ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರದಲ್ಲಿ ಬಿಜೆಪಿ ಸರ್ಕಾರ ದಾಖಲೆ- ರಾಹುಲ್

Last Updated 2 ಜೂನ್ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಸಂಕಲ್ಪ, ಯುವಕರ ಶಕ್ತಿಗೆ ಹಿರಿಯರ ಅನುಭವವನ್ನು ಹದವಾಗಿ ಬೆರೆಸುವ ಸಂದೇಶ,  ಚುನಾವಣೆಗೆ ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನೇ ಆಯುಧವನ್ನಾಗಿ ಬಳಸಲು ಪಕ್ಷದ ಕಾರ್ಯಕರ್ತರಿಗೆ ಸಲಹೆ- ಇವು ನಗರದ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಯುವ ಸಂಘರ್ಷ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ  ಅವರು ಮಾಡಿದ ಎಂಟು ನಿಮಿಷಗಳ ಭಾಷಣದ ಮುಖ್ಯಾಂಶಗಳು.

ಅವರು ಚುಟುಕಾಗಿ ಮಾತನಾಡಿದರೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳದೆ ಬಿಡಲಿಲ್ಲ. ತಮ್ಮ ಜುಬ್ಬಾ ತೋಳುಗಳನ್ನು ಏರಿಸಿಕೊಳ್ಳುತ್ತಲೇ ಪೋಡಿಯಂ ಬಳಿಬಂದ ರಾಹುಲ್, `ಕರ್ನಾಟಕದಲ್ಲಿ ಈ ಹಿಂದೆ ಇದ್ದದ್ದು ದೀನ-ದಲಿತರ, ಬಡವರ ಸರ್ಕಾರ, ಐಟಿ-ಬಿಟಿ ಸರ್ಕಾರ, ಅಭಿವೃದ್ಧಿ ಪರವಾದ ಸರ್ಕಾರ. ಆದರೆ, ಸದ್ಯ ಅಸ್ತಿತ್ವದಲ್ಲಿ ಇರುವುದು ದುಡ್ಡು ಹೊಡೆಯುವ ಸರ್ಕಾರ. ಭ್ರಷ್ಟಾಚಾರದಲ್ಲಿ ಬಿಜೆಪಿ ಮಂದಿ ಎಲ್ಲ ಮಿತಿಗಳನ್ನು ಮೀರಿದ್ದು, ಅವರ ದಾಖಲೆ ಸರಿಗಟ್ಟಲು ಯಾರಿಗೂ ಸಾಧ್ಯವಿಲ್ಲ~ ಎಂದು ಚುಚ್ಚಿದರು.

`ದಿಲ್ಲಿಯಿಂದ ನಾವು ದುಡ್ಡು ಕಳುಹಿಸಿದರೆ ಅದು ಬೆಂಗಳೂರು ಬಿಟ್ಟು ಮುಂದೆ ಬರುವುದೇ ಇಲ್ಲ. ಸರ್ಕಾರ ನಡೆಸುವವರಿಂದ ಅಲ್ಲಿಯೇ ಕಳುವಾಗಿ ಬಿಡುತ್ತದೆ. ಇದಕ್ಕೆಲ್ಲ ಅಂತ್ಯ ಹಾಡುವ ಕಾಲ ಇದೀಗ ಬಂದಿದೆ. ರಾಜ್ಯದಲ್ಲಿ ಯುವಕರ ಧ್ವನಿ ಗಟ್ಟಿಯಾಗಿ ಮೊಳಗಿದ್ದು, ಭವಿಷ್ಯದ ಧ್ವನಿಯಾಗಿ ಗೋಚರಿಸುತ್ತಿದೆ. ಈ ಧ್ವನಿಯನ್ನು ಅಡಗಿಸಲು ಯಾರಿಗೂ ಸಾಧ್ಯವಿಲ್ಲ. ಇದರಿಂದ ರಾಜ್ಯದಲ್ಲಿ ಬದಲಾವಣೆ ಗಾಳಿ ಖಂಡಿತವಾಗಿಯೂ ಬೀಸುತ್ತದೆ~ ಎಂದು  ವಿಶ್ವಾಸದಿಂದ ಅವರು ನುಡಿದರು.

`ಯುವ ಕಾಂಗ್ರೆಸ್ ಕಾರ್ಯಕರ್ತರು ಬಡವರ, ದೀನ-ದಲಿತರ ಪರವಾಗಿ ಕೆಲಸ ಮಾಡಬೇಕು. ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನೇ ತಮ್ಮ ಆಯುಧವನ್ನಾಗಿ ಮಾಡಿಕೊಳ್ಳಬೇಕು. ಚುನಾವಣೆ ಹತ್ತಿರವಾಗಿದ್ದು, ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರ ನೋಡುವ ದಿನಗಳು ದೂರವಿಲ್ಲ~ ಎಂದು ಹುರುಪು ತುಂಬಿದರು.

`ರಾಜ್ಯದಲ್ಲಿ ಯುವ ಶಕ್ತಿಯಿಂದ ಕಾಂಗ್ರೆಸ್ ನಳನಳಿಸುತ್ತಿದ್ದು, ಇದರೊಂದಿಗೆ ಹಿರಿಯರ ಅನುಭವದ ಲಾಭವನ್ನೂ ಪಡೆಯಬೇಕು. ಎರಡೂ ಶಕ್ತಿಗಳನ್ನು ಸಮತೋಲನದಿಂದ ಕೊಂಡೊಯ್ಯಬೇಕು~ ಎನ್ನುವ `ಫಾರ್ಮುಲಾ~ವನ್ನು ರಾಹುಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಕೊಟ್ಟರು.ಸಮಾರಂಭದಲ್ಲಿ ಮಾತನಾಡಿದ ಎಲ್ಲ ಮುಖಂಡರೂ ಚುನಾವಣೆ ಮಂತ್ರವನ್ನೇ ಜಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT