ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡಲ ಪೂಜೆಗೆ ಸಿದ್ಧ ಅಯ್ಯಪ್ಪ ದೇಗುಲ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದಟ್ಟಾರಣ್ಯದ ಮಧ್ಯೆ ಕಡಿದಾದ ದಾರಿ. ಕರಿ ಪಂಚೆ ಶಾಲು ಹಾಕಿಕೊಂಡು ತಲೆಯ ಮೇಲೆ ಮಂಗಳ ದ್ರವ್ಯಗಳನ್ನು ಹೊತ್ತು ಬರಿಗಾಲಿನಲ್ಲಿ `ಸ್ವಾಮಿಯೇ ಶರಣಂ ಅಯ್ಯಪ್ಪ..' ಎಂದು ಅಯ್ಯಪ್ಪ ಸ್ವಾಮಿಯ ಮಂತ್ರಘೋಷವನ್ನು ಉದ್ಗರಿಸುತ್ತ ಸಾಗುವ ಇಷ್ಟೇ ಸನ್ನಿವೇಶವನ್ನು ಹೇಳಿದರೆ ಸಾಕು ಅದು ಶಬರಿಮಲೆಗೆ ಹೋಗುವ ಭಕ್ತರ ವಿವರ ಎಂದು ಥಟ್ಟನೆ ತಿಳಿಯುತ್ತದೆ.

ಇದು ಶಬರಿಮಲೆಗೆ ಯಾತ್ರೆ ಕೈಗೊಳ್ಳುವ ಕಾಲ. ಸಂಕ್ರಾಂತಿಯಂದು ಮಕರ ಬೆಳಕು ನೋಡುವ ತವಕದಿಂದ ಭಕ್ತಾದಿಗಳು ತಂಡ ತಂಡವಾಗಿ ಶಬರಿಮಲೆಗೆ ಹೋಗುವುದು ವಾಡಿಕೆ. ಆದರೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಬೇಕಾದರೆ `ಅಯ್ಯಪ್ಪ'ನದ್ದೇ ಕೆಲವು ದೇಗುಲಗಳಿವೆ.

ಇಲ್ಲಿ ನಿತ್ಯವೂ ಅಯ್ಯಪ್ಪ ದರ್ಶನ ಲಭ್ಯ. ನಮ್ಮ ರಾಜ್ಯದಲ್ಲಿ ಕೆಲವೇ ಕೆಲವು ಕಡೆಗಳಲ್ಲಿ ಅಯ್ಯಪ್ಪ ದೇವಸ್ಥಾನಗಳಿವೆ. ಬೆಂಗಳೂರಿನ ಜಾಲಹಳ್ಳಿಯಲ್ಲಿ ಅತ್ಯಂತ ದೊಡ್ಡ ಜಾಗದಲ್ಲಿ ಅಯ್ಯಪ್ಪ ದೇವಾಲಯವಿದೆ.

ಅದು ಬಿಟ್ಟರೆ ಬನ್ನೇರುಘಟ್ಟ ರಸ್ತೆಯ ವಿಜಯಾ ಬ್ಯಾಂಕ್ ಬಡಾವಣೆಯಲ್ಲಿ ಅಯ್ಯಪ್ಪ ಭಕ್ತಾದಿಗಳೇ ನಿರ್ಮಿಸಿದ ಭವ್ಯವಾದ ಅಯ್ಯಪ್ಪ ದೇವಸ್ಥಾನ ಭಕ್ತರನ್ನು ಸಹಸ್ರಾರು ಸಂಖ್ಯೆಯಲ್ಲಿ ಕೈಬೀಸಿ ಕರೆಯುತ್ತಿದೆ. ಮುಲ್ಕಿ ಸುಂದರರಾಮ ಶೆಟ್ಟಿ ನಗರ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಈ ದೇವಾಲಯವನ್ನು ನಡೆಸುತ್ತಿದ್ದು, ಎರಡನೇ ದೊಡ್ಡ ಅಯ್ಯಪ್ಪ ದೇವಾಲಯ ಎಂಬ ಖ್ಯಾತಿ ಪಡೆದಿದೆ.

ಇಲ್ಲಿ ಮಕರ ಸಂಕ್ರಾಂತಿಗೆ ಮಾತ್ರ ಅಯ್ಯಪ್ಪ ದರ್ಶನದ ಸಂಭ್ರಮ ಸೀಮಿತವಾಗದೆ ವರ್ಷದ ಅನೇಕ ಸಂದರ್ಭಗಳಲ್ಲಿ ವಿಶೇಷ ಪೂಜೆ, ಉತ್ಸವ, ಮಂಡಲೋತ್ಸವ, ಮೆರವಣಿಗೆ, ಅನ್ನದಾನ ಹೋಮ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.

ವಿಜಯಬ್ಯಾಂಕ್ ಬಡಾವಣೆಯಲ್ಲಿ ವಿಜಯಾ ಬ್ಯಾಂಕ್ ಉದ್ಯೋಗಿಗಳಿಂದಲೇ ಕೂಡಿದ ಅಯ್ಯಪ್ಪ ಸೇವಾ ಸಮಿತಿ ಈ ಅಪರೂಪದ ಅಯ್ಯಪ್ಪ ದೇವಾಲಯವನ್ನು 16 ವರ್ಷಗಳ ಹಿಂದೆ (1997 ಜುಲೈ 12) ನಿರ್ಮಿಸಿದ್ದು ಇದೀಗ ಬಹಳ ಪ್ರಮುಖ ಭಕ್ತಿತಾಣವಾಗಿ ರೂಪುಗೊಂಡಿದೆ.

ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಪೇಜಾವರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಾಲಯ ಯಶಸ್ಸಿಗೆ ಶುಭ ಹಾರೈಸಿದ್ದರು.

ವಿಶಾಲ ಪ್ರಾಂಗಣ: ದೇವಸ್ಥಾನದ ಒಳಗೆ ದೊಡ್ಡದಾದ ಪ್ರಾಂಗಣ. ಬಲಭಾಗದಲ್ಲಿ ಕಲ್ಯಾಣ ಮಂಟಪ. ಆವರಣದೊಳಗೆ ದೊಡ್ಡದಾದ ಮಾನಸ್ಥಂಭಗಳು. ಪಕ್ಕದಲ್ಲೇ ನವಗ್ರಹ ವಿಗ್ರಹ, ನಾಗಸ್ಥಾನವಿದೆ. ದೇಗುಲದ ಹೊಸ್ತಿಲು ದಾಟಿ ಒಳಗೆ ಪ್ರವೇಶಿಸಿದರೆ ಭಕ್ತಿಭಾವದ ಪುಳಕ.

ಅಯ್ಯಪ್ಪ ಸ್ವಾಮಿಯ ದೊಡ್ಡ ಅಲಂಕೃತ ವಿಗ್ರಹ ನಿಜಕ್ಕೂ ಭಕ್ತಾದಿಗಳನ್ನು ರೋಮಾಂಚನಗೊಳಿಸುತ್ತದೆ. ದೇವಾಲಯದ ಪ್ರಾಂಗಣದೊಳಗೆ ಹನುಮಾನ್, ಗಣೇಶ, ಸುಬ್ರಹ್ಮಣ್ಯ ಶ್ರೀದೇವಿ ಗುಡಿಗಳಿವೆ. ಎಲ್ಲ ಗುಡಿಗಳಲ್ಲೂ ಪ್ರತ್ಯೇಕ ಅರ್ಚಕರು ನಿತ್ಯ ಪೂಜೆ ಮಾಡುತ್ತಾರೆ.

`ಈ ದೇವಾಲಯದಲ್ಲಿ ಎಲ್ಲ ಧಾರ್ಮಿಕ ಆಚರಣೆಗಳನ್ನೂ ಶ್ರದ್ಧೆಯಿಂದ ಆಚರಿಸುತ್ತೇವೆ. ಪ್ರತೀವರ್ಷ ಮಕರ ಸಂಕ್ರಾಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತೇವೆ. ಫೆಬ್ರುವರಿ 9-11ರವರೆಗೆ ವಾರ್ಷಿಕ ಉತ್ಸವ ನಡೆಯುತ್ತದೆ. ಧ್ವಜಾರೋಹಣ, ಅಭಿಷೇಕ, ದೇವರ ಮೆರವಣಿಗೆಯೂ ಭಕ್ತಾದಿಗಳನ್ನು ಸೆಳೆಯುತ್ತದೆ.

ಅಯ್ಯಪ್ಪ ಸ್ವಾಮಿಯನ್ನು ರಥದಲ್ಲಿ ಮೆರವಣಿಗೆ ಮಾಡುವುದು ಬಹಳ ಅಪರೂಪ. ಇಲ್ಲಿ ಪ್ರಥಮ ಬಾರಿಗೆ ಅಯ್ಯಪ್ಪನನ್ನು ರಥದಲ್ಲಿ ಕುಳ್ಳಿರಿಸಲಾಗುತ್ತದೆ. ಎಲ್ಲ ಕಡೆಯೂ ಅಯ್ಯಪ್ಪನನ್ನು ಆನೆಯ ಮೇಲೆಯೇ ಮೆರವಣಿಗೆ ಮಾಡುವುದು. ಹೀಗಾಗಿ ಈ ದೇವಸ್ಥಾನ ವಿಶಿಷ್ಟವಾಗಿ ನಿಲ್ಲುತ್ತದೆ' ಎಂದು ವಿವರ ನೀಡುತ್ತಾರೆ ದೇವಾಲಯ ಸಮಿತಿಯ ಕಾರ್ಯದರ್ಶಿ ಕೆ. ಜಯಕರ ಶೆಟ್ಟಿ ಅವರು.

ನವೆಂಬರ್ 14ರಿಂದ ಆರಂಭಗೊಂಡಿರುವ ಮಂಡಲಪೂಜೆ ನಾಳೆಯವರೆಗೆ (26) ನಡೆಯಲಿದ್ದು, ನಾಳೆ ಅತ್ಯಂತ ಮಹತ್ವದ ದಿನವಾಗಿದೆ. ಇಂದಿನ ಒತ್ತಡದ ಬದುಕಿನಲ್ಲಿ, ಬದಲಾದ ಜೀವನಶೈಲಿಯಲ್ಲಿ ದೇವಸ್ಥಾನ, ಸಂಗೀತ, ನೃತ್ಯಗಳಂತಹ ಲಲಿತ ಕಲೆಗಳ ಮೊರೆ ಹೋಗುವುದು ಸಾಮಾನ್ಯ.

ಇಂತಹ ಸಂದರ್ಭದಲ್ಲಿ ಬಹಳ ಅಪರೂಪದ ಈ ಅಯ್ಯಪ್ಪ ದೇಗುಲ ಜನರಿಗೆ ನೆಮ್ಮದಿ ನೀಡುವ, ಶಾಂತಿ ಸಮಾಧಾನ ಕೊಡುವ ಭಕ್ತಿತಾಣವಾಗಿ ರೂಪುಗೊಂಡಿದೆ ಎನ್ನುವುದು ಸಮಿತಿಯ ಕೆ. ಸದಾನಂದ ಶೆಟ್ಟಿ, ಮಂಜಯ್ಯ ಶೆಟ್ಟಿ ಹಾಗೂ ಐತಪ್ಪ ರೈ ಅವರ ಅಭಿಮತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT