ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಹಾವಳಿ: ಗ್ರಾಮಸ್ಥರು ಆತಂಕ

Last Updated 16 ಜನವರಿ 2012, 6:20 IST
ಅಕ್ಷರ ಗಾತ್ರ

ಮುಂಡರಗಿ: ಮಂಗನ ದಾಳಿಯಿಂದ ಸುಮಾರು ಒಂಭತ್ತು ಜನರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹೊಸಶಿಂಗಟಾಲೂರ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಗಾಯಾಳುಗಳು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಭಾನು ವಾರವೂ ಕೆಲವರ ಮೇಲೆ ಮಂಗ ದಾಳಿಮಾಡಿ ಗಾಯಗೊಳಿಸಿರುವುದಾಗಿ ತಿಳಿದು ಬಂದಿದೆ.

 ಹೊಸಶಿಂಗಟಾಲೂರ ಗ್ರಾಮದ ರಮೇಶ ತಳವಾರ, ದೊಡ್ಡೀರಪ್ಪ ಜಾಡರ, ರಾಮಣ್ಣ ದೋಶಿಗೇರ, ಗುಡದೀರಯ್ಯ ನವಲಿಹಿರೇಮಠ, ಸೂಸವ್ವ ಬಾರಕೇರ ಮೊದಲದವರು ಮಂಗನ ದಾಳಿಗೆ ಈಡಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರಲ್ಲಿ ಕೆಲವರಿಗೆ ತೀವ್ರವಾದ ಗಾಯಗಳಾಗಿದ್ದು, ಗಾಯಗಳಿಗೆ ಹೊಲಿಗೆ ಹಾಕಿರುವುದರಿಂದ ಅವರೆಲ್ಲ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಕಳೆದ ಕೆಲವು ದಿನಗಳಿಂದ ಹೊಸಶಿಂಗಟಾಲೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದೊಳಗೆ ಬೀಡು ಬಿಟ್ಟಿದ್ದ ಕರಿಮಂಗಕ್ಕೆ ಶಾಲಾ ಸಿಬ್ಬಂದಿ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು  ಆಹಾರ ಕೊಟ್ಟಿದ್ದಾರೆ.

ಅವರೆಲ್ಲರ ಸಲುಗೆಯಿಂದ ಪ್ರಚೋದನೆಗೊಂಡ ಮಂಗ ಶಾಲಾ ಅವರಣದಲ್ಲಿಯೇ  ಖಾಯಂ ಬೀಡು ಬಿಟ್ಟಿತ್ತು. ಎರಡು ದಿನಗಳ ಹಿಂದೆ ಗ್ರಾಮದಲ್ಲಿದ್ದ ಹುಚ್ಚುನಾಯಿಯೊಂದು ಮಂಗವನ್ನು ಕಡಿದಿದ್ದರಿಂದ ಮಂಗವು ಕೆರಳಿ ಕಂಡ ಕಂಡವರನ್ನೆಲ್ಲ ಕಚ್ಚುತ್ತಲಿದೆ ಎಂದು ಹೇಳಲಾಗುತ್ತಿದೆ.

 ಮಂಗವು ಗ್ರಾಮದಲ್ಲಿರುವ ಹೋಟೆಲ್, ಬಸ್‌ನಿಲ್ದಾಣ, ಶಾಲೆ, ಮನೆ ಎಲ್ಲಂದರಲ್ಲ ಅನಿರೀಕ್ಷಿತವಾಗಿ ದಾಳಿ ಮಾಡಿ ಕಂಡ ಕಂಡವರನ್ನೆಲ್ಲ ಕಚ್ಚುತ್ತಲಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದು, ಮಂಗನ ದಾಳಿಯಿಂದ ಮಹಿಳೆಯರು ಮತ್ತು ಮಕ್ಕಳು ತೀವ್ರ ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಯವರು ಮಂಗವನ್ನು ಹಿಡಿಯದಿದ್ದಲ್ಲಿ ಗ್ರಾಮಸ್ಥರೆ ಅದನ್ನು ಹಿಡಿಯುವುದಾಗಿ ತಿಳಿಸಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯ್ತಿ ಸದಸ್ಯ ಶಂಕರಗುರು ಬಿಳಿಮಗ್ಗದ ಮತ್ತಿತರರು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT