ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕುತಿಮ್ಮನ ಒಡನಾಡಿ ರಂಗನಾಥ ಶರ್ಮಾ

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

ಮರುಳ ಮುನಿಯನ ಕಗ್ಗದ ಬಗ್ಗೆ ಡಿವಿಜಿಯವರು `ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ~ ಎಂದು ಹೇಳಿದ್ದಾರೆ. ಮರುಳ ಮುನಿಯ ಪ್ರಕಟಗೊಂಡಿದ್ದು ಡಿವಿಜಿಯವರು ನಿಧನರಾದ ನಂತರ.

ಡಿವಿಜಿ ಅವರ ಸಂಗ್ರಹದಲ್ಲಿದ್ದ ಮರುಳಮುನಿಯನನ್ನು ಪತ್ತೆ ಮಾಡಿ ಕನ್ನಡ ಲೋಕಕ್ಕೆ ನೀಡಿದ್ದು ಅವರ ಸುದೀರ್ಘ ಕಾಲದ ಒಡನಾಡಿ ವಿದ್ವಾಂಸ ಎನ್.ರಂಗನಾಥ ಶರ್ಮಾ. ಒಂದರ್ಥದಲ್ಲಿ ಮಂಕುತಿಮ್ಮನ ತಮ್ಮ ಎಂದರೆ ಅವರೆ.

1948ರಿಂದ ಡಿವಿಜಿ ನಿಧನ ಕಾಲದವರೆಗೂ ಅವರ ಒಡನಾಡಿಯಾಗಿಯೇ ಆಗಿದ್ದ ರಂಗನಾಥ ಶರ್ಮಾ ಅವರಿಗೆ ಈಗ 98 ವರ್ಷ. 1935ರಿಂದ ಈವರೆಗೂ ಬೆಂಗಳೂರಿನಲ್ಲಿಯೇ ಇದ್ದ ಅವರು ಇತ್ತೀಚೆಗೆ ಮೈಸೂರಿಗೆ ಬಂದು ನೆಲೆಸಿದ್ದಾರೆ. ಡಿವಿಜಿ ಅವರ 125 ನೇ ವರ್ಷಾಚರಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಡಿವಿಜಿ ಅವರನ್ನು ಹತ್ತಿರದಿಂದ ಬಲ್ಲವರು ಬಹುಶಃ ಅವರೊಬ್ಬರೆ.

ಮಹಾಮಹೋಪಾಧ್ಯಾಯ, ವಿದ್ಯಾವಾರಿಧಿ ಮುಂತಾದ ಬಿರುದುಗಳಿಗೆ ಕಾರಣರಾಗಿರುವ ವಿದ್ವಾನ್ ಎನ್.ರಂಗನಾಥ ಶರ್ಮಾ ನಮ್ಮ ನಡುವೆ ಇರುವ ಅತಿ ಹೆಚ್ಚು ವಯಸ್ಸಿನ ವ್ಯಾಕರಣ ವಿದ್ವಾಂಸರು.

ನಮ್ಮ ದೇಶದ ಅಗ್ರಮಾನ್ಯ ಸಂಸ್ಕೃತ-ಕನ್ನಡ ಪಂಡಿತರು. ವ್ಯಾಕರಣ, ಅಲಂಕಾರ, ವೇದಾಂತ ಶಾಸ್ತ್ರಗಳಲ್ಲಿ ಅವರ ವಿದ್ವತ್‌ಗೆ ಅವರೇ ಸಾಟಿ. ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿರುವ ಅವರು ಸಂಸ್ಕೃತದಲ್ಲಿ 11, ಕನ್ನಡದಲ್ಲಿ 22 ಕೃತಿಗಳನ್ನು ರಚಿಸಿದ್ದಾರೆ. 17ಕ್ಕೂ ಹೆಚ್ಚು ಕೃತಿಗಳನ್ನು ಅನುವಾದಿಸಿದ್ದಾರೆ. ಆರಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ.

ಹಲವಾರು ಹಳೆಗನ್ನಡ ಕೃತಿಗಳನ್ನು ಆಧುನಿಕ ಕನ್ನಡಕ್ಕೆ ತಂದಿರುವ ಅವರ ಶ್ರೀಮದ್ವಾಲ್ಮೀಕಿರಾಮಾಯಣ, ವಿಷ್ಣು ಪುರಾಣ, ಶ್ರೀಮದ್ಭಾಗವತ ಮುಂತಾದ ಕೃತಿಗಳು ಅತ್ಯಂತ ಜನಪ್ರಿಯವಾದವು. ಡಿವಿಜಿ, ವಿ.ಸೀ, ಸೇಡಿಯಾಪು, ಕೆ.ಕೃಷ್ಣಮೂರ್ತಿ ಮುಂತಾದ ನಮ್ಮ ನಾಡಿನ ಪ್ರಸಿದ್ಧ ಸಾಹಿತಿಗಳ ಆತ್ಮೀಯರಾಗಿದ್ದ ರಂಗನಾಥ ಶರ್ಮಾ ಭಾವ- ಬುದ್ಧಿಗಳ ಹದವಾದ ಮಿಶ್ರ ಸಜ್ಜನ.

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ನಡಹಳ್ಳಿಯಲ್ಲಿ 1916ರಲ್ಲಿ ಜನಿಸಿದರು. ತಂದೆ ತಿಮ್ಮಪ್ಪ ಹಾಗೂ ತಾಯಿ ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿ ಮತ್ತು ಸೊರಬದಲ್ಲಿ ನಡೆಯಿತಾದರೂ ಪ್ರೌಢಶಿಕ್ಷಣಕ್ಕೆ ಅಲ್ಲಿ ಅವಕಾಶವಿರಲಿಲ್ಲ. ಆದರೆ ಓದುವ ಹುಮ್ಮಸ್ಸಿನಲ್ಲಿದ್ದ ರಂಗನಾಥ ಶರ್ಮರು ಕೆಳದಿಯ ಸಂಸ್ಕೃತ ಪಾಠಶಾಲೆಯನ್ನು ಸೇರಿ ಮೂರು ವರ್ಷಗಳ ಸಂಸ್ಕೃತ ಕಲಿತರು. ಕೆಳದಿ ಪಾಠಶಾಲೆಯಲ್ಲಿದ್ದಾಗಲೇ ಬಾಲಕ ರಂಗನಾಥ, ರಂಗನಾಥ ಶರ್ಮಾ ಆಗಿದ್ದು.

ಪ್ರಥಮ ಹಾಗೂ ಕಾವ್ಯ ಪರೀಕ್ಷೆಗಳನ್ನು ಕೆಳದಿಯಲ್ಲಿ ಪೂರ್ಣಗೊಳಿಸಿದ ಅವರು ನಂತರ ಸಾಹಿತ್ಯ ಪರೀಕ್ಷೆಗಾಗಿ ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಮಹಾಪಾಠಶಾಲೆಗೆ ಬಂದರು. ಸೊರಬ, ಸಾಗರ, ಕೆಳದಿಯಂತಹ ಊರುಗಳನ್ನು ಬಿಟ್ಟರೆ ಉಳಿದ ಪ್ರದೇಶಗಳ ಮಾಹಿತಿಯೇ ತಿಳಿಯದಿದ್ದ ಅವರು ಬೆಂಗಳೂರು ಸೇರಿದಾಗ ಸಾಕಷ್ಟು ಕಷ್ಟ ಪಡಬೇಕಾಯಿತು.
 
ವಾರಾನ್ನ, ಭಿಕ್ಷಾನ್ನ, ಸ್ವಯಂ ಪಾಕಗಳ ಮೂಲಕ  ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅವರು ಓದಿನಲ್ಲಿ ಮಾತ್ರ ಸದಾ ಮುಂದೆ ಇದ್ದರು. ಊಟಕ್ಕೆ ತಟ್ಟೆ ಇಲ್ಲದೆ, ಎಲೆಗೆ ಕಾಸಿಲ್ಲದೆ ನೆಲದ ಮೇಲೆ ಊಟ ಮಾಡಿದ ದಿನಗಳೂ ಇತ್ತು. ಬೆಂಗಳೂರಿಗೆ ಬಂದ 3ನೇ ವರ್ಷದಲ್ಲಿ ಅವರಿಗೆ ಇಸುಬು ರೋಗ ಕಾಣಿಸಿಕೊಂಡಿತು.

ಅದು ಎಷ್ಟು ಭೀಕರವಾಗಿತ್ತೆಂದರೆ ಮುಖ, ಕೈ ಕಾಲು ಕಣ್ಣುರೆಪ್ಪೆಯವರೆಗೂ ಅದು ವ್ಯಾಪಿಸಿತ್ತು. ಇದು ಅವರ ವಾರಾನ್ನಕ್ಕೂ ಕುತ್ತು ತಂತು. ಪಾಠಶಾಲೆಯಲ್ಲಿಯೂ ಪ್ರವೇಶಕ್ಕೆ ನಿರ್ಬಂಧಿಸಲಾಯಿತು. ಆದರೆ ಶರ್ಮಾ ಅದಕ್ಕೆ ಹೆದರಲಿಲ್ಲ. ತಾವು ಉಳಿದುಕೊಂಡಿದ್ದ `ವ್ಯಾಸ ಮಂದಿರ~ದಲ್ಲಿ ಸ್ವಯಂ ಪಾಕ ಮಾಡಿಕೊಳ್ಳುತ್ತಿದ್ದ ಅವರು ನಂತರ ಸ್ವಯಂ ಶಾಸ್ತ್ರಾಭ್ಯಾಸವನ್ನೂ ಮಾಡಿಕೊಂಡು ಮುಂದುವರಿದರು.
 
ವ್ಯಾಕರಣ, ಅಲಂಕಾರ ಮತ್ತು ವೇದಾಂತ ಶಾಸ್ತ್ರಗಳಲ್ಲಿ ವಿದ್ವತ್ ಗಸಿದ ಅವರು ಸ್ವಯಂ ಪ್ರಯತ್ನದಿಂದಲೇ ಕನ್ನಡ ವಿದ್ವಾನ್ ಪದವಿಯನ್ನೂ ಗಳಿಸಿಕೊಂಡರು.
ವಿದ್ವತ್ ಪದವಿ ಗಳಿಸಿದ ನಂತರ ಕೆಲಕಾಲ ಪ್ರೌಢಶಾಲಾ ಅಧ್ಯಾಪಕರಾಗಿದ್ದ ಅವರು ನಂತರ ಬೇಲೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಾಪಕರಾಗಿದ್ದರು.

1948ರಲ್ಲಿ ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಅಧ್ಯಾಪಕರಾಗಿ ಸೇರಿದ ಅವರು 1976ರಲ್ಲಿ ನಿವೃತ್ತರಾದರು. ವೃತ್ತಿಯಿಂದ ನಿವೃತ್ತರಾದರೂ ತಮ್ಮ ಬರವಣಿಗೆಯನ್ನು ಮುಂದುವರಿಸಿರುವ ಅವರು ತಮ್ಮ 98ರ ಹರೆಯದಲ್ಲಿಯೂ ಅದನ್ನು ಕಾಯ್ದುಕೊಂಡಿದ್ದಾರೆ.

ಕಣ್ಣು ಕೊಂಚ ಮಂಜಾಗಿದೆ. ಏರು ಧ್ವನಿಯಲ್ಲಿ ಮಾತನಾಡಿದರೆ ಕೇಳಿಸಿಕೊಳ್ಳುವಷ್ಟು ಕಿವಿ ಚುರುಕಾಗಿದೆ. ನೆನಪಿನ ಶಕ್ತಿ ಚೆನ್ನಾಗಿದೆ. ಈಗಲೂ ಮನೆಗೆ ಬಂದವರನ್ನು ಗೇಟಿನವರೆಗೂ ಬಂದು ಬೀಳ್ಕೊಡುವ ಹುಮ್ಮಸ್ಸು ಉಳಿಸಿಕೊಂಡಿದ್ದಾರೆ.
1941ರಲ್ಲಿ ಸಾಗರ ತಾಲ್ಲೂಕಿನ ಮಂಚಾಲೆಯ ಕಮಲಾಕ್ಷಮ್ಮ ಅವರನ್ನು ಮದುವೆಯಾದ ಅವರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ.

1973ರಲ್ಲಿ ತೀವ್ರ ಅನಾರೋಗ್ಯದಿಂದ ಅವರ ಪತ್ನಿ ನಿಧನರಾದರು. ತಮ್ಮ ಹಾಗೂ ಡಿವಿಜಿ ನಡುವಿನ ಸ್ನೇಹವನ್ನು ಅತ್ಯಂತ ಆತ್ಮೀಯವಾಗಿ ನೆನಪಿಸಿಕೊಳ್ಳುವ ರಂಗನಾಥ ಶರ್ಮಾ “ಹತ್ತರಲ್ಲಿ ಹನ್ನೊಂದೆಂಬಂತೆ ಮತ್ತು ಒಬ್ಬ ಹಳೆಯ ಪಂಡಿತನಾಗಿ ಕಳೆದಹೋಗುತ್ತಿದ್ದ ನನ್ನನ್ನು ಕನ್ನಡಕ್ಕೂ, ಕನ್ನಡ ಜನತೆಗೂ ದಕ್ಕಿಸಿದ್ದು ಡಿವಿಜಿ~ ಎಂದು ನೆನೆಯುತ್ತಾರೆ. ಡಿವಿಜಿ ಅವರನ್ನು ಸ್ಮರಿಸಿಕೊಂಡು ಭಾವುಕರಾಗುವ ಅವರು `ಅಂಥವರು ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟುವುದಿಲ್ಲ~ ಎನ್ನುತ್ತಾರೆ.

ರಂಗನಾಥ ಶರ್ಮಾ ಅವರು ಬಸವನಗುಡಿಯಲ್ಲಿ ಡಿವಿಜಿ ಅವರ ಮನೆಯ ಬಳಿಯೇ ಇದ್ದರು. ತಮ್ಮ ಮನೆಯ ಬಳಿಗೇ ಒಬ್ಬರು ವಿದ್ವಾಂಸರು ಬಂದಿದ್ದಾರೆ ಎಂಬ ವಿಷಯವನ್ನು ತಿಳಿದ ಡಿವಿಜಿ ಅವರೇ ಶರ್ಮಾ ಅವರನ್ನು ತಮ್ಮ ಮನೆಗೆ ಕರೆಸಿಕೊಂಡರು. ಬಳಿಕ ಅವರ ಸ್ನೇಹ ಗಟ್ಟಿಯಾಯಿತು.
 
ಬಿಡಿಸಲಾಗದ ಬಂಧವಾಯಿತು. ಡಿವಿಜಿಯವರ ಬಹುತೇಕ ಎಲ್ಲ ಸಾಹಿತ್ಯಗಳಲ್ಲಿಯೂ ಶರ್ಮಾ ಅವರ ಸಲಹೆ ಸೂಚನೆಗಳಿರುತ್ತಿದ್ದವು. ಡಿವಿಜಿ ಜೀವನ ಧರ್ಮ ಯೋಗ ಬರೆದಾಗ ಅದರ ಮೊದಲ ಓದುಗರು ಶರ್ಮಾ ಅವರೇ ಆಗಿದ್ದರು. ಡಿವಿಜಿ ಅವರು ರಂಗನಾಥ ಶರ್ಮಾ ಅವರನ್ನು ಬಾಯಿತುಂಬಾ `ಪಂಡಿತರೇ~ ಎಂದು ಕರೆಯುತ್ತಿದ್ದರು.

ಡಿವಿಜಿ ಅವರಿಗೆ ತಿಂಡಿ ತಿನಿಸುಗಳನ್ನು ತಿನ್ನುವುದೆಂದರೆ ಬಹು ಪ್ರೀತಿ. ಶರ್ಮಾ ಅವರು ಮಿತ ಆಹಾರಿ. ಡಿವಿಜಿ ಮನೆಗೆ ಹೋದಾಗಲೆಲ್ಲಾ ಶರ್ಮಾ ಅವರಿಗೆ ಬೋಂಡಾ ಸೇವೆ ಲಭ್ಯವಾಗುತ್ತಿತ್ತು. ಒಮ್ಮೆ ಇಬ್ಬರ ಮುಂದೆ ಬೋಂಡಾದ ಬಟ್ಟಲು ಬಂದು ಕುಳಿತಾಗ ಎಷ್ಟು ಒತ್ತಾಯಿಸಿದರೂ ಶರ್ಮಾ ಅವರು ಒಂದಕ್ಕಿಂತ ಹೆಚ್ಚು ಬೋಂಡ ತಿನ್ನಲಿಲ್ಲ. ಆಗ ಡಿವಿಜಿ “ಪಂಡಿತರೇ ನಿಮ್ಮ ಹೊಟ್ಟೆ ಲೇಡೀಸ್ ರಿಸ್ಟ್ ವಾಚ್. ನನ್ನದಾದರೋ ವಾಲ್ ಕ್ಲಾಕ್‌” ಎಂದು ಹಾಸ್ಯ ಮಾಡಿದ್ದರು.

ಡಿವಿಜಿ ಅವರ ಬಗೆಗಿನ ಗೌರವದಿಂದಲೇ ಶರ್ಮರು ನರಸಿಂಹರಾಜ ಕಾಲೋನಿಯ ರಾಮಾಯಣ ಪ್ರಕಾಶನದ ಸಮಿತಿಯವರಿಗಾಗಿ ಸಮಗ್ರ ವಾಲ್ಮೀಕಿ ರಾಮಾಯಣದ ಕನ್ನಡಾನುವಾದದಂಥ ಮಹಾ ಕೆಲಸಕ್ಕೆ ಕೈಹಾಕಿದರು. ಗುಂಡಪ್ಪ ಅವರ ಕಾರಣದಿಂದಲೇ ಶರ್ಮ ಅವರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಚಟುವಟಿಕೆಯಲ್ಲಿಯೂ ತೊಡಗಿಕೊಂಡಿದ್ದರು.
 
ವಿ.ಸೀ ಅವರ ಸ್ನೇಹದಿಂದಾಗಿ ಐಬಿಎಚ್ ಪ್ರಕಾಶನದ ಮೂಲಕ ಕವಿ ಕಾವ್ಯ ಪರಂಪರೆಯ ಗ್ರಂಥಮಾಲಿಕೆಗೆ ಶರ್ಮಾ ಅವರ ಸಹಾಯ ದೊರಕಿತು. ಜಿ.ನಾರಾಯಣ ಅವರ ಒತ್ತಾಸೆಯ ಫಲವಾಗಿ ಹಳೆಗನ್ನಡ ಮತ್ತು ನಡುಗನ್ನಡದ ಕಾವ್ಯಗಳನ್ನು ಶರ್ಮಾ ಅವರು ಹೊಸಗನ್ನಡಕ್ಕೆ ತಂದರು.

ಶರ್ಮಾ ಅವರ ಸಾಹಿತ್ಯದ ಬಗ್ಗೆ ಶತಾವಧಾನಿ ಗಣೇಶ್ ಅವರು “ರಂಗನಾಥ ಶರ್ಮಾ ಅವರ ಸಾರಸ್ವತ ಸೃಷ್ಟಿ ಗುಣ ಗಾತ್ರಗಳಲ್ಲಿ ಗಣನೀಯವಾದುದು. ಮಹನೀಯವೂ ಆದುದು. ಅವರ ಬರವಣಿಗೆ ದಿಟವಾಗಿ ವಿಶುದ್ಧ ವಿದ್ವತ್ತೆಯ ಮಣಿದರ್ಪಣ. ಛಲರಹಿತ ಪಾಂಡಿತ್ಯದ ಕುಲಭವನ, ಸ್ನೋಪಜ್ಞ ಸಿದ್ಧಿಯ ಕ್ರೀಡಾಂಗಣ.
 
ಮೌಲ್ಯ ಸಂವೇದನೆಯ ದೇವಾಲಯ, ಸತ್ಯ ನಿಷ್ಠೆಯ ಸಾಮ್ರಾಜ್ಯ ಸೀಮೆ, ನಿಸ್ಸಂದಿಗ್ಧತೆಯ ನಿತ್ಯಾವತಾರ, ನಿರ್ದಾಕ್ಷಿಣ್ಯವಾದರೂ ನಿಷ್ಪಾರುಷ್ಯದ ರಂಗಸ್ಥಳ, ಭಾಷಾ ಸೌಷ್ಠವದ ಸತ್ರಸಾಟಿ, ಉಕ್ತಿ ಸೌಂದರ್ಯದ ಉಪವನವೀಥಿ, ಒಳ್ಳೆಯ ಕನ್ನಡ ಏನೆಂಬುದನ್ನು ಅವರ ಬರಹ ಬೆಳಗಿ ತೋರುತ್ತದೆ” ಎಂದು ಹೇಳುತ್ತಾರೆ.

 ಸಂಸ್ಕೃತದ ಸಹಜತೆ, ಅನುವಾದ, ಸೃಜನಶೀಲ ಸಾಹಿತ್ಯ, ಶರ್ಮರ ಸಾಹಿತ್ಯ ಸರ್ವದಾ ಋಜುಗಂಭೀರ, ಪ್ರಸನ್ನ ಮನೋಹರ, ಅಲ್ಲಿ ಆಡಂಬರಕ್ಕೆ ಎಡೆಯಿಲ್ಲ, ಆಕ್ರೋಶಕ್ಕೆ ಅವಕಾಶವೇ ಇಲ್ಲ ಎಂದೂ ಅವರು ಹೇಳುತ್ತಾರೆ.

ಒಮ್ಮೆ ಶರ್ಮಾ ಅವರು ತಮ್ಮ ಹಲ್ಲು ನೋವಿನ ಚಿಕಿತ್ಸೆಗಾಗಿ ಹೊರಟು ದಾರಿಯಲ್ಲಿ ಡಿವಿಜಿ ಅವರನ್ನು ಕಂಡಾಗ ಡಿವಿಜಿ ವಿನೋದಕ್ಕಾಗಿ “ಏಕದಂತಸ್ಸ ವೈ ಕುರ‌್ಯಾದದ್ಯ ವೊ ದಂತ ಮಂಗಲಂ” (ಆ ಏಕದಂತ ಗಣಪತಿಯು ಇಂದು ನಿಮ್ಮ ಹಲ್ಲನ್ನು ಕಾಪಾಡಲಿ) ಎಂದು ಹರಸಿ ಕಳುಹಿಸಿದರಂತೆ.

ಚಿಕಿತ್ಸೆ ಪಡೆದು ಹಿಂತಿರುಗಿದ ಶರ್ಮರು ಗುಂಡಪ್ಪ ಅವರನ್ನು ಕಂಡು “ಅಸೂಯಯೈವ ಭಗವಾನ್ ದಂತದ್ವಯಮಪಾಹರತ್‌” (ತಾನು ಒಂಟಿ ಹಲ್ಲಿನವನೆಂಬ ಅಸೂಯೆಯಿಂದ ಆ ವಕ್ರದಂತನು ನನ್ನ ಎರಡು ಹಲ್ಲುಗಳನ್ನು ಕೀಳಿಸಿದನು) ಎಂದು ಉತ್ತರಿಸಿ ಡಿವಿಜಿ ಈ ಹಿಂದೆ ರಚಿಸಿದ್ದ ಶ್ಲೋಕವನ್ನು ಪೂರ್ಣಗೊಳಿಸಿದ್ದರಂತೆ.

ಶರ್ಮ ಅವರು ಈಗಲೂ ಅದೇ ವಿನೋದದಲ್ಲಿಯೇ ಕಾಲ ಕಳೆಯುತ್ತಾರೆ. ತಮ್ಮ ಬಗ್ಗೆ ಕೂಡ ವಿನೋದ ಮಾಡಿಕೊಳ್ಳುತ್ತಾರೆ.

“ಚೆಪ್ಪಲಿಯೊ ಇರಲಿಲ್ಲ, ರೊಕ್ಕ ಮೊದಲೇ ಇಲ್ಲ
ಇಪ್ಪತ್ತು ಮನೆಗಳಲಿ ಭಿಕ್ಷೆಯನು ಬೇಡಿ
ಸೊಪ್ಪು ಸಿಪ್ಪೆಗಳನ್ನು ಚಪ್ಪರಿಸಿ ತಿಂದೆಯೆಲೊ
ಮುಪ್ಪಿನಲಿ ತೆಪ್ಪಗಿರು ಬೊಪ್ಪ ಮೇಲಿಹನು” ಎಂದು ಹೇಳಿಕೊಳ್ಳುತ್ತಾರೆ.

ಶರ್ಮ ಅವರ ಸರಳತೆ, ಮಾತೃ ಹೃದಯ ಎಷ್ಟೆಂದರೆ ಯಾರೇ ಮನೆಗೆ ಬಂದರೂ ಅವರನ್ನು ಬೀಳ್ಕೊಡಲು ಬಾಗಿಲವರೆಗೂ ಬರುತ್ತಾರೆ. ಒಮ್ಮೆ ಶತಾವಧಾನಿ ಗಣೇಶ್, ಪತ್ರಕರ್ತ ಸಂತೋಷಕುಮಾರ ಗುಲ್ವಾಡಿ ಹಾಗೂ ಸೂರ್ಯ ಪ್ರಕಾಶ ಪಂಡಿತರು ಶರ್ಮಾ ಅವರ ಮನೆಗೆ ಹೋಗಿದ್ದರು.

ಸಾಕಷ್ಟು ನೈವೇದ್ಯ ಸೇವಿಸಿ, ಮಾತನಾಡಿ ಹೊರಟಾಗ ಗೇಟಿನವರೆಗೂ ಶರ್ಮಾ ಬಂದರು. ಆಗ ಅಲ್ಲಿ ಇದ್ದ ವಾಹನವನ್ನು ಗಮನಿಸಿ ಗುಲ್ವಾಡಿ ಅವರಿಗೆ “ನೀವೇ ಡ್ರೈವ್ ಮಾಡಿಕೊಂಡು ಬಂದಿರಾ” ಎಂದು ಪ್ರಶ್ನಿಸಿದರು. “ಇಲ್ಲ ಡ್ರೈವರ್ ಇದ್ದಾನೆ” ಎಂದು ಗುಲ್ವಾಡಿ ಉತ್ತರಿಸಿದಾಗ “ಛೇ ಎಂತಹ ಕೆಲಸವಾಯಿತು.

ಇಷ್ಟು ಹೊತ್ತು ಹೊರಗೆ ಕಾದಿದ್ದ ಅವನಿಗೆ ಏನನ್ನೂ ಕೊಡಲಿಲ್ಲವಲ್ಲ” ಎಂದು ಪೇಚಾಡಿದ ಶರ್ಮಾ ಅವರು ಯಾರು ಎಷ್ಟೇ ಸಮಜಾಯಿಷಿ ಹೇಳಿದರೂ ಕೇಳದೇ ಚಾಲಕನನ್ನು ಕರೆದು ಹಣ್ಣು ಹಂಪಲು ಕೊಟ್ಟು ತಣಿಸಿದರು.ಶರ್ಮಾ ಅವರು ಈಗಲೂ ಅವರು ಹಾಗೆಯೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT