ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೌತಶಾಸ್ತ್ರ ಮೇಷ್ಟ್ರ ಉರಗ ಪ್ರೇಮ!

Last Updated 7 ಅಕ್ಟೋಬರ್ 2012, 8:50 IST
ಅಕ್ಷರ ಗಾತ್ರ

ಮಂಗಳೂರು ವಿಶ್ವವಿದ್ಯಾನಿಲಯ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಬಾಲಕೃಷ್ಣರಿಗೆ ಹಾವುಗಳೆಂದರೆ ವಿಶೇಷ ಪ್ರೀತಿ. ಹಾವುಗಳನ್ನು ಹಿಡಿಯುವ ಅವರ ವಿದ್ಯೆ ಬಾಲ್ಯದಿಂದಲೇ ಅವರಿಗೆ ಕರಗತವಾದುದಲ್ಲ. ವಿಶ್ವವಿದ್ಯಾಲಯದ ಪರಿಸರದಲ್ಲಿ ಕನ್ನಡಿ ಹಾವುಗಳು 1984ರ ಸುಮಾರಿಗೆ ಅಧಿಕ ಸಂಖ್ಯೆಯಲ್ಲಿದ್ದವು. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂದು ಅವುಗಳನ್ನು ಹಿಡಿದು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಡಿನ ಪ್ರದೇಶದಲ್ಲಿ ಅವುಗಳನ್ನು ಬಿಟ್ಟು ಬರುತ್ತಿದ್ದರು. ಅಲ್ಲಿಂದ ಮುಂದಕ್ಕೆ ಕೊಣಾಜೆ ಪರಿಸರದಲ್ಲಿ ಹಾವುಗಳು ಕಂಡರೆ ಹಲವರಿಗೆ ನೆನಪಾಗುವ ಹೆಸರು ಪ್ರೊ. ಬಾಲಕೃಷ್ಣ.

ಇದುವರೆಗೆ 180ಕ್ಕಿಂತಲೂ ಅಧಿಕ ನಾಗರಹಾವು, 25 ಹೆಬ್ಬಾವು, 4 ಕನ್ನಡಿ ಹಾವು, ಲೆಕ್ಕಕ್ಕೆ ಸಿಗದಷ್ಟು ಕೇರೆ ಹಾವುಗಳ ಹಿಡಿದು ರಕ್ಷಿಸಿದ್ದಾರೆ. ಜತೆಗೆ ಇನ್ನೂ ಹಲವಾರು ಜಾತಿಯ ಉರಗಗಳನ್ನು ಹಿಡಿದಿರುವ ಅವರು ಹಾವುಗಳ ಕುರಿತಾದ ಹಲವಾರು ಕಥನಗಳನ್ನು ತನ್ನ ಅನುಭವದ ಜತೆಗೆ ಬಿಚ್ಚಿಡುತ್ತಾರೆ. `ಕಾಡಿಗಿಂತಲೂ ನಾಡಿನಲ್ಲಿ ಜಾಸ್ತಿ ಇರಲು ಬಯಸುವ ಹಾವುಗಳು ನಿಜವಾಗಿಯೂ ಮಾನವ ಸ್ನೇಹಿ. ಮನುಷ್ಯರು ಅದಕ್ಕೆ ತೊಂದರೆ ಮಾಡದಿದ್ದರೆ ಅವುಗಳೂ ತೊಂದರೆ ನೀಡುವುದಿಲ್ಲ ಎಂದು ವಿವರಿಸುವ ಅವರು, ಇಂದು ನಗರೀಕರಣದಿಂದಾಗಿ ಹಾವುಗಳ ಸಂತತಿ ಕ್ಷೀಣಿಸುತ್ತಿದೆ~ ಎಂದು ವಿಷಾದ ವ್ಯಕ್ತ ಪಡಿಸುತ್ತಾರೆ.

ತನ್ನ ಅನುಭವದ ಬೊಗಸೆಯಿಂದ ಹಲವಾರು ನೆನಪುಗಳನ್ನು ತೆಗೆದಿಡುವ ಅವರು ಒಂದು ದಿನ ಒಂದೇ ಜಾಗದಲ್ಲಿ ನಾಲ್ಕರಿಂದ ಐದು ಅಡಿಯ ನಾಲ್ಕು ನಾಗರಹಾವುಗಳನ್ನು ಹಿಡಿದಿರುವುದಾಗಿ ನೆನಪಿಸಿಕೊಳ್ಳುತ್ತಾರೆ. ನಾಲ್ಕು ಹೆಬ್ಬಾವನ್ನು ಪಿಲಿಕುಳಕ್ಕೆ ನೀಡಿದ್ದಾರೆ ಹಾಗೂ ಎರಡು ಹೆಬ್ಬಾವನ್ನು ಆಗುಂಬೆ ಘಾಟಿಯಲ್ಲಿ ಬಿಟ್ಟಿದ್ದಾರೆ. ಇನ್ನುಳಿದ ಹೆಚ್ಚಿನ ಹಾವುಗಳನ್ನು ವಿಶ್ವವಿದ್ಯಾನಿಲಯದ ಆವರಣದಲ್ಲೇ ಸೂಕ್ತ ಪರಿಸರದಲ್ಲಿ ಬಿಟ್ಟಿದ್ದಾರೆ.

ಪ್ರೊ.ಬಾಲಕೃಷ್ಣ ಹಾವು ಹಿಡಿದಕ್ಕಾಗಿ ಯಾರಿಂದಲೂ ಹಣ ಪಡೆಯುವುದಿಲ್ಲ. ತನ್ನದೇ ವಾಹನದಲ್ಲಿ ಹಾವು ಹಿಡಿಯಲು ತೆರಳುತ್ತಾರೆ. `ಹಾವಿನ ಮೇಲಿನ ಪ್ರೀತಿಯಿಂದ ಅದಕ್ಕೆ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಮತ್ತು ಅವುಗಳನ್ನು ಉಳಿಸಬೇಕೆಂಬ ದೃಷ್ಟಿಯಿಂದ ಹಾವು ಹಿಡಿಯುತ್ತೇನೆ~ ಎಂದು ವಿವರಿಸುತ್ತಾರೆ. ವೃತ್ತಿ ಯಾವುದಾದರೇನಂತೆ ಪ್ರವೃತ್ತಿ ನಮ್ಮ ಸಂತೋಷಕ್ಕೆ ಎನ್ನುವುದಕ್ಕೆ ಪ್ರೊ.ಬಾಲಕೃಷ್ಣ ನಿದರ್ಶನ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT