ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋವಿ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆಗೆ ಒತ್ತಾಯ

Last Updated 15 ಫೆಬ್ರುವರಿ 2012, 8:25 IST
ಅಕ್ಷರ ಗಾತ್ರ

ರಾಯಚೂರು: ಭೋವಿ ಅಭಿವೃದ್ಧಿ ನಿಗಮಕ್ಕೆ 350ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು  ಜಿಲ್ಲಾ ಭೋವಿ(ವಡ್ಡರ) ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಒತ್ತಾಯಿಸಿದರು.

ಮಂಗಳವಾರ ಭೋವಿ ಸಂಘದ ಪದಾಧಿಕಾರಿಗಳು ಮತ್ತು ಸಮಾಜದ ಬಾಂಧವರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರಿಗೆ ಮನವಿ ಸಲ್ಲಿಸಿದರು.

ಗಣಿಗಳಲ್ಲಿ ಕಲ್ಲು ಒಡೆಯುವ ಕಾರ್ಮಿಕರಿಗೆ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಹಾಗೂ ಪೊಲೀಸ್ ಇಲಾಖೆಯಿಂದ ಭೋವಿ ಸಮಾಜದ ಕಾರ್ಮಿಕರ ಮೇಲೆ ಉಂಟಾಗುತ್ತಿರುವ  ನಿರಂತರ ಕಿರುಕುಳ ತಪ್ಪಿಸಲು ಕಲ್ಲು ಒಡೆಯುವ ಕಾರ್ಮಿಕರ ಹೆಸರಿನಲ್ಲಿ ಪರವಾನಗಿ ನೀಡಬೇಕು ಎಂದು ಆಗ್ರಹಿಸಿದರು.

ನಗರದ ಆಶಾಪುರ ವೃತ್ತಕ್ಕೆ ಸಿದ್ಧರಾಮೇಶ್ವರ ವೃತ್ತವೆಂದು ನಾಮಕರಣ ಮಾಡಬೇಕು. ಮೂರ್ತಿ ಸ್ಥಾಪನೆ ಮಾಡಬೇಕು. ಈ ಬಗ್ಗೆ ನಗರಸಭೆಗೆಯೂ ಸಹ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೂಡಲೇ ಮಂಜೂರಾತಿ ನೀಡಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಬಾಗಲಕೋಟೆ ಹಾಗೂ ಚಿತ್ರದುರ್ಗ ಮಠಗಳಿಗೆ ಸರ್ಕಾರ ಪ್ರತಿಮಠಕ್ಕೆ 4 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಬೇಕು, ಮಡ್ಡಿಪೇಟೆ ಬಡಾವಣೆಯಲ್ಲಿರುವ ವಡ್ಡರವಾಡಿ ಪ್ರದೇಶಕ್ಕೆ  ಸಿ.ಮುನಿಸ್ವಾಮಿ ಬಡಾವಣೆ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ವಡ್ಡರಲ್ಲದ ಬೋವಿ-ಬೋಯಾ(ಮೀನಗಾರರು)ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿದ್ದು, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಉದ್ಯೋಗ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆದಂಥವರ ಬಗ್ಗೆ ಅಗತ್ಯ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕು, ಭೋವಿ ಸಮುದಾಯ ಭವನ ಹಾಗೂ ಸಿದ್ಧರಾಮೇಶ್ವರ ಮಂದಿರ ಸ್ಥಾಪನೆಗೆ ಜಾಗೆ ನೀಡಬೇಕು ಎಂದು ಒತ್ತಾಯಿಸಿದರು.

ಸಿದ್ಧರಾಮ ಕುಟೀರ ಎಂಬ ನೂತನ ಯೋಜನೆ ಅನುಷ್ಠಾನಗೊಳಿಸಿ ಭೋವಿ ಸಮಾಜದ ವಸತಿಹೀನರನ್ನು ಗುರುತಿಸಿ ಮನೆ ನಿರ್ಮಾಣ ಮಾಡಿಕೊಡುವ ಕಾರ್ಯ ಆರಂಭಿಸಬೇಕು ಎಂಬುದು ಸೇರಿದಂತೆ ಇನ್ನೂ ಅನೇಕ ಬೇಡಿಕೆ ಈಡೇರಿಸಬೇಕು ಎಂದು ಬಾಗಲಕೋಟೆ ಚಿತ್ರದುರ್ಗ ಗುರುಪೀಠದ  ಶ್ರಿ ಇಮ್ಮುಡಿ ಸಿದ್ಧರಾಮೇಶ್ವರ ಗುರುಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಭೋವಿ ಸಮಾಜದ ಮುಖಂಡರಾದ ಅಶೋಕ ಲಿಂಬಾವಳಿ, ಸಿಂಧು ಬಂಡಿ, ವಿ.ಎಸ್ ಯಲ್ಲಪ್ಪ, ಸಚ್ಚಿನ್ ಬಂಡಿ,
ರಾಜೀವ್, ಆರ್.ಈರಣ್ಣ, ಪರಶುರಾಮ ಭೀಮಲಿಂಗ, ಗೋವಿಂದ ಗಟ್ಟು, ಶಶಿಕಲಾ ಭೀಮರಾಯ ಹಾಗೂ ಮತ್ತಿತರರು ಪ್ರತಿಭಟನಾ ಮೆರವಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT