ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳಯಾನದಲ್ಲಿ ಇಸ್ರೊ ಇತಿಹಾಸ

ಮೊದಲ ಯತ್ನದಲ್ಲೇ ಭಾರತಕ್ಕೆ ಯಶಸ್ಸು
Last Updated 24 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಮೊತ್ತಮೊದಲ ಅಂತರ ಗ್ರಹ ಕಾರ್ಯಕ್ರಮ ‘ಮಂಗಳ­ಯಾನ’ (ಮಾರ್ಸ್ ಆರ್ಬಿಟರ್ ಮಿಷನ್)   ನೌಕೆ ಬುಧವಾರ ಬೆಳಿಗ್ಗೆ 7.54ಕ್ಕೆ ಮಂಗಳನ ಕಕ್ಷೆ ಸೇರುವ ಮೂಲಕ ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿತು. ಈ ಅದ್ವಿತೀಯ ಸಾಧನೆಗೆ ದೇಶದಲ್ಲಿ ಸಂತಸದ ಹೊನಲು ಹರಿದಿದೆ.

ಕಳೆದ ವರ್ಷ ನವೆಂಬರ್‌ 5ರಂದು  ಹೊರಟ ಈ ನೌಕೆ ಒಟ್ಟು 300 ದಿನಗಳ ಬಾಹ್ಯಾಂತರಿಕ್ಷದ ಯಾತ್ರೆ ಕೈಗೊಂಡು ಕೆಂಪುಗ್ರಹದ ಕಕ್ಷೆ ತಲುಪಿತು. ಈ ಮೂಲಕ ಚೊಚ್ಚಲ ಯತ್ನದಲ್ಲೇ ಯಶಸ್ಸು ಗಳಿಸಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರ­ವಾಯಿತು ಮತ್ತು ಮಂಗಳ­ನ ಕಕ್ಷೆಗೆ ನೌಕೆ ಕಳುಹಿಸಿದ ಏಷ್ಯಾದ ಮೊದಲ ರಾಷ್ಟ್ರ ಎನಿಸಿಕೊಂಡಿತು. ಅಲ್ಲದೆ ಮಂಗಳ­ಗ್ರಹಕ್ಕೆ ಯಶಸ್ವಿ­ಯಾಗಿ ನೌಕೆ­ಗಳನ್ನು ಕಳು­ಹಿಸಿದ ಅಮೆರಿಕ, ರಷ್ಯಾ, ಐರೋಪ್ಯ ಒಕ್ಕೂ­ಟದ ಸಾಲಿಗೆ ಸೇರ್ಪಡೆಯಾಯಿತು.

ಮೊದಲ ಬಾರಿಗೆ ಅಂಗಾರಕನ ಕಕ್ಷೆಗೆ ನೌಕೆ ಕಳುಹಿಸಲು ಮುಂದಾಗಿದ್ದ ಭಾರ­ತೀಯ ಬಾಹ್ಯಾ­ಕಾಶ ಸಂಶೋಧನಾ ಸಂಸ್ಥೆ (ಇಸ್ರೊ)  ಮೇಲೆ ಇಡೀ ಜಗತ್ತು ಕುತೂಹ­ಲದ ದೃಷ್ಟಿ ಇಟ್ಟಿತ್ತು. ಮೊದಲ ಯತ್ನ­ದಲ್ಲೇ ಯಶಸ್ಸು ಗಳಿಸುವ ಮೂಲಕ ಜಗತ್ತೇ ನಿಬ್ಬೆರಾಗುವಂತಹ ಸಾಧನೆ ಮಾಡಿದೆ.  

‘ಮಾಮ್‌’ (ಎಂಒಎಂ) ಯಶಸ್ಸು ಮುಂದಿನ ದೂರಾಂತ­ರಿಕ್ಷ ಯೋಜ­ನೆ­ಗಳಿಗೆ ಚಿಮ್ಮು ಹಲಗೆ­ಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಸಾಧನೆಯ ಆ ಕ್ಷಣ: ಭಾರತದ ಬಾಹ್ಯಾ­ಕಾಶ ವಿಜ್ಞಾನದಲ್ಲೇ ಮಹತ್ವದ ಮೈಲು­ಗ­ಲ್ಲಿಗೆ ಕಾರಣವಾದ ಕ್ಷಣವದು. ಇಸ್ರೊ ವಿಜ್ಞಾನಿ­ಗಳ ಹಲವು ವರ್ಷದ ಕನಸು, ಕೋಟ್ಯಂತರ ಜನರ ನಿರೀಕ್ಷೆ, ಕಾತರ, ಕುತೂ­­­ಹಲ ಸಾಕಾರಗೊಂಡ ಕ್ಷಣ ಅದಾ­ಗಿತ್ತು. ಪೀಣ್ಯದಲ್ಲಿರುವ ಇಸ್ರೊದ ಟೆಲಿ­ಮೆಟ್ರಿ ಟ್ರ್ಯಾಕಿಂಗ್‌ ಮತ್ತು ಕಮಾಂಡ್‌ ನೆಟ್‌­ವರ್ಕ್‌ನ (ಇಸ್‌­ಟ್ರ್ಯಾಕ್‌) ಗಗನ­ನೌಕೆ ನಿಯಂತ್ರಣಾ ಕೇಂದ್ರ­ದಲ್ಲಿ ಅಂತಿಮ ಹಂತದ ಕಾರ್ಯಾಚರಣೆ­ಯನ್ನು ವೀಕ್ಷಿ­ಸಿದ ಪ್ರಧಾನಿ ನರೇಂದ್ರ ಮೋದಿ ಅವರು,  ವಿಜ್ಞಾನಿಗಳ ಸಾಧನೆಗೆ ಅಭಿ­ನಂದ­ನೆಯ ಮಹಾಪೂರ­ ಹರಿಸಿ­ದರು. 

300 ದಿನದ ನಡೆ: ಕಳೆದ ನವೆಂಬರ್‌ನಲ್ಲಿ ನೌಕೆಯನ್ನು ಸೂಕ್ತ ಕಕ್ಷೆಗೆ ಏರಿಸಲು ಆರು ಹಂತದ ಪೂರಕ ಪ್ರಕ್ರಿಯೆಗಳನ್ನು ನಡೆಸ­ಲಾ­ಗಿತ್ತು. ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯವನ್ನು (ಟಿಸಿಎಂ–1) ಡಿಸೆಂಬರ್‌ 1ರಂದು ನಡೆಸಲಾಗಿತ್ತು. ‘ಟಿಸಿಎಂ–2’ ಕಾರ್ಯ ಜೂನ್‌ 11ರಂದು ನಡೆದಿತ್ತು. ಆಗಸ್‌್ಟನಲ್ಲಿ ನಡೆಸ­ಬೇಕಿದ್ದ ಮೂರನೇ ಹಂತದ ಕಾರ್ಯವನ್ನು ಕೈಬಿಡಲಾಗಿತ್ತು. ನಾಲ್ಕನೇ ಹಂತದ ಕಾರ್ಯ ಸೋಮವಾರ ನಡೆದಿತ್ತು. ಅಲ್ಲದೆ ಹೆಚ್ಚು­ಕಡಿಮೆ ೩೦೦ ದಿನಗಳಿಂದ ನಿದ್ರಾವಸ್ಥೆಯಲ್ಲಿದ್ದ ಮುಖ್ಯ ದ್ರವ ಎಂಜಿನ್‌ ಅನ್ನು (ಎಲ್‌ಎಎಂ) ಸೋಮವಾರ ಪರೀಕ್ಷಾರ್ಥ­ವಾಗಿ ನಾಲ್ಕು ಸೆಕೆಂಡುಗಳ ಕಾಲ ಯಶಸ್ವಿಯಾಗಿ ಉರಿಸಲಾಗಿತ್ತು.

ನೌಕೆ ಬುಧವಾರ ಬೆಳಿಗ್ಗೆ ಹೊತ್ತಿಗೆ 66 ಕೋಟಿ ಕಿ.ಮೀ. ದೂರ ಕ್ರಮಿಸಿತ್ತು. ಭೂಮಿಯಿಂದ 22.4 ಕೋಟಿ ಕಿ.ಮೀ. ದೂರ­ದ­ಲ್ಲಿತ್ತು. ಅಂತಿಮ ಹಂತದ ಕಾರ್ಯಾಚರಣೆಯ ಸಂಕೇತಗಳನ್ನು ಇಸ್ರೊ ಬ್ಯಾಲಾಳು ಕೇಂದ್ರ, ಅಮೆರಿಕದ ಗೋಲ್ಡ್ ಸ್ಟೋನ್‌, ಸ್ಪೇನ್‌ನ ಮ್ಯಾಡ್ರಿಡ್‌, ಆಸ್ಟ್ರೇಲಿಯದ ಕ್ಯಾನ್‌ಬೆರಾ ಕೇಂದ್ರಗಳ ಮೂಲಕ ಸ್ವೀಕರಿಸಲಾಯಿತು.

ದಕ್ಷ ಸಂವಹನ ಸಾಮರ್ಥ್ಯ: ಈ ಯಾನದ ಮುಖ್ಯ ನಾಡಿಯೇ ದಕ್ಷ ಸಂವಹನ ಸಾಮರ್ಥ್ಯ. ಅಂದರೆ, 22.4  ಕೋಟಿ ಕಿ.ಮೀ ದೂರದಲ್ಲಿ ಸಾಗು­ತ್ತಿರುವ ನೌಕೆಗೆ ಇಲ್ಲಿನ ಸಂಕೇತ­ಗಳು ಯಶಸ್ವಿಯಾಗಿ ರವಾನೆಯಾ­ಗ­ಬೇಕಿತ್ತು. ಅಲ್ಲಿಂದಲೂ ಸಂಕೇತ­ಗಳು ಭೂಮಿಗೆ ಯಾವುದೇ ಅಡೆತಡೆ ಇಲ್ಲದೆ ಬರಬೇಕಿತ್ತು. ಸಂಕೇತಗಳ ಏಕಮುಖದ ಪ್ರಯಾಣಕ್ಕೇ ತಗಲುವ ಅವಧಿ 12.5 ನಿಮಿಷ. ಹೀಗಾಗಿ, ಅಲ್ಲಿ ನೌಕೆಯ ವ್ಯವಸ್ಥೆಯಲ್ಲಿನ ಬೆಳವಣಿಗೆ ಬಗ್ಗೆ ಮಾಹಿತಿ ಸಿಗಲು ಅಷ್ಟೇ ಸಮಯ ಹಿಡಿಯಿತು. 

ಆರು ತಿಂಗಳು ಕಾರ್ಯ: ನೌಕೆಯು ಆರು ತಿಂಗಳ ಕಾಲ (180 ದಿನ)ಕಾರ್ಯ ನಿರ್ವಹಿಸಲಿದೆ. 51 ಬಾರಿ ಪ್ರಯತ್ನ: ಈ ವರೆಗೆ ಜಗತ್ತಿನ ವಿವಿಧ ರಾಷ್ಟ್ರಗಳು ಮಂಗಳನ ಕಕ್ಷೆ ತಲುಪಲು 51 ಬಾರಿ ಪ್ರಯತ್ನ ಮಾಡಿದ್ದವು. ಇದರಲ್ಲಿ 30 ಯತ್ನಗಳು ವಿಫಲಗೊಂಡಿವೆ. ಈ ಬಹುತೇಕ ಯೋಜನೆ­ಗಳೆಲ್ಲ ಉಡಾವಣೆ ಹಂತ, ಭೂ ಕಕ್ಷೆಯಿಂದ ಮಂಗಳ ಕಕ್ಷೆಗೆ ಸೇರುವ ಹಾದಿಯಲ್ಲಿ ವಿಫಲ­ಗೊಂಡಿದ್ದವು.
ಹಿರಿಯ ವಿಜ್ಞಾನಿಗಳಾದ ಪ್ರೊ.ಯು.ಆರ್‌. ರಾವ್‌, ಪ್ರೊ.ಯಶಪಾಲ್, ಕೇಂದ್ರ ಸಚಿವರಾದ ಡಿ.ವಿ.ಸದಾ­ನಂದ ಗೌಡ, ಅನಂತ ಕುಮಾರ್‌, ಜಿ.ಎಂ.ಸಿದ್ದೇಶ್ವರ, ಜಿತೇಂದ್ರ ಸಿಂಗ್‌, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಷಿ ಕಾರ್ಯಾಚರಣೆಗೆ ಸಾಕ್ಷಿಯಾದರು.

ಬುಧವಾರ ಏನೇನಾಯಿತು...?
ಇಸ್ಟ್ರಾಕ್‌ ಕೇಂದ್ರದಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ ಧಾವಂತ, ಕಾತರ. ಬೆಳಗಿನ ಜಾವ 4.17 ನಿಮಿಷಕ್ಕೆ ಅಂತಿಮ ಹಂತದ ಕಾರ್ಯಾಚರಣೆ ಚಾಲೂ ಆಯಿತು. ರೇಡಿಯೊ ಸಂಕೇತಗಳ ಸ್ವೀಕರಿಸಲು ಹಾಗೂ ನೌಕೆಗೆ ಕಳುಹಿಸಲು ಆಂಟೆನಾವನ್ನು ಸಜ್ಜುಗೊಳಿಸಲಾಯಿತು. ಮತ್ತೆ ಎರಡೂವರೆ ಗಂಟೆಗಳ ಕಾಲ ವಿರಾಮ.  ಹಿರಿಯ ವಿಜ್ಞಾನಿಗಳಿಂದ ಮಂಗಳಯಾನದ ಬಗ್ಗೆ ಬಣ್ಣನೆ. 6.30ಕ್ಕೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದರು.

6.56ಕ್ಕೆ ಮಂಗಳ ಗ್ರಹದ ಕಡೆಗೆ ನೌಕೆಯನ್ನು ತಿರುಗಿಸಲಾಯಿತು. ಇದರ ಸಂಕೇತ ಕೇಂದ್ರಕ್ಕೆ 7.09ಕ್ಕೆ ಲಭ್ಯವಾಯಿತು. ಕೇಂದ್ರದ ಸಿಬ್ಬಂದಿ ಚಪ್ಪಾಳೆ ತಟ್ಟಿ ಸಂಭ್ರಮೋಲ್ಲಾಸ ವ್ಯಕ್ತಪಡಿಸಿದರು. 7.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯಪಾಲ ವಜುಭಾಯಿ ವಾಲಾ ಕೇಂದ್ರಕ್ಕೆ ಬಂದರು.

ಪ್ರತಿ ಸೆಕೆಂಡಿಗೆ  5.1 ಕಿ.ಮೀ. ವೇಗದಲ್ಲಿ ಧಾವಿಸುತ್ತಿದ್ದ ನೌಕೆಯ ವೇಗವನ್ನು ಪ್ರತಿ ಸೆಕೆಂಡ್‌ಗೆ ೪.1 ಕಿ.ಮೀ.ಗೆ ಇಳಿಸುವ ಉದ್ದೇಶದಿಂದ ನೌಕೆಯ ಮುಖ್ಯ ನಾಡಿಯಾಗಿದ್ದ ಮುಖ್ಯ ದ್ರವ ಎಂಜಿನ್‌ (ಎಲ್‌ಎಎಂ) ಉರಿಸುವ ಕಾರ್ಯ ಬೆಳಿಗ್ಗೆ 7.17ಕ್ಕೆ ಶುರುವಾಯಿತು. ನೌಕೆಯನ್ನು ಕೆಂಪು ಗ್ರಹದ ಕಕ್ಷೆಗೆ ಸುಲಲಿತವಾಗಿ ಸೇರಿಸುವ ಸಲುವಾಗಿ ಎಂಜಿನ್‌ ಅನ್ನು 24 ನಿಮಿಷ ಉರಿಸಲಾಯಿತು.
ಈ ಎಂಜಿನ್‌ ಉರಿಯುವ ಹೊತ್ತು ವಿಜ್ಞಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. 7.41ಕ್ಕೆ ಉರಿಯುವ ಪ್ರಕ್ರಿಯೆ ಅಂತ್ಯಗೊಂಡಿತು.

ವಿಜ್ಞಾನಿಗಳು ಹಸ್ತಲಾಘವ ನೀಡಿ ಪರಸ್ಪರ ಅಭಿನಂದಿಸಿದರು. ಈ ನಡುವೆ, ಅದರ ಸಂದೇಶ 7.54ಕ್ಕೆ ಕೇಂದ್ರಕ್ಕೆ ತಲುಪಬೇಕಿತ್ತು. ಈ ಮಂಗಳದ ಕ್ಷಣಕ್ಕೆ ಅಂಗಾರಕ ಸಣ್ಣ ಮಟ್ಟಿಗೆ ಅಡ್ಡಿ ಆತಂಕ ಉಂಟು ಮಾಡಿದ. 7.59 ಗಂಟೆ ಆದರೂ ಸಂದೇಶ ತಲುಪಲೇ ಇಲ್ಲ. ಪ್ರಧಾನಿ, ಇಸ್ರೊ ಅಧ್ಯಕ್ಷರು ಸೇರಿದಂತೆ ತಂಡದಲ್ಲಿದ್ದವರ ಮೊಗದಲ್ಲಿ ಆತಂಕ ಮಡುಗಟ್ಟಿತ್ತು.ಎಂಟು ಗಂಟೆಯಾಗುತ್ತಲೇ ಕಕ್ಷೆ ಸೇರಿದ ಬಗೆಗಿನ ಸಂದೇಶ  ಕೇಂದ್ರಕ್ಕೆ ತಲುಪಿತು.

ಮೂಡಿದ ಮಂದಹಾಸ: ಅಲ್ಲಿಯವರೆಗೂ ನಿರ್ಭಾವುಕರಾಗಿ ಕಾರ್ಯಾಚರ­ಣೆಯ ಮೇಲ್ವಿಚಾರಣೆ ನಡೆಸುತ್ತಿದ್ದ ಇಸ್ರೊ ಅಧ್ಯಕ್ಷ ಪ್ರೊ. ರಾಧಾಕೃಷ್ಣನ್‌ ಅವರ ಮೊಗದಲ್ಲಿ ಮಂದಹಾಸ. ಪಕ್ಕದಲ್ಲೇ ಇದ್ದ ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕ ಎಸ್‌.ಕೆ.ಶಿವಕುಮಾರ್‌ ಹಾಗೂ ಇಸ್ರೊ ವೈಜ್ಞಾನಿಕ ಸಲಹೆಗಾರ ಡಾ.ವಿ.ಕೋಟೇಶ್ವರ ರಾವ್‌ ಸೇರಿದಂತೆ ಹಿರಿಯ ವಿಜ್ಞಾನಿಗಳ ಕೈ ಕುಲುಕಿದರು. ಪ್ರಧಾನಿ ಮೋದಿ ಅವರಿಗೆ ವಿಷಯ ಮುಟ್ಟಿಸಲು ಗ್ಯಾಲರಿಗೆ ಧಾವಿಸಿದರು. ಅವರನ್ನು ಬಾಚಿ ತಬ್ಬಿಕೊಂಡ ಪ್ರಧಾನಿ ಬೆನ್ನು ತಟ್ಟಿ ಶುಭಾಶಯ ಕೋರಿದರು. 8.05ಕ್ಕೆ ರೇಡಿಯೊ ಸಂಕೇತ ಸ್ವೀಕಾರ ಕೇಂದ್ರಕ್ಕೆ ಬಂದ ಪ್ರಧಾನಿ ಅವರು ಹಿರಿಯ ಹಾಗೂ ಕಿರಿಯ ವಿಜ್ಞಾನಿಗಳ ಕೈಕುಲುಕಿ ಅಭಿನಂದಿಸಿದರು.

ಐದು ವರ್ಣಚಿತ್ರ ರವಾನೆ
ಬೆಂಗಳೂರು: ಮಂಗಳ ನೌಕೆಯಲ್ಲಿದ್ದ ವರ್ಣ ಕ್ಯಾಮೆರಾ ಬುಧವಾರ ಮಧ್ಯಾಹ್ನದ ವೇಳೆಗೆ ಮಂಗಳನ ಐದು ಛಾಯಾಚಿತ್ರಗಳನ್ನು ತೆಗೆದಿದೆ.‘ಈ ಚಿತ್ರಗಳ ಗುಣಮಟ್ಟ ಚೆನ್ನಾಗಿದೆ. ಬ್ಯಾಲಾಳು ಕೇಂದ್ರಕ್ಕೆ ಈ ಚಿತ್ರಗಳು ಬಂದಿವೆ. ಇವನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಲಾಗಿದೆ. ಗುರುವಾರ  ನವದೆಹಲಿಯಲ್ಲಿ ಪ್ರಧಾನಿ ಅವರೇ ಈ ಚಿತ್ರಗಳನ್ನು ಬಿಡುಗಡೆ ಮಾಡಲಿದ್ದಾರೆ’ ಎಂದು ಇಸ್ರೊ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT