ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಲಗೊಂಡ ಮಹಾರುದ್ರಾಭಿಷೇಕ

Last Updated 11 ಫೆಬ್ರುವರಿ 2012, 5:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಿದ್ಧಾರೂಢ ಸ್ವಾಮಿಗಳ 175ನೇ ಜನ್ಮೋತ್ಸವ, ಗುರುನಾಥಾರೂಢರ 100ನೇ ಜನ್ಮೋತ್ಸವ, ವಿಶ್ವಶಾಂತಿ ಹಾಗೂ ಲೋಕಕಲ್ಯಾಣಾರ್ಥವಾಗಿ ಕಳೆದ ನವೆಂಬರ್ 1ರಿಂದ ನಗರದ ಸಿದ್ಧಾರೂಢ ಮಠದಲ್ಲಿ ಆರಂಭಗೊಂಡಿದ್ದ ಮಹಾರುದ್ರಾಭಿಷೇಕ ಶುಕ್ರವಾರ ಶತದಿನ ಕಂಡಿತು. ಜೊತೆಗೆ ಒಂದು ಲಕ್ಷವಾಗುವುದರೊಂದಿಗೆ ಮಂಗಲಗೊಂಡಿತು.

ಅನೇಕ ದಂಪತಿಗಳೊಂದಿಗೆ, ತಂದೆ-ಪುತ್ರ, ತಾಯಿ-ಪುತ್ರ ಭಾಗವಹಿಸಿದ್ದ ಮಹಾರುದ್ರಾಭಿಷೇಕದ ಮುಕ್ತಾಯ ಸಮಾ ರಂಭದಲ್ಲಿ ಪಾಲ್ಗೊಂಡಿದ್ದವರಿಗೆ ಸಿದ್ಧಾರೂಢ ಹಾಗೂ ಗುರು ನಾಥಾರೂಢರ ಭಾವಚಿತ್ರಗಳನ್ನು ನೀಡಲಾಗಿತ್ತು. ಮುಖ್ಯ ವೇದಿಕೆ ಮೇಲಿದ್ದ 13 ಋದ್ವಿಜರು ಅಭಿಷೇಕದ ವಿಧಿವಿಧಾನ ಗಳನ್ನು ಹೇಳಿದ ಹಾಗೆ ಅಭಿಷೇಕದಲ್ಲಿ ಪಾಲ್ಗೊಂಡಿದ್ದವರು ಅನುಸರಿಸಿದರು.

ಗಣಪತಿ ಪೂಜೆ ಹಾಗೂ ನವಗ್ರಹ ಪೂಜೆಯಾದ ನಂತರ ಉಭಯ ಶ್ರೀಗಳ ಮೂರ್ತಿಗಳಿಗೆ ಅಭಿಷೇಕ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿದ ಶ್ರೀಮಠದ ಮುಖ್ಯ ಆಡಳಿತಗಾರರು ಹಾಗೂ ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಕೆ. ನಟರಾಜನ್, ಅಭಿಷೇಕಕ್ಕೆ ಸಮಾರೋಪವಲ್ಲ. ಕಾರ್ಯಕ್ರಮಕ್ಕೆ ಸಮಾರೋಪ ಎಂದರು.
`ಈ ಮಹಾರುದ್ರಾಭಿಷೇಕ ಮುಖ್ಯ ಉದ್ದೇಶ ಕೇವಲ ವೈಯಕಿಕ್ತ ಹಿತಾಸಕ್ತಿಯಲ್ಲ. ಎಲ್ಲರ ಒಳಿತಿಗೆ ಎಂಬುದು ಮುಖ್ಯ~ ಎಂದರು.

ಸಾನ್ನಿಧ್ಯ ವಹಿಸಿದ್ದ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ಲಕ್ಷ ದೀಪೋತ್ಸವ ಹಾಗೂ ಲಕ್ಷ ಬಿಲ್ವಾರ್ಚನೆ ನಡೆದಿತ್ತು, ಆದರೆ ಲಕ್ಷ ಮಹಾರುದ್ರಾಭಿಷೇಕ ನಡೆದುದು ಇದೇ ಮೊದಲ ಬಾರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ಧಾರೂಢಮಠ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಹೇಂದ್ರ ಸಿಂಘಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂಠಿ, ಗೌರವ ಕಾರ್ಯದರ್ಶಿ ರಂಗಾ ಬದ್ದಿ, ಧರ್ಮದರ್ಶಿ ಡಾ.ಆರ್.ಎನ್. ಜೋಶಿ ಮೊದಲಾದವರು ವೇದಿಕೆ ಮೇಲಿದ್ದರು.

ನಂತರ ಡಾ.ಗಂಗೂಬಾಯಿ ಹಾನಗಲ್ಲ ಮ್ಯೂಜಿಕ್ ಫೌಂಡೇಶನ್ ಕಲಾ ತಂಡದಿಂದ ಸಿದ್ಧಾರೂಢರ ಕುರಿತು ಭಕ್ತಿಗೀತೆಗಳನ್ನು ಪಲ್ಲವಿ ಖಾನಪೇಟ ಹಾಡಿದರು. ಸಿತಾರ ವಾದನದಲ್ಲಿ ನಿಖಿಲ್ ಜೋಶಿ, ತಬಲಾದಲ್ಲಿ ಬಸವರಾಜ ಹಿರೇಮಠ, ಹಾರ್ಮೋನಿಯಂನಲ್ಲಿ ಸ್ಟೀಫನ್ ಹಾಗೂ ಡೋಲಕ್‌ನಲ್ಲಿ ಗುಂಜಾಳ ಸಾಥ್ ನೀಡಿದರು.

ನಾಮಾವಳಿ ಜರುಗಿದ ನಂತರ `ಸಿದ್ಧಾರೂಢರ ಮಹಾತ್ಮೆ~ ಸಿನಿಮಾದಲ್ಲಿ ಸಿದ್ಧಾರೂಢರ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ಡಾ. ರಾಜೇಶ ಆರತಿ ಬೆಳಗುವುದರೊಂದಿಗೆ ಮಹಾರುದ್ರಾ ಭಿಷೇಕ ಅಂತ್ಯಗೊಂಡಿತು.
ನಂತರ ಡಾ. ರಾಜೇಶ ದಂಪತಿಯನ್ನು ಮಠದ ಪರವಾಗಿ ಸನ್ಮಾನಿಸಲಾಯಿತು.

 ಜಲಾಭಿಷೇಕ: ಮಹಾರುದ್ರಾಭಿಷೇಕದಲ್ಲಿ ಪಾಲ್ಗೊಳ್ಳದ ಭಕ್ತರಿಗೆ ಶುಕ್ರವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಜಲಾಭಿಷೇಕ ಅವಕಾಶ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT