ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಮರಿ ರಹದಾರಿ

Last Updated 20 ಜುಲೈ 2013, 11:25 IST
ಅಕ್ಷರ ಗಾತ್ರ

ಭ್ರಮರಿ... ಇದು ಜನಪದ ಎಂಬ ಮಧುವನ್ನು ನೃತ್ಯದ ಮೂಲಕ ಎಲ್ಲರಿಗೂ ಹಂಚುವ ತಂಡದ ಹೆಸರು. ಸ್ನೇಹಾ ಕಪ್ಪಣ್ಣ ಈ ತಂಡವನ್ನು ಕಟ್ಟಿದವರು. ನೃತ್ಯದ ಬಗ್ಗೆ ಒಲವಿದ್ದ ಸ್ನೇಹಾ 2002ರಲ್ಲಿ ಜೆ.ಪಿ ನಗರದಲ್ಲಿ ಈ ಹೆಸರಿನ ಚಿಕ್ಕ ತಂಡ ಕಟ್ಟಿದರು. ಇಂದು ಈ ತಂಡ ಕರ್ನಾಟಕದ 25 ಜನಪದ ಶೈಲಿಗಳಿಗೆ ಹೆಜ್ಜೆ ಹಾಕುತ್ತಿದೆ.

ತಂಡ ಕಟ್ಟಿದ ಬಗೆ...
“ಜನಪದ ನೃತ್ಯವೆಂದರೆ ಜನ ಬರುತ್ತಾರೋ, ಇಲ್ಲವೋ ಎಂಬ ಸಣ್ಣ ಆತಂಕವಿತ್ತು. ಆದರೆ ಚಿಕ್ಕಮಕ್ಕಳು ಕೂಡ ಬಂದು `ಕಲಿಸಿಕೊಡುತ್ತೀರಾ' ಎಂದು ಕೇಳಿದಾಗ ನನಗಿದ್ದ ಆತಂಕವೆಲ್ಲಾ ಕರಗಿತು” ಎಂದು ಹರ್ಷಿಸುತ್ತಾರೆ ಸ್ನೇಹಾ. ಈಗ ಇವರ ತಂಡದಲ್ಲಿ 30 ಜನ ತರಬೇತಿ ಪಡೆಯುತ್ತಿದ್ದಾರೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇವರ ತಂಡದಲ್ಲಿ ಜಾಗವಿದೆ. ನೃತ್ಯದ ಬಗ್ಗೆ ಕೊಂಚ ಆಸ್ಥೆ ಇದ್ದರೂ ಕಲಿಸಲು ಸ್ನೇಹಾ ತಯಾರಂತೆ.

ತಂಡ ಕಟ್ಟಲು ಸ್ಫೂರ್ತಿ
ಬಾಲ್ಯದಿಂದಲೂ ತಮಗೆ ನೃತ್ಯ, ನಾಟಕದತ್ತ ಹೆಚ್ಚು ಒಲವಿತ್ತು. ಎಳೆ ಮನಸ್ಸಿನಲ್ಲಿ ಚಿಗುರೊಡೆಯುತ್ತಿದ್ದ ಆಸೆಗಳಿಗೆ ಅಪ್ಪನ ಪ್ರೋತ್ಸಾಹದ ಮಾತು ಮತ್ತಷ್ಟು ಉತ್ತೇಜನ ನೀಡಿತು. ಏನಾದರೂ ಸಾಧನೆ ಮಾಡಬೇಕು ಎಂಬ ತುಡಿತ ಸದಾ ಕಾಡುತ್ತಿತ್ತು. ಇದೇ ತಂಡ ಕಟ್ಟಲು ಸ್ಫೂರ್ತಿಯಾಯಿತು ಎಂದು ಹೇಳಿಕೊಳ್ಳುತ್ತಾರೆ ಸ್ನೇಹಾ. ಅವರ ತಂದೆ ಶ್ರೀನಿವಾಸ ಜಿ. ಕಪ್ಪಣ್ಣ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಮನೆಯ ವಾತಾವರಣ ಕೂಡ ಸಂಗೀತ, ನೃತ್ಯಕ್ಕೆ ಪೂರಕವಾಗಿತ್ತು. ಈ ಸಾಂಸ್ಕೃತಿಕ ಚಟುವಟಿಕೆಗಳೇ ಸ್ನೇಹಾ ಅವರ ಜೀವನದ ಮೇಲೆ ಪ್ರಭಾವ ಬೀರಿದವಂತೆ. `ಅಪ್ಪನದು ಕುತೂಹಲದ ಮನಸ್ಸು. ಮಗಳು ಹೊಸತನ್ನೇನಾದರೂ ಕಲಿಯಬೇಕು ಎಂಬ ಆಸೆ ಇತ್ತು. ಅವರ ಕುತೂಹಲದ ಕಣ್ಣುಗಳಿಂದ ನಾನೂ ಪ್ರಪಂಚವನ್ನು ನೋಡಲು ಶುರುಮಾಡಿದೆ. ಕಲೆಯ ಬೆಲೆ ಅರಿತುಕೊಂಡೆ' ಎನ್ನುತ್ತಾರೆ ಸ್ನೇಹಾ.

ಜನಪದ ನೃತ್ಯವಲ್ಲದೆ ಭರತನಾಟ್ಯದಲ್ಲೂ ಇವರು ಪ್ರವೀಣೆ. ಗುರು ಭಾನುಮತಿ ಅವರಿಂದ ಭರತನಾಟ್ಯ ಕಲಿತು, ಪದವಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಕಂಸಾಳೆ ನೃತ್ಯಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸಮಕಾಲೀನ, ಸೆಮಿ ಕ್ಲಾಸಿಕ್, ಜನಪದ ನೃತ್ಯ ಇವರ ತಂಡದ್ಲ್ಲಲಿ ಹೇಳಿಕೊಡಲಾಗುವ ನೃತ್ಯ ಪ್ರಕಾರಗಳು. ಸಿನಿಮಾ ಸಂಗೀತದಿಂದ ಇವರು ದೂರ. ಕಂಸಾಳೆ, ಡೊಳ್ಳುಕುಣಿತ ಪುರುಷರಿಗೆ ಮಾತ್ರವಲ್ಲ, ಹೆಣ್ಣು ಕೂಡ ಗಂಡಿಗೆ ಸರಿಸಮಾನವಾಗಿ ಕುಣಿಯಬಲ್ಲಳು ಎಂಬುದನ್ನು ಸ್ನೇಹಾ ಅವರ ತಂಡ ಕಾರ್ಯಕ್ರಮಗಳ ಮೂಲಕ ತೋರಿಸಿಕೊಟ್ಟಿದೆ.

ನೃತ್ಯವೆಂದರೆ ದೇವರು
ನೃತ್ಯವೆಂದರೆ ಸ್ನೇಹಾ ಅವರ ಪಾಲಿಗೆ ದೇವರಂತೆ. ನೃತ್ಯವು ಕಷ್ಟ, ಸುಖ ಎರಡನ್ನೂ ನೀಡುತ್ತದೆ ಎನ್ನುವ ಇವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮನಃಶಾಸ್ತ್ರ ವಿಷಯದ ಕುರಿತು ಪಾಠ ಮಾಡುತ್ತಾರೆ. ಮನೆಯಲ್ಲಿ ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಾರೆ.
`ನೃತ್ಯ ಹಣಸಂಪಾದನೆಗಲ್ಲ. ಅದು ದೇವರು. ವಿನಯ, ತಾಳ್ಮೆ ಬೆಳೆಸಿಕೊಂಡರೆ ಮಾತ್ರ ಒಲಿಯುವುದು ಎಂಬ ಸತ್ಯ ಕಲಿತುಕೊಂಡೆ' ಎಂದು ನಮ್ರವಾಗಿ ನೃತ್ಯ ಮತ್ತು ತಮ್ಮ ನಂಟಿನ ಬಗ್ಗೆ ಬಿಚ್ಚಿಡುತ್ತಾರೆ ಸ್ನೇಹಾ.

ನೃತ್ಯಶಾಲೆ, ಕಾಲೇಜು ಇವರೆಡನ್ನೂ ನಿಭಾಯಿಸಿಕೊಂಡು ಹೋಗುವುದು ಕಷ್ಟವಾದರೂ ಇಷ್ಟವಾಗುತ್ತದೆಯಂತೆ.

`ಚಿಕ್ಕವಯಸ್ಸಿನ ಮಗ ಇದ್ದಾನೆ. ನೃತ್ಯ ಮತ್ತು ಮಗ ನನ್ನೆರೆಡೂ ಕಣ್ಣುಗಳಿದ್ದಂತೆ. ಮಗನಿಗೆ ಹೇಗೆ ಸಮಯಕ್ಕೆ ಸರಿಯಾಗಿ ಆಹಾರ ಕೊಡುತ್ತೇನೊ ಹಾಗೆ ಕಾಲಕಾಲಕ್ಕೆ ನೃತ್ಯಕ್ಕೆ ಬೇಕಾದ ಹೊಸ ಶೈಲಿಗಳನ್ನು ಆಳವಡಿಸಿಕೊಳ್ಳುತ್ತೇನೆ' ಎಂದು ನೃತ್ಯ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ತಂಡ ಕಟ್ಟಿಕೊಂಡು ಊರೂರು ಸುತ್ತವುದರ ಜತೆಗೆ ಕೆಲವು ಸಿಹಿ-ಕಹಿ ಅನುಭವಗಳು ಆಗಿವೆಯಂತೆ. ಕಹಿ ನೆನಪಿಗೆ ಮನಸ್ಸಿನಲ್ಲಿ ಜಾಗವಿಲ್ಲ ಎಂದು ಹೇಳುವ ಅವರು ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ನಡೆದ ಒಂದು ಸವಿಯ ಕ್ಷಣಗಳನ್ನು ನೆನಪಿಸಿಕೊಂಡಿದ್ದು ಹೀಗೆ:
`ಯುವಜನರೇ ಅಲ್ಲಿ ಸೇರಿದ್ದರು. ನಮ್ಮ ಕಾರ್ಯಕ್ರಮಕ್ಕೂ ಮೊದಲು ಬೇರೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಶಿಳ್ಳೆ, ಕೇಕೆಗಳಿಂದ ವಿದ್ಯಾರ್ಥಿಗಳು ಗಲಾಟೆ ಮಾಡುತ್ತಿದ್ದರು. ನಮ್ಮ ನೃತ್ಯದ ಸಮಯ ಬಂದಾಗ, ಕರ್ನಾಟಕದ ಇತಿಹಾಸ ಪರಿಚಯಿಸುವ ನೃತ್ಯ ಮಾಡಿದೆವು. ಅಷ್ಟು ಹೊತ್ತು ಗಲಾಟೆ ಮಾಡುತ್ತಿದ್ದವರೆಲ್ಲಾ ಸುಮ್ಮನಾದರು. ಕಾರ್ಯಕ್ರಮದ ಆಯೋಜಕರು ಬಂದು ಪೊಲೀಸರು ಮಾಡಲಾಗದ ಕೆಲಸವನ್ನು ನೀವು ಮಾಡಿದ್ದೀರಿ ಎಂದು ಖುಷಿಪಟ್ಟಾಗ ನಮಗೂ ಸಂತಸವಾಯಿತು'.

ಈ ತಂಡದಲ್ಲಿ ಎಂಟು ವರ್ಷಗಳಿಂದ ನೃತ್ಯದಲ್ಲಿ ತೊಡಗಿಸಿಕೊಂಡಿರುವ ವಾಸಂತಿ ಖಾಸಗಿ ಕಂಪೆನಿಯೊಂದರ ಉದ್ಯೋಗಿ. `ಸ್ನೇಹಾ ಅವರನ್ನು ಮೇಡಂ ಎಂದು ಸಂಬೋಧಿಸುವುದೇ ಇಲ್ಲ. ಎಲ್ಲರೂ ಅಕ್ಕಾ ಎಂದು ಕರೆಯುತ್ತೇವೆ. ಇದರಿಂದ ಬಾಂಧವ್ಯ ಕೂಡ ಗಟ್ಟಿಯಾಗುತ್ತದೆ. ನೃತ್ಯ ಕಾರ್ಯಕ್ರಮ ನೀಡಲು ಬೇರೆ ಊರಿಗೆ ಹೋದಾಗ ಅಲ್ಲಿಯ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಬರುತ್ತೇವೆ. ಇದರಿಂದ ಮನಸ್ಸಿಗೂ ನೆಮ್ಮದಿ ಸಿಗುತ್ತದೆ' ಎಂದು ತಂಡದ ಬಗ್ಗೆ ಹೇಳುತ್ತಾರೆ ವಾಸಂತಿ.

ದೇಶ ವಿದೇಶಗಳಲ್ಲಿ ನೃತ್ಯದ ಝಲಕ್ ತೋರಿಸಿರುವ `ಭ್ರಮರಿ' ಸುಮಾರು 250ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದೆ. 2010ರಲ್ಲಿ ನ್ಯೂಜೆರ್ಸಿಯಲ್ಲಿ ನಡೆದ `ಅಕ್ಕ' ಸಮ್ಮೇಳನದಲ್ಲೂ ಭಾಗವಹಿಸಿರುವ ತಂಡ ನ್ಯೂಯಾರ್ಕ್, ಲಾಸ್ ಏಂಜಲೀಸ್, ವಾಷಿಂಗ್ಟನ್‌ನಲ್ಲೂ ನೃತ್ಯ ಕಾರ್ಯಕ್ರಮಗಳನ್ನು ನೀಡಿದೆ. ಹಂಪಿ ಉತ್ಸವ, ನಾಡೋಜ ಅವಾರ್ಡ್ಸ್, ಬೆಂಗಳೂರು ಹಬ್ಬ, ಮೈಸೂರು ದಸರಾ ಕಾರ್ಯಕ್ರಮಗಳಲ್ಲೂ ತಂಡ ತನ್ನ ಪ್ರತಿಭೆ ಮೆರೆದಿದೆ. ಮುಂದಿನ ತಿಂಗಳು ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ನೃತ್ಯ ಕಲಿಸುವ ಯೋಜನೆಯೊಂದು ಭ್ರಮರಿ' ಮುಂದಿದೆಯಂತೆ.

ಸಂಪರ್ಕಕ್ಕೆ: 9448274290

ನೆನಪಿನ ನೃತ್ಯ ಪ್ರದರ್ಶನ
`ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ಯುವಜನರೇ ಹೆಚ್ಚಾಗಿ ಸೇರಿದ್ದರು. ನಮ್ಮಕಾರ್ಯಕ್ರಮಕ್ಕೂ ಮೊದಲು ಬೇರೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಶಿಳ್ಳೆ, ಕೇಕೆಗಳಿಂದ ವಿದ್ಯಾರ್ಥಿಗಳು ಗಲಾಟೆ ಮಾಡುತ್ತಿದ್ದರು. ನಮ್ಮನೃತ್ಯದ ಸಮಯ ಬಂದಾಗ, ಕರ್ನಾಟಕದ ಇತಿಹಾಸ ಪರಿಚಯಿಸುವ ನೃತ್ಯ ಮಾಡಿದೆವು. ಅಷ್ಟು ಹೊತ್ತು ಗಲಾಟೆ ಮಾಡುತ್ತಿದ್ದವರೆಲ್ಲಾ ಸುಮ್ಮನಾದರು. ಕಾರ್ಯಕ್ರಮದ ಆಯೋಜಕರು ಬಂದು ಪೊಲೀಸರು ಮಾಡಲಾಗದ ಕೆಲಸವನ್ನು ನೀವು ಮಾಡಿದ್ದೀರಿ ಎಂದು ಖುಷಿಪಟ್ಟಾಗ ನಮಗೂ ಸಂತಸವಾಯಿತು'.
-ಸ್ನೇಹಾ ಕಪ್ಪಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT