ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಜೈಲಲ್ಲಿ ಶಸ್ತ್ರಾಸ್ತ್ರ ಪಾತಕಿ ಮಲಬಾರಿ ಆರೋಪ

Last Updated 15 ಜೂನ್ 2011, 19:30 IST
ಅಕ್ಷರ ಗಾತ್ರ

ಮಂಗಳೂರು: `ಮಂಗಳೂರು ಉಪ ಕಾರಾಗೃಹದಲ್ಲಿ ಶಸ್ತ್ರಾಸ್ತ್ರಗಳು ಇವೆ. ಬುಧವಾರ ಬೆಳಿಗ್ಗೆ 9.45ರ ವೇಳೆಗೆ ಜೈಲಿನಲ್ಲಿ ಶರಣ್ ಎಂಬಾತ ನನ್ನ ಮೇಲೆ ದಾಳಿಗೆ ಯತ್ನಿಸಿದ~ ಎಂದು ಭೂಗತ ಪಾತಕಿ ಛೋಟಾ ಶಕೀಲ್ ಸಹಚರ ರಶೀದ್ ಮಲಬಾರಿ ಆರೋಪ ಮಾಡಿದ್ದಾನೆ.

ನಗರದ ತ್ವರಿತಗತಿ ನ್ಯಾಯಾಲಯದಲ್ಲಿ ಬುಧವಾರ ನಡೆದ ವಿಚಾರಣೆ ಬಳಿಕ ಮಾತನಾಡಿದ ಮಲಬಾರಿ, `ದಾಳಿ ಬಗ್ಗೆ ಜೈಲಿನ ಅಧೀಕ್ಷಕರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ~ ಎಂದು ದೂರಿದ್ದಾನೆ. `ಮಲಬಾರಿ ಕೊಲೆಗೆ ಯತ್ನಿಸಲಾಗಿದೆ. ಅಧೀಕ್ಷಕರಿಗೆ ದೂರು ನೀಡಿದ್ದರೂ ಕ್ಯಾರೇ ಅನ್ನಲಿಲ್ಲ. ವಿಚಾರಣೆ ವೇಳೆ ಮ್ಯಾಜಿಸ್ಟ್ರೇಟ್ ಬಳಿಯೂ ಮಲಬಾರಿ ಅಳಲು ತೋಡಿಕೊಂಡಿದ್ದಾನೆ~ ಎಂದು ಮಲಬಾರಿ ಪರ ವಕೀಲ ಪುರುಷೋತ್ತಮ ಪೂಜಾರಿ `ಪ್ರಜಾವಾಣಿ~ಗೆ ತಿಳಿಸಿದರು.

`ಸುಳ್ಯದ ಕೆ.ವಿ.ಜಿ. ವೈದ್ಯಕೀಯ ಕಾಲೇಜು ಆಡಳಿತಾಧಿಕಾರಿ ಡಾ. ರಾಮಕೃಷ್ಣ ಕೊಲೆ ಪ್ರಕರಣದ ಆರೋಪಿ ಶರಣ್ ಹಾಗೂ ಮಲಬಾರಿ ನಡುವೆ ಜೈಲಿನಲ್ಲಿ ಬುಧವಾರ ಬೆಳಿಗ್ಗೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಲಬಾರಿ ಸೆಲ್ ಒಳಗೆ ಹಾಗೂ ಶರಣ್ ಹೊರಗಿದ್ದ. `ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಶರಣ್ ಬೆದರಿಸಿದ್ದ. ಅದಕ್ಕೆ ಮಲಬಾರಿಯೂ ಬೈದಿದ್ದಾನೆ. ಆತನ ಮೇಲೆ ಕೊಲೆ ಯತ್ನ ನಡೆದಿಲ್ಲ~ ಎಂದು ಉಪಕಾರಾಗೃಹದ ಅಧೀಕ್ಷಕ ಪಿ.ಎಸ್. ಅಂಬೇಕರ್ `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದರು. `ಜೈಲಿನಲ್ಲಿ ಶಸ್ತ್ರಾಸ್ತ್ರ ಇದೆ ಎಂಬುದು ಆಧಾರ ರಹಿತ ಆರೋಪ. ಶಸ್ತ್ರಾಸ್ತ್ರ ಇದ್ದರೆ ನಮಗೆ ಮಾಹಿತಿ ನೀಡಬೇಕಿತ್ತು. ಕ್ರಮ ಕೈಗೊಳ್ಳುತ್ತಿದ್ದೆವು~ ಎಂದು ಅವರು ತಿಳಿಸಿದರು. 

ಬೆಳಗಾವಿ ಜೈಲಿನಲ್ಲಿದ್ದ ಮಲಬಾರಿಯನ್ನು ವಿಚಾರಣೆಗಾಗಿ ಇದೇ 11ರಂದು ಮಂಗಳೂರು ಜೈಲಿಗೆ ಕರೆ ತರಲಾಗಿತ್ತು. ಗುರುವಾರ ಬೆಳಿಗ್ಗೆ ವಾಪಸ್ ಕರೆದೊಯ್ಯಲಾಗುವುದು. ಮುಂದಿನ ವಿಚಾರಣೆ ಜುಲೈ 17ಕ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮಂಗಳೂರು ಪೊಲೀಸರು ಜೂನ್ 1ರಂದು ಇಲ್ಲಿನ ಉಪಕಾರಾಗೃಹಕ್ಕೆ ದಾಳಿ ನಡೆಸಿ ಬ್ಲೇಡು, ಕತ್ತರಿ, 40 ಗ್ರಾಂ ಗಾಂಜಾ, ಎರಡು ಮೊಬೈಲ್, ಚಾರ್ಜರ್, ಲೈಟರ್‌ಮತ್ತು ನೈಲ್‌ಕಟ್ಟರ್ ವಶಪಡಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT