ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೇಲ್ ಅಂದ್ರ ಗಿರ್ಮಿಟ್ ಅಲ್ಲಾ..!

Last Updated 30 ಮೇ 2012, 19:30 IST
ಅಕ್ಷರ ಗಾತ್ರ

`ಏ.. ತಗೀಯ ತಂಗಿ, ಗಿರ್ಮಿಟ್ ಇದ್ದಂಗೆ ಐತಿ... ದೊಡ್ಡ ಭೇಲ್‌ಪುರಿ ಅಂತ ಹೆಸರಿಟ್ರ ಆತನ...?~
ಇಂಡಿ ಅಮ್ಮ ಕೇಳುತ್ತಿದ್ದರು. ತಳ್ಳುಗಾಡಿಯವನು ಬಿಳಿ ಚುರುಮುರಿಯನ್ನು ಒಂದೆರಡು ಹಿಡಿ ಎತ್ತಿ ಪಾತ್ರೆಗೆ ಸುರಿದಿದ್ದ. ಅದಕ್ಕೆ ಹುಣಸೆ ಹುಳಿ, ಸಾಸು, ಟೊಮೆಟೊ, ಜೀರಿಗೆ ಪುಡಿ, ಧನಿಯಾ ಪುಡಿ, ಮೆಣಸಿನ ಖಾರ, ಹಾಕಿ ಗರಗರನೆ ತಿರುಗಿಸಿದ. ಇನ್ನೊಂದಷ್ಟು ಈರುಳ್ಳಿ, ಕ್ಯಾರೆಟ್ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಮ್ಮೆ ತಿರುವಿದ.

ಒಂದೆರಡು ಹನಿ ಲಿಂಬೆರಸ ಹಿಂಡಿ, ಖಾರ, ಶೇವು ಉದುರಿಸಿ ಕೈ ಮುಂದೆ ತ್ರಿಕೋನದ ಪುಡಿಕೆ ಹಿಡಿದಿದ್ದ...

ಮನಸು ಹಿಂದಕ್ಕೋಡಿತ್ತು... ಧಾರವಾಡದ ನುಗ್ಗೀಕೆರಿ ಹನುಮನ ದೇವಸ್ಥಾನಕ್ಕೆ... ಶ್ರೀನಗರ ಸರ್ಕಲ್‌ಗೆ, ಹುಬ್ಬಳ್ಳಿಯ ದುರ್ಗದ ಬೈಲಿಗೆ...

ಬೀದರ್‌ನ ಅಮ್ಮನ ಅಗಲದ ಬುಟ್ಟಿಗೆ, ಗಣಪತಿ ಖಾರಾ ಎಂದೇ ಖ್ಯಾತಿಯಾದ ಅಂಗಡಿಗೆ... ಅಪ್ಪನ ಹಣೆಗಂಟು ಎಲ್ಲವೂ ನೆನಪಾಗಿತ್ತು. ಚುರುಮುರಿ ತಿನ್ನಲು ಚೂರು ಮಾಡುತ್ತಿದ್ದುದು ಅಪ್ಪ, ಮಡಿಚಿಡುತ್ತಿದ್ದ ದಿನಪತ್ರಿಕೆಗಳನ್ನು. ಹರಿದು ಅದರಲ್ಲಿ ಚುರುಮುರಿ ತಿನ್ನುವಾಗ `ಇದು ಬೇಕಿತ್ತಾ?~ ಎಂದು ಕೆಣಕುತ್ತಿದ್ದೆವು.

ಮಳೆಗಾಲದ ಸಂಜೆಯಲ್ಲಿ ಕುರುಕುರು ಎನ್ನದ ಚುರುಮುರಿಗೆ ಅಮ್ಮ ಎಣ್ಣೆ ಮಸಾಲೆ ಖಾರ ಹಾಕಿ ಕಲೆಸಿ, ಸೌತೆ, ಕ್ಯಾರೆಟ್, ಉಪ್ಪು, ಸಕ್ಕರೆ ಕಲೆಸಿ ಮೇಲೊಂದಿಷ್ಟು ಖಾರ ಉದುರಿಸಿಕೊಡುತ್ತಿದ್ದರು.
ಇದಕ್ಕೆ ಅಣ್ಣ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಹಾಕಿರುತ್ತಿದ್ದ.

ಅಜ್ಜಿ ಬಂದರೆ ಇದರ ಸ್ವರೂಪ ಬದಲಾಗಿರುತ್ತಿತ್ತು. ಹಸಿ ಈರುಳ್ಳಿ ತಿಂದರೆ ವಾಸನೆ ಬರುತ್ತದೆ ಅಂತ ಒಗ್ಗರಣೆ ಹಾಕೋರು. ಈರುಳ್ಳಿ ಒಗ್ಗರಣೆಗೆ ಹುಣಸೆ ನೀರು ಬೆರೆಸಿ, ಒಂದಷ್ಟು ಬೆಲ್ಲ ಅಥವಾ ಸಕ್ಕರೆ ಬೆರಸೋರು. ಈ ಮಿಶ್ರಣಕ್ಕೆ ಚುರುಮುರಿ, ಹುರಿಗಡಲೆ ಪುಡಿ ಹಾಕಿ ಗಲಗಲ ಕಲಿಸಿ, ತಿರುಗಿಸಿ, ಇಡೀ ಚುರುಮುರಿಗೆ ಈ ಒಗ್ಗರಣೆಯ ಲೇಪ ಆಗುವಂತೆ ಮಾಡುತ್ತಿದ್ದರು.

ಚುರುಮುರಿಗೂ ಹಾಳೆಗೂ ಎಲ್ಲಿಲ್ಲದ ಸಂಬಂಧ. ಅದ್ಯಾಕೆ ಹಳೆ ಪೇಪರ್‌ಗಳನ್ನು ಎಳೆದು ಸಮವಾಗಿ ನಾಲ್ಕು ಭಾಗ ಮಾಡುವ ಕೆಲಸ ಚುರುಮುರಿ ಕಲಿಸುವಾಗಲೇ ಮಾಡಿಡಲಾಗುತ್ತಿತ್ತು.

ನಂತರ ಎಲ್ಲರ ಹಾಳೆಯ ಮೇಲೂ ಚುರುಮುರಿಯ ಒಂದು ಗುಡ್ಡ ಇರುತ್ತಿತ್ತು. ಅದರ ಮೇಲೆ ಕೊತ್ತಂಬರಿ ಸೊಪ್ಪಿನ ಹಸಿರು ಗಿಡಗಳು ಕಾಣುತ್ತಿದ್ದವು.

ಹುರಿದು, ಸಿಪ್ಪೆ ಬಿಡಿಸಿದ ಶೇಂಗಾ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದವು.

ನಮ್ಮ ಈ ಮಸಾಲಿ ಚುರುಮುರಿ, ಗಿರ್ಮಿಟ್ಟು, ಮತ್ತ ಭೇಲ್ ಅಥವಾ ಭೇಳ್‌ಪುರಿ ಎಲ್ಲಾ ಕಳ್ಳುಬಳ್ಳಿ ಸಂಬಂಧ ಇರುವ ಅಕ್ಕ ತಂಗೀರು.

ಗುಜರಾತಿನವರು ಮುಂಬೈಗೆ ವಲಸೆ ಬಂದಾಗ ಈ ಭೇಳ್ ರೂಪ ಪಡೆಯಿತು. ಚುರುಮುರಿ ಚೂಡಾಕ್ಕೆ ಮುಂಬೈನ ಕಡಲತಡಿಯಲ್ಲಿ ಟೊಮ್ಯಾಟೊ, ಈರುಳ್ಳಿ, ಕೊತ್ತಂಬರಿಯ ಅಲಂಕಾರ ಗಮನ ಸೆಳೆಯಿತು. 

ಮನೆಯೊಳಗಣ ಚುರುಮುರಿ ಬಯಲಿಗೆ ಬಂದಾಗ ಭೇಲ್ ಪುರಿಯಾಯಿತು. ಹುಳಿ, ಸಿಹಿ, ಖಾರದ ಈ ಖಾದ್ಯ ನಂತರ ಯುವ ಜನರ `ಹಾಟ್ ಫೇವರಿಟ್~ ಆಯಿತು.

ಬೆಂಗಳೂರಿನಲ್ಲಂತೂ ಈ ಭೇಲ್‌ಗೆ ದಕ್ಷಿಣದ ಸ್ಪರ್ಶ ದೊರೆಯಿತು. ಭೇಲ್‌ಪುರಿಯಲ್ಲಿ ನಿಪ್ಪಟ್ಟು, ಕೋಡುಬಳೆಯ ಚೂರುಗಳು ಸೇರ್ಪಡೆಗೊಂಡವು.

ಮಹಾರಾಷ್ಟ್ರದಲ್ಲಿ ಈರುಳ್ಳಿಯೊಂದಿಗೆ ಆಲೂಗಡ್ಡೆಯ ಚೂರುಗಳೂ ಸೇರಿರುತ್ತವೆ. ಅಲ್ಲಿ `ಭೇಳ್~ನ ಅಲಂಕಾರವೇ ಸೆಳೆಯುತ್ತದೆ. ತಿಳಿ ಹಳದಿ ಬಣ್ಣದ ಚುರುಮುರಿ. ಕೊತ್ತಂಬರಿ ಜೀರಿಗೆ ಪುಡಿಯ ಚಟ್ನಿ, ಕೆಂಪು ಮೆಣಸಿನ ಕಾಯಿ ಬೆಳ್ಳುಳ್ಳಿ ಮಿಶ್ರಣದ ಚಟ್ನಿ, ಅದಕ್ಕೆ ಹುಣಸೆ ಹುಳಿಗೆ ಖರ್ಜೂರದ ಚಟ್ನಿಯ ಮಿಶ್ರಣ, ಇದಿಷ್ಟೂ ಖಾರ, ಹುಳಿ ಸಿಹಿಯ ಸವಿಗೆ ಕ್ಯಾರೆಟ್ ತುರಿ, ಬಿಳಿ ಕೊಬ್ಬರಿ ತುರಿ, ಮೇಲೊಂದಷ್ಟು ಸೌತೆ ತುರಿ ಇವಿಷ್ಟಕ್ಕೂ ಶನಿಗ್ರಹದ ಬಳಿ ಇಟ್ಟಂತೆ ಕೆಂಬಣ್ಣದ ಖಾರಾ ಶೇವು... ಅಲ್ಲಲ್ಲಿ ಪಾಪಡಿ ಅಲಂಕಾರ.

ನೋಡಿದಾಕ್ಷಣ ಕೈ ಹಾಕಬೇಕು... ಬಾಯಿಗಿಡಬೇಕು... ನಾಲಗೆಯನ್ನು ಹಲ್ಲಿಗೆ ಮುಟ್ಟಿಸಿ... `ಣ್ಣ...~ ಅಂತ ಚಪ್ಪರಿಸಬೇಕು.

ಹೀಗೆ ಚಟ್‌ಪಟಾ ಸ್ವಾದದ ಚಾಟ್‌ನ ನೋಟ, ರುಚಿ ಸಿಕ್ಕಿದ್ದು ಚುರುಮುರಿಯ ಖಾದ್ಯಕ್ಕೆ.
ಆದರೆ ಗಿರ್ಮಿಟ್ಟು, ಚುರುಮುರಿ ಚೂಡಾ ಹಾಗೂ ಸುಸಲಾದ ನಡುವಿನ ಸ್ವರೂಪದ್ದು. ಚುರುಮುರಿ ಗರಿಗರಿಯಾಗಿರುತ್ತವೆ. ಚುರುಮುರಿ ನೆನೆಸಿ, ಅವಲಕ್ಕಿ ಉಪ್ಪಿಟ್ಟಿನಂತೆ ಮಾಡಿದರೆ ಅದಕ್ಕೆ ಮಂಡಕ್ಕಿ ಉಪ್ಪಿಟ್ಟು, ಒಗ್ಗರಣೆ ಅಥವಾ ಸುಸ್ಲಾ ಎಂದು ಕರೆಯಲಾಗುತ್ತದೆ.

ಕೆಲವರಿಗೆ ಚುರುಮುರಿಯ ಕುರುಕುರು ಇಷ್ಟವಾಗದಿದ್ದರೆ, ಮೆತ್ತಗಿನ ಸುಸ್ಲಾವನ್ನೂ ಇಷ್ಟಪಡದವರಿಗಾಗಿ ಗಿರ್ಮಿಟ್ ತಯಾರಿಸುವ ಪದ್ಧತಿ ಆರಂಭವಾಯಿತು.

ಹಲ್ಲಿಲ್ಲದವರಿಗೆ ಚುರುಮುರಿ ತಿನ್ನುವುದು ಕಷ್ಟ, ಇನ್ನು ಒಗ್ಗರಣೆ ತಿಂದರೆ ವಾತ ಎಂಬ ನಂಬಿಕೆ. ಅದಕ್ಕಾಗಿಯೂ ಈ ಮಧ್ಯಮ ಮಾರ್ಗವನ್ನು ಆರಿಸಿಕೊಳ್ಳಲಾಯಿತು.

ಸದ್ಯಕ್ಕೆ ರೂಪ ಯಾವುದಾದರೇನು, ವೇಷ ಎಂತಿದ್ದರೇನು... ಬರಿಯ ಚಾಟ್‌ಗಳು... ಎನ್ನುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT