ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ದಸರಾಕ್ಕೆ ನಮ್ಮವರ ಗೊಂಬೆಗಳು

Last Updated 22 ಅಕ್ಟೋಬರ್ 2012, 7:25 IST
ಅಕ್ಷರ ಗಾತ್ರ

ಮೈಸೂರು ದಸರಾ ಎಂದಾಕ್ಷಣ ಅಲ್ಲಿನ ರಾಜರ ದರ್ಬಾರ್, ಅಂಬಾರಿ ಮೆರವಣಿಗೆಯ ಜತೆ ಅಲ್ಲಿ ಮನೆಮನೆಗಳಲ್ಲಿ ಪ್ರದರ್ಶನಕ್ಕಿಡುವ ಬೊಂಬೆಗಳೂ ಸ್ಮೃತಿಪಟಲದಲ್ಲಿ ಮೂಡುತ್ತವೆ.
 
ಮಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ದಸರಾವನ್ನು ವೈಭವೋಪೇತವಾಗಿ ಆಚರಿಸಲಾಗುತ್ತಿದೆಯಾದರೂ ಇಲ್ಲಿ ಮನೆಮನೆಯಲ್ಲಿ ಗೊಂಬೆಗಳನ್ನು ಇಡುವ ಸಂಪ್ರದಾಯವಿಲ್ಲ. ಆದರೆ, ತಾಯಿಬೇರನ್ನು ಮೈಸೂರಿನಲ್ಲಿ ಹೊಂದಿದ್ದರೂ ಇಲ್ಲಿ ಬಂದು ನೆಲೆಸಿ `ನಮ್ಮವರೇ~ ಆಗಿಬಿಟ್ಟಿರುವ ಹಳೆಮೈಸೂರು ಪ್ರಾಂತ್ಯದ ವಿಪ್ರಕೂಟದವರು ಮಂಗಳೂರು ದಸರಾದಲ್ಲೂ `ಬೊಂಬೆ ಪ್ರದರ್ಶನ~ ಏರ್ಪಡಿಸುತಿದ್ದಾರೆ.

ಹಳೆ ಮೈಸೂರು ಪ್ರಾಂತ್ಯದಿಂದ ಉದ್ಯೋಗ, ವಿದ್ಯಾಭ್ಯಾಸ... ಹೀಗೆ ನಾನಾ ಕಾರಣದಿಂದ ಕರಾವಳಿಯಲ್ಲಿ ನೆಲೆಸಬೇಕಾಗಿ ಬಂದವರು ಇಲ್ಲಿ `ನಮ್ಮವರು~ ಎಂಬ ಪುಟ್ಟ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ.  ತಮ್ಮ ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳ ಹಿರಿಮೆಯನ್ನು ಇಲ್ಲಿನವರಿಗೂ ಪರಿಚಯಿಸುವ ಕಾಳಜಿ ಅವರದು. ಈ ಸಲುವಾಗಿಯೇ ಈ ಸಂಘಟನೆ ಆರು ವರ್ಷದ ಹಿಂದೆ ದಸರಾ ಸಂದರ್ಭದಲ್ಲಿ ಇಲ್ಲಿನ ನೆಲ್ಲಿಕಾಯಿ ರಾಘವೇಂದ್ರ ಸ್ವಾಮಿ ಮಠದ ಪ್ರಾಂಗಣದಲ್ಲಿ ಬೊಂಬೆಗಳ ಪ್ರದರ್ಶನ ಏರ್ಪಡಿಸಲು ಆರಂಭಿಸಿದೆ. ಆರಂಭದಲ್ಲಿ ಬೆರಳೆಣಿಕೆಯ ಬೊಂಬೆಗಳು ಮಾತ್ರ ಪ್ರದರ್ಶನಕ್ಕಿದ್ದವು. ಕ್ರಮೇಣ ಈ ಕೂಟಕ್ಕೆ ಮತ್ತಷ್ಟು ಕೈಗಳು ಸೇರಿಕೊಂಡಿವೆ. ಇಂದು 3 ಸಾವಿರಕ್ಕೂ ಅಧಿಕ ಬೊಂಬೆಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಬಾರಿಯ ದಸರಾ ಗೊಂಬೆಗಳ ಪ್ರದರ್ಶನ ಶುಕ್ರವಾರದಿಂದ ಆರಂಭಗೊಂಡಿದೆ.

ರಾಯರ ವೃಂದಾವನ ಈ ಬಾರಿಯ ಬೊಂಬೆ ಪ್ರದರ್ಶನದ ಪ್ರಮುಖ ಆಕರ್ಷಣೆ. ಥರ್ಮಾಕೋಲ್ ಹಾಗೂ ಗೊಂಬೆಗಳನ್ನು ಬಳಸಿ ಶ್ರೀರಾಘವೇಂದ್ರ ಸ್ವಾಮಿಯ ಸುಂದರ ವೃಂದಾವನವನ್ನು ರಚಿಸಲಾಗಿದೆ.

`ಪ್ರತಿ ವರ್ಷ ಒಂದಿಲ್ಲೊಂದು ವಿಶೇಷ ಪ್ರದರ್ಶನ ಹಮ್ಮಿಕೊಳ್ಳುವುದು ವಾಡಿಕೆ. ಕಳೆದ ವರ್ಷ ನಾವು ವೈಕುಂಠದ ದೃಶ್ಯಾವಳಿಯನ್ನು ಇಲ್ಲಿ ರೂಪಿಸಿದ್ದೆವು~ ಎನ್ನುತ್ತಾರೆ ನಮ್ಮವರು ಸಂಘಟನೆಯ ಉಪಾಧ್ಯಕ್ಷ ರಾಜಶೇಖರ್.

ಕೃಷಿ, ಪರಿಸರ ಪ್ರೀತಿ: ಗೊಂಬೆಗಳ ಪ್ರದರ್ಶನವನ್ನೇ ನೆಪವನ್ನಾಗಿಸಿ ಎಳೆಯರಲ್ಲಿ ಕೃಷಿ ಹಾಗೂ ಪರಿಸರ ಕಾಳಜಿ ಮೂಡಿಸುವ ಪ್ರಯತ್ನವೂ ಇ್ಲ್ಲಲಿ ನಡೆದಿದೆ. ಹಸಿರು ತುಂಬಿದ ಗದ್ದೆಗಳು, ಅದರಲ್ಲಿ ರೈತರು ಉಳುಮೆ ಮಾಡುವುದು, ರೈತ ಮಹಿಳೆಯರು ನಾಟಿ ನಡೆಸುವುದು, ಭತ್ತದ ತುಂಬಿದ ಚೀಲಗಳನ್ನು ರೈತರು ಬೆನ್ನ ಮೇಲೆ ಹೊತ್ತು ಸಾಗಿಸುವುದು ಮೊದಲಾದ ದೃಶ್ಯಗಳನ್ನೊಳಗೊಂಡ ಪುಟ್ಟ ಪ್ರತಿಕೃತಿಯನ್ನು ಇಲ್ಲಿ ರೂಪಿಸಲಾಗಿದೆ. ಇವುಗಳ ಪಕ್ಕದಲ್ಲೇ ವನ್ಯ ಜೀವಿಗಳ ಲೋಕವನ್ನು ಪರಿಚಯಿಸುವ ಪುಟ್ಟ ಪುಟ್ಟ ಬೊಂಬೆಗಳಿವೆ. ಅದರ ಬಳಿಯೇ ಮಹಿಷಾಸುರ ನೆಲೆಯಾದ ಚಾಮುಂಡಿ ಬೆಟ್ಟವನ್ನೂ ನಿರ್ಮಿಸಲಾಗಿದೆ. ಈ ದೃಶ್ಯಾವಳಿ ಎಳೆಯ ಮನಸುಗಳನ್ನು ಸೆಳೆಯುವುದರಲ್ಲಿ ಅಚ್ಚರಿ ಇಲ್ಲ.

ಪುರಾಣ ಸ್ಮರಣೆ... ಬೊಂಬೆಗಳ ಪ್ರದರ್ಶನದ ಪ್ರಮುಖ ಉದ್ದೇಶವೇ ಪುರಣ ಕಥೆಗಳ ಸ್ಮರಣೆ ಮಾಡುವುದು. ಮೈಸೂರು ಭಾಗಗಳಲ್ಲಿ ಪ್ರದರ್ಶನಕ್ಕಿಡುವ ಬಹುತೇಕ ಬೊಂಬೆಗಳು ಪುರಾಣ ಕಥೆಗಳಿಗೆ ಸಂಬಂಧಿಸಿದವು. ಇಲ್ಲಿಯೂ ಶ್ರೀಹರಿಯ ದಶಾವತಾರ, ಅಷ್ಟಲಕ್ಷ್ಮಿಯರು, ಶ್ರೀನಿವಾಸ ಕಲ್ಯಾಣ ಮುಂತಾದ ಪುರಾಣ ಪ್ರಸಂಗಗಳನ್ನು ಆಧರಿಸಿದ ಬೊಂಬೆಗಳಿವೆ.

`ಮಕ್ಕಳಿಗೆ ಬೊಂಬೆಗಳೆಂದರೆ ಪಂಚಪ್ರಾಣ. ಎಳೆಯರನ್ನು ಬೊಂಬೆ ಪ್ರದರ್ಶನ ಸಹಜವಾಗಿಯೇ ಆಕರ್ಷಿಸುತ್ತದೆ. ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದಲೇ ಈ ಬೊಂಬೆ ಪ್ರದರ್ಶನ ಮೈಸೂರು ಪ್ರಾಂತ್ಯದಲ್ಲಿ ಚಾಲ್ತಿಗೆ ಬಂದಿದೆ. ಬೊಂಬೆಗಳನ್ನು ಬಳಸಿ ಮಕ್ಕಳಲ್ಲಿ ಪುರಾಣ ಕಥಾನಕಗಳ ಬಗ್ಗೆ ಕುತೂಹಲ ಮೂಡಿಸಲಾಗುತ್ತದೆ. ಹಿಂದೆ ವಿಜಯ ನಗರ ಅರಸರ ಕಾಲದಲ್ಲೂ ಬೊಂಬೆ ಪ್ರದರ್ಶನ ನಡೆಯುತ್ತಿತ್ತು ಎಂಬ ಪ್ರತೀತಿ ಇದೆ~ ಎನ್ನುತ್ತಾರೆ ನಮ್ಮವರು ಸಂಘಟನೆಯ ಜೆ.ಕೆ.ಮೂರ್ತಿ.

ಪಟ್ಟದಬೊಂಬೆ: ಬೊಂಬೆ ಪ್ರದರ್ಶನಲ್ಲಿ ಪಟ್ಟದ ಬೊಂಬೆಗಳು ಇರಲೇ ಬೇಕು. ಸಾಧಾರಣವಾಗಿ ಗಂಡು ಹೆಣ್ಣೂ ಜೋಡಿ ಬೊಂಬೆಗಳೇ ಪಟ್ಟದ ಬೊಂಬೆಗಳಾಗಿರುತ್ತವೆ. ಶ್ರೀನಿವಾಸ ಕಲ್ಯಾಣ ದೃಶ್ಯಗಳನ್ನು ಸಾರುವ ಪಟ್ಟದ ಬೊಂಬೆಯನ್ನು ಈ ಬಾರಿಯ ಪ್ರದರ್ಶನದಲ್ಲಿ ಕಾಣಬಹುದು~ ಎಂದು ಅವರು ವಿವರಿಸಿದರು.

ಜನಜೀವನ ದರ್ಶನ: ಪುರಾಣ ಪ್ರಸಂಗಗಳನ್ನು ಸಾರುವ ಬೊಂಬೆಗಳ ನಡುವೆ ಜನಜೀವನವನ್ನು ಸಾರುವ ಬೊಂಬೆಗಳನ್ನೂ ಪ್ರದರ್ಶನಕ್ಕಿಡಲಾಗಿದೆ. ಅಜ್ಜ ಅಜ್ಜಿ ವ್ಯಾಪಾರ ನಡೆಸುತ್ತಿರುವುದು, ಸಾರಿಗೆ ಸಂಪರ್ಕದಲ್ಲಿ ಆದ ಬೆಳವಣಿಗೆಯನ್ನು ಸಾರುವ ಎತ್ತಿನ ಗಾಡಿ, ಮೋಟಾರು ವಾಹನಗಳು ಮೊದಲಾದ ಗೊಂಬೆಗಳನ್ನೂ ಇಲ್ಲಿ ಕಾಣಬಹುದು.

ಶಯನ ಬುದ್ಧ, ಈಶ್ವರ, ಹರಿ, ಲಕ್ಷ್ಮಿ, ಉಗ್ರ ನರಸಿಂಹ, ರಾಧಾಕೃಷ್ಣ ಮೊದಲಾದ ದೊಡ್ಡ ಗಾತ್ರದ ಬೊಂಬೆಗಳೂ ಕಣ್ಸೆಳೆಯುತ್ತವೆ. ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಆನೆಗಳೊಂದಿಗೆ ಸಾಗುವ ಮೈಸೂರು ದಸರಾದ ಅಂಬಾರಿ ಮೆರವಣಿಗೆಯ ಬೊಂಬೆಗಳೂ ಇಲ್ಲಿವೆ.

ಯೋಗಾಸನದ ವಿವಿಧ ಭಂಗಿಗಳು, ಭಾರತದ ಜಾನಪದ ನೃತ್ಯಪ್ರಕಾರಗಳು, ರಾಷ್ಟ್ರೀಯ ಹಬ್ಬಗಳನ್ನೂ ಪರಿಚಯಿಸುವ ಪ್ರಯತ್ನವನ್ನೂ ಈ ಬಾರಿಯ ಬೊಂಬೆ ಪ್ರದರ್ಶನದಲ್ಲಿ ಮಾಡಲಾಗಿದೆ.

`ಇಲ್ಲಿ ಪ್ರದರ್ಶನಕ್ಕಿಡುವ ಪ್ರತಿಯೊಂದು ಬೊಂಬೆಗಳನ್ನೂ ನಮ್ಮವರು ಸಂಘಟನೆಯ ಸದಸ್ಯರು ಮನೆಯಿಂದ ತರುತ್ತಾರೆ. ನಮ್ಮವರು ಬೊಂಬೆ ಪ್ರದರ್ಶನಕ್ಕಾಗಿಯೇ ಉತ್ತಮ ಬೊಂಬೆಗಳನ್ನು ಸಂಗ್ರಹಿಸುತ್ತಾರೆ. ಆ ಬೊಂಬೆಗಳನ್ನು ಇಲ್ಲಿಗೆ ತಂದು ಅಚ್ಚುಕಟ್ಟಾಗಿ ಜೋಡಿಸುವ ಕಾರ್ಯದಲ್ಲಿ ಸಂಘಟನೆಯ ಸದಸ್ಯರು ಶ್ರದ್ಧೆಯಿಂದ ಭಾಗವಹಿಸುತ್ತಾರೆ. ಈ ಬೊಂಬೆಗಳನ್ನು ಜೋಡಿಸುವುದರ ಹಿಂದೆ ವಾರಗಟ್ಟಲೆ ಶ್ರಮವಿದೆ.

ವಿಜಯದಶಮಿಯವರೆಗೂ ಈ ಬೊಂಬೆಗಳು ಪ್ರದರ್ಶನಗೊಳ್ಳಲಿವೆ~ ಎನ್ನುತ್ತಾರೆ ನಮ್ಮವರು ಸಂಘಟನೆಯ ಅಧ್ಯಕ್ಷ ಎಂ.ಎಸ್.ಗುರುರಾಜ್.
`ಈ ಬೊಂಬೆ ಪ್ರದರ್ಶನವವನ್ನು ಸ್ಥಳೀಯರೂ ವೀಕ್ಷಿಸುತ್ತಾರೆ. ತಮ್ಮ ಅಭಿಪ್ರಾಯವನ್ನೂ ನೀಡುತ್ತಾರೆ. ಈ ಕಾರ್ಯಕ್ರಮ ಸಾಂಸ್ಕೃತಿಕ ವಿನಿಮಯಕ್ಕೂ ಸಹಕಾರಿ~ ಎನ್ನುತ್ತಾರೆ ಅವರು.

ಈ ಬೊಂಬೆ ಪ್ರದರ್ಶನದ ಹಿಂದಿನ ಪೂರ್ವತಯಾರಿ ವಿಶೇಷ ತಲ್ಲೆನತೆಯನ್ನು ಬಯಸುತ್ತದೆ. ಮಕ್ಕಳಿಗಂತೂ ಬೊಂಬೆಗಳನ್ನು ಸಂಗ್ರಹಿಸುವುದು, ಅವುಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದೆಂದರೆ ಎಲ್ಲಿಲ್ಲದ ಆಸಕ್ತಿ.

ಪ್ರತಿಯೊಂದು ಬೊಂಬೆಯೂ ಮಕ್ಕಳ ಕಲ್ಪನಾ ಪ್ರಪಂಚದಲ್ಲಿ ರೋಚಕ ಕಥಾನಕವೊಂದನ್ನು ಮೂಡಿಸಬಲ್ಲುದು. ಬೊಂಬೆ ಪ್ರದರ್ಶನದಂತಹ ಸಂಪ್ರದಾಯ ಸೃಜನಶೀಲ ಅಭಿವ್ಯಕ್ತಿಯ ಬೀಜವನ್ನು ಎಳೆಯರ ಮನದಲ್ಲಿ ಬಿತ್ತಬಲ್ಲುದು. ಮೈಸೂರಿನಂತೆಯೇ ಕರಾವಳಿಯಲ್ಲೂ ದಸರಾ  ಭಿನ್ನ ರೂಪದಲ್ಲಿ ಮನೆಮಾತಾಗಿದೆ. ಅದೇ ರೀತಿ ಅಲ್ಲಿನ ಬೊಂಬೆ ಪ್ರದರ್ಶನ ಕಲೆಯೂ ಇಲ್ಲಿ ಮನೆ ಮನೆಗಳಲ್ಲಿ ರೂಢಿಗೆ ಬರಬಾರದೇಕೆ? `ಒಳಿತು~ ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ ಅದನ್ನು ನಾವು ಮನಸಾರೆ ಸ್ವೀಕರಿಸಬೇಕಲ್ಲವೇ....?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT