ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ತಡೆ: ಸಿವಿಸಿ ಕಾರ್ಯತಂತ್ರದ ಕರಡು ಶೀಘ್ರ

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭ್ರಷ್ಟಾಚಾರ ತಡೆಗಟ್ಟಲು ಸದ್ಯ ಜಾರಿಯಲ್ಲಿರುವ ನಿಯಮಾವಳಿಗೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಜಾಗೃತ ಆಯೋಗ (ಸಿವಿಸಿ) ರೂಪಿಸಿರುವ ಕಾರ್ಯತಂತ್ರದ ಕರಡು ಜನವರಿ ಅಂತ್ಯದೊಳಗೆ ಅಂತಿಮಗೊಳ್ಳಲಿದೆ. ಇದರಿಂದ ಕಪ್ಪುಹಣ, ಬೇನಾಮಿ ಆಸ್ತಿ ಮತ್ತ ಇನ್ನಿತರ ಅಕ್ರಮಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ ಎಂದು ಮೂಲಗಳು ಹೇಳಿವೆ.

ಅಕ್ರಮದಲ್ಲಿ ತೊಡಗಿರುವ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಮತ್ತು ಅಕ್ರಮದಲ್ಲಿ ತೊಡಗಿದ್ದು ಋಜುವಾತಾದರೆ ಅಂತಹವರಿಗೆ ಶಿಕ್ಷೆ ವಿಧಿಸಲು ಅಗತ್ಯ ತಿದ್ದುಪಡಿಗಳನ್ನು ತರುವಂತೆ ಈ ಕಾರ್ಯತಂತ್ರದ ಕರಡಿನಲ್ಲಿ ಸಿವಿಸಿ ಶಿಫಾರಸು ಮಾಡಿದೆ.

2010ರಲ್ಲೇ `ರಾಷ್ಟ್ರೀಯ ಭ್ರಷ್ಟಾಚಾರ ತಡೆ ಕಾರ್ಯತಂತ್ರ ಕರಡು~ ಅನ್ನು ಸಿದ್ಧಪಡಿಸಿದ್ದ ಸಿವಿಸಿ, ಇದಕ್ಕೆ ಸಾರ್ವಜನಿಕರಿಂದ ಸಲಹೆ, ಆಕ್ಷೇಪಗಳನ್ನು ಆಹ್ವಾನಿಸಿತ್ತು. ಈ ಕಾರಣಕ್ಕಾಗಿ ವೆಬ್‌ಸೈಟ್‌ನಲ್ಲಿ ಇದನ್ನು ಪ್ರಕಟಿಸಿಯೂ ಇತ್ತು. ಈ ಕರಡಿಗೆ ಸಿವಿಸಿಯಲ್ಲೇ ಆಡಳಿತಾತ್ಮಕ ಒಪ್ಪಿಗೆ ದೊರಕಬೇಕು ಎನ್ನುವಷ್ಟರಲ್ಲಿ ಈ ಸಂಸ್ಥೆ ಆಯುಕ್ತರಾಗಿದ್ದ ಪಿ.ಜೆ. ಥಾಮಸ್ ಅವರ ನೇಮಕಾತಿ ಕುರಿತು ವಿವಾದ ಉಂಟಾಯಿತು. ಜೊತೆಗೆ ಕಾಮನ್‌ವೆಲ್ತ್ ಕ್ರೀಡಾಕೂಟ ಸಂಘಟನೆಯಲ್ಲಿ ನಡೆದ ಹಗರಣ ಮತ್ತಿತರ ಕಾರಣಗಳಿಂದ ಈ ಕರಡು ಮೂಲೆಗುಂಪಾಯಿತು. 

`ಸಾರ್ವಜನಿಕರಿಂದ ಈ ಕರಡಿಗೆ ಅನೇಕ ಸಲಹೆಗಳು ಬಂದಿವೆ. ಇವುಗಳನ್ನು ಪರಿಶೀಲಿಸಲಾಗುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ಕರಡನ್ನು ಅಂತಿಮಗೊಳಿಸಲಾಗುವುದು. ನಂತರ ಇದನ್ನು ಸಿಬ್ಬಂದಿ, ಸಾರ್ವಜನಿಕ ಕಂದುಕೊರತೆ ಮತ್ತು ಪಿಂಚಣಿ ಸಚಿವಾಲಯಕ್ಕೆ ಅಂಗೀಕಾರಕ್ಕಾಗಿ ಕಳುಹಿಸಲಾಗುವುದು. ಇಲ್ಲಿ ಒಪ್ಪಿಗೆ ದೊರೆತ ಮೇಲೆ ಸೂಕ್ತ ಕ್ರಮಕ್ಕಾಗಿ ಕಾನೂನು ಸಚಿವಾಲಯಕ್ಕೆ ರವಾನಿಸಲಾಗುವುದು~ ಎಂದು ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಸಿವಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ, ರಾಜಕೀಯ ಪಕ್ಷಗಳು, ನ್ಯಾಯಾಂಗ, ಮಾಧ್ಯಮ, ನಾಗರಿಕರು, ಖಾಸಗಿ ವಲಯದ ಕಂಪೆನಿಗಳು, ಸೊಸೈಟಿಗಳು ಹಾಗೂ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕ್ಕೆ ಈ ಕರಡಿನಲ್ಲಿ ಅನೇಕ ಶಿಫಾರಸುಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT