ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಘಟಿತ ಚಳವಳಿ ಅಗತ್ಯ

Last Updated 21 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭ್ರಷ್ಟಾಚಾರದ ವಿರುದ್ಧ ಕನ್ನಡಿಗರ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯರೂ ದನಿಯೆತ್ತಬೇಕು. ಎಲ್ಲರೂ ಸಂಘಟಿತರಾಗಿ ಆಂದೋಲನದ ರೀತಿಯಲ್ಲಿ ಚಳವಳಿ ನಡೆಸಿದರಷ್ಟೇ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಕರೆ ನೀಡಿದರು.

ನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ನವೀಕೃತ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಅತಿ ಮುಖ್ಯ. ಆದರೆ ಇಂದು ಬಹುಪಾಲು ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಕಾಣದಂತಾಗಿದೆ. ಸಂವಿಧಾನ ಅಸ್ತಿತ್ವಕ್ಕೆ ಬಂದ ಈ 61 ವರ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳು ಸಾವಕಷ್ಟು ಕುಸಿದಿವೆ. ಎಲ್ಲ ಕ್ಷೇತ್ರದಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿ ಬೆಳೆಯುತ್ತಿದೆ’ ಎಂದು ವಿಷಾದಿಸಿದರು.

ಬಹುಕಾಲ ಉಳಿಯದು: ‘ಶ್ರೀಮಂತಿಕೆಯೇ ದೊಡ್ಡತನ, ಪ್ರಾಮಾಣಿಕತೆ ದಡ್ಡತನ ಎಂಬ ಭಾವನೆ ಜನರಲ್ಲಿ ಮೂಡಿದೆ. ಈ ಮನೋಭಾವ ಬದಲಾಗಬೇಕು. ಭ್ರಷ್ಟಾಚಾರ, ದುರಾಡಳಿತ ಮೇರೆ ಮೀರಿದ್ದು, ಸಾಮಾನ್ಯ ಜನರಿಗೆ ಉಂಟಾಗುತ್ತಿರುವ ಅನ್ಯಾಯವನ್ನು ಗಮನಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಹುಕಾಲ ಉಳಿಯುವುದಿಲ್ಲ ಎನಿಸುತ್ತದೆ’ ಎಂದರು.

‘ಹಿಂದೆಲ್ಲ ಅವ್ಯವಹಾರಗಳಲ್ಲಿನ ಹಣದ ಮೊತ್ತ ಮೂರ್ನಾಲ್ಕು ಸೊನ್ನೆಗಳನ್ನು ದಾಟುತ್ತಿರಲಿಲ್ಲ. ಆದರೆ ಕಾಲ ಬದಲಾದಂತೆ ಅವ್ಯವಹಾರಕ್ಕೆ ಬದಲಾಗಿ ಹಗರಣಗಳಾಗುತ್ತಿವೆ. ಹಗರಣದಲ್ಲಿನ ಹಣದ ಮೊತ್ತದಲ್ಲಿ ಸೊನ್ನೆಗಳಿಗೆ ಲೆಕ್ಕವೇ ಇಲ್ಲದಂತಾಗಿದೆ. 1.70 ಲಕ್ಷ ಕೋಟಿ ರೂಪಾಯಿ, 70,000 ಕೋಟಿ... ಹೀಗೆ ಲಕ್ಷ, ಸಾವಿರ ಕೋಟಿ ರೂಪಾಯಿ ಮೊತ್ತದಷ್ಟು ಹಗರಣಗಳು ನಡೆಯುತ್ತಿದೆ’ ಎಂದು ಹೇಳಿದರು.

ಪ್ರಧಾನಿ ಹೇಳಿಕೆಗೆ ಅರ್ಥವಿಲ್ಲ: ‘ಭ್ರಷ್ಟಾಚಾರವನ್ನು ಜನತೆ ಸಹಿಸಿಕೊಳ್ಳಬಾರದು ಎಂದು ಪ್ರಧಾನಿ ಕರೆ ನೀಡಿದ್ದರು. ದೇಶದಲ್ಲಿ ನಡೆದ ಭಾರಿ ಮೊತ್ತದ ಹಗರಣಗಳಿಗೆ ಸಂಬಂಧಪಟ್ಟಂತೆ ಸರ್ಕಾರದ ನಿಲುವನ್ನು ಗಮನಿಸಿದರೆ ಕೇಂದ್ರ ಸರ್ಕಾರವೇ ಇದನ್ನು ಸಹಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹೊರದೇಶಗಳಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಲೇ ಇದೆ. ಆದರೆ ಕೇಂದ್ರ ಸರ್ಕಾರ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದ ಕಾನೂನು ತಜ್ಞರ ದಕ್ಷತೆಯ ಬಗ್ಗೆ ಅನುಮಾನ ಮೂಡುತ್ತಿದೆ’ ಎಂದರು.

ಹಣ ಗಳಿಕೆ ರೋಗ: ‘ಭ್ರಷ್ಟಾಚಾರ ಮಾಡುವವರಿಗೆ ಹಣ ಗಳಿಕೆಯ ‘ರೋಗ’ ತಗುಲಿರುತ್ತದೆ. ಒಮ್ಮೆ ಈ ರೋಗ ಕಾಣಿಸಿಕೊಂಡರೆ ಅಷ್ಟು ಸುಲಭವಾಗಿ ಗುಣಮುಖರಾಗುವುದಿಲ್ಲ. ದಿನ ಕಳೆದಂತೆ ರೋಗ ಉಲ್ಭಣಿಸುತ್ತದೆ. ಈ ಮನೋಭಾವ ಬದಲಾಗದಿದ್ದರೆ ಕ್ರಮೇಣ ವ್ಯಾಪಕವಾಗಿ ಹರಡಿ ಸಮಾಜವೇ ನರಳುವಂತಾಗುತ್ತದೆ. ಹಾಗಾಗಿ ಭ್ರಷ್ಟಾಚಾರದ ನಿರ್ಮೂಲನೆಗೆ ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸಬೇಕಿದೆ’ ಎಂದು ಹೇಳಿದರು.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುಧೀರ್ ದುಬೆ ಮಾತನಾಡಿ, ‘ಬ್ಯಾಂಕ್‌ನ ಲೇಡಿ ಕರ್ಜನ್ ರಸ್ತೆ ಶಾಖೆಯು ನವೀಕರಣಗೊಂಡಿದ್ದು, ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆ ಕಲ್ಪಿಸಿರುವುದು ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿ, ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿ ಇದು ದೂರು ರಹಿತ ಶಾಖೆಯಾಗಲಿ’ ಎಂದು ಆಶಿಸಿದರು.

ಬ್ಯಾಂಕ್‌ನ ಬೆಂಗಳೂರು ವಲಯ-1ರ ಉಪ ಪ್ರಧಾನ ವ್ಯವಸ್ಥಾಪಕ ಬಿ. ಗಣೇಶ್ ಪೈ, ಪ್ರಾದೇಶಿಕ ಕಚೇರಿ-2ರ ಸಹಾಯಕ ಪ್ರಧಾನ ವ್ಯವಸ್ಥಾಪಕ ಆರ್. ಸುಬ್ರಮಣಿಯನ್, ಶಾಖೆಯ ವ್ಯವಸ್ಥಾಪಕ ಎ.ಸೋಮಪ್ಪ, ಬ್ಯಾಂಕ್‌ನ ಅಧಿಕಾರಿಗಳ ಸಂಘದ ಅಧ್ಯಕ್ಷ ಗುರುರಾಜರಾವ್, ಪ್ರಧಾನ ಕಾರ್ಯದರ್ಶಿ ಕೊಪ್ಪಳ್ ನಾಗರಾಜ್, ಎಸ್‌ಬಿಎಂ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ವೇಣುಗೋಪಾಲ್, ಕಾರ್ಯಕಾರಿ ಸಮಿತಿ ಸದಸ್ಯ ಕೆ.ಮುರಳೀಧರ್ ಉಪಸ್ಥಿತರಿದ್ದರು.

ಸದ್ಯದಲ್ಲೇ ಜನತೆಗೆ ಮಾಹಿತಿ: ‘ಲೋಕಾಯುಕ್ತ ಸಂಸ್ಥೆಯಲ್ಲಿ ನನ್ನ ಅಧಿಕಾರಾವಧಿಯ ಕಾರ್ಯ ನಿರ್ವಹಣೆ, ಕಾರ್ಯಾಚರಣೆ ಇತರೆ ಮಾಹಿತಿಯನ್ನು ಸದ್ಯದಲ್ಲೇ ರಾಜ್ಯದ ಜನತೆಗೆ ವಿವರವಾಗಿ ನೀಡುತ್ತೇನೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.

‘ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರು ಭಾನುವಾರ ರಾತ್ರಿ ದೂರವಾಣಿಯಲ್ಲಿ ನನ್ನೊಂದಿಗೆ ಮಾತನಾಡಿದ್ದು, ಸಂಸ್ಥೆಯ ಕುರಿತ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಲೋಕಾಯುಕ್ತ ಸಂಸ್ಥೆಯ ಕಾರ್ಯ ವೈಖರಿಯ ಬಗ್ಗೆ ಗೌರವವಿದೆ. ಲೋಕಾಯುಕ್ತ ಸಂಸ್ಥೆಗೆ ಧಕ್ಕೆ ಬರುವ ಯಾವುದೇ ಹೇಳಿಕೆ ನೀಡಿಲ್ಲ. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂಬುದಾಗಿ ಹೇಳಿದ್ದಾರೆ. ಈ ಸಂಬಂಧ ಎರಡು ಪುಟಗಳ ಪತ್ರವನ್ನು ಬರೆದಿದ್ದಾರೆ. ಹಾಗಾಗಿ ಈ ವಿಷಯವನ್ನು ಹೆಚ್ಚಿಗೆ ಬೆಳೆಸುವುದು ಬೇಡ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT