ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರದ ವಿರುದ್ಧ ಕ್ರೀಡಾ ತಾರೆಗಳ ಜಾಗೃತಿ ಓಟ

Last Updated 24 ಜೂನ್ 2011, 7:00 IST
ಅಕ್ಷರ ಗಾತ್ರ

ಮೈಸೂರು: ಒಂದು ಕಾಲದಲ್ಲಿ ಭಾರತದ ಅಥ್ಲೆಟಿಕ್ಸ್ ಟ್ರ್ಯಾಕ್ ಮೇಲೆ ಫಳಫಳ ಮಿಂಚಿದ್ದ ನಕ್ಷತ್ರಗಳು ಗುರುವಾರ ಬೆಳಿಗ್ಗೆ ನಗರದ ಓವಲ್ ಮೈದಾನದಲ್ಲಿ ಒಂದೇ ಕಡೆ ಸೇರಿದ್ದವು.

ಕ್ರೀಡಾರಂಗದಿಂದ ಪಡೆದ ಕೀರ್ತಿ, ಸೌಲಭ್ಯಗಳ ಋಣಭಾರವ ತೀರಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ ಇಡಲು ಅವರೆಲ್ಲ ಸೇರಿದ್ದರು. ಭಾರತೀಯ ಕ್ರೀಡಾರಂಗದಲ್ಲಿರುವ ಭ್ರಷ್ಟಾಚಾರ ಮತ್ತು ಕೆಟ್ಟ ರಾಜಕೀಯವನ್ನು ತೊಳೆದು ಹಾಕುವ ಸಂಕಲ್ಪದೊಂದಿಗೆ ಹುಟ್ಟಿದ `ಕ್ಲೀನ್ ಸ್ಪೋರ್ಟ್ಸ್ ಇಂಡಿಯಾ~ ಸಂಸ್ಥೆಯ ಮೊದಲ ಜನ್ಮದಿನ ಆಚರಿಸಲು ಅವರೆಲ್ಲ ಸೇರಿದ್ದರು.

ಒಲಿಂಪಿಯನ್ ನಯೀಬ್ ಬಾಗೆ, ಮಾಜಿ ಅಥ್ಲೀಟ್ ಅಶ್ವಿನಿ ನಾಚಪ್ಪ, ರೀತ್ ಅಬ್ರಹಾಂ, ಎಸ್.ಡಿ. ಈಶನ್, ಕಬಡ್ಡಿ ಆಟಗಾರ ಹೊನ್ನಪ್ಪ, ಜೋಸೆಫ್, ಯೋಗೇಂದ್ರ, ಅಜೀಬ್ ಬಾಂಗರ್,  ಮತ್ತಿತರ ಮಾಜಿ ಚಾಂಪಿಯನ್ನರೊಂದಿಗೆ 200ಕ್ಕೂ ಹೆಚ್ಚು  ಕ್ರೀಡಾಸಕ್ತರು, ಸಾರ್ವಜನಿಕರು ಓಡಿದರು.

ಓವಲ್ ಮೈದಾನದಿಂದ ಆರಂಭವಾದ ಓಟದಲ್ಲಿ ಸುಮಾರು 2 ಕಿಲೋಮೀಟರ್ ಓಡಿದ ಓಟಗಾರರು ಮರಳಿ ಓವಲ್‌ಗೇ ಬಂದರು.

ಇದಕ್ಕೂ ಮುನ್ನ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷೆ ಅಶ್ವಿನಿ ನಾಚಪ್ಪ, `ಕ್ರೀಡಾರಂಗದಲ್ಲಿ ಪ್ರತಿಭಾವಂತ ಆಟಗಾರರಿಗೆ ಅನ್ಯಾಯ ಆಗಬಾರದು. ಎಲ್ಲರಿಗೂ ಸಮಾನ ಅವಕಾಶ ಮತ್ತು ಸೌಲಭ್ಯಗಳು ಸಿಗಬೇಕು~ ಎಂದರು.

ನಂತರ ಮಾತನಾಡಿದ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಹೊನ್ನಪ್ಪ, `ನಮ್ಮ ದೇಶದಲ್ಲಿ ಇವತ್ತಿಗೂ ಒಬ್ಬನೇ ಒಬ್ಬ ಕ್ರೀಡಾಪಟು ಕ್ರೀಡಾ ಸಚಿವನಾಗಿಲ್ಲ. ಕ್ರೀಡಾ ಇಲಾಖೆಗಳಿಗೆ ರಾಜಕಾರಣಿಗಳು ಸಚಿವರಾದರೆ ಅವರಿಂದ ಅಭಿವೃದ್ಧಿಯನ್ನು ನಿರೀಕ್ಷಿಸುವುದಾದರೂ ಹೇಗೆ. ಇದಕ್ಕಾಗಿ ನಮ್ಮ ಸಂಸ್ಥೆಯು ಕ್ರೀಡಾಪಟುಗಳಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ~ ಎಂದರು. ರೀತ್ ಮತ್ತು ಅಶ್ವಿನಿ ಸಂಸ್ಥೆಯ ಯೋಜನೆಗಳ ಕುರಿತು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT