ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡೇಲಾ ಸ್ಮರಿಸಿದ ಜೈಲರ್‌

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕೇಪ್‌ ಟೌನ್‌ (ಎಪಿ): ರೊಬ್ಬನ್‌ ದ್ವೀಪದ ಕಾರಾಗೃಹ­ದಲ್ಲಿ ನೆಲ್ಸನ್‌ ಮಂಡೇಲಾ ಅವರು ಶಿಕ್ಷೆ ಅನುಭವಿ­ಸುತ್ತಿದ್ದಾಗ ಇವರು ಕೂಡ ಅವರ ಜೊತೆಯಲ್ಲಿದ್ದರು.
ವರ್ಣಭೇದ ನೀತಿ ವಿರೋಧಿ ಹೋರಾಟ­ಗಾರನ ನಿಧನಕ್ಕೆ ಕಂಬನಿ ಮಿಡಿಯು­ತ್ತಿರುವ ಕೋಟ್ಯಂತರ ಜನರಲ್ಲಿ ಇವರೂ ಒಬ್ಬರು. ಅವರ ಹೆಸರು ಕ್ರಿಸ್ಟೊ ಬ್ರಾಂಡ್. ಅಂದ ಹಾಗೆ ಇವರು ಮಂಡೇಲಾ ಅವರ ಸಹ ಕೈದಿಯಲ್ಲ; ಮೇರು ನಾಯಕ ಬಂದಿಯಾಗಿದ್ದ ಜೈಲಿನ ಅಧಿಕಾರಿ­­ಯಾಗಿದ್ದವರು.

ಜೈಲಿನಲ್ಲಿ ಕಪ್ಪು ಜನಾಂಗದ ರಾಜಕೀಯ ಕೈದಿ ಹಾಗೂ ಬಿಳಿ ಜನಾಂಗಕ್ಕೆ ಸೇರಿದ ಆಫ್ರಿಕಾದ ಜೈಲಿನ ಅಧಿಕಾರಿ ನಡುವೆ ಆತ್ಮೀಯ ಬಾಂಧವ್ಯ ಬೆಸೆದಿತ್ತು.
ಈ ಇಬ್ಬರೂ ಎರಡು ವರ್ಷಗಳ ಹಿಂದೆ ಭೇಟಿಯಾಗಿದ್ದರು. 50ರ ಹರೆಯದ ಬ್ರಾಂಡ್‌ ತಮ್ಮ ಪತ್ನಿ, ಪುತ್ರ ಹಾಗೂ ಮೊಮ್ಮಗನೊಂದಿಗೆ ಕೇಪ್‌ ಟೌನ್‌ಗೆ  ಬಂದು ಮಂಡೇಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಮೂರು ಗಂಟೆಗಳ ಭೇಟಿ ಅವಧಿ­ಯಲ್ಲಿ ಉಭ­ಯತ್ರರೂ ಹಿಂದಿನ ನೆನಪು­ಗಳನ್ನು ಮೆಲುಕು ಹಾಕಿದ್ದರು. ಜೊತೆಗೆ ಅವರ ಕುಟಂಬದ ಬಗ್ಗೆಯೂ ಪರಸ್ಪರ ಮಾತನಾಡಿದ್ದರು.

ಈಗ ಆತ್ಮೀಯ ಮಿತ್ರರೊಬ್ಬರ ಅಗಲಿಕೆ ಬ್ರಾಂಡ್‌ ಅವ­ರನ್ನು ಶೋಕ­ಸಾಗರಕ್ಕೆ ದೂಡಿದೆ.

‘ಎರಡು ವರ್ಷಗಳ ಹಿಂದೆ ಭೇಟಿ­ಯಾಗಿದ್ದ ಸಂದರ್ಭ­ದಲ್ಲಿ ಮಂಡೇಲಾ ಅವರು ನನ್ನ ಮೊಮ್ಮಗನನ್ನು ಮುದ್ದಾಡಲು ಬಯಸಿ­ದ್ದರು. ಆದರೆ, ಅವರ ಬಳಿ  ಹೋಗಲು ಮೊಮ್ಮಗ ಹೆದರಿದ್ದ. ಆದರೆ ಆ ಕ್ಷಣದಲ್ಲಿ ಖುದ್ದು ಅವರೇ ಮಗುವಿನ ಬಳಿ ಬಂದಿದ್ದರು’ ಎಂದು ಬ್ರಾಂಡ್‌ ಹಳೆಯ ಘಟನೆ­ಗಳನ್ನು ಸ್ಮರಿಸಿದರು.
‘ಮಂಡೇಲಾ ನಿಧನ ಹೊಂದಿದ್ದಾರೆ ಎಂಬ ಸುದ್ದಿ ತಿಳಿದ ಕ್ಷಣ ದುಃಖಿತನಾದೆ’ ಎಂದು ಬ್ರಾಂಡ್‌ ಹೇಳಿ­ದರು. ‘ಆದರೆ, ಅವರು ಜೀವನದಲ್ಲಿ ಯಶಸ್ವಿಯಾಗಿ­ದ್ದಾರೆ ಎಂಬುದು ನನ್ನ ಭಾವನೆ. ಅವರು ಏನು ಮಾಡಲು ಬಯಸಿದ್ದರೋ, ಅದನ್ನು ಸಾಧಿಸಿದ್ದಾರೆ.

ಶಾಂತಿ, ನೆಮ್ಮದಿಯಿಂದ ಅವರು ಇಹಲೋಕ ತ್ಯಜಿಸುವುದನ್ನು ನಾನು ಬಯಸಿದ್ದೆ’ ಎಂದು ಅವರು ತಿಳಿಸಿದರು. ಬ್ರಾಂಡ್‌ ಅವರು 1978ರಲ್ಲಿ ರೊಬ್ಬನ್‌ ದ್ವೀಪದಲ್ಲಿ ಕೆಲಸಕ್ಕೆ ಸೇರಿದ್ದರು. ಆಗ ಅವರಿಗೆ 18 ವರ್ಷ. ಮಂಡೇಲಾ ಅವರಿಗೆ 60 ವರ್ಷ. ಮಂಡೇಲಾ ಅವರು ಅನುಭವಿಸಿರುವ 27 ವರ್ಷಗಳ ಜೈಲು ಶಿಕ್ಷೆಯಲ್ಲಿ 18 ವರ್ಷ­ಗಳನ್ನು ಈ ದ್ವೀಪದಲ್ಲಿ ಕಳೆದಿದ್ದಾರೆ. ಬ್ರಾಂಡ್‌ ಅವರು ಯಾರಿಗೂ ತಿಳಿಯ­ದಂತೆ ಜೈಲಿನಲ್ಲಿದ್ದ ಮಂಡೇಲಾ ಅವರಿಗೆ ಇಷ್ಟವಾದ ಆಹಾರವನ್ನು ಪೂರೈಸುತ್ತಿ­ದ್ದರು.

‌ಬ್ರಾಂಡ್‌ ಕುಟುಂಬದ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಿದ್ದ ಮಂಡೇಲಾ ಅವರು ಶಿಕ್ಷಣವನ್ನು ಮುಂದುವರಿಸು­ವಂತೆ ಬ್ರಾಂಡ್‌ಗೆ ಸಲಹೆ­ಯನ್ನು ನೀಡಿದ್ದರು.
ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ನೆಲ್ಸನ್‌ ಮಂಡೇಲಾ, ಏಕಾಂಗಿಯಾಗಿದ್ದ ಬ್ರಾಂಡ್ ಬಗ್ಗೆ ಆಸ್ತೆ ವಹಿಸಿದ್ದರು.
ದಕ್ಷಿಣ ಆಫ್ರಿಕಾದ ಹೊಸ ಸಂವಿಧಾನ ರಚನೆಯಾದಾಗ ಬ್ರಾಂಡ್‌ ಅತ್ಯಂತ ಕೆಳಮಟ್ಟದ ಸರ್ಕಾರಿ ನೌಕರರಾಗಿದ್ದರು.

‘ಹೊಸ ಸಂವಿಧಾನದ ಬಗ್ಗೆ ಸಂಸತ್‌ ಸದಸ್ಯರು ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಮಂಡೇಲಾ ಬಂದಿದ್ದರು. ನಾನು  ಅಲ್ಲಿ ದಾಖಲೆ­ಗಳನ್ನು ಹಂಚುವ ಕೆಲಸ ಮಾಡಿಕೊಂಡಿದ್ದೆ. ಎಲ್ಲ ಸಂಸದ­ರೊಂದಿಗೆ ಮಾತನಾಡುತ್ತಿದ್ದ ಮಂಡೇಲಾ ನನ್ನನ್ನು ಕಂಡ ಕೂಡಲೇ, ನನ್ನ ಕೈಯನ್ನು ಹಿಡಿದು ಕುಶಲೋಪರಿ ವಿಚಾರಿಸಿದರು. ಅಲ್ಲದೇ, ಎಲ್ಲರ ಮುಂದೆ,  ‘ಇವರು ಯಾರು ಎಂದು ನಿಮಗೆ ತಿಳಿದಿದೆಯೇ? ಇವರು ನನ್ನ ವಾರ್ಡನ್‌ ಆಗಿದ್ದವರು. ನನ್ನ ಆತ್ಮೀಯ ಸ್ನೇಹಿತ’ ಎಂದು ಹೇಳಿದ್ದರು. ಆ ಸಂದರ್ಭ­ದಲ್ಲಿ ನಾನು ಹೆಮ್ಮೆ ಪಟ್ಟುಕೊಂಡಿದ್ದೆ’ ಎಂದು ಬ್ರಾಂಡ್ ಸ್ಮರಿಸಿದರು.

ಮೊದಲ ಭೇಟಿ ಭಯವಾಗಿತ್ತು:ಕತ್ರಾಡಾ
ಜೋಹಾನ್ಸ್‌ಬರ್ಗ್‌ (ಪಿಟಿಐ): ದಕ್ಷಿಣ ಆಫ್ರಿಕಾದ ಗಾಂಧಿ ನೆಲ್ಸನ್‌ ಮಂಡೇಲಾ ಅವರ ಸಹ ಖೈದಿ ಮತ್ತು ಅವರ ದೀರ್ಘ ಒಡನಾಡಿಯಾಗಿದ್ದ ಭಾರತೀಯ ಸಂಜಾತ ಅಹ್ಮದ್‌ ಕತ್ರಾಡಾ ಮೊದಲ ಸಲ ಮಂಡೇಲಾ ಅವರನ್ನು ಭೇಟಿಯಾದಾಗ ಭಯಗೊಂಡಿದ್ದರು. ಆದರೆ ಮುಂದೊಮ್ಮೆ ಆ ಭಯವನ್ನೂ ಮೀರಿ ಭಾರತೀಯ­ರನ್ನು ಮುಷ್ಕರದಿಂದ ಬಹಿಷ್ಕರಿಸುವ ಮಂಡೇಲಾ ಅವರ ನಿರ್ಧಾರವನ್ನು ಪ್ರಶ್ನಿಸಿದ್ದರು.

ಕರಿಯರ ನಾಡಿನ ಸೂರ್ಯ ಮಂಡೇಲಾ ಅವ­ರೊಂದಿಗೆ ತಮ್ಮ ಒಡನಾಟದ ಬಗ್ಗೆ ಕತ್ರಡಾ ಸುದ್ದಿಗಾರ­ರೊಂದಿಗೆ ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT