ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟ ಅಧಿಕಾರಿಗಳಿಗೆ ಚಾಟಿಯೇಟು

ನಡತೆ ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಗೃಹ ಸಚಿವರ ತಾಕೀತು
Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಇರುವಂತೆಯೇ ಕೆಲ ಭ್ರಷ್ಟ ಅಧಿಕಾರಿಗಳೂ ಇದ್ದಾರೆ. ಅಂತಹ ಭ್ರಷ್ಟ ಅಧಿಕಾರಿಗಳು ತಮ್ಮ ನಡತೆ ತಿದ್ದಿಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಎಚ್ಚರಿಕೆ ನೀಡಿದರು.

ಗೃಹ ಸಚಿವರಾದ ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಶನಿವಾರ ಮೊದಲ ಬಾರಿಗೆ ಭೇಟಿ ನೀಡಿದ ಜಾರ್ಜ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಪೊಲೀಸ್ ಇಲಾಖೆಯು ರಾಷ್ಟ್ರ ಮಟ್ಟದಲ್ಲಿ ಒಳ್ಳೆಯ ಹೆಸರು ಗಳಿಸಿದೆ. ಆದರೆ, ಕೆಲ ಭ್ರಷ್ಟ ಅಧಿಕಾರಿಗಳು ಇಲಾಖೆಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಅಂತಹ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡು ಜೂಜುಕೋರರು ಮತ್ತು ಸಮಾಜಘಾತುಕ ವ್ಯಕ್ತಿಗಳಿಂದ ಹಫ್ತಾ ವಸೂಲು ಮಾಡುತ್ತಿದ್ದಾರೆ. ಈ ಭ್ರಷ್ಟ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕು.

ವಿಡಿಯೊ ಪಾರ್ಲರ್‌ಗಳು, ಮಟ್ಕಾ ಮತ್ತು ಬೆಟ್ಟಿಂಗ್ ದಂಧೆ ನಿಯಂತ್ರಣಕ್ಕೆ ಹಾಗೂ ಮಹಿಳೆಯರ ವಿರುದ್ಧದ ದೌರ್ಜನ್ಯ ತಡೆಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

ಅಧಿವೇಶನ ಮುಗಿದ ಬಳಿಕ ಪ್ರತಿ ಜಿಲ್ಲೆಗೂ ಭೇಟಿ ನೀಡಿ ಇಲಾಖೆಯಲ್ಲಿನ ವಿವಿಧ ವಿಭಾಗಗಳ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ನಂತರ ಆ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಇಲಾಖೆಯ ವಿವಿಧ ಘಟಕಗಳಲ್ಲಿನ ಎಂಟು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿಗಳು ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.


ನಕ್ಸಲ್‌ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಈಗಾಗಲೇ ್ಙ 5 ಕೋಟಿ ಬಿಡುಗಡೆ ಮಾಡಲಾಗಿದೆ.ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್) ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನಕ್ಸಲ್ ಪ್ಯಾಕೇಜ್ ಬಗ್ಗೆ ಪರಾಮರ್ಶೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ.

ನಕ್ಸಲರ ಶರಣಾಗತಿ ನೀತಿಯನ್ನು ಮತ್ತಷ್ಟು ಸರಳಗೊಳಿಸಲು ನಿರ್ಧರಿಸಲಾಗಿದೆ. ನಕ್ಸಲರು ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದರೆ ಕಾನೂನಿನ ಚೌಕಟ್ಟಿನಲ್ಲಿ ಅವುಗಳನ್ನು ಈಡೇರಿಸಲಾಗುತ್ತದೆ.

ಎಎನ್‌ಎಫ್‌ನಲ್ಲಿ ಕಾರ್ಯ ನಿರ್ವಹಿಸಲು ಸ್ವಇಚ್ಛೆಯಿಂದ ಮುಂದೆ ಬರುವ ಸಿಬ್ಬಂದಿಗೆ ಹೆಚ್ಚಿನ ವೇತನ ಮತ್ತು ಬಡ್ತಿ ನೀಡಲಾಗುತ್ತದೆ ಎಂದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮಾ ಪಚಾವೊ, ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT