ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಟಪದಿಂದ ಮದುಮಕ್ಕಳು ಪರಾರಿ

Last Updated 14 ಜೂನ್ 2011, 7:10 IST
ಅಕ್ಷರ ಗಾತ್ರ

ಕೂಡಲಸಂಗಮ: ಬಂಧು ಮಿತ್ರರ ಸಮ್ಮುಖದಲ್ಲಿ ಹಸಿಮಣೆ ಏರಿ ತಾಳಿ ಕಟ್ಟಲು ಸಿದ್ಧತೆ ನಡೆದಿತ್ತು. ಇನ್ನೇನು ತಾಳಿ ಕಟ್ಟಬೇಕು ಎನ್ನುವ ಹೊತ್ತಿಗೆ ಏಕಾಏಕಿ ಚಿತ್ರಣವೇ ಬದಲಾಯಿತು. ಮದುಮಕ್ಕಳೇ ಹಸಿಮಣೆಯಿಂದ ನಾಪತ್ತೆ. ನಂತರ ಮಾತಿನ ಚಕಮಕಿ. ಮದುಮಕ್ಕಳ ಹುಡುಕಾಟ...

ಈ ಸಿನಿಮೀಯ ಘಟನೆ ನಡೆದಿದ್ದು ಇಲ್ಲಿಯ ಸಂಗಮೇಶ್ವರ ದೇವಾಲಯದ ಆವರಣದಲ್ಲಿ. ಮದುವೆ ಮಂಟಪಕ್ಕೆ ಮದುಮಗನ ಮೊದಲ ಪತ್ನಿ ದಿಢೀರ್ ಪ್ರವೇಶ ಪಡೆದಿದ್ದೇ ಇದಕ್ಕೆಲ್ಲ ಕಾರಣ.

ಬಾಗಲಕೋಟೆ ಜಿಲ್ಲೆಯ ಮನ್ನಿಕಟ್ಟಿಯ ರವಿ ಅಲಿಯಾಸ್ ಶಿವಕುಮಾರ ಜುಮನಾಳ ಹಾಗೂ ರೂಪಾ (ಪ್ರಭಾವತಿ ) ಮದುವೆಗೆ ಸಜ್ಜಾಗಿ ಕುಳಿತಿದ್ದರು. ಅಷ್ಟರೊಳಗೆ ರವಿಯ ಮೊದಲ ಪತ್ನಿ ಚನ್ನಬಸವ್ವ ಮಧ್ಯ ಪ್ರವೇಶಿಸಿದರು. ಮದುವೆ ನಿಂತಿತು. ಮದುಮಕ್ಕಳು ಪರಾರಿಯಾದರು.

ರವಿ 200ರ ಡಿಸೆಂಬರ್ 16ರಂದು ಚನ್ನಬಸವ್ವ ಜೊತೆ ವಿಜಾಪುರದ ಉಪನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದ. ಇಬ್ಬರೂ 5 ವರ್ಷ ಸಂಸಾರ ನಡೆಸಿದ್ದರು. ದುಡಿಯಲು ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದ ರವಿ, ಇದುವರೆಗೆ ನಾಪತ್ತೆಯಾಗಿದ್ದ.

ಈ ನಡುವೆ ಆತ ಹುಬ್ಬಳ್ಳಿಯ ಚಂದ್ರಶೇಖರ ಬೋರಣ್ಣನವರ ಅವರಿಗೆ ತಾನೊಬ್ಬ ಎಂಜನಿಯರ್, ಮನ್ನಿಕಟ್ಟಿಯಲ್ಲಿ 40 ಎಕರೆ ಜಮೀನಿದೆ ಎಂದು ಹೇಳಿ ಅವರ ಪುತ್ರಿ ರೂಪಾಳನ್ನು ವರಿಸಿದ್ದರು.

ಕೂಡಲಸಂಗಮದಲ್ಲಿ ಮದುವೆಯಾಗಲು ಮುಂದಾಗಿದ್ದ. ಅಷ್ಟರೊಳಗೆ ವಿಷಯ ತಿಳಿದ ಚನ್ನಬಸವ್ವ, ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ತನ್ನ ಮದುವೆ ವಿಚಾರ ತಿಳಿಸಿ, ರವಿಯ ಮತ್ತೊಂದು ಮದುವೆಯ ಆಸೆಗೆ ಅಡ್ಡಿಯಾದರು.

ಮದುವೆಗೆ ಬಂದಿದ್ದ ಜನರು ಪ್ರವಾಸಿ ಮಂದಿರದಲ್ಲಿ ಊಟ ಮಾಡಿ ವಾಪಸ್ಸಾದರು. ಇತ್ತ ಚನ್ನಬಸವ್ವ ಹಾಗೂ ರವಿ ಕುಟುಂಬದ ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಚನ್ನಬಸವ್ವ, ತನ್ನ ಲಗ್ನ ಪತ್ರ, ದಾಖಲೆಗಳನ್ನು ತೋರಿಸಿ, ತನಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದರು. ಸರಕಾರಿ ಉದ್ಯೋಗಿ ರೂಪಾಳ ಪಾಲಕರು, ರವಿ ಸುಳ್ಳು ಹೇಳಿದ್ದಾನೆ. ಮೊದಲನೆ ಮದುವೆಯ ವಿಚಾರವನ್ನು ಮುಚ್ಚಿಟ್ಟು ವಂಚಿಸಿದ್ದಾನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT