ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಹಗರಣ: ಆರು ಮಂದಿ ಅಮಾನತು

Last Updated 2 ಫೆಬ್ರುವರಿ 2011, 9:10 IST
ಅಕ್ಷರ ಗಾತ್ರ

ಮೈಸೂರು: ಹುಣಸೂರು ತಾಲ್ಲೂಕು ಕಚೇರಿಯಲ್ಲಿ ಭೂಹಗರಣಕ್ಕೆ ಸಂಬಂಧಿಸಿದಂತೆ ಶಿರಸ್ತೇದಾರ್  ಸೇರಿದಂತೆ ಆರು ಮಂದಿಯನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಹರ್ಷಗುಪ್ತ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಶಿರಸ್ತೇದಾರ ಕೆ. ಜಾನ್‌ಸನ್, ರಾಜಸ್ವ ನಿರೀಕ್ಷಕ ಶಿವಕುಮಾರ್, ಭೂಮಿ ಆಪರೇಟರ್ ತನುರಾಜ್,  ಗ್ರಾಮಲೆಕ್ಕಿಗ ಜಗದೀಶ್, –ಪರಿವೀಕ್ಷಕ ಎಂ.ಆರ್. ಗೋಪಾಲ್ ಹಾಗೂ ಭೂಮಾಪಕ ಎಸ್.ಜಿ.ಮಂಜುನಾಥ್  ಅಮಾನತುಗೊಂಡಿದ್ದಾರೆ.|

ಜ.21ರಂದು ಜಿಲ್ಲಾಧಿಕಾರಿ ಹುಣಸೂರು ತಾಲ್ಲೂಕು ಕಚೇರಿಗೆ ಭೇಟಿ ನೀಡಿ ತೀವ್ರ ತಪಾಸಣೆ ನಡೆಸಿದ್ದ  ಸಂದರ್ಭದಲ್ಲಿ ಹುಣಸೂರು ತಾಲ್ಲೂಕು ತಮ್ಮಡಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 174ರ ಜಮೀನನ್ನು  ನಿಯಮಾನುಸಾರ ದುರಸ್ತಿ ಕ್ರಮ ಕೈಗೊಳ್ಳದೆ ಆರ್‌ಟಿಸಿ ದಾಖಲಿಸಿರುವುದನ್ನು ಗಮನಿಸಿದರು. ಈ ಬಗ್ಗೆ  ಪೂರ್ಣವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಭೂದಾಖಲೆಗಳ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದರು.

ಈ ಬಗ್ಗೆ ಭೂದಾಖಲೆಗಳ ಉಪನಿರ್ದೇಶಕರು ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದು, ಈ  ವರದಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹರ್ಷಗುಪ್ತ ಹುಣಸೂರು ತಾಲ್ಲೂಕು ಕಚೇರಿಯ ಆರು ಸಿಬ್ಬಂದಿಯನ್ನು  ಅಮಾನತುಗೊಳಿಸಿ, ಏಳು ದಿನಗಳೊಳಗೆ ದೋಷಾರೋಪಣಾ ಪಟ್ಟಿ ಸಲ್ಲಿಸುವಂತೆ ಹುಣಸೂರು  ತಹಶೀಲ್ದಾರ್‌ಗೆ ಆದೇಶಿಸಿದ್ದಾರೆ.ವಿವರ: ಹುಣಸೂರು ತಾಲ್ಲೂಕು ಕಚೇರಿಯ ಭೂಮಾಪಕ ಎಸ್.ಜಿ.ಮಂಜುನಾಥ್ ಹಾಗೂ ಪರಿ ವೀಕ್ಷಕ   ಎಂ.ಆರ್.ಗೋಪಾಲ್ ತಮ್ಮಡಹಳ್ಳಿ ದರಖಾಸ್ತು ಜಮೀನಿಗೆ ಕಾನೂನು ಬಾಹಿರವಾಗಿ ಭೂಮಾಪನ ನಮೂನೆ  -10ನ್ನು ನೀಡಿರುತ್ತಾರೆ ಎಂದು ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ವರದಿ ಸಲ್ಲಿಸಿದ್ದರು.

ಈ ದಾಖಲೆ ಅನುಸರಿಸಿ ತಾಲ್ಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಮೇಲ್ಕಂಡ ಸರ್ವೆ ಪಹಣಿಯಲ್ಲಿ  ಸೇರಿಸಿದ್ದು, ಪ್ರಕರಣದ ಜಮೀನು ದರಖಾಸ್ತು ಜಮೀನಾಗಿದ್ದು ನಮೂನೆ 10 ನೀಡಿರುವುದು ಕಾನೂನು ಬಾಹಿರ. ಅಲ್ಲದೇ ನಿಯಮಗಳನ್ನು ಮೀರಿ ಆಕಾರ್ ಬಂದ್ ದುರಸ್ತಿಪಡಿಸಿ ಮತ್ತು ಆರ್‌ಟಿಸಿಯಲ್ಲಿ ಸೇರಿಸಿದ್ದಾರೆ ಎಂದು ವರದಿ ನೀಡಿದ್ದರು. ಈ ಅಕ್ರಮ ನಮೂನೆ 10ರ ದಾಖಲೆಯಂತೆ ಮೇಲ್ಕಂಡ ಜಮೀನಿನ ಸರ್ವೆ ನಂಬರ್ ಕುರಿತು ಪಹಣಿಯಲ್ಲಿ ಸೇರಿಸಿರುವುದಕ್ಕೆ ತಾಲ್ಲೂಕು ಕಚೇರಿ ಭೂಮಿ ಆಪರೇಟರ್ ತನುರಾಜ್ ಕಾನೂನು ಬಾಹಿರವಾಗಿ ತಂತ್ರಾಂಶದಲ್ಲಿ ಅಳವಡಿಸಿರುವುದು ಬೆಳಕಿಗೆ ಬಂದಿದೆ.

ಪ್ರಕರಣದ ಜಮೀನು ಸರ್ಕಾರಿ ದರಖಾಸ್ತು ಎಂಬುದು ಮೂಲ ಸರ್ವೆ ನಂಬರ್ 37/ಪಿ7 ಪಹಣಿಯ ದಾಖಲೆಯಿಂದ ಕಂಡುಬಂದರೂ ತಮ್ಮಡಹಳ್ಳಿ ಗ್ರಾಮ ವೃತ್ತದ ಗ್ರಾಮ ಲೆಕ್ಕಿಗ ಜಗದೀಶ್ ಹಾಗೂ ಹನಗೋಡು ಹೋಬಳಿ ಕಂದಾಯ ನಿರೀಕ್ಷಕ ಶಿವಕುಮಾರ್ ಪಹಣಿಯಲ್ಲಿ ಸೇರಿಸಿರುವುದು ದುರ್ನಡತೆಯಾಗಿದೆ. ತಾಲ್ಲೂಕು ಕಚೇರಿ ಭೂಮಿ ಶಾಖೆ ಮೇಲ್ವಿಚಾರಣೆ ಹೊಂದಿರುವ ಕೆ. ಜಾನ್‌ಸನ್ ಅವರು ಶಿರಸ್ತೇದಾರರು ಹಕ್ಕು ಬದಲಾವಣೆ ನಡವಳಿಯ ಎಲ್ಲ ಹಂತಗಳನ್ನು ಕ್ರಮಬದ್ಧವಾಗಿ ಪರಿಶೀಲಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಆದರೆ ಇವರು ಯಾವುದೇ ಪರಿಶೀಲನೆ ಮಾಡದೆ ಹಕ್ಕು ಬದಲಾವಣೆಗೆ ಅವಕಾಶ ಕಲ್ಪಿಸಿರುವುದು ಕರ್ತವ್ಯ ಲೋಪವಾಗಿದ್ದು, ಈ ನಿಟ್ಟಿನಲ್ಲಿ ಅವರ ಮೇಲೆ ಕ್ರಮ ಜರುಗಿಸಲಾಗಿದೆ.

ಸರ್ಕಾರಿ ದರಖಾಸ್ತು ಜಮೀನು ದುರಸ್ತಿಗೆ ಸಂಬಂಧಿಸಿದಂತೆ ಭೂ ಮಂಜೂರಾತಿ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸಲು ಹಾಗೂ ವಿಧಿ ವಿಧಾನಗಳನ್ನು ಅನುಸರಿಸಲು ಸರ್ಕಾರ ನೀಡಿದ ಸುತ್ತೋಲೆ  ನಿರ್ದೇಶನಗಳನ್ನು ಮೇಲ್ಕಂಡ ನೌಕರರು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವುದು ಸ್ಪಷ್ಟವಾಗಿ  ಕಂಡುಬಂದಿದ್ದು ಹಾಗೂ ಸರ್ಕಾರಿ ದಾಖಲೆಗಳನ್ನು ದುರುಪಯೋಗ ಮಾಡಿರುವುದು ಕ್ರಿಮಿನಲ್  ಅಪರಾಧವಾಗಿದೆ. ಆದ್ದರಿಂದ ಈ ಎಲ್ಲ ನೌಕರರನ್ನು ಅಮಾನತ್ತಿನಲ್ಲಿರಿಸಿ ಇಲಾಖೆ ವಿಚಾರಣೆ ನಡೆಸುವುದಕ್ಕೆ ಹರ್ಷಗುಪ್ತ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT