ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನಲ್ಲಿ ನವರಾತ್ರಿ ಕುಸ್ತಿ ಸಂಭ್ರಮ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಂಗಳೂರು ನಗರದಲ್ಲಿ ಸುದೀರ್ಘ ಇತಿಹಾಸವುಳ್ಳ ವ್ಯಾಯಾಮಶಾಲೆಗಳಿವೆ. ಬೋಳಾರದ ಶಿವಾಜಿ ಫಿಸಿಕಲ್, ಬೆಂಗ್ರೆಯ ವೀರಮಾರುತಿ, ವೀರಾಂಜನೇಯ, ತೊಕ್ಕೊಟ್ಟು ಭಟ್ನಗಾರದ ಜೈವೀರಮಾರುತಿ, ಬಾಲಮಾರುತಿ, ರಥಬೀದಿ ಬಳಿಯ ಬಾಲಾಂಜನೇಯ ಜಿಮ್ನಾಷಿಯಂ ಪ್ರಸಿದ್ಧವಾದುವು. ಬಾಲಾಂಜನೇಯ ನಂತರದ ವರ್ಷಗಳಲ್ಲಿ ಭಾರ ಎತ್ತುವ ಕ್ರೀಡೆ, ದೇಹದಾರ್ಢ್ಯದತ್ತ ಗಮನ ಹರಿಸಿತು.

ಈ ಹಳೆಯ ಗರಡಿಗಳ ಜತೆಗೆ ನಂತರದ ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಸಸಿಹಿತ್ಲುವಿನ ಆಂಜನೇಯ, ಹೊಸಬೆಟ್ಟುವಿನ ನ್ಯಾಷನಲ್ ಹೆಲ್ತ್ ಲೀಗ್ (ಎನ್‌ಎಚ್‌ಎಲ್)ನಿಂದ ಸಾಕಷ್ಟು ಪೈಲ್ವಾನರು ಹೊರಹೊಮ್ಮಿದರು.

ಮೈಸೂರಿನಲ್ಲಿ ದಸರಾಕ್ಕೆ ಇರುವ ಸಾಂಪ್ರದಾಯಿಕ ಹಿನ್ನೆಲೆ, ವೈಭವ ಮಂಗಳೂರಿನಲ್ಲಿ ಇರಲಿಲ್ಲ. ಹೀಗಾಗಿ ಮಂಗಳೂರಿನಲ್ಲಿ ನವರಾತ್ರಿ ಸಮಯದಲ್ಲಿ ಯಾವುದೇ ದೊಡ್ಡ ಮಟ್ಟದ ಕುಸ್ತಿ ಕ್ರೀಡೆಗಳು ನಡೆದ ಇತಿಹಾಸವಿಲ್ಲ.

ದಸರಾಕ್ಕೆ ಒಂದೆರಡು ತಿಂಗಳು ಹಿಂದೆ ನಡೆಯುತ್ತಿದ್ದ ತುಳುನಾಡ ಕೇಸರಿ, ತುಳುನಾಡ ಕುಮಾರ್, ವಿವಿಧ ತೂಕ ಸ್ಪರ್ಧೆಗಳಲ್ಲಿ ವಿಜೇತರಾದವರಲ್ಲಿ ಕೆಲವರಷ್ಟೇ ಮೈಸೂರು ದಸರಾ ಕುಸ್ತಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎನ್ನುತ್ತಾರೆ ಸ್ವತಃ 90ರ ದಶಕದಲ್ಲಿ ಮೈಸೂರಿನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ನವೀನ್ ಕರ್ಕೆರಾ ಬೆಂಗ್ರೆ. ಆ ದಶಕದಲ್ಲೊಮ್ಮೆ 60 ಕೆ.ಜಿ. ತೂಕ ವಿಭಾಗದಲ್ಲಿ ಸಿಂಡಿಕೇಟ್‌ಬ್ಯಾಂಕ್‌ನ ಆನಂದ ಅಮೀನ್ ವಿಜೇತರಾಗಿದ್ದನ್ನು ಅವರು ನೆನಪಿಸುತ್ತಾರೆ.       ನವೀನ್ ಈಗ ದ.ಕ. ಜಿಲ್ಲಾ ಕುಸ್ತಿ ಸಂಘದ ಕಾರ್ಯಾಧ್ಯಕ್ಷರು.

ಸುಮಾರು 12 ವರ್ಷಗಳಿಂದ ದಸರಾ ಸಮಯದಲ್ಲೇ ಉಳ್ಳಾಲದಲ್ಲಿ ನವರಾತ್ರಿ ಸಾರ್ವಜನಿಕ ಶಾರದಾ ಉತ್ಸವ ಸಮಿತಿ ಶಾರದಾ ನಿಕೇತನದಲ್ಲಿ ಕುಸ್ತಿ ಸ್ಪರ್ಧೆಗಳು ನಡೆಯುತ್ತಿವೆ.

ಮೊಗವೀರ ಪಟ್ಣದ ಶ್ರೀವೀರಮಾರುತಿ ವ್ಯಾಯಾಮ ಶಾಲೆ, ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ `ಶಾರದಾ ಶ್ರೀ~, `ಶಾರದಾ ಕೇಸರಿ~ ಪ್ರಶಸ್ತಿ ಜತೆ ಪೈಲ್ವಾನ್ ಮೋತಿ ಪುತ್ರನ್ ಸ್ಮರಣಾರ್ಥ ಬೆಳ್ಳಿ ಗದೆಯ ಕುಸ್ತಿ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. (ಈ ಬಾರಿಯ ಸ್ಪರ್ಧೆ ಭಾನುವಾರವಷ್ಟೇ ನಡೆದಿತ್ತು).

ಹಿನ್ನೆಲೆ: ಮಂಗಳೂರಿನಲ್ಲಿ ಕೆಲವು ಹೆಸರಾಂತ ವ್ಯಾಯಾಮಶಾಲೆಗಳೆಲ್ಲ ಒಗ್ಗಟ್ಟಾಗಿ 1957ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕುಸ್ತಿ ಸಂಘ ರಚಿಸಿಕೊಂಡವು. ಮಾಜಿ ಶಾಸಕ ದಿ.ಎಂ.ಲೋಕಯ್ಯ ಶೆಟ್ಟಿ ಅವರ ಕಾಳಜಿಯಿಂದ ಈ ಸಂಘ ಅಸ್ತಿತ್ವಕ್ಕೆ ಬಂತು. ಅವರೇ ಸ್ಥಾಪಕ ಅಧ್ಯಕ್ಷರಾಗಿದ್ದರು.

ಆಗಿನ ಕಾಲದಲ್ಲಿ ದೇಶದ ಹೆಸರಾಂತ ಪೈಲ್ವಾನರಾಗಿದ್ದ ದಿ.ದಾರಾ ಸಿಂಗ್ ಅವರೇ ದ.ಕ. ಜಿಲ್ಲಾ ಕುಸ್ತಿ ಸಂಘವನ್ನು ಉದ್ಘಾಟಿಸಿದ್ದರು. ಸಂಘವು ನಂತರ ನಿಯಮಿತವಾಗಿ ತುಳುನಾಡ ಕೇಸರಿ ಮತ್ತು ತುಳುನಾಡ ಕುಮಾರ್ ಸ್ಪರ್ಧೆಗಳನ್ನು ಸಂಘಟಿಸುತ್ತ ಬಂದಿದೆ. 1960ರಲ್ಲಿ ಪೈಲ್ವಾನ್ ದಾರಾ ಸಿಂಗ್ ಮಂಗಳೂರಿನಲ್ಲಿ ಪ್ರದರ್ಶನ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದರು.

ಮಂಗಳ ಕ್ರೀಡಾಂಗಣದಲ್ಲಿ ಅಖಿಲ ಭಾರತ ಮಟ್ಟದ ಕುಸ್ತಿ ಪಂದ್ಯಾಟವನ್ನು ಆಗಿನ ಮುಖ್ಯಮಂತ್ರಿ      ಆರ್.ಗುಂಡೂರಾವ್ ಅಧ್ಯಕ್ಷತೆಯಲ್ಲಿ ಲೋಕಯ್ಯ ಶೆಟ್ಟಿ ಅವರೇ ನಡೆಸಿದ್ದರು ಎಂದು ನೆನಪಿಸುತ್ತಾರೆ ಸಂಘದ ಗೌರವಾಧ್ಯಕ್ಷ ಸುರೇಶಚಂದ್ರ ಶೆಟ್ಟಿ.

ಕ್ರೀಡಾ ಹಾಸ್ಟೆಲ್ ಅಗತ್ಯ: ಆದರೆ ಮಂಗಳೂರಿನ ವಿವಿಧ ಗರಡಿಗಳಲ್ಲಿ ಸಾಕಷ್ಟು ಕುಸ್ತಿಪಟುಗಳು ಇದ್ದರೂ ಸ್ಪರ್ಧೆಗಳು ನಡೆಯುವುದು ವಿರಳ. ಕುಸ್ತಿಗೆ ಬೇಕಾದ ಮೈಕಟ್ಟನ್ನು ಹೊಂದಿದ ಸಾಕಷ್ಟು ಯುವಕರು ಇಲ್ಲಿದ್ದಾರೆ. ಅವರಿಗೆ ತಂತ್ರಗಾರಿಕೆ, ಕೌಶಲ್ಯ ಮೊದಲಾದ ವಿಷಯಗಳಲ್ಲಿ ತರಬೇತಿ ಅಗತ್ಯವೂ ಇದೆ.
 
ಇಲ್ಲಿ ಕುಸ್ತಿ ಕ್ರೀಡಾ ಹಾಸ್ಟೆಲ್ ಸ್ಥಾಪಿಸಬೇಕೆಂಬ ಒತ್ತಾಯವೂ ಕೆಲವು ವರ್ಷಗಳಿಂದ ಕೇಳಿಬರುತ್ತಿದೆ. ಕ್ರೀಡಾ ಹಾಸ್ಟೆಲ್ ಸ್ಥಾಪನೆಯಾದರೆ ಕರಾವಳಿ    ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ಹೇಳುತ್ತಾರೆ ದ.ಕ. ಜಿಲ್ಲಾ ಕುಸ್ತಿ ಸಂಘದ ಕಾರ್ಯಾಧ್ಯಕ್ಷ ಪ್ರಕಾಶ ವಿ.ಕರ್ಕೆರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT