೇಕ ಪಟ್ಟಣಗಳಿಗೂ ಸರಬರಾಜಾಗುತ್ತದೆ.

ಈ ಭಾಗದಲ್ಲಿ ಎಲೆಗಾಗಿಯೇ ಕೂಡಗಿ ಹಾಗೂ ಉಳ್ಳಾಗಡ್ಡಿಗೆ ತೆಲಗಿ ಗ್ರಾಮ ಪ್ರಸಿದ್ಧವಾಗಿದೆ.
ಇಲ್ಲೂ ಭೂಮಾಫಿಯಾ: ಕೂಡಗಿ ಬಳಿ ಉಷ್ಣ ವಿದ್ಯುತ್ ಸ್ಥಾವರಗಳ ಮುನ್ಸೂಚನೆ ಅರಿತ ಕೆಲವು ಶ್ರೀಮಂತರು, ಅವರ ಹಿಂಬಾಲಕರ ಮೂಲಕ ರೈತರನ್ನು ವಂಚಿಸಿ ಕಳೆದ ಕೆಲ ವರ್ಷಗಳ ಹಿಂದೆ ಬರಡು ಭೂಮಿಯನ್ನು ಎಕರೆಗೆ 30 ಸಾವಿರ ರೂಗಳಿಂದ, 1 ಲಕ್ಷ ರೂಪಾಯಿ ಒಳಗೆ ನೂರಾರು ಎಕರೆ ಭೂಮಿ ಪಡೆದುಕೊಂಡರು. ಇಂದು ಅದೇ ಭೂಮಿಯನ್ನು ಸರಕಾರಕ್ಕೆ ನೀಡಿ ಲಕ್ಷಾಂತರ ರೂಪಾಯಿ ಪರಿಹಾರ ಪಡೆಯುವಲ್ಲಿಯೂ ಕೆಲವರು ನಿರತರಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಪರಿಸರ ಹಾನಿ: ಇಲ್ಲಿ ಸೂಪರ್ ಥರ್ಮಲ್ ಘಟಕ ಸ್ಥಾಪಿಸುವುದರಿಂದ ಸುತ್ತಮುತ್ತಲಿನ 30 ಕಿ.ಮೀವರೆಗೂ ಪರಿಸರ ಹಾನಿ ಉಂಟಾಗುವ ಸಾಧ್ಯತೆ ಇದೆ. ಇದಕ್ಕಾಗಿ ಕೂಡಗಿ ವಿದ್ಯುತ್ ಸ್ಥಾಪನೆ ವಿರೋಧಿ ಘಟಕವೂ ಅಣು ವಿಜ್ಞಾನಿ ಎಂ.ಪಿ. ಪಾಟೀಲರ ನೇತೃತ್ವದಲ್ಲಿ ರಚನೆಯಾಗಿ ಜನತೆಯಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೇ ಅದೂ ಜನತೆಯನ್ನು ಸೆಳೆಯುವಲ್ಲಿ ಹಾಗೂ ಹೋರಾಟದ ರೂಪವಾಗಿ ಪಡೆಯುವಲ್ಲಿ ವಿಫಲವಾಗಿದೆ.

ಮಸೂತಿ ಗ್ರಾಮಸ್ಥರ ವಿರೋಧ: ಈ ಯೋಜನೆಗೆ ಒಟ್ಟು ಎರಡು ಹಂತದಲ್ಲಿ ಕೂಡಗಿ, ಮಸೂತಿ, ಗೊಳಸಂಗಿ, ತೆಲಗಿ ಸುಮಾರು 3000 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ಮಸೂತಿ ಗ್ರಾಮದ ಸುಮಾರು 1100 ಎಕರೆ ಭೂಮಿ ವಶಪಡಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಕೂಡಗಿ, ತೆಲಗಿ, ಗೊಳಸಂಗಿ ಭಾಗದ ಕೆಲ ರೈತರು ಸರಕಾರ ನಿಗದಿಪಡಿಸಿದ ದರಕ್ಕೆ ಪರಿಹಾರ ಪಡೆದಿದ್ದಾರೆ. ಇನ್ನೂ ಕೆಲವರು ಪಡೆಯಬೇಕಾಗಿದೆ.

ಆದರೇ ಮಸೂತಿ ಗ್ರಾಮದ ಯಾವೊಬ್ಬ ರೈತನೂ ಭೂಮಿಗೆ ಪರಿಹಾರ ಪಡೆದಿಲ್ಲ. ಸರಕಾರ ನಿಗದಿಪಡಿಸಿದ ಬೆಲೆ ಕಡಿಮೆಯಾಗಿದೆ ಎನ್ನುವುದು ಅವರ ವಾದ.

ಒಟ್ಟಾರೇ 2008 ರಿಂದಲೇ ಕೂಡಗಿ ಶಾಖೋತ್ಪನ್ನ ಕೇಂದ್ರದ ಯೋಜನೆ ಜಾರಿಗೆ ಕಾರ್ಯಗಳು ಪ್ರಾರಂಭವಾಗಿದ್ದರೂ, ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT