ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ನುಡಿತೇರಿಗೆ ನೀರಸ ಪ್ರತಿಕ್ರಿಯೆ

Last Updated 15 ಅಕ್ಟೋಬರ್ 2011, 11:00 IST
ಅಕ್ಷರ ಗಾತ್ರ

ಮಂಗಳೂರು: ಕನ್ನಡ ನುಡಿ, ಕಲೆಯನ್ನು ಗೌರವಿಸಿ ಪೋಷಿಸಬೇಕಾದ ಮಹಾನ್ ಸಂದೇಶದೊಂದಿಗೆ ನಗರಕ್ಕೆ ಗುರುವಾರ ಸಂಜೆ ಆಗಮಿಸಿದ ಕನ್ನಡ ನುಡಿತೇರಿನ ಜತೆಗಿದ್ದ ಕಲಾವಿದರಿಗೆ ಸೂಕ್ತ ಆದರಾತಿಥ್ಯ ನೀಡುವಲ್ಲಿ ನಗರ ವಿಫಲವಾಗುವ ಮೂಲಕ ರಾಜ್ಯದಲ್ಲಿ ಕನ್ನಡ ಭಾಷೆಗೆ ಒದಗಿರುವ ದೈನ್ಯ ಸ್ಥಿತಿಯೂ ಬಿಂಬಿತವಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಅವರು 200 ಕಲಾವಿದರಿಗೆ ಮಂಗಳೂರಿನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದೇ ಇದ್ದುದಕ್ಕೆ ಶುಕ್ರವಾರ ಬೆಳಿಗ್ಗೆ ಪುರಭವನದ ವೇದಿಕೆ ಮೇಲಿನಿಂದಲೇ ಅಸಮಾಧಾನ ವ್ಯಕ್ತಪಡಿಸಿದರು.

`ಕಲಾವಿದರಿಗೆ ಒಳ್ಳೆಯ ಊಟ ಕೊಟ್ಟಿದ್ದೀರಿ, ಉಳಿದುಕೊಳ್ಳಲು ಕದ್ರಿ ದೇವಸ್ಥಾನದಲ್ಲಿ ಹಾಲ್ ಕೂಡ ಕೊಟ್ಟಿದ್ದೀರಿ. ಆದರೆ ಬರೀ ಹಾಲ್ ವ್ಯವಸ್ಥೆ ಮಾಡಿದರೆ ಸಾಕೇ? ಮಲಗುವುದಕ್ಕೆ ಜಮಖಾನ, ದಿಂಬಿನ ವ್ಯವಸ್ಥೆ ಮಾಡಬೇಡವೇ? ಅವರ ಅಗತ್ಯ ನಿತ್ಯಕರ್ಮಗಳಿಗೆ ವ್ಯವಸ್ಥೆ ಬೇಡವೇ?~ ಎಂದು ಪ್ರಶ್ನಿಸಿದಾಗ ಸಭಾಂಗಣದಲ್ಲಿ ಮೌನವೇ ಉತ್ತರವಾಗಿತ್ತು.

ಮೊನಚು ಮಾತಿಗೆ ಹೆಸರಾದ ಚಂದ್ರು ಅವರು, ಅಷ್ಟಕ್ಕೇ ಸುಮ್ಮನಾಗಲಿಲ್ಲ. `ರಾಜ್ಯದ ವಿವಿಧೆಡೆಯಿಂದ ಈ ಕಲಾವಿದರನ್ನು ಕರೆದು ತಂದಿದ್ದೇನೆ. ಇವರೆಲ್ಲ ಅನಕ್ಷರಸ್ಥರು, ನಮ್ಮ ನಾಡಿನ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವವರು. ಬೀದಿಗಳಲ್ಲಿ ಇವರು ನರ್ತಿಸದೇ ಇದ್ದರೆ ನಾವು ಕುಣಿಯಲು ಸಾಧ್ಯವಿದೆಯೇ? ಇವರಿಗೆ ಕನಿಷ್ಠ ಸೌಕರ್ಯವನ್ನಾದರೂ ಕಲ್ಪಿಸುವುದು ಸಾಧ್ಯವಾಗಿಲ್ಲ. ಕನ್ನಡಕ್ಕೆ ಸಹ ಇದೇ ರೀತಿಯ ದೀನ ಸ್ಥಿತಿ ಇಂದು ಬಂದೊದಗಿದೆ~ ಎಂದು ಹೇಳುವ ಮೂಲಕ ವ್ಯವಸ್ಥೆಯ ಹೊಣೆ ಹೊತ್ತ ಜಿಲ್ಲಾಡಳಿತವನ್ನು ಚುಚ್ಚಿದರು.

ನಿರಭಿಮಾನಿಗಳು: ಕನ್ನಡ ಭಾಷೆ ವಿಚಾರದಲ್ಲಿ ರಾಜ್ಯದ ಜನತೆ `ನಿರಭಿಮಾನಿಗಳು~ ಎಂಬ ಪದವೇ ಸೂಕ್ತವಾಗುತ್ತದೆ. ಅದರಿಂದ ಭಾಷೆ ಬೆಳವಣಿಗೆಗೆ ಭಾರಿ ಹೊಡೆತ ಬಿದ್ದಿದೆ. ಪ್ರಾಥಮಿಕ ಶಿಕ್ಷಣದಲ್ಲಿ 5ನೇ ತರಗತಿವರೆಗೆ ಕಡ್ಡಾಯ ಕನ್ನಡ ಬೋಧನೆ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ಕನ್ನಡ ಪ್ರೀತಿ ಎಲ್ಲರಲ್ಲೂ ಬೆಳೆಯಲು ಸಾಧ್ಯ ಎಂದರು.

ಶಿಕ್ಷಣ-ಉದ್ಯೋಗ ವಿಚಾರದಲ್ಲಿ ರಾಷ್ಟ್ರೀಯ ನೀತಿ ರೂಪಿಸಬೇಕು. ಇದರಿಂದ ಹೊರ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ಹಾಗೂ ನಮ್ಮ ರಾಜ್ಯದಲ್ಲಿರುವ ಅನ್ಯ ಭಾಷಿಕರಿಗೆ ಅನ್ಯಾಯ ಆಗುವುದು ತಪ್ಪುತ್ತದೆ ಎಂದು ಅವರು ಗಮನ ಸೆಳೆದರು.

ಪ್ರಾಧಿಕಾರದ ಪ್ರಾದೇಶಿಕ ಸಂಚಾಲಕ ವಿಷ್ಣು ನಾಯ್ಕ ಮಾತನಾಡಿ, ಕರ್ನಾಟಕದಲ್ಲಿ ತಲೆ ಎತ್ತುವ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡಬೇಕು, ಕನಿಷ್ಠ `ಸಿ~ ಮತ್ತು `ಡಿ~ ದರ್ಜೆ ನೌಕರಿಯನ್ನಾದರೂ ರಾಜ್ಯದವರಿಗೇ ನೀಡಬೇಕೆಂಬ ನಿಯಮ ರೂಪಿಸಬೇಕು ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ದೆಹಲಿಯಲ್ಲಿ ಇತರೆ ಭಾಷೆ ಬಲ್ಲ ಅಧಿಕಾರಿಗಳು ಅಯಾ ಭಾಷೆಯಲ್ಲಿಯೇ ವ್ಯವಹರಿಸುತ್ತಿದ್ದರೆ, ಕನ್ನಡ ಬಲ್ಲ ಅಧಿಕಾರಿಗಳು ಮಾತ್ರ ಇಂಗ್ಲಿಷ್‌ನಲ್ಲಿಯೇ ವ್ಯವಹರಿಸುತ್ತಾರೆ. ಇದು ನಮ್ಮ ಭಾಷಾ ಅಭಿಮಾನಕ್ಕೆ ಸಂಕೇತ. ತಾವು ಮಾತ್ರ ಮುಂದೆಯೂ ಸಂಸತ್‌ನಲ್ಲಿ ಕನ್ನಡದಲ್ಲೇ ಮಾತನಾಡಲಿದ್ದು, ಕನ್ನಡ ಕಲಿಯುವ ಆಸಕ್ತಿ ಇರುವ ಇತರೆ ಸದಸ್ಯರಿಗೆ ಕಲಿಸಲು ಸಿದ್ಧ ಎಂದರು.

ವಿಧಾನಸಭಾ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯು.ಟಿ.ಖಾದರ್, ಜಿ.ಪಂ. ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಕ.ಸಾ.ಪ. ಜಿಲ್ಲಾ ಘಟಕ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ರಕ್ಷಣಾ ವೇದಿಕೆಯ ಅಣ್ಣಯ್ಯ ಕುಲಾಲ್, ಸಾಹಿತಿ ನಾ.ಡಿಸೋಜ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನಾ, ಪಾಲಿಕೆ ಆಯುಕ್ತ ಹರೀಶ್ ಕುಮಾರ್, ಉಪ ಮೇಯರ್ ಗೀತಾ ನಾಯಕ್, ಧನಲಕ್ಷ್ಮಿ ಜನಾರ್ದನ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT