ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ತಡೆಗೆ ಹೊಸ ಸೂತ್ರಗಳ ಜಾರಿ ಚಿಂತನೆ- ಪ್ರಧಾನಿ ಸಿಂಗ್...

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ:  ಭ್ರಷ್ಟಾಚಾರಕ್ಕೆ ತಡೆಯೊಡ್ಡುವ ಉದ್ದೇಶದಿಂದ ಸಾರ್ವಜನಿಕ ಆಡಳಿತ ಸಂಸ್ಥೆಗಳ ಅಧಿಕಾರಕ್ಕೆ ಕಡಿವಾಣ ಹಾಕಲು ಸರ್ಕಾರ ಚಿಂತಿಸುತ್ತಿದೆ ಎಂದು  ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು.

ವಿದೇಶಗಳ ಅಧಿಕಾರಿಗಳು ಲಂಚ ನೀಡುವುದನ್ನು ಅಪರಾಧವೆಂದು ವ್ಯಾಖ್ಯಾನಿಸುವ ಮಸೂದೆಯನ್ನು ಸರ್ಕಾರ ಸಂಸತ್ತಿನಲ್ಲಿ ಈಗಾಗಲೇ ಮಂಡಿಸಿದೆ. ಇದರ ಜತೆಗೆ, ಖಾಸಗಿ ವಲಯದ ಲಂಚ ನೀಡಿಕೆಯನ್ನು ಅಪರಾಧ ಎಂದು ಪರಿಗಣಿಸುವ ನಿಟ್ಟಿನಲ್ಲಿ ಕಾನೂನು ಬದಲಾವಣೆ ಮಾಡಲಾಗುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದರು.
ವಿವಿಧ ರಾಜ್ಯಗಳ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಗಳು ಮತ್ತು ಸಿಬಿಐ ಏರ್ಪಡಿಸಿದ್ದ ದೈವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭ್ರಷ್ಟಾಚಾರಗಳನ್ನು ಬಯಲಿಗೆ ಎಳೆಯುವವರಿಗೆ ರಕ್ಷಣೆ ಒದಗಿಸುವ ಜತೆಗೆ ನ್ಯಾಯಾಂಗ ಗುಣಮಟ್ಟ ಮತ್ತು ಉತ್ತರದಾಯತ್ವ ಮಸೂದೆಯನ್ನೂ ಸಂಸತ್ತಿನಲ್ಲಿ ಈಗಾಗಲೇ ಮಂಡಿಸಲಾಗಿದೆ ಎಂದು ಸಿಂಗ್ ತಿಳಿಸಿದರು.

ಸರ್ಕಾರದ ವತಿಯಿಂದ ನೀಡುವ ಸಾವಿರಾರು ಕೋಟಿ ರೂಪಾಯಿ ಮೊತ್ತದ ಗುತ್ತಿಗೆ ಪ್ರಕರಣಗಳಲ್ಲಿ ಆಗುವ ಅಕ್ರಮಗಳನ್ನು ತಡೆಯಲು ನಿಯಮಾವಳಿ ರೂಪಿಸಲು ಕೆಲವು ಸಚಿವರು ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ಶೀಘ್ರವೇ ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ ಎಂದೂ ಪ್ರಧಾನಿ ತಿಳಿಸಿದರು.

ಮುಂಬರುವ ತಿಂಗಳುಗಳಲ್ಲಿ ಪ್ರಬಲ ಲೋಕಪಾಲ ಮಸೂದೆ ಜಾರಿಯಾಗಲಿದೆ. ಇದರ ಸ್ವರೂಪ ಮತ್ತು ಕಾರ್ಯಗಳು ಏನೇ ಆಗಿದ್ದರೂ ಸಿಬಿಐ ಪ್ರಮುಖ ತನಿಖಾ ಸಂಸ್ಥೆಯಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಜರೂರಿನ ಬಗ್ಗೆ ಇಡೀ ರಾಷ್ಟ್ರದ ಜನತೆಯ ಗಮನಸೆಳೆದ ಸಿವಿಲ್ ಸೊಸೈಟಿ ಆಂದೋಲನವನ್ನು ಇದೇ ಸಂದರ್ಭದಲ್ಲಿ ಸಿಂಗ್ ಶ್ಲಾಘಿಸಿದರು.ಸಿಬಿಐ ಹಾಗೂ ಮತ್ತಿತರ ತನಿಖಾ ಸಂಸ್ಥೆಗಳಿಗೆ ಅನುವು ಮೂಡಿಕೊಡುವ ನಿಟ್ಟನಲ್ಲಿ, ಸಾರ್ವಜನಿಕ ನೌಕರರ ವಿರುದ್ಧ ತನಿಖೆ ಆರಂಭಿಸಲು ಗರಿಷ್ಠ 90 ದಿನಗಳೊಳಗೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.

ಒಂದೊಮ್ಮೆ ಹೀಗೆ ಕೋರಿಕೆ ಬಂದಾಗ ತನಿಖೆಗೆ ಅನುಮತಿ ನಿರಾಕರಿಸಿದ್ದೇ ಆದರೆ, ಅದಕ್ಕೆ ಕಾರಣಗಳೇನು ಎಂಬ ಬಗ್ಗೆ ಮೇಲಧಿಕಾರಿಗಳಿಗೆ ವಿವರಣೆ ನೀಡಬೇಕೆಂಬ ನಿಯಮವನ್ನು ಜಾರಿಗೊಳಿಸುವ ಪ್ರಸ್ತಾವ ಇದೆ ಎಂದು ತಿಳಿಸಿದರು.

ವಿಚಾರಣೆ ಬಾಕಿ ಇರುವ ಸಿಬಿಐ ಪ್ರಕರಣಗಳ ಸಂಖ್ಯೆ ತಗ್ಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. 10 ವರ್ಷಕ್ಕಿಂತ ಹಳೆಯದಾದ ಬಾಕಿ ಇರುವ ಪ್ರಕರಣಗಳ ಬಗ್ಗೆ ಪರಿಶೀಲಿಸಲು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಪ್ರಧಾನಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT