ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಮಕ್ಕಳ ಭಿಕ್ಷಾಟನೆ ಹಾವಳಿ; ಕಾಣುತ್ತಿಲ್ಲ ಪರಿಹಾರ!

Last Updated 4 ಅಕ್ಟೋಬರ್ 2012, 6:05 IST
ಅಕ್ಷರ ಗಾತ್ರ

ಪಚ್ಚನಾಡಿಯ ಪುನರ್ವಸತಿ ಕೇಂದ್ರ ಭಿಕ್ಷುಕರ `ಸ್ವರ್ಗ~
ಮಂಗಳೂರು
: ನಗರದಲ್ಲಿ ಮಕ್ಕಳ ಭಿಕ್ಷಾಟನೆ ಹಾವಳಿ ತೀವ್ರಗೊಂಡಿದ್ದು, ಮಕ್ಕಳನ್ನು ಇತ್ತ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೂ ಸೇರಿಸಲಾಗದೆ, ಅತ್ತ ಪೋಷಕರ ಮನವೊಲಿಸಿ ಶಾಲೆಗೂ ಕಳುಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

`ಭಿಕ್ಷಾಟನೆಯಲ್ಲಿ ತೊಡಗಿರುವ 5ರಿಂದ 14 ವರ್ಷದ ಮಕ್ಕಳು ಹೆಚ್ಚಾಗಿ ದೂರದ ಊರುಗಳಿಂದ ವಲಸೆ ಬಂದವರು. ಅವರನ್ನು ಭಿಕ್ಷೆಗೆ ಕಳುಹಿಸಿದ ಪೋಷಕರೂ ಅವರ ಜತೆಗೆ ಇರುತ್ತಾರೆ. ಹೀಗಾಗಿ ಅವರನ್ನು ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವುದು ಸಾಧ್ಯವಾಗುತ್ತಿಲ್ಲ.
 
ಬಿಜೈ ಕಾಪಿಕಾಡ್‌ನಲ್ಲಿರುವ ವಸತಿ ಶಾಲೆಗೆ ಇವರನ್ನು ಕಳುಹಿಸುವುದಕ್ಕೆ ಅವಕಾಶ ಇದ್ದರೂ ಅದಕ್ಕೂ ಅವರು ಸಹಕರಿಸುತ್ತಿಲ್ಲ. ಹೀಗಾಗಿ ಸೂಕ್ತ ಪರಿಹಾರ ಕಾಣದೆ ಸಮಸ್ಯೆ ಕಗ್ಗಂಟಾಗಿಯೇ ಇದೆ~ ಎಂದು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯುಸಿ) ಅಧ್ಯಕ್ಷೆ ಆಶಾ ನಾಯಕ್ ಬುಧವಾರ `ಪ್ರಜಾವಾಣಿ~ಗೆ ತಿಳಿಸಿದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಾಡೊ ಅವರು ಸಹ ಮಕ್ಕಳ ಭಿಕ್ಷಾಟನೆ ವಿಚಾರದಲ್ಲಿ ಇಲಾಖೆ ಎದುರಿಸುತ್ತಿರುವ ಸಮಸ್ಯೆಯನ್ನು ಬಿಚ್ಚಿಟ್ಟರು. ವಾಹನಗಳ ನಡುವೆ ಅತ್ತಿಂದಿತ್ತ ಸಂಚರಿಸುವ ಅವರ ಜೀವನ ಬಹಳ ಅಪಾಯದಲ್ಲಿರುತ್ತದೆ. ಇದನ್ನು ಮನವರಿಕೆ ಮಾಡಲು ಹೊರಟರೂ ಅವರ ಪೋಷಕರು ಸರ್ಕಾರ ಒದಗಿಸುವ ಸೌಲಭ್ಯ ಪಡೆಯಲು ಬಯಸುತ್ತಿಲ್ಲ ಎಂದರು.

ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿಗಳು ನಗರದಲ್ಲಿ ಶಾಲೆಗೆ ಹೋಗದ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದೆ ಎಂದು ಹೇಳುತ್ತಿದ್ದರೂ, ಭಿಕ್ಷೆ ಎತ್ತುವ ಮಕ್ಕಳಿಗೆ ಮಾತ್ರ ಕೊರತೆ ಇಲ್ಲ. ದೂರದ ಬಿಹಾರ, ರಾಜಸ್ತಾನದಂತಹ ರಾಜ್ಯಗಳಿಂದ ಬಂದ ಅಲೆಮಾರಿ ಜನಾಂಗದವರ ಮಕ್ಕಳು ನಗರದ ಲಾಲ್‌ಬಾಗ್ ಸಹಿತ ಹಲವೆಡೆ ಕಾಣಿಸುತ್ತಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅಸಾಧ್ಯವಾಗಿದೆ.

ಭಿಕ್ಷುಕರ ಸ್ವರ್ಗ: ಸಮಾಜ ಕಲ್ಯಾಣ ಇಲಾಖೆಯ ಮೇಲ್ವಿಚಾರಣೆಯಲ್ಲಿ ಪಚ್ಚನಾಡಿಯಲ್ಲಿ ಎರಡು ಎಕರೆ ಪ್ರದೇಶದಲ್ಲಿ ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಭಿಕ್ಷುಕರ ಪುನರ್ವಸತಿ ಕೇಂದ್ರ ಎಷ್ಟು ಅಚ್ಚುಕಟ್ಟು, ಶುಚಿ, ಶುಭ್ರವಾಗಿದೆ ಎಂದರೆ ಗೊತ್ತು ಗುರಿ ಇಲ್ಲದ ಭಿಕ್ಷುಕರಿಗೆ ಇದೊಂದು `ಸ್ವರ್ಗ~ದಂತೆ ಕಂಡರೆ ಅಚ್ಚರಿ ಇಲ್ಲ. ಸದ್ಯ ಅಲ್ಲಿ 102 ಮಂದಿ ಇದ್ದಾರೆ. ಅವರಲ್ಲಿ 86 ಪುರುಷರು, 16 ಮಂದಿ ಮಹಿಳೆಯರು. ಭಿಕ್ಷಾಟನೆ ನಿರ್ಮೂಲನೆ ಕಾಯ್ದೆಯಂತೆ ಪ್ರತಿಯೊಂದು ಜಿಲ್ಲೆಯಲ್ಲೂ ಇಂತಹ ಕೇಂದ್ರ ಇರಬೇಕು.
 
ಆದರೆ ರಾಜ್ಯದ 14 ಜಿಲ್ಲೆಗಳಲ್ಲಿ ಮಾತ್ರ ಭಿಕ್ಷುಕರ ಪುನರ್ವಸತಿ ಕೇಂದ್ರವಿದೆ. ಈ ಪೈಕಿ ಮಂಗಳೂರು ಕೇಂದ್ರವೇ ಅತ್ಯಂತ ಸುಸಜ್ಜಿತ ಎಂಬ ಖ್ಯಾತಿ ಗಳಿಸಿಕೊಂಡಿದೆ. ಉಡುಪಿಯಲ್ಲಿ ಇಂತಹ ಕೇಂದ್ರ ಇಲ್ಲದ ಕಾರಣ ಉಡುಪಿ ನಗರದಲ್ಲಿ ಕಂಡುಬರುವ ಭಿಕ್ಷುಕರನ್ನು ತಂದು ಇಲ್ಲೇ ಕೂಡಿಹಾಕಲಾಗುತ್ತಿದೆ.


ಭಿಕ್ಷುಕರ ಪುನರ್ವಸತಿ ಕೇಂದ್ರದ ಅಧೀಕ್ಷಕಿ ಜಾನಕಿ, ವಾರ್ಡರ್ ಅಶೋಕ್, ಇಬ್ಬರು ಪುರುಷ, ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಹಾಗೂ ವಾಹನ ಚಾಲಕ ಇರುವ ಈ ಕೇಂದ್ರದಲ್ಲಿ ಸರ್ಕಾರದ ನಿಯಮದಂತೆ ಗರಿಷ್ಠ 3 ವರ್ಷ ಇರಬಹುದಾಗಿದ್ದು, ಗತಿ ಗೋತ್ರ ಇಲ್ಲದೆ ನಾಲ್ಕಾರು ವರ್ಷ ಇಲ್ಲೇ ಇರುವವರೂ ಇದ್ದಾರೆ. ಆವರಣದಲ್ಲಿ ಹೂ ಬೆಳೆಸಿ, ಗಿಡ ನೆಟ್ಟಿರು ಭಿಕ್ಷುಕರು, ಶೌಚಾಲಯ ಸಹಿತ ತಮ್ಮ ವಾಸಸ್ಥಳವನ್ನು ಅತ್ಯಂತ ಶುಚಿಯಾಗಿ ಇಟ್ಟುಕೊಂಡಿದ್ದಾರೆ. ದೂರದ ರಾಜಸ್ತಾನ, ತಮಿಳುನಾಡು, ಬಿಹಾರದ ಭಿಕ್ಷುಕರೂ ಇಲ್ಲಿದ್ದಾರೆ.

`ಈ ಕೇಂದ್ರದ ನಿರ್ವಹಣೆಗೆ ಸರ್ಕಾರದಿಂದ ವಾರ್ಷಿಕ 26 ಲಕ್ಷ ರೂಪಾಯಿ ಸಿಗುತ್ತದೆ. ರೋಗಿಗಳಲ್ಲದ, ಕೆಲಸ ಮಾಡಿ ಬದುಕಬಲ್ಲಂತಹ ಭಿಕ್ಷುಕರನ್ನು ಹಿಡಿದು ತಂದು ಇಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಇಲ್ಲಿಂದ ಹೊರಗೆ ಹೋದವರು ಮತ್ತೆ ಭಿಕ್ಷೆ ಎತ್ತಬಾರದು ಎಂಬುದೇ ನಮ್ಮ ಆಶಯ. ಆದರೆ ಪುಟ್ಟ ಕಂದಮ್ಮಗಳನ್ನು ಕಟ್ಟಿಕೊಂಡ ಮಹಿಳೆಯರನ್ನು ಹಿಡಿದು ಇಲ್ಲಿಗೆ ತಂದಾಗ ಮಕ್ಕಳಿಗೆ ಎದೆಹಾಲು ಕೊಡದೆ, ಔಷಧ ಕುಡಿಸದೆ ಸತಾಯಿಸುವ ಮಹಿಳೆಯರೇ ಅಧಿಕ ಇದ್ದಾರೆ.
 
ಹೀಗಾಗಿ ಅವರನ್ನು ಅನಿವಾರ್ಯವಾಗಿ ಬಿಡುಗಡೆ ಮಾಡಬೇಕಾಗುತ್ತದೆ. ನಗರದಲ್ಲಿ ಭಿಕ್ಷಾಟನೆ ನಿರ್ಮೂಲನೆಗೆ ತೊಡಕಾಗಿರುವುದು ಇಂತಹ ಅಂಶಗಳು~ ಎಂದು ಭಿಕ್ಷುಕರ ಪುನರ್ವಸತಿ ಕೇಂದ್ರದ ಸಿಬ್ಬಂದಿ ಮತ್ತು ಸಮಾಜ ಕಲ್ಯಾಣ ಅಧಿಕಾರಿ ತಿಳಿಸಿದರು.

ನಗರದಲ್ಲಿ ಪುರುಷ, ಮಹಿಳಾ ಭಿಕ್ಷುಕರಿಗೆ ಸೂಕ್ತ ಸೌಲಭ್ಯ ಇರುವಂತೆ, ಮಕ್ಕಳಿಗೆ ಸಹ ಸೌಲಭ್ಯ ಇದೆ. ಆದರೆ ಅದರ ಬಳಕೆಯ ಹಾದಿಯೇ ತಿಳಿಯುತ್ತಿಲ್ಲ ಎಂಬ ಆಶಾ ನಾಯಕ್ ಅವರ ಕಳವಳಕ್ಕೆ ಸೂಕ್ತ ಉತ್ತರ ಸಿಕ್ಕೀತೇ ಎಂಬ ನಿರೀಕ್ಷೆಯಲ್ಲಿ ನಗರ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT