ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜುಗಡ್ಡೆ ಉತ್ಪಾದನಾ ಘಟಕ ನನೆಗುದಿಗೆ

Last Updated 5 ಆಗಸ್ಟ್ 2013, 6:31 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಬೈತಖೋಲ್ ಮೀನುಗಾರಿಕಾ ಬಂದರು ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಂಜುಗಡ್ಡೆ ಉತ್ಪಾದನಾ ಘಟಕ (ಐಸ್ ಪ್ಲಾಂಟ್) ನನೆಗುದಿಗೆ ಬಿದ್ದಿದು, ಕಾಮಗಾರಿ ಆರಂಭವಾಗಿ ಸುಮಾರು ಮೂರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ.

ಘಟಕದ ನಿರ್ಮಾಣ ಕಾರ್ಯ ವಿಳಂಬದಿಂದ ನೂರಾರು ಬಡ ಮೀನುಗಾರರು ಮೀನುಗಳನ್ನು ಕೆಡದಂತೆ ಸಂರಕ್ಷಿಸಲು ಖಾಸಗಿ ಮಂಜುಗಡ್ಡೆ ಘಟಕದ ಮೊರೆ ಹೋಗಬೇಕಾಗಿದೆ. ಇದರಿಂದ ನಿಗಮದಿಂದ ಕೊಳ್ಳುತ್ತಿದ್ದ ಬೆಲೆಗಿಂತ ಹೆಚ್ಚು ಬೆಲೆ ನೀಡಿ ಖರೀದಿಸಬೇಕಾದ ಅನಿವಾರ್ಯತೆ ಬಂದಿದೆ.

ನೂತನ ಘಟಕ ನಿರ್ಮಾಣವಾಗುತ್ತಿರುವ ಜಾಗದಲ್ಲಿ ಹಿಂದೆ ಹಳೆ ಕಟ್ಟಡವಿತ್ತು. ಅದು ದುಃಸ್ಥಿತಿಯಲ್ಲಿದುದ್ದರಿಂದ ಕಳೆದ 4 ವರ್ಷಗಳ ಹಿಂದೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 1.20 ಕೋಟಿ ವೆಚ್ಚದಲ್ಲಿ ನೂತನ ಘಟಕ ಸ್ಥಾಪಿಸಲು ಅನುಮೋದನೆ ಸಿಕ್ಕಿತು. ಅಂದಿನ ಮೀನುಗಾರಿಕೆ ಸಚಿವರಾಗಿದ್ದ ಆನಂದ ಅಸ್ನೋಟಿಕರ್ ಈ ಕಾಮಗಾರಿಗೆ ಅಡಿಗಲ್ಲು ಹಾಕಿದ್ದರು. ಆದರೆ, ಈಗ ಹಲವು ಕಾರಣಗಳಿಂದ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಇದೇ ಜಾಗದಲ್ಲಿ ಇಂಡೋ-ನಾರ್ವೆ ಯೋಜನೆಯಡಿ 1960ರಲ್ಲಿ 10 ಟನ್ ಸಾಮರ್ಥ್ಯದ ಮಂಜುಗಡ್ಡೆ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿತ್ತು. ಅಲ್ಲದೇ ಈ ಜಾಗದಲ್ಲಿ ಮೀನು ಸಂಗ್ರಹಣಾ ಘಟಕ ಹಾಗೂ ದೋಣಿ ನಿರ್ಮಾಣ ಕಾರ್ಯವೂ ಸಹ ನಡೆಯುತ್ತಿತ್ತು. ಇದರ ನಿರ್ವಹಣೆಯನ್ನು 1970ರಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಕೆಎಫ್‌ಡಿಸಿ) ವಹಿಸಿಕೊಡಲಾಯಿತು. ಆದರೆ, ಘಟಕದೊಳಗಿನ ಯಂತ್ರಗಳು ಕಾರ್ಯಕ್ಷಮತೆ ಕಳೆದುಕೊಂಡಿದ್ದರಿಂದ 1995ರಲ್ಲಿ ಈ ಘಟಕವನ್ನು ಮುಚ್ಚಲಾಯಿತು. 

ಹೊಸ ಕಟ್ಟಡದಲ್ಲಿ 10 ಟನ್ ಮಂಜುಗಡ್ಡೆ ಉತ್ಪಾದನಾ ಸಾಮರ್ಥ್ಯದ ಎರಡು ಘಟಕಗಳನ್ನು ಸ್ಥಾಪಿಸುವ ಯೋಜನೆ ಹೊಂದಿದೆ. ಈ ಕಟ್ಟಡದಲ್ಲಿ ಮಂಜುಗಡ್ಡೆ ಉತ್ಪಾದನೆಗೆ ಅಗತ್ಯವಾದ ಕೆಲ ಯಂತ್ರೋಪಕರಣಗಳನ್ನು ಅಳವಡಿಸಲಾಗಿದ್ದು, ಅವುಗಳು ತುಕ್ಕು ಹಿಡಿಯುತ್ತಿವೆ. 

ಸಂದಾಯವಾಗದ ಬಾಕಿ ಹಣ:
`1999-2007ರವರೆಗೆ ಕೆಎಫ್‌ಡಿಸಿ ನಷ್ಟದಲ್ಲಿದ್ದಾಗ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ 14 ಮಂದಿ ಕೆಳದರ್ಜೆ ನೌಕರರು ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದೆವು. ಆದರೆ, ನಿಗಮದಿಂದ ಬರಬೇಕಾದ ಶೇ 36ರಷ್ಟು ತುಟ್ಟಿಭತ್ಯೆ ನೀಡಿಲ್ಲ. ಸರ್ಕಾರದಿಂದ ಹಣ ಬಂದಾಗ ಮಾತ್ರ ಹಣ ನೀಡುತ್ತೇವೆ ಎಂದು ನಿಗಮದವರು ಹೇಳುತ್ತಿದ್ದಾರೆ. ಆದರೆ, ಕೆಲಸವೂ ಇಲ್ಲದೇ, ಹಣವೂ ಇಲ್ಲದೇ ಜೀವನ ನಿರ್ವಹಣೆ ದುಸ್ತರವಾಗಿದೆ' ಎಂದು ರಮೇಶ್ ಬಿಣಗೇಕರ್ `ಪ್ರಜಾವಾಣಿ'ಗೆ ತಿಳಿಸಿದರು. 

`ನಿಗಮ ನಷ್ಟದಲ್ಲಿದ್ದರಿಂದ ಸ್ವಯಂ ನಿವೃತ್ತಿಗೊಂಡ ಕಾರ್ಮಿಕರಿಗೆ ಹಣ ಭರಿಸಲು ಸಾಧ್ಯವಾಗಿರಲಿಲ್ಲ. ಈಗ ನಿಮಗದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದ್ದು, ಕಂತುಗಳ ರೂಪದಲ್ಲಿ ಕಾರ್ಮಿಕರಿಗೆ ಹಣ ಸಂದಾಯ ಮಾಡಲಾಗುವುದು' ಎಂದು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT