ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೈರಗೌಡ ಪ್ರತಿಜ್ಞಾವಿಧಿ ಸ್ವೀಕರಿಸುವುದಕ್ಕೆ ನಿರ್ಬಂಧ

Last Updated 3 ಸೆಪ್ಟೆಂಬರ್ 2013, 9:25 IST
ಅಕ್ಷರ ಗಾತ್ರ

ಬೆಳಗಾವಿ: ಮಹಾನಗರ ಪಾಲಿಕೆಯ 57ನೇ ವಾರ್ಡ್‌ಗೆ ಚುನಾಯಿತ ಸದಸ್ಯರಾಗಿದ್ದ ಭೈರಗೌಡ ಪಾಟೀಲ ಅವರು ಪ್ರತಿಜ್ಞಾವಿಧಿ ಸ್ವೀಕರಿಸುವುದನ್ನು ನಿರ್ಬಂಧಿಸಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಹಿಂದೂ ಲಿಂಗಾಯತ ಜಾತಿಗೆ ಸೇರಿರುವ ಭೈರಗೌಡ ಪಾಟೀಲ ಅವರು ಕಾನೂನು ಬಾಹಿರವಾಗಿ ಹಿಂದುಳಿದ `ಅ' ವರ್ಗದ ಜಾತಿ ಪ್ರಮಾಣ ಪತ್ರ ಪಡೆದು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಾರ್ಡ್ ನಂ. 57 (ಒಬಿಸಿ 2ಎ ಮೀಸಲು)ರಿಂದ ಸ್ಪರ್ಧಿಸಿ ಆಯ್ಕೆಯಾಗಿರುವುದರ ವಿರುದ್ಧ ಸುಧೀರ ಗಡ್ಡಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

`ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರಕರಣ ಇತ್ಯರ್ಥಗೊಳಿಸುವವರೆಗೂ ಭೈರಗೌಡ ಪಾಟೀಲರು ಪಾಲಿಕೆ ಸದಸ್ಯರಾಗಿ ಪ್ರತಿಜ್ಞಾವಿಧಿ ಸ್ವೀಕರಿಸುವಂತಿಲ್ಲ. ಅವರು ಪಾಲಿಕೆಯ ಸದಸ್ಯರಾಗಿ ಕಾರ್ಯನಿರ್ವಹಿಸುವಂತಿಲ್ಲ ಎಂದು ಆದೇಶಿಸಿದೆ' ಎಂದು ಅರ್ಜಿದಾರರ ಪರ ವಕೀಲ ರಮೇಶ ಮಿರಜಕರ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಪಾಲಿಕೆ ಚುನಾವಣೆ ಸಂದರ್ಭದಲ್ಲಿ ವಾರ್ಡ್ ನಂ. 57ರ (ಒಬಿಸಿ 2ಎ ಮೀಸಲು) ಅಭ್ಯರ್ಥಿಯಾಗಿ ಕಣಬರ್ಗಿಯ ನಿವಾಸಿ ಭೈರಗೌಡ ಪಾಟೀಲ ನಾಮಪತ್ರ ಸಲ್ಲಿಸಿದ್ದರು. ಭೈರಗೌಡ ಹಿಂದೂ ಲಿಂಗಾಯತ ಜಾತಿಗೆ ಸೇರಿದ್ದಾರೆ ಎಂದು ಕಣಬರ್ಗಿಯ ಶಂಕರ ಬಸವಂತ ದೇಸೂರ ಫೆಬ್ರುವರಿ 25ರಂದು ತಹಸೀಲ್ದಾರ ಕಚೇರಿಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಭೈರಗೌಡರ ಶಾಲೆಯ ರಜಿಸ್ಟರ್ ದಾಖಲೆಯನ್ನು ತಹಸೀಲ್ದಾರರು ತರಿಸಿ ಪರಿಶೀಲನೆ ನಡೆಸಿದರು.

ರಜಿಸ್ಟರ್‌ನಲ್ಲಿ ಜಾತಿ ಕಾಲಂನಲ್ಲಿ ಹಿಂದೂ ಲಿಂಗಾಯತ ಎಂದು ಬರೆದಿರುವುದನ್ನು ವೈಟನರ್ ಬಳಸಿ, ಹಿಂದೂ ಗಾಣಿಗ ಎಂದು ತಿದ್ದುಪಡಿ ಮಾಡಿರುವುದು ಕಂಡು ಬಂತು. 7ನೇ ತರಗತಿ ಹಾಗೂ ಎಸ್ಸೆಸ್ಸೆಲ್ಸಿ ವರ್ಗಾವಣೆ ಪತ್ರದಲ್ಲಿ ಹಿಂದೂ ಲಿಂಗಾಯತ ಎಂದು ಇತ್ತು. ಕೋರ್ಟ್‌ನ ಆದೇಶ ಇಲ್ಲದೇ, ರಜಿಸ್ಟರ್‌ನಲ್ಲಿ ಹಿಂದೂ ಗಾಣಿಗ ಎಂದು ತಿದ್ದುಪಡಿ ಮಾಡಿರುವುದು ಅಸಿಂಧು ಆಗಿದೆ ಎಂದು ಅಭಿಪ್ರಾಯಪಟ್ಟು ತಹಸೀಲ್ದಾರರು ಭೈರಗೌಡರ ಒಬಿಸಿ 2ಎ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದರು.

ತಹಸೀಲ್ದಾರರ ಆದೇಶವನ್ನು ಪ್ರಶ್ನಿಸಿ, ಬೆಳಗಾವಿ ಉಪವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದ ಭೈರಗೌಡ,  ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ಮೇಲ್ಮನವಿಗೆ 3ನೇ ವ್ಯಕ್ತಿಯಾಗಿ ಪ್ರಮಾಣಪತ್ರ ಸಲ್ಲಿಸಿದ್ದ ಕಣಬರ್ಗಿಯ ಸುಧೀರ ನಾಗೇಶ ಗಡ್ಡಿ ಅವರು, ಭೈರಗೌಡ ಅವರ ಚಿಕ್ಕಪ್ಪಂದಿರ ಹಾಗೂ ಸಹೋದರಿಯರ ಶಾಲಾ ದಾಖಲೆಯಲ್ಲೂ ಹಿಂದೂ ಲಿಂಗಾಯತ ಜಾತಿ ನಮೂದಾಗಿರುವ ದಾಖಲೆಯನ್ನು ಸಲ್ಲಿಸಿದ್ದರು.

ಪ್ರಕರಣ ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ ಶಶಿಧರ ಎಸ್. ಬಗಲಿ ಅವರು, ನ್ಯಾಯಾಲಯದ ಆದೇಶ ಇಲ್ಲದೇ ಶಾಲಾ ರಜಿಸ್ಟರ್‌ನಲ್ಲಿ ಹಿಂದೂ ಗಾಣಿಗ ಎಂದು ತಿದ್ದುಪಡಿ ಮಾಡಿರುವುದು ಅಸಿಂಧುವಾಗಿದೆ. ಭೈರಗೌಡ ಅವರು ತಾವು ಹಿಂದೂ ಗಾಣಿಕ ಜಾತಿಗೆ ಸೇರಿದವರು ಎಂಬ ಬಗ್ಗೆ ಸಮರ್ಪಕವಾದ ದಾಖಲೆ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸಿ, ತಹಸೀಲ್ದಾರರ ಆದೇಶವನ್ನು ಎತ್ತಿ ಹಿಡಿದು ಜುಲೈ 29ರಂದು ಆದೇಶ ಹೊರಡಿಸಿದ್ದರು.

ಇದಕ್ಕೂ ಮೊದಲು ಸುಧೀರ ಗಡ್ಡಿ ಅವರು ಭೈರಗೌಡ ಪಾಟೀಲರ ಆಯ್ಕೆಯನ್ನು ಆಕ್ಷೇಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯದ ಈ ಆದೇಶದಿಂದಾಗಿ, ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಭೈರಗೌಡ ಪಾಟೀಲರು ಮತ ಚಲಾಯಿಸುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT