ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜು: ವಿಮಾನ ಸಂಚಾರ ಏರುಪೇರು

Last Updated 26 ಡಿಸೆಂಬರ್ 2010, 8:30 IST
ಅಕ್ಷರ ಗಾತ್ರ

ಬೆಂಗಳೂರು: ಮಂಜು ಕವಿದ ವಾತಾವರಣದಿಂದಾಗಿ ಶನಿವಾರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್) ಇಳಿಯುವ ಹಾಗೂ ಹಾರಾಟ ಆರಂಭಿಸುವ ವಿಮಾನಗಳ ವೇಳಾಪಟ್ಟಿಯಲ್ಲಿ ಏರುಪೇರಾಯಿತು. ‘ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ 42 ವಿಮಾನಗಳು ಸುಮಾರು 45 ನಿಮಿಷಗಳವರೆಗೆ ತಡವಾಗಿ ಇಳಿದವು. ಹಾಗೆಯೇ 79 ವಿಮಾನಗಳು 45 ನಿಮಿಷ ತಡವಾಗಿ ಇಲ್ಲಿಂದ ಹಾರಾಟ ಆರಂಭಿಸಿದವು’ ಎಂದು ವಿಮಾನಗಳ ಹಾರಾಟದ ಬಗ್ಗೆ ಮಾಹಿತಿ ನೀಡುವ ಫ್ಲೈಟ್‌ಸ್ಟಾಟ್ಸ್.ಕಾಮ್ ಹೇಳಿದೆ.

ಲಂಡನ್‌ನ ಹೀಥ್ರೂ ವಿಮಾನನಿಲ್ದಾಣದಿಂದ ಬಂದ ಬ್ರಿಟಿಷ್ ಏರ್‌ವೇಸ್‌ನ ವಿಮಾನವು ಬೆಳಿಗ್ಗೆ 4.30ಕ್ಕೆ ಬಿಐಎಎಲ್‌ಗೆ ಇಳಿಯಬೇಕಿತ್ತು. ಆದರೆ ದಟ್ಟ ಮಂಜು ಕವಿದಿದ್ದರಿಂದ ಇಳಿಯಲಾಗದೆ ಚೆನ್ನೈಗೆ ಪ್ರಯಾಣ ಬೆಳೆಸಿತು. ಅಲ್ಲಿ ಇಂಧನ ತುಂಬಿಸಿಕೊಂಡು ವಾಪಸ್ ಬಿಐಎಎಲ್‌ಗೆ ಬಂದಿಳಿದಾಗ ಬೆಳಿಗ್ಗೆ 10 ಗಂಟೆಯಾಗಿತ್ತು. ಈ ವಿಮಾನದಲ್ಲಿ ಪ್ರಯಾಣಿಸಿದ್ದ ಶಿಲ್ಪಾ ಕಲೂತಿ ಮಾತನಾಡಿ, ‘ಬೆಂಗಳೂರಿಗೆ ಬಂದಿಳಿಯಲು ಐದೂವರೆ ತಾಸು ವಿಳಂಬವಾಗಿರುವುದು ತುಂಬಾ ಬೇಸರ ಉಂಟಾಗಿದೆ’ ಎಂದು ಪ್ರತಿಕ್ರಿಯೆ ನೀಡಿದರು.
 
ಅವರ ಜತೆ ಅವರ ಒಂದು ವರ್ಷದ ಮಗು ಕೂಡ ಪ್ರಯಾಣಿಸಿತ್ತು.ರನ್‌ವೇ ಸ್ಪಷ್ಟವಾಗಿ  ಕಾಣದಷ್ಟು ಮಂಜು ದಟ್ಟವಾಗಿದ್ದರ ಪರಿಣಾಮ ದೇಶೀಯ ವಿಮಾನಗಳ ಹಾರಾಟದಲ್ಲೂ ವ್ಯತ್ಯಯ ಕಂಡುಬಂದಿತು. ಬೆಳಿಗ್ಗೆ 10 ಗಂಟೆಗೆ ಬರಬೇಕಿದ್ದ ತಿರುವನಂತಪುರದ ವಿಮಾನವು ಮಧ್ಯಾಹ್ನ 12 ಗಂಟೆಗೆ ಬಂದಿಳಿಯಿತು.ಇದರಂತೆ ಪುಣೆಯ ವಿಮಾನವು ಸಹ ಮೂರು ತಾಸು ವಿಳಂಬವಾಗಿ ಭೂಸ್ಪರ್ಶಿಸಿತು. ನಗರದಿಂದ ಕೊಯಮತ್ತೂರು, ಚೆನ್ನೈ. ಭುವನೇಶ್ವರಕ್ಕೆ ಹೊರಡಬೇಕಿದ್ದ ವಿಮಾನಗಳ ವೇಳೆಯಲ್ಲೂ ಏರುಪೇರಾಯಿತು.

 ಪ್ರಯಾಣಿಕರಲ್ಲಿ ಮನವಿ: ‘ವಿಮಾನಗಳ ಹಾರಾಟದಲ್ಲಿ ವಿಳಂಬವಾದರೆ ಆ ಸ್ಥಿತಿಯನ್ನು ಎದುರಿಸಲು ಪ್ರಯಾಣಿಕರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು’ ಎಂದು ಬಿಐಎಎಲ್ ತನ್ನ ವೆಬ್‌ಸೈಟ್‌ನಲ್ಲಿ ಮನವಿ ಮಾಡಿಕೊಂಡಿದೆ. ಅಗತ್ಯವಾದ ಔಷಧಿಗಳು, ಚಿಕ್ಕ ಮಕ್ಕಳ ಆಹಾರ ಪದಾರ್ಥಗಳು ಹಾಗೂ ಇತರೆ ಅಗತ್ಯ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರು ತಮ್ಮೊಂದಿಗೆ ತರಬೇಕೆಂದು ಅದು ಕೇಳಿಕೊಂಡಿದೆ. ವಿಮಾನಗಳು ಬಂದಿಳಿಯುವ ಮತ್ತು ಹಾರಾಟ ಬಗ್ಗೆ ಮಾಹಿತಿಗೆ ಬಿಐಎಎಲ್ ಕಾಲ್ ಸೆಂಟರ್ ಸಂಖ್ಯೆಗಳಲ್ಲದೇ, 66782255/ 66782251 ಸಂಖ್ಯೆಗೆ ದೂರವಾಣಿ ಕರೆಗಳನ್ನು ಮಾಡಬಹುದು. ಎಂದು ಬಿಐಎಎಲ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT