ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಕಾಯಿಲೆ: ಮುಂಜಾಗ್ರತೆಯೇ ಮದ್ದು

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಹೊಸನಗರ ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಮಂಗನ ಕಾಯಿಲೆ ತೀವ್ರ ಆತಂಕವನ್ನುಂಟು ಮಾಡಿದೆ. ಕಾಯಿಲೆ ದೃಢ ಪಡದಿದ್ದರೂ ಒಬ್ಬ ವ್ಯಕ್ತಿಯು ಈ ಸಮಯದಲ್ಲಿ ಮರಣ ಹೊಂದಿರುವ ಹಿನ್ನೆಲೆಯಲ್ಲಿ ಜನರು ಭಯಭೀತರಾಗಿದ್ದಾರೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ  ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಂಡ್ದ್ದಿದು ಜನರ ಆತಂಕವನ್ನು ನಿವಾರಿಸುವ ಪ್ರಯತ್ನ ಮಾಡಿದ್ದಾರೆ.

ಸಾಮಾನ್ಯವಾಗಿ  ಮಂಗನ ಕಾಯಿಲೆ  ಎಂದು ಕರೆಯಲ್ಪಡುವ ಇದರ ವೈದ್ಯಕೀಯ ನಾಮಧೇಯ ಕ್ಯಾಸನೂರು ಫಾರೆಸ್ಟ ಡಿಸೀಸ್ (Kyasanur Forest Diseases, K. F. D.). 1957 ರಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ಕಾಯಿಲೆಯನ್ನು ಗುರುತಿಸಲಾಯಿತು. ಕಾಯಿಲೆಗೆ ಕಾರಣವಾದ ವೈರಾಣುವನ್ನು ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಕಾಡಿನಲ್ಲಿ ಮೊದಲ ಬಾರಿಗೆ ಗುರುತಿಸಿದ್ದರಿಂದ ಇದಕ್ಕೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ ( Kyasanur Forest Diseases)  ಎಂಬ ಹೆಸರು ಬಂತು.

ಶಿವಮೊಗ್ಗಕ್ಕೆ ಸೀಮಿತವಲ್ಲ
ಮೊದಲು ಶಿವಮೊಗ್ಗ ಜಿಲ್ಲೆಗೆ ಮಾತ್ರವೇ ಸೀಮಿತವಾಗಿದ್ದ ಈ ಕಾಯಿಲೆ ನಂತರದ ದಿನಗಳಲ್ಲಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಕಂಡು ಬಂದಿದೆ.

ಈವರೆಗೆ ವರದಿಯಾದ ಅಂಕಿಅಂಶಗಳನ್ನು ಪರಿಶೀಲಿಸಿದಾಗ, 1983-84ರಲ್ಲಿ ಅತಿ ಹೆಚ್ಚು ಜನರು ಈ ಕಾಯಿಲೆಯಿಂದ ಬಳಲಿದ ಅಂಶ ಗಮನಕ್ಕೆ ಬರುತ್ತದೆ. 1983-84ರಲ್ಲಿ ಸುಮಾರು 2,167 ಜನರಲ್ಲಿ ಈ ಕಾಯಿಲೆಯು ದೃಢಪಟ್ಟಿದ್ದು, 69 ಜನರ ಸಾವಿಗೆ ಇದು ಕಾರಣವಾಗಿತ್ತು.ನಂತರದ ವರ್ಷಗಳಲ್ಲಿ ಇದು ಗಣನೀಯವಾಗಿ ಕಡಿಮೆಯಾಗಿದ್ದನ್ನು ಗಮನಿಸಬಹುದು.

ರೋಗ ಹರಡುವಿಕೆ
ಕೆ .ಎಫ್. ಡಿ ಕಾಯಿಲೆಯು ಫ್ಲೇವಿ ವೈರಸ್ ಎಂಬ ವೈರಾಣುವಿನಿಂದ ಬರುತ್ತದೆ. ಈ ವೈರಾಣುವು ಇಲಿ, ಹೆಗ್ಗಣ, ಅಳಿಲು ಮತ್ತು ಮಂಗಗಳಲ್ಲಿ ತನ್ನ ಸಂತತಿಯನ್ನು ಕಾಯ್ದಿರಿಸಿಕೊಂಡಿರುತ್ತದೆ. ಆದರೆ ಮಂಗಗಳೂ ಕೂಡ ಕೆ ಎಫ್. ಡಿ. ಕಾಯಿಲೆಗೆ ತುತ್ತಾಗಿ ಸಾವನ್ನಪ್ಪುವುದರಿಂದ, ವೈರಾಣುಗಳು ತಮ್ಮ ಸಂತತಿಯನ್ನು ಮುಖ್ಯವಾಗಿ ಇಲಿ ಮತ್ತು ಅಳಿಲುಗಳಲ್ಲಿಯೇ ಕಾಯ್ದಿರಿಸಿಕೊಂಡು, ವೃದ್ಧಿಗೊಳಿಸಿಕೊಳ್ಳುತ್ತವೆ.

ಮನುಷ್ಯರನ್ನು ತಲುಪುವುದು
ಜಾನುವಾರುಗಳ ರಕ್ತವನ್ನು ಹೀರಿ ಬದುಕುವ ಉಣ್ಣೆ ಹುಳುಗಳ ಸಹಾಯದಿಂದ ಈ ವೈರಾಣುಗಳು, ಮಂಗಗಳು ಹಾಗೂ ಇತರ ಪ್ರಾಣಿಗಳಿಂದ ಮನುಷ್ಯರನ್ನು ತಲುಪುತ್ತವೆ. ಹಾಗಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇಲ್ಲ.

ಅನೇಕ ಬಗೆಯ ಉಣ್ಣೆ ಹುಳುಗಳು ಈ ಕಾಯಿಲೆಯನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜನವರಿಯಿಂದ ಜೂನ್ ತಿಂಗಳವರೆಗಿನ ಹವಾಮಾನವು ಈ ಹುಳುಗಳ ಸಂತಾನೋತ್ಪತ್ತಿಗೆ ಅನುಕೂಲವಾಗಿರುವುದರಿಂದ, ಈ ಕಾಯಿಲೆಯು ವರ್ಷದ ಮೊದಲ ಆರು ತಿಂಗಳುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಕಾಯಿಲೆಯಿಂದ ಬಳಲುವವರು
ಹೆಸರೇ ಹೇಳುವಂತೆ ಇದು ಮುಖ್ಯವಾಗಿ ಮಂಗಗಳ ಕಾಯಿಲೆ. ಮನುಷ್ಯರು ಆಕಸ್ಮಿಕವಾಗಿ ಈ ಕಾಯಿಲೆಗೆ ತುತ್ತಾಗುತ್ತಾರೆ. ರೋಗದಿಂದ ಬಳಲುವ ಮಂಗಗಳ ರಕ್ತವನ್ನು ಹೀರಿದ ಉಣ್ಣೆಯು ಮನುಷ್ಯರನ್ನು ಕಚ್ಚಿದಾಗ ವೈರಾಣು ಮನುಷ್ಯರ ದೇಹವನ್ನು ಪ್ರವೇಶಿಸುತ್ತದೆ. 3 ರಿಂದ 8 ದಿನಗಳ ಕಾಲ ದೇಹದಲ್ಲಿ ವೃದ್ಧಿಗೊಂಡ ವೈರಾಣು ಪೂರ್ಣ ಪ್ರಮಾಣದ ಕಾಯಿಲೆಗೆ ಕಾರಣವಾಗುತ್ತದೆ.

ಸಾಮಾನ್ಯವಾಗಿ 20 ರಿಂದ 40ರ ವಯೋಮಾನದ ಪುರುಷರು ಈ ಕಾಯಿಲೆಗೆ ತುತ್ತಾಗುತ್ತಾರೆ.
ಸುತ್ತಮುತ್ತಲೂ ಕಾಡಿನಿಂದ ಆವೃತಗೊಂಡ ಹೊಲ, ಗದ್ದೆಗಳಲ್ಲಿ ವ್ಯವಸಾಯ ಚಟುವಟಿಕೆಗಳಲ್ಲಿ ನಿರತರಾದವರು, ಕಾಡುಗಳಲ್ಲಿ ಮರ ಹಾಗೂ ಸೌದೆ ಕಡಿಯುವವರು, ಕಾಡಿನ ಸಮೀಪವೇ ಜಾನುವಾರುಗಳನ್ನು ಮೇಯಿಸುವವರು ಮುಂತಾದವರಲ್ಲಿ ಕೆ. ಎಫ್.ಡಿ ಸಾಮಾನ್ಯವಾಗಿ ಕಂಡುಬರುತ್ತದೆ.

ಗುಣಲಕ್ಷಣಗಳೇನು?
*
 ತೀವ್ರತರವಾದ ಜ್ವರ
* ತಲೆನೋವು, ಮೈ-ಕೈ ನೋವು.
* ಮೂಗು, ಬಾಯಿ ಅಥವಾ ದೇಹದ ಇತರ ಭಾಗಗಳಿಂದ ರಕ್ತಸ್ರಾವ.

ಹೆಚ್ಚಿನ ರೋಗಿಗಳಲ್ಲಿ 1 ರಿಂದ 2 ವಾರದ ನಂತರ  ಪುನಃ ಮೆದುಳಿನ ಉರಿಯೂತ, ಜ್ವರ, ಕುತ್ತಿಗೆಯಲ್ಲಿ ಬಿಗಿಯುವಿಕೆ, ವಾಂತಿ, ತಲೆನೋವು ಮುಂತಾದ ಗುಣಲಕ್ಷಣಗಳು ಮತ್ತೆ ಕಾಣಿಸಿಕೊಂಡು, ವ್ಯಕ್ತಿಯು ಒಂದು ಬಗೆಯ ಮಾನಸಿಕ ಗೊಂದಲಕ್ಕೆ ಒಳಗಾಗಬಹುದು.

ರೋಗಿಯ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ವೈರಾಣುವನ್ನು ಗುರುತಿಸಿ ನಂತರವೇ ಕಾಯಿಲೆಯನ್ನು ದೃಢಪಡಿಸಬಹುದು. ಆದರೆ ಈ ವೈರಾಣುವಿನ ಪರೀಕ್ಷೆ ಮಾಡಬಲ್ಲ ಪ್ರಯೋಗಾಲಯಗಳು ಕೆಲವೆಡೆ ಮಾತ್ರ ಇರುವುದರಿಂದ ತಪಾಸಣೆಯ ವರದಿಯು ಸಿಗಲು ತಡವಾಗಬಹುದು.

 ಆದ್ದರಿಂದ ಕೆ. ಎಫ್. ಡಿ ಕಾಯಿಲೆಯ ಗುಣಲಕ್ಷಣಗಳು ಕಂಡು ಬಂದ ವ್ಯಕ್ತಿಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪ್ರಾರಂಭಿಸಬೇಕು. ರೋಗಲಕ್ಷಣಗಳನ್ನು ಆಧರಿಸಿಯೇ ಚಿಕಿತ್ಸೆಯನ್ನು ಆರಂಭಿಸಿ,ವ್ಯಕ್ತಿಯ ಆರೋಗ್ಯ ಸ್ಥಿತಿಯು ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು.

ಮುಂಜಾಗ್ರತೆ ನಿಯಂತ್ರಣ
* ಕಾಯಿಲೆಯನ್ನು ಹರಡುವಲ್ಲಿ ಮುಖ್ಯ ಪಾತ್ರ ವಹಿಸುವ ಉಣ್ಣೆ ಹುಳುಗಳ ನಿಯಂತ್ರಣ.
ಉಣ್ಣೆ ನಾಶಕ ಔಷಧಗಳನ್ನು ಕಾಯಿಲೆಯು ವ್ಯಾಪಕವಾಗಿ ಕಾಣಿಸಿಕೊಂಡ ಸ್ಥಳಗಳಲ್ಲಿ ಸಿಂಪಡಿಸಬೇಕು. ಮಂಗಗಳು ಸತ್ತ ಸ್ಥಳದ ಸುತ್ತಮುತ್ತಲೂ ತೀವ್ರಗತಿಯಲ್ಲಿ ಔಷಧವನ್ನು ಸಿಂಪಡಿಸಬೇಕು. ಉಣ್ಣೆನಾಶಕಗಳಾದ ಕಾರ್ಬೋರಿಲ್, ಫೆಂತಿಯಾನ್ ಮತ್ತು ಪ್ರೊಪೊಕ್ಸರ್ ಮುಂತಾದುವನ್ನು ಹೆಕ್ಟೇರಿಗೆ ಸುಮಾರು 2.25 ಕೆ.ಜಿ.ಯಷ್ಟು ಸಿಂಪಡಿಸಬೇಕು.

* ಜಾನುವಾರುಗಳ ಓಡಾಟದ ನಿಯಂತ್ರಣ
ಇಂತಹ ಪ್ರದೇಶಗಳಲ್ಲಿ ಜಾನುವಾರುಗಳನ್ನು ಕಾಡುಗಳಲ್ಲಿ ಮೇಯಲು ಬಿಡುವುದನ್ನು ನಿಷೇಧಿಸಬೇಕು. ಉಣ್ಣೆ ಹುಳುಗಳು ಜಾನುವಾರುಗಳ ದೇಹದ ಮೇಲೆ ಆಶ್ರಯ ಪಡೆಯುವುದರಿಂದ ಅವುಗಳನ್ನು ಆದಷ್ಟು ಮನೆಯಲ್ಲಿಯೇ ಮೇವು ಒದಗಿಸಿ ನೋಡಿಕೊಳ್ಳಬೇಕು. ಜಾನುವಾರುಗಳಿಗೂ ಉಣ್ಣೆಗಳಿಂದ ರಕ್ಷಣೆಯನ್ನು ಒದಗಿಸಬೇಕು.

ಲಸಿಕೆ
* ಕಾಯಿಲೆಗೆ ತುತ್ತಾಗುವ ಅಪಾಯದಲ್ಲಿರುವವರು ಕೆ. ಎಫ್. ಡಿ ವಿರುದ್ಧ ಲಭ್ಯವಿರುವ ಲಸಿಕೆಯನ್ನು ವೈದ್ಯರ ಮಾರ್ಗದರ್ಶನದಲ್ಲಿ ತೆಗೆದುಕೊಳ್ಳಬಹುದು.

* ಸುತ್ತಮುತ್ತಲೂ ಅರಣ್ಯವಿರುವ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಉಣ್ಣೆ ಹುಳುಗಳಿಂದ ವೈಯಕ್ತಿಕ ರಕ್ಷಣೆಯನ್ನು ಒದಗಿಸುವುದು.

* ದೇಹವು ಸಂಪೂರ್ಣವಾಗಿ ಮುಚ್ಚುವಂತೆ ಬಟ್ಟೆಗಳನ್ನು ಧರಿಸುವುದು.

* ಉಣ್ಣೆ ನಿವಾರಕ ಔಷಧಗಳನ್ನು ದೇಹಕ್ಕೆ ಹಚ್ಚಿಕೊಳ್ಳುವುದು. ಡೈಮಿಥೈಲ್ ಫ್ತ್ಯಾಲೇಟ್ ಎಂಬ ಉಣ್ಣೆನಿವಾರಕವನ್ನ ಬಳಸಬಹುದು.

* ಕಾಯಿಲೆಯ ಅಪಾಯವಿರುವ ಸ್ಥಳಗಳಲ್ಲಿ ಜನರಿಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ಏರ್ಪಡಿಸುವುದು. ಕೆಲಸ ಮುಗಿಸಿ ಮನೆಗೆ ಬಂದ ಕೂಡಲೆ ಸ್ವತಃ ದೇಹವನ್ನು ಪರೀಕ್ಷಿಸಿಕೊಂಡು, ಉಣ್ಣೆ ಹುಳುಗಳು ಇದ್ದಲ್ಲಿ ತೆಗೆದುಕೊಳ್ಳುವುದು ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು. ನೆಲದ ಮೇಲೆ ಕೂರುವ, ಮಲಗುವ ಅಭ್ಯಾಸವನ್ನು ತಪ್ಪಿಸುವುದು.

* ಕೆ. ಎಫ್. ಡಿ ಕಾಯಿಲೆಯ ಯಾವುದೇ ಗುಣಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರಲ್ಲಿ ಹೋಗಿ ಚಿಕಿತ್ಸೆ ಪಡೆಯುವುದು.

ಈ ಎಲ್ಲಾ ಮುಂಜಾಗರೂಕ ಕ್ರಮಗಳನ್ನು ಅನುಸರಿಸುವುದರಿಂದ ಹಾಗೂ ರೋಗದ ಗುಣಲಕ್ಷಣಗಳು ಕಂಡ ಕೂಡಲೇ ನಿರ್ಲ್ಯಕ್ಷಿಸದೆ ವೈದ್ಯರಲ್ಲಿ ಹೋಗಿ ಸೂಕ್ತ ಚಿಕಿತ್ಸೆಯನ್ನು ಪಡೆಯುವುದರಿಂದ ಮಂಗನ ಕಾಯಿಲೆಯನ್ನು ಹತೋಟಿಯಲ್ಲಿಡಬಹುದು ಹಾಗೂ ಅದರಿಂದಾಗುವ ಸಾವು ನೋವುಗಳನ್ನು ಕಡಿಮೆಮಾಡಬಹುದು.

ಆರೋಗ್ಯ ಇಲಾಖೆಯು ಕೆ. ಎಫ್. ಡಿ ಲಸಿಕೆಯನ್ನು ಅಪಾಯದಲ್ಲಿರುವ ಜನ ಸಮೂಹಕ್ಕೆ ನಿಯಮಿತವಾಗಿ ಒದಗಿಸಬೇಕು. ಅಲ್ಲದೆ ಉಣ್ಣೆ ನಿವಾರಕ ಔಷಧಗಳನ್ನು ಅಪಾಯ ಪ್ರದೇಶಗಳಲ್ಲಿನ ಜನತೆಗೆ ಉಚಿತವಾಗಿ ಪೂರೈಸಬೇಕು. ಮುಖ್ಯವಾಗಿ ಕೆ.ಎಫ್.ಡಿ ಕಾಯಿಲೆಯ ತಪಾಸಣೆಗೆ ಅವಶ್ಯಕವಾದ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರಗಳನ್ನು ಶಿವಮೊಗ್ಗ ಜಿಲ್ಲೆಯಲ್ಲಿಯೇ ಸ್ಥಾಪಿಸಬೇಕು. ಹೀಗೆ ಕೆ.ಎಫ್.ಡಿ ಕಾಯಿಲೆಯ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT