ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟ, ಭರವಸೆ ಮರೆತ ಸರ್ಕಾರ ತೊಲಗಿಸಿ: ಸೋನಿಯಾ

Last Updated 19 ಅಕ್ಟೋಬರ್ 2012, 7:40 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಧಿಕಾರಕ್ಕೆ ಬರುವ ಮೊದಲು ನೀಡಿದ ಭರವಸೆಗಳನ್ನೆಲ್ಲ ಮರೆತಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಕರೆಕೊಡುವ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಹುಟ್ಟಿಸುವ ಪ್ರಯತ್ನ ಮಾಡಿದ್ದಾರೆ.

ನೆಹರು ಮೈದಾನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಹಲವು ಸಂದರ್ಭದಲ್ಲಿ ವೀರಾವೇಶದಿಂದಲೇ ಇಂಗ್ಲಿಷ್‌ನಲ್ಲಿ ಮಾತನಾಡಿದ ಅವರು, ಬಿಜೆಪಿಯ ವೈಫಲ್ಯಗಳು ಮತ್ತು ಕಾಂಗ್ರೆಸ್ ಪಕ್ಷದ ನೀತಿ, ಸಿದ್ಧಾಂತಗಳನ್ನು ಜನರಿಗೆ ಸಂವಹನ ಮಾಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು, ಈ ಕೆಲಸದಲ್ಲಿ ಯಶಸ್ವಿಯಾದರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಸಾಧ್ಯವಿದೆ ಎಂದರು.

`ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಸರ್ಕಾರ ಜನತೆಗೆ ದ್ರೋಹ ಬಗೆದಿದೆ. ಇದರಿಂದ ಜನತೆ ಸಿಟ್ಟಿಗೆದ್ದಿದ್ದಾರೆ. ನಾವು ಜನರ ವಿಶ್ವಾಸ ಗಳಿಸಿಕೊಳ್ಳಬೇಕು. ಜನರ ಕೋಪವನ್ನು ನಾವು ಬಳಸಿಕೊಂಡು ಅಧಿಕಾರಕ್ಕೆ ಏರುವ ಪ್ರಯತ್ನ ಮಾಡಬೇಕು~ ಎಂದು ಅವರು ಕಿವಿಮಾತು ಹೇಳಿದರು.

`ಕಷ್ಟ ಕಾಲದಲ್ಲಿ ಈ ಭಾಗದ ಜನತೆ ಕಾಂಗ್ರೆಸ್ ಪಕ್ಷವನ್ನು ಕೈಹಿಡಿದು ಮುನ್ನಡೆಸಿದ್ದಾರೆ. 1977ರಲ್ಲಿ ಇಂದಿರಾ ಗಾಂಧಿ ಸೋತಿದ್ದಾಗ ಅವರನ್ನು ಗೆಲ್ಲಿಸಿಕೊಟ್ಟದ್ದು ಚಿಕ್ಕಮಗಳೂರು. ಈ ಭರವಸೆಯ ಮೇಲೆಯೇ ಮತ್ತೆ ಪಕ್ಷವು ಈ ಭಾಗದ ಕಾರ್ಯಕರ್ತರ ಮೇಲೆ ವಿಶ್ವಾಸ ಇಟ್ಟಿದೆ. ಇದು ಕಾರ್ಯರೂಪಕ್ಕೆ ಬರುವಂತಾಗಬೇಕು~ ಎಂದು ಅವರು ಹೇಳಿದರು.ಕೋಮು ದ್ವೇಷ: ಬಿಜೆಪಿ ಸರ್ಕಾರ ಕೋಮು ದ್ವೇಷವನ್ನು ಬಿತ್ತಿದೆ. ಜನರ ನಡುವೆ ಅಶಾಂತಿ ಸೃಷ್ಟಿಸುವ ಕಾರ್ಯವನ್ನು ಅದು ಮಾಡಿದೆ. ಕೋಮುವಾದ ಯಾವುದೇ ಮೂಲದಿಂದ ಹುಟ್ಟಿರಲಿ, ಅದನ್ನು ಹತ್ತಿಕ್ಕಲೇಬೇಕು ಎಂದು ಸೋನಿಯಾ ನುಡಿದರು.

ಸೋನಿಯಾ ಅವರು `ಎಲ್ಲರಿಗೂ ನಮಸ್ಕಾರ~ ಎಂದು ಕನ್ನಡದಲ್ಲಿ ಮಾತು ಆರಂಭಿಸಿದರು. ಭಾಷಣದ ಕೊನೆಯಲ್ಲಿ ಮೂರು ಭಾರಿ ಭಾರತ್ ಮಾತಾ ಕಿ ಜೈ ಎಂದು ಹೇಳಿ, ಜೈ ಕರ್ನಾಟಕ ಎಂದು ಘೋಷಣೆ ಕೂಗಿದರು.

ಸೋನಿಯಾ ಅವರನ್ನು ಮಂಗಳೂರಿಗೆ ಕರೆತಂದವರು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ. ಸೋನಿಯಾ ಅವರು ವೇದಿಕೆ ಏರುತ್ತಿದ್ದಂತೆಯೇ ಘೊಷಣೆ ಕೂಗುತ್ತ ಅವರನ್ನು ಸ್ವಾಗತಿಸಿದ ಪೂಜಾರಿ ಅವರು, ಸೋನಿಯಾ ಆಸನದಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಅವರ ಬಳಿ ತೆರಳಿ ತಾವು ಕುದ್ರೋಳಿಯಲ್ಲಿ ಕಾಯುತ್ತಿರುವುದಾಗಿ ಹೇಳಿ ಹೊರಟೇಬಿಟ್ಟರು. ಈ ಮೂಲಕ ಸೋನಿಯಾ ಜತೆಗೆ ಬಂದ ಎಂ.ವೀರಪ್ಪ ಮೊಯಿಲಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳದಿರುವ ವಿದ್ಯಮಾನ ಇಲ್ಲೂ ಮರುಕಳಿಸಿತು.

ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರನ್ನು ಹೊರತುಪಡಿಸಿದರೆ ಕೇಂದ್ರದಲ್ಲಿರುವ ರಾಜ್ಯದ ಎಲ್ಲಾ ಸಚಿವರು, ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ.ಹರಿಪ್ರಸಾದ್, ಆಸ್ಕರ್ ಫರ್ನಾಂಡಿಸ್, ಮಧುಸೂದನ ಮಿಸ್ತ್ರಿ ಇದ್ದರು.

ಖರ್ಗೆ, ವೀರಪ್ಪ ಮೊಯಿಲಿ, ಮುನಿಯಪ್ಪ ಅವರು ಸೋನಿಯಾ ಹಿಂಬದಿ ಸಾಲಲ್ಲಿ ಕುಳಿತಿದ್ದರೆ, ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಎಸ್.ಆರ್.ಪಾಟೀಲ್ ಅವರು ಮುಂದಿನ ಸಾಲಿನಲ್ಲಿದ್ದರು. ಈ ಮೂಲಕ ಸೋನಿಯಾ ಅವರ ಸಾಲಿನಲ್ಲಿ ಕೇಂದ್ರ ಸಚಿವರ ಬದಲಿಗೆ ಪಕ್ಷದ ಸಂಘಟನೆಯ ಹೊಣೆ ಹೊತ್ತ ನಾಯಕರೇ ಕಾಣಿಸಿಕೊಂಡರು.

ಮಮತಾ ಗಟ್ಟಿ, ಡಾ.ಎಸ್.ರಘು, ಅಮೃತ್ ಶೆಣೈ, ಮೊಹಮ್ಮದ್ ಬ್ಯಾರಿ, ಇಬ್ರಾಹಿಂ ಕೋಡಿಚಾಲ್, ಅಭಿಷೇಕ್ ಉಳ್ಳಾಲ್, ಕಳ್ಳಿಗೆ ತಾರಾನಾಥ ಶೆಟ್ಟಿ ಅವರಂತಹ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉದಯೋನ್ಮುಖ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ ಸೋನಿಯಾ ವೇದಿಕೆಯಲ್ಲಿ ಇರಲಿಲ್ಲ.

ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು, ಸಂಸದರಾದ ಎಚ್.ವಿಶ್ವನಾಥ್, ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಗೋಪಾಲ ಭಂಡಾರಿ, ಯು.ಟಿ.ಖಾದರ್, ಮೋಟಮ್ಮ, ರಾಜ್ಯ ಯುವ ಘಟಕದ ಅಧ್ಯಕ್ಷ ರಿಜ್ವಾನ್ ಅರ್ಷದ್, ಐವನ್ ಡಿಸೋಜ ಮೊದಲಾದವರು ಸಹ ಸೋನಿಯಾ ಆಗಮನಕ್ಕೆ ಮೊದಲಾಗಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಮಾನಾಥ ರೈ ಅವರಿಗೆ ಸೋನಿಯಾ ಸಮ್ಮುಖದಲ್ಲಿ ಮಾತನಾಡಲು ಅವಕಾಶ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT