ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಟೇಸ್ವಾಮಿಯ ಈ ಪರಿಯ ಲಯ

ರಂಗಭೂಮಿ
Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಪ್ರಯೋಗರಂಗ ತಂಡವು ರವೀಂದ್ರ ಕಲಾಕ್ಷೇತ್ರಕ್ಕೆ ೫೦ ತುಂಬಿದ ಸಂದರ್ಭದಲ್ಲಿ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನಾಟಕೋತ್ಸವದಲ್ಲಿ ಸುರೇಶ ಆನಗಳ್ಳಿ ನಿರ್ದೇಶನದ ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕವನ್ನು ಪ್ರದರ್ಶಿಸಿತು. ಇಪ್ಪತ್ತೇಳು ವರ್ಷಗಳಷ್ಟು ಹಳೆಯದಾದ ಈ ನಾಟಕ, ದೇಶದಾದ್ಯಂತ ಸುಮಾರು ೩೫೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ.

ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಲೆಮಹದೇಶ್ವರ ಮುಂತಾದವರು ನಮ್ಮ ಜಾನಪದ ಪರಂಪರೆಯ ಸಿದ್ಧಪುರುಷರು, ಅವಧೂತರು. ಮಂಟೇಸ್ವಾಮಿ ಕಾವ್ಯ, ಸಿದ್ಧಪ್ಪಾಜಿ ಕಾವ್ಯ, ಮಲೆಮಹದೇಶ್ವರ ಕಾವ್ಯ ಇವುಗಳು ಮೈಸೂರು ಸುತ್ತಮುತ್ತಲಿನ ಜಾನಪದೀಯರಲ್ಲಿ ಹೃದ್ಗತವಾಗಿರುವ ಮೌಖಿಕ ಪರಂಪರೆಯ ಮಹಾಕಾವ್ಯಗಳು. ಮಂಟೇಸ್ವಾಮಿ ಕಾವ್ಯದಲ್ಲಿ ಮಂಟೇಸ್ವಾಮಿಯ ಕಾಲಜ್ಞಾನ, ಅವನ ಪವಾಡಗಳು, ಮಾಡಿದ ಕೆಲಸಗಳು, ಕಲಿ ಪ್ರವೇಶವಾಗುವವರೆಗಿನ ಅವನ ತಿರುಗಾಟಗಳು ಚಿತ್ರಿತಗೊಂಡಿವೆ.

ರಾಚಪ್ಪಾಜಿ ಅವನ ಶಿಷ್ಯ, ಮತ್ತೊಬ್ಬ ಕೆಂಪಚಾರಿ. ಅವನೇ ಮುಂದೆ ಸಿದ್ದಪ್ಪಾಜಿ ಎಂದು ಪ್ರಸಿದ್ಧನಾಗುತ್ತಾನೆ. ಕವಿ ಎಚ್.ಎಸ್.ಶಿವಪ್ರಕಾಶರು ಮಂಟೇಸ್ವಾಮಿ ಕಾವ್ಯವನ್ನು ಆಧಾರವಾಗಿಟ್ಟು ಕೊಂಡು ಜನಪದೀಯ ಮಾದರಿಯಲ್ಲೇ ನಾಟಕವನ್ನು ಹೊಸೆದಿದ್ದಾರೆ. ನೀಲಗಾರರು ‘ಸಿದ್ದಯ್ಯಾ ಸ್ವಾಮಿ ಬನ್ನಿ ಮಂಟೇದಾ ಲಿಂಗಯ್ಯಾ ನೀವೆ ಬನ್ನಿ’ ಎಂದು ಪ್ರಾರಂಭವಾವಾಗುವ ಮಂಟೇಸ್ವಾಮಿ ಕಾವ್ಯದ ಮೂಲಧಾಟಿಯಲ್ಲಿ ಹಾಡುತ್ತಾ ನೀಲಗಾರರರಾಗಿ ಕಥಾ ನಿರೂಪಣೆ ಮಾಡುತ್ತಾರೆ.

ಮಂಟೇಸ್ವಾಮಿಗೆ ಶಿಷ್ಟ ಪರಂಪರೆಯನ್ನು, ಆಗಿನ ಕಾಲದ ಶರಣ ಲಿಂಗ, ಇತ್ಯಾದಿ ಷಟ್‌ಸ್ಥಲ ನಿಯಮವನ್ನು ಮೀರುವ, ಆ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಬೇಕೆಂದು ಹುಟ್ಟಿಕೊಂಡ ವೀರಶೈವ ಧರ್ಮಕ್ಕೆ ಲಿಂಗ, ರುದ್ರಾಕ್ಷಿಗಳೇ ಅದರ ಮಿತಿಗಳಾದಾಗ, ಅದನ್ನು ಬಸವಣ್ಣನ ಎದುರಿನಲ್ಲೇ ಗೇಲಿ ಮಾಡುವ, ಶರಣರ ಲಿಂಗವನ್ನು ತನ್ನ ಹೆಂಡದ ಕಮಂಡಲುವಿನಲ್ಲಿ ಹಾಕಿ ಹುಳಿಮುಟ್ಟಿದ ಲಿಂಗಕ್ಕಿಂತ ಹುಳಿಮುಟ್ಟದ ಲಿಂಗವ ಮುಟ್ಟಿ ಐಕ್ಯವಾಗಿ ಎಂದು ಬಸವಣ್ಣರಿಗೇ ಹೇಳುವ ಮಂಟೇಸ್ವಾಮಿ, ‘ಕಲ್ಯಾಣ ಕರಗೋಗ್ತದೆ, ಮಹಾಮನೆ ಮಣ್ಣಾಗ್ತದೆ’ ಎಂದು ಕಾಲಜ್ಞಾನ ನುಡಿಯುತ್ತಾನೆ.

ಅನುಭವ ಮಂಟಪಕ್ಕೆ ಬರುವ ಮಯಾಕೋಲಾಹಲ ಅಲ್ಲಮಪ್ರಭು, ಜನಪದರಲ್ಲಿ ಮಂಟೇಸ್ವಾಮಿಯಾಗಿರಬಹುದೇ ಎಂಬ ವಾದವೂ ಇದೆ. ಯಾಕೆಂದರೆ ಎಲ್ಲೂ ನಿಲ್ಲದ ಅಲ್ಲಮನಿಗೂ, ಅವನ ತೀಕ್ಷ್ಣ ಅನುಭಾವಕ್ಕೂ, ಮಂಟೇಸ್ವಾಮಿಗೂ ಸಾಮ್ಯಗಳಿವೆ. ಇಂಥ ಮಂಟೇಸ್ವಾಮಿ, ಉಲ್ಲಂಘನೆಯ ಪ್ರವೃತ್ತಿಯವನು. ಅವಧೂತತನದ ಮುಖ್ಯ ಮಾದರಿ ಎಂದರೆ ಸಿದ್ಧ ಮಾದರಿಯ ಉಲ್ಲಂಘನೆ. ಅದಕ್ಕೆ ನಾವು ಹೀನವೆನ್ನುವ ತಿಪ್ಪೆಗುಂಡಿಯಲ್ಲಿ ಹೊರಳಾಡುತ್ತಾನೆ, ಕಾಡಿನಲ್ಲಿ ಮರಗಳಿಂದ ಹಣ್ಣನ್ನು ಬೇಡುತ್ತಾನೆ. ಲಿಂಗದ ಬದಲು ಸುರೆಗಡಿಗೆಯನ್ನು ಕೊರಳಿಗೆ ಕಟ್ಟಿ, ಹೆಂಡ ಕುಡಿಯುತ್ತಾ, ಭಂಗಿ ಸೇವಿಸುತ್ತಾನೆ.

ನಾಟಕದ ಕಥೆ ಮುಖ್ಯವಾಗಿ ಅವನ ಪವಾಡಗಳ ನೆಲೆಯಲ್ಲೇ ಸಾಗುತ್ತದೆ. ಮೊದಲಿಗೆ ಕಲ್ಲಿನ ಕೋಳಿ ಕೂಗಿಸಿ ಬಸವಣ್ಣ-–ನೀಲಮ್ಮರಿಗೆ ದರ್ಶನ ಕೊಟ್ಟು, ರಾಚಪ್ಪಾಜಿಯನ್ನು ಶಿಷ್ಯನನ್ನಾಗಿ ಪಡೆದು, ಕೆಂಪಚಾರಿಯಿಂದ ಭಂಗಿ ಸೇದಲು ಕೆಂಡಭಿಕ್ಷೆ ಬೇಡಿ, ಅವನಿಗೆ ಮತ್ತು ಬರುವಂತೆ ಮಾಡಿ, ಕಾಳಿಂಗನ ಗುಹೆಗೆ ತಳ್ಳುತ್ತಾನೆ. ಅವನನ್ನು ಘನನೀಲಿ ಸಿದ್ದಪ್ಪಾಜಿಯನ್ನಾಗಿಸಿ, ಕಲಿ ಎದುರುಗೊಂಡಾಗ, ಅವನನ್ನು ತಡೆಯುತ್ತಾನೆ.

ಪಾತಾಳದಲ್ಲಿ ಕುಳಿತು ಅವನ ದುಷ್ಕೃತ್ಯ ತಪ್ಪಿಸಲು ಪ್ರಯತ್ನಿಸುವ ಮಂಟೇಸ್ವಾಮಿ ತನ್ನ ಶಿಷ್ಯ ಸಿದ್ಧಪ್ಪಾಜಿಯನ್ನು ಪಂಚಾಳರಲ್ಲಿ ಕಬ್ಬಿಣದ ಭಿಕ್ಷೆಗೆ ಕಳುಹಿಸುತ್ತಾನೆ. ಅಲ್ಲಿ ಧೂರ್ತ ಪಂಚಾಳರನ್ನು ಮಾರಿಗೆ ತಿನ್ನಿಸುವ ಸಿದ್ಧಪ್ಪಾಜಿ, ಕಬ್ಬಿಣ ತಂದು ಪಾತಾಳ ಗುಹೆ ತೋಡಿದಾಗ, ತನ್ನ ಸ್ಥಾನವನ್ನು ಘನನೀಲಿ ಸಿದ್ಧಪ್ಪಾಜಿಗೆ ನೀಡಿ ಪಾತಾಳ ಪ್ರವೇಶ ಮಾಡುವಲ್ಲಿಗೆ ಕಥೆ ಮುಗಿಯುತ್ತದೆ.

ಇಪ್ಪತ್ತೇಳು ವರ್ಷಗಳ ಹಿಂದೆ ಪ್ರಯೋಗಗೊಂಡ ನಾಟಕಕ್ಕೂ, ಪ್ರಸ್ತುತ ಪ್ರದರ್ಶನಕ್ಕೂ ಗುಣಮಟ್ಟದಲ್ಲಿ ವ್ಯತ್ಯಯವಾಗದಂತೆ ಕಾಯ್ದುಕೊಳ್ಳುವುದು ಸ್ವಲ್ಪ ಕಠಿಣವಾದ ಕೆಲಸವೇ. ಕೆಲವು ಪಾತ್ರಗಳನ್ನು ಹೊಸಬರು ನಿರ್ವಹಿಸಿದ್ದರೂ, ಬಹುತೇಕ ಹಳೆಯ ನಟ–ನಟಿಯರೇ ನಟಿಸುತ್ತಾ ಬರುತ್ತಿದ್ದಾರೆ. ೨೭ ವರ್ಷಗಳಿಂದ ಈ ಪಾತ್ರಗಳಿಗೆ ಜೀವತುಂಬಿದವರೂ ಅವರಲ್ಲಿದ್ದಾರೆ. ಆದರೆ, ವಯೋಮಾನದ ತೊಂದರೆ ಇಡೀ ನಾಟಕ ಕಟ್ಟಿರುವ ಜನಪದ ಕುಣಿತದ ಮಾದರಿಗೆ ಸರಿಯಾಗಿ ಹೊಂದುವುದಿಲ್ಲ.

ಮೊದಲಿನಿಂದ ಕೊನೆಯವರೆಗೂ ಒಂದು ಮಾದರಿಯ ಕುಣಿತಕ್ಕೆ ಹೊಂದಿಕೆಯ ಸಮಸ್ಯೆ ಕಾಡುತ್ತದೆ. ಮೊದಲ ನಾಂದಿ ಗೀತೆಯಲ್ಲಿ ಶುರುವಾಗುವ ಕುಣಿತದ ಮಾದರಿ, ಮಂಟೇಸ್ವಾಮಿಯೂ ಸೇರಿದಂತೆ ಒಟ್ಟು ನಾಟಕದಾದ್ಯಂತ ಒಂದು ಏಕತಾನತೆಯಿಂದ ತಪ್ಪಿಸಿಕೊಳ್ಳಲು ಆಗಿಲ್ಲ. ಎಲ್ಲ ಮಾತುಗಳಿಗೂ ಬಳಸುವ ಆಂಗಿಕ ಅಭಿನಯ ರೀತಿ ಅಷ್ಟೇನೂ ಪರಿಣಾಮಕಾರಿಯಲ್ಲ.

ಸಂಗೀತದಲ್ಲಿ ವಾದ್ಯಗಳು, ದಮ್ಮಡಿ, ಶೃತಿ, ತಾಳ, ತಂಬೂರಿಗಳು, ಕಥಾ ನಿರೂಪಕರಾದ ನೀಲಗಾರರು, ಮಂಟೇಸ್ವಾಮಿ ಹಾಡುಗಳು ಮೂಲಧಾಟಿಯಲ್ಲೇ ಬಳಕೆಯಾಗಿವೆ, ಕೆಲವು ಕಡೆ ನಟರ ಮಾತನ್ನೂ ಮೀರಿದಾಗ, ದಮ್ಮಡಿಯ ಬಡಿತ ಸ್ವಲ್ಪ ಹೆಚ್ಚಾದಂತೆನಿಸುತ್ತದೆ. ಕಥೆಯನ್ನು ಹಾಡಿನಲ್ಲೇ ಮುಂದುವರಿಸುವ ಇವರದು ಲವಲವಿಕೆಯ ಸಹಜ ಅಭಿನಯ.

ನಾಟಕದ ತಂತ್ರಗಾರಿಕೆಯ ವಿಚಾರದಲ್ಲಿ ರಂಗದ ಮೇಲೆ ಬರುವ ಮಾರಿಯರು (ಮಾರಿ ಜಾತ್ರೆಯಲ್ಲಿ ಸಾಂಪ್ರದಾಯಿಕವಾಗಿ ಬಳಸುವ ಉತ್ಪ್ರೇಕ್ಷಿತ ಮುಖವರ್ಣಿಕೆಯ ಸೋಮಗಳು), ಕುದುರೆ, (ಕೀಲುಕುದುರೆ) ಮುಂತಾದವುಗಳಿಗೆ, ಅವುಗಳಿಗೆ ಬಳಸುವ ಗಾಢ ಬಣ್ಣದಿಂದಾಗಿ ಇಡೀ ನಾಟಕಕ್ಕೆ ಒಂದು ಶುದ್ಧ ದೇಸಿ ಲಯ ಪ್ರಾಪ್ತವಾಗಿಬಿಡುತ್ತದೆ. ನಾಟಕದ ಲಯದ ಸಮಸ್ಯೆಯ ಎಡರು ತೊಡರು,  ಮಾತೊಪ್ಪಿಸುವ ಕೆಲವು ನಟರು, ಆಂತರ್ಯದ ಬೆಂಕಿಯಿಲ್ಲದೆ ಸುಮ್ಮನೆ ರಂಗದ ಮೇಲೆ ನಿಂತಂತೆ ಕಾಣುತ್ತಾರೆ. ಕೆಲವು ಕಡೆ ಸುಮ್ಮನೆ ಚೀರಾಟವಾಗುತ್ತದೆ.

ರಂಗ ಸಜ್ಜಿಕೆಯಾಗಿ ಬಳಕೆಯಾಗಿರುವ ಒಂದು ಬಿಳಿ ಪರದೆಯ ಮೇಲೆ ಷಟ್‌ಸ್ಥಲದ ಚಿತ್ರಣ, ಷಟ್‌ಸ್ಥಲದ ಮೂಲಾರ್ಥಕ್ಕೆ ಬೇರೊಂದು ಅರ್ಥವಿವರಣೆ ನೀಡುವ ನಾಟಕದೊಟ್ಟಿಗೆ ಅದನ್ನು ಬಳಸಿರುವುದು ಸರಿಯಾಗಿ ಹೊಂದುತ್ತದೆ, ಭಕ್ತ, ಶರಣ, ಪ್ರಸಾದ, ಪ್ರಾಣಲಿಂಗಿ ಮಾಹೇಶ್ವರ ಮತ್ತು ಐಕ್ಯಸ್ಥಲಗಳ ಅರ್ಥ ಮಂಟೇಸ್ವಾಮಿಯಲ್ಲಿ ಹೇಗೆ ಬೇರೊಂದು ರೀತಿಯಲ್ಲಿ ಅರ್ಥ ಪಡೆದುಕೊಳ್ಳುತ್ತವೆ ಎಂಬುದಕ್ಕೆ ರಂಗಸಜ್ಜಿಕೆ ಒಂದು ಶಕ್ತಪ್ರತಿಮೆಯಾಗಿದೆ. ಇನ್ನು ಮಂಟೇಸ್ವಾಮಿಯ ಪಾತ್ರ ನಿರ್ಮಿತಿಯ ವಿಚಾರಕ್ಕೆ ಬರೋಣ.

ಆಂತರಿಕ ಸ್ವರೂಪದ ಪಾತ್ರ ನಿರ್ಮಿತಿ ಒಂದು ರೀತಿಯಾದರೆ, ಅದರ ಬಹಿರ್ ರೂಪಕ್ಕೆ ಆಂತರಿಕದ ವಿಚಕ್ಷಣೆಯನ್ನು ನೀಡುವುದು ಇನ್ನೊಂದು ರೀತಿ. ಉದಾ:- ಜನರ ಮನಸ್ಸಿನಲ್ಲಿ ಕೆಲವು ಚಿತ್ರಗಳು ಸಿದ್ಧ ಮಾದರಿಯಲ್ಲಿ ಅಚ್ಚೊತ್ತಿರುತ್ತವೆ. ಗಾಂಧಿ ಹೇಗಿರಬೇಕು? ಅಂಬೇಡ್ಕರ್ ಹೇಗಿರಬೇಕು, ಸೂಟುಧಾರಿ ಗಾಂಧಿ ರಂಗದ ಮೇಲೆ ಬಂದರೆ ಯಾರೂ ಒಪ್ಪಲಾರರು. ಅಂಬೇಡ್ಕರ್ ಗೌನು ತೊಟ್ಟು ಕೋಲು ಹಿಡಿದರೆ ಅವರನ್ನು ಒಪ್ಪುವುದು ಅಸಾಧ್ಯ. ಯಾಕೆಂದರೆ, ಜನರ ಮನಸ್ಸಿನಲ್ಲಿ ಅವರ ಒಪ್ಪಿತ ಚಿತ್ರವೊಂದು ಮಂಡಿತವಾಗಿಬಿಟ್ಟಿರುತ್ತದೆ.

ಈ ಮಾದರಿಯಲ್ಲಿ ನೋಡಿದರೆ, ಮಂಟೇಸ್ವಾಮಿಯ ವೇಷ, ಅವನ ಗಡುಸು ಮಾತುಗಳು, ಅವಧೂತನೊಬ್ಬನನ್ನು ಜನ ಒಪ್ಪಿಕೊಂಡಿರುವ ಸಿದ್ಧ ಚಿತ್ರದಂತೇ ಇದೆ. ಲಂಗೋಟಿ, ಗಡ್ಡ, ಅಕರಾಳ ವಿಕರಾಳ ವೇಷ ನೋಡಿದರೆ ದೇಸಿ ನಾಯಕನೊಬ್ಬನ್ನು ಚಿತ್ರಿಸುವ ಒರಟು ಸಿದ್ಧ ಮಾದರಿ ಎನ್ನಿಸುತ್ತದೆ. ಅದನ್ನು ಮಾಡಿರುವ ನಟ (ಧನಂಜಯ) ಇಡೀ ನಾಟಕದಲ್ಲಿ ಉತ್ಸಾಹದಿಂದಾಗಿ ಕಂಗೊಳಿಸುತ್ತಾರೆ.

ರಂಗಸಜ್ಜಿಕೆ ಇಲ್ಲದ ಖಾಲಿ ರಂಗವನ್ನು ಶ್ರೀಮಂತಗೊಳಿಸಲು ಕಣ್ಣಿಗೆ ರಾಚುವ ಗಾಢ ಬಣ್ಣಗಳನ್ನು ಬಳಸಲಾಗಿದೆ. ಕೆಂಪು, ನೀಲಿ ಬಣ್ಣಗಳ ಅತಿ ಬಳಕೆ ಇಂಥ ನಾಟಕಕ್ಕೆ ಸಹಜವಾಗಿ ಹೊಂದಾಣಿಕೆಯಾಗುತ್ತದೆ. ಒಟ್ಟಂದದಲ್ಲಿ ೨೭ ವರ್ಷಗಳ ಹಳೆಯ ನಾಟಕವೊಂದನ್ನು ಅತಿ ಜಾಗರೂಕತೆಯಿಂದ ೩೫೦ಕ್ಕೂ ಹೆಚ್ಚು ಪ್ರದರ್ಶನ ಮಾಡುವುದು ಒಳ್ಳೆಯ ವಿಚಾರವಾದರೂ, ಮೂಲದ ಅಚ್ಚುಕಟ್ಟುತನವನ್ನು ಉಳಿಸಿಕೊಂಡು ಹೋಗಬೇಕಾದದ್ದೂ ತಂಡದ ಜವಾಬ್ದಾರಿಯಾಗಿರುತ್ತದೆ.
–ಧನಂಜಯ ದಿಡಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT