ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರದವಿರುದ್ಧ ಆಂದೋಲನಕ್ಕೆ ಕರೆ

ಹಿರಿಯೂರು: ತಾಲ್ಲೂಕುಮಟ್ಟದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ
Last Updated 2 ಏಪ್ರಿಲ್ 2013, 8:56 IST
ಅಕ್ಷರ ಗಾತ್ರ

ಹಿರಿಯೂರು: ಜಾತಿ ವ್ಯವಸ್ಥೆ ಮತ್ತು ಭ್ರಷ್ಟಾಚಾರ ಎಂಬ ದೊಡ್ಡ ಅಪಮೌಲ್ಯಗಳ ವಿರುದ್ಧ ದೊಡ್ಡ ಆಂದೋಲನ ನಡೆಸಬೇಕು ಎಂದು ಪ್ರೊ.ಸಿ.ಕೆ. ಮಹೇಶ್ ಕರೆ ನೀಡಿದರು.

ನಗರದ ಹಿರಿಯೂರಿನ ನೆಹರು ಮೈದಾನದಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ `ಸಾಮಾಜಿಕ ಅಪಮೌಲೀಕರಣ' ವಿಷಯ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ ಮತ್ತು ಜಾತಿ ತೊಲಗದಿದ್ದಲ್ಲಿ ಜನತಂತ್ರ ತನ್ನ ಅರ್ಥ ಕಳೆದುಕೊಳ್ಳುತ್ತದೆ. `ಮತ' ಸರಕಾಗಿ ಜನತಂತ್ರದ ಅಡಿಪಾಯ ಅಲುಗಾಡಿಸುತ್ತಿದೆ.

ಜನತಂತ್ರ ಎಂದಿಗೂ `ಧನತಂತ್ರ' ಆಗಬಾರದು. ಹಣವುಳ್ಳವರು ಮಾತ್ರ ಆಳುವಂತಹ ಸ್ಥಿತಿ ನಿರ್ಮಾಣ ಆಗಬಾರದು. ವಚನ ಚಳವಳಿ ಮತ್ತೊಮ್ಮೆ ಆರಂಭಿಸಿ, ಮನುಷ್ಯರಾಗಿ ಪರಿವರ್ತಿಸುವ ಕೆಲಸವನ್ನು ನಡೆಸಬೇಕಿದೆ. ಜಾತಿ ಸರ್ವನಾಶವಾದಂತೆಲ್ಲ ಮನುಷ್ಯರ ಸೃಷ್ಟಿಯಾಗುತ್ತದೆ. ಚಿತ್ರದುರ್ಗದ ಶಿವಮೂರ್ತಿ ಶರಣರು ಜಾತಿಗೊಬ್ಬ ಮಠಾಧೀಶರನ್ನು ಹುಟ್ಟು ಹಾಕಿ ಯಾವ ಚಳುವಳಿ ಮಾಡಲು ಹೊರಟಿದ್ದಾರೆಂದು ಅರ್ಥವಾಗುತ್ತಿಲ್ಲ. ಬುದ್ಧನ ವೈಚಾರಿಕ ನೆಲೆಯಲ್ಲಿ ಸಮಾಜವನ್ನು ಕಟ್ಟುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕಿದೆ ಎಂದು ಹೇಳಿದರು.

`ಶಿಕ್ಷಣ' ವಿಷಯ ಕುರಿತು ಮಾತನಾಡಿದ ಸಾಹಿತಿ ಚಂದ್ರಶೇಖರ ತಾಳ್ಯ, ಈಗಿನ ಶಿಕ್ಷಣ ಮೌಲ್ಯಗಳನ್ನು ಉಳಿಸುವಂಥಹದ್ದೇ ಅಥವಾ ಅಪಮೌಲ್ಯಗೊಳಿಸುವಂತಹದ್ದೇ ಎಂಬ ಪರೀಕ್ಷೆಯಾಗಬೇಕಿದೆ. ಶಿಕ್ಷಣ ಕ್ಷೇತ್ರ ಕಲುಷಿತಗೊಳ್ಳಲು ಪೋಷಕರೂ ಕೂಡ ಕಾರಣ. ಪ್ರಕೃತಿಯೇ ಉತ್ತಮ ಶಿಕ್ಷಕ. ಶಿಕ್ಷಣ ಪಡೆದಿರುವ ಶೇ 50ರಷ್ಟು ಪದವೀಧರರು ಸಮಾಜವನ್ನು ಶುದ್ಧ ಇಟ್ಟಿದ್ದಾರೆಯೇ ಎಂಬ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಅರಿವು ಪಡೆಯಲು ವೈಯಕ್ತಿಕ ಶ್ರಮ ಹಾಕಬೇಕು. ಫೈವ್‌ಸ್ಟಾರ್ ಹೋಟೆಲ್‌ಗಳಂತಹ ಖಾಸಗಿ ಶಾಲೆಗಳಲ್ಲಿ ಮೌಲ್ಯಗಳು ಉಳಿದಿಲ್ಲ ಎಂದು ಅಭಿಪ್ರಾಯಪಟ್ಟರು.

`ರಾಜಕೀಯ' ವಿಷಯ ಕುರಿತು ಮಾತನಾಡಿದ ಜಿ.ಎಸ್. ಉಜ್ಜಿನಪ್ಪ, `ಮತದಾರ' ಅಪಮೌಲ್ಯಗೊಂಡಿರುವ ವ್ಯಕ್ತಿ. `ಮತದಾರ ಪ್ರಭು' ಎನ್ನುವ ಶಬ್ದ ತನ್ನ ಅರ್ಥ ಕಳೆದುಕೊಂಡಿದೆ. ರಾಜಕೀಯ ಮುಖಂಡರು ಮತದಾರನನ್ನು ಭ್ರಷ್ಟಗೊಳಿಸಿದ್ದಾರೆ. ಜಾತಿಯ ಸಂಕೋಲೆಯಿಂದ ಬಿಡಿಸಿಕೊಳ್ಳದ ಸ್ಥಿತಿಗೆ ಅವನನ್ನು ತಂದಿದ್ದಾರೆ. 1950ಕ್ಕಿಂತ ಮುಂಚೆ ಜಾತಿಯ ಪ್ರಭಾವ ಈಗಿನಷ್ಟಿರಲಿಲ್ಲ ಎಂದರು.

ಯಳನಾಡು ಅಂಜನಪ್ಪ ಆಶಯ ಭಾಷಣ ಮಾಡಿದರು. ಸಮ್ಮೇಳನಾಧ್ಯಕ್ಷ ಮಾರೇನಹಳ್ಳಿ ಭೀಮಯ್ಯ ಉಪಸ್ಥಿತರಿದ್ದರು. ಚಿತ್ತಯ್ಯ ಸ್ವಾಗತಿಸಿದರು. ಎಸ್.ಆರ್. ಮಹಾಂತೇಶ್ ಕಾರ್ಯಕ್ರಮ ನಿರೂಪಿಸಿದರು.

ರಂಗಭೂಮಿ, ಉಳಿಸಲು ಒತ್ತಾಯ
ಹಿರಿಯೂರು: ಖಾಸಗೀಕರಣ, ವಾಣಿಜ್ಯೀಕರಣ, ಜಾಗತೀಕರಣದ ಸುಳಿಗೆ ಸಿಕ್ಕಿ ಅಪ್ಪಟ ಭಾರತೀಯ ಕಲೆಯಾಗಿರುವ ನಾಟಕಗಳು ನಿಧಾನಕ್ಕೆ ಕಣ್ಮರೆಯಾಗತೊಡಗಿದ್ದು, ಸರ್ಕಾರ ರಂಗಭೂಮಿ ಹಾಗೂ ರಂಗ ಕಲಾವಿದರನ್ನು ಉಳಿಸುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯೊಂದನ್ನು ರೂಪಿಸಬೇಕು ಎಂದು ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎನ್. ಶ್ರೀಪತಿ ಕರೆ ನೀಡಿದರು.

ನಗರದ ನೆಹರು ಮೈದಾನದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ತಾಲ್ಲೂಕುಮಟ್ಟದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಂಗಭೂಮಿಯನ್ನೇ ನಂಬಿರುವ ನೂರಾರು ಕಲಾವಿದರು ಸರ್ಕಾರ ನೀಡುತ್ತಿರುವ ಕನಿಷ್ಠ ಮಾಸಾಶನ ನಂಬಿ ಕೂರುವಂತಾಗಿದೆ. ಸರ್ಕಾರ ಕಲಾವಿದರ ಜತೆಗೆ ಕಲೆ ಉಳಿಸಬೇಕು ಎಂದರು.

ಪ್ರಾಂಶುಪಾಲ ಡಾ.ಸಿ. ಶಿವಲಿಂಗಪ್ಪ ಮಾತನಾಡಿ, ನೂರಾರು ವರ್ಷಗಳಿಂದ ನಾಟಕಗಳು ಗ್ರಾಮೀಣ ಪ್ರದೇಶದ ಜನರ ಮನರಂಜನೆಯ ಪ್ರಾಕಾರಗಳಾಗಿವೆ. ಪ್ರೌಢಶಾಲೆಯ ಪಠ್ಯದಲ್ಲಿ ರಂಗಭೂಮಿಗೆ ಸಂಬಂಧಿಸಿದ ಪಾಠ ವಸ್ತು ಸೇರ್ಪಡೆಯಾಗಬೇಕು. ಉನ್ನತ ಶಿಕ್ಷಣದಲ್ಲಿ ರಂಗಭೂಮಿ ಕಲಾವಿದರ ನೇಮಕ ಮಾಡಬೇಕು. ನಾಟಕಗಳ ಮೂಲ ಉದ್ದೇಶ ಕೇವಲ ಮನರಂಜನೆ ನೀಡುವುದು ಮಾತ್ರವಲ್ಲ, ಜನರಲ್ಲಿ ಹತ್ತಾರು ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದೂ ಆಗಿದೆ ಎಂದರು.

ಭಾರತಿ ಕಲಾವಿದರು ಸಂಸ್ಥೆಯ ಬಿ.ವಿ. ಮಾಧವ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಮಾರೇನಹಳ್ಳಿ ಭೀಮಯ್ಯ, ಜಿ. ಧನಂಜಯಕುಮಾರ್, ಮಹಾಬಲೇಶ್, ಗಾಯತ್ರಿ ಅಕ್ಕ ಉಪಸ್ಥಿತರಿದ್ದರು. ಮಲ್ಲಪ್ಪನಹಳ್ಳಿ ಮಹಾಲಿಂಗಯ್ಯ ನಿರ್ದೇಶನದ `ಇದು ಕಾರಣ' ಹಾಗೂ ಕೆ.ಪಿ.ಎಂ. ಗಣೇಶಯ್ಯ ನಿರ್ದೇಶನದ `ಜಲಗಾರ' ನಾಟಕ ಪ್ರದರ್ಶನಗೊಂಡವು.

ಎಚ್ಚರ ತಪ್ಪಿದರೆ ಕೈಗೆ ಕಬ್ಬಿಣದ ಬಳೆ..!
ಹಿರಿಯೂರು: `ಬಡವರ ಕೈಯಲ್ಲಿ ಗಾಜಿನ ಬಳೆ, ಲಂಚಕೋರರ ಕೈಯಲ್ಲಿ ಬಂಗಾರದ ಬಳೆ, ಎಚ್ಚರ ತಪ್ಪಿದರೆ ಕೈಗೆ ಕಬ್ಬಿಣದ ಬಳೆ'

- ಈ ಸಾಲುಗಳನ್ನು ಹರಿಯಬ್ಬೆ ಗ್ರಾಮದ ಹಿರಿಯ ರಂಗಕರ್ಮಿ ಜಿ.ಡಿ. ತಿಮ್ಮಯ್ಯ ಸೋಮವಾರ ನಗರದ ನೆಹರು ಮೈದಾನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿರುವ ತಾಲ್ಲೂಕುಮಟ್ಟದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ವಾಚಿಸಿದಾಗ ಪ್ರೇಕ್ಷಕರಿಂದ ಮೆಚ್ಚುಗೆಯ ಚಪ್ಪಾಳೆ.

ಕವಿಗೋಷ್ಠಿಯಲ್ಲಿ 31 ಕವಿಗಳು ಸ್ವರಚಿತ ಕವನ ವಾಚಿಸಿದರು. ಡಾ.ತಿಮ್ಮರಾಜು, ಎಸ್.ಜಿ. ರಂಗಸ್ವಾಮಿ ಸಕ್ಕರ, ಜಿ.ಡಿ. ಶ್ರೀದೇವಿ ಭ್ರೂಣಹತ್ಯೆ ಕುರಿತ ವಸ್ತುವುಳ್ಳ ಕವನಗಳನ್ನು ವಾಚಿಸಿದರು. ಉಳಿದಂತೆ ಬಹುತೇಕ ಕವಿಗಳು ಇಂದಿನ ರಾಜಕೀಯ ಸ್ಥಿತಿಯ ವಿಡಂಬನೆ ಮಾಡಿದರೆ, ಮಹಿಳೆಯರ ಮೇಲಿನ ಅತ್ಯಾಚಾರ, ಅತ್ಯಾಚಾರಿಗಳಿಗೆ ಶಿಕ್ಷೆ ನೀಡುವಲ್ಲಿ ಕಾನೂನಿನ ದೌರ್ಬಲ್ಯಗಳ ಬಗ್ಗೆ ಒಂದಿಬ್ಬರು ಕವನ ವಾಚಿಸಿದರು.

ಆಲೂರು ಹನುಮಂತರಾಯಪ್ಪ ಅವರ `ಐಸಿರಿಯವ ಹಿರಿಯೂರು', ಬಬ್ಬೂರು ತಿಪ್ಪೀರನಾಯಕ ಅವರ `ಮಾನವುಳಿಸಿದ ಏಡ್ಸ್', ಸಕ್ಕರ ನಾಗರಾಜ್ ಅವರ `ನೆತ್ತರಲ್ಲಿ ನೊಂದ ದಲಿತರು', ಗೀತಾ ನಾಗಪ್ಪ ಅವರ `ತಾಯಿಯ ಕೊರಗು', ಜಿ.ಡಿ. ಶ್ರೀದೇವಿ ಅವರ `ಆರ್ತನಾದ', ಸೊಂಡೆಕೆರೆ ಬಾಲರಾಜ್ ಅವರ `ಬದುಕು-ಕನಸು', ರಾಮರಾಜ್ ಬಬ್ಬೂರು ಅವರ `ಬೀಜ ಬಯಕೆ' ಕವನಗಳು ಅರ್ಥವತ್ತಾಗಿದ್ದವು.

ವೀರೇಶ್ ಬಬ್ಬೂರು ವಾಚಿಸಿದ `ಪ್ರೇಮ' ಕವನ ಚಿತ್ರನಟ ಉಪೇಂದ್ರ ಅವರನ್ನು ನೆನಪು ಮಾಡುವಂತಿತ್ತು. ಗಡಾರಿ ಕೃಷ್ಣಪ್ಪ ಅವರ ಚುಟುಕುಗಳು, ಚಿತ್ರಲಿಂಗೇಶ್, ಪಾಂಡುರಂಗಯ್ಯ, ಮಂಜಮ್ಮ, ಚಿತ್ರಗಿರಿ, ಸಹನಾ, ತಿಪ್ಪೇಸ್ವಾಮಿ, ಶಿವಮೂರ್ತಿ, ವಿ.ಟಿ. ನಾಗರಾಜ್, ಹರ್ತಿಕೋಟೆ ಮಹಾಸ್ವಾಮಿ ಗಮನಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT