ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಕುಟುಂಬ ರಾಜಕಾರಣಕ್ಕೆ ಮಣೆ

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಂಡ್ಯ: ಕುಟುಂಬ ರಾಜಕಾರಣ ಜಿಲ್ಲೆಯಲ್ಲಿ ಪ್ರಬಲವಾಗಿದ್ದು, 1952ರ ಮೊದಲ ಚುನಾವಣೆಯಿಂದ ಆರಂಭವಾದ ಕೆಲವು ಕುಟುಂಬಗಳ ರಾಜಕಾರಣವು ಇಂದಿಗೂ ಮುಂದುವರಿದಿದೆ.

ತಂದೆ-ಮಗ, ಪತಿ-ಪತ್ನಿ-ಪುತ್ರ, ಮಾವ-ಸೊಸೆ... ಹೀಗೆ ಒಂದೇ ಕುಟುಂಬದ ಸದಸ್ಯರು ವಿಧಾನಸೌಧದ ಮೆಟ್ಟಿಲು ಹತ್ತಿದ ಉದಾಹರಣೆಗಳು ಇಲ್ಲಿವೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಕುಟುಂಬದ ರಾಜಕಾರಣವೂ `ಮೈಸೂರು ರಾಜ್ಯದಿಂದಲೇ' ಆರಂಭವಾಗುತ್ತದೆ. ಅವರ ತಂದೆ ಎಸ್.ಸಿ. ಮಲ್ಲಯ್ಯ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ಮುಂದೆ ಕೃಷ್ಣ ಅವರು ಮದ್ದೂರಿನಿಂದ 1962, 89, 99ರಲ್ಲಿ ವಿಧಾನಸಭೆಗೆ ಆಯ್ಕೆಯಾದರು. ಇವರ ಸಹೋದರ ಎಸ್.ಎಂ. ಶಂಕರ್ ಸಹ ವಿಧಾನಪರಿಷತ್ ಸದಸ್ಯರಾಗಿದ್ದರು. ಶಂಕರ್ ಅವರ ಪುತ್ರ ಗುರುಚರಣ್ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷರಾಗಿದ್ದರು. ಈಗಲೂ ಸಕ್ರಿಯ ರಾಜಕೀಯದಲ್ಲಿದ್ದಾರೆ.

ಮದ್ದೂರು ಕ್ಷೇತ್ರದಿಂದ 1978, 1983ರಲ್ಲಿ ಎಂ. ಮಂಚೇಗೌಡ ಅವರು ಆಯ್ಕೆಯಾಗಿದ್ದರು. ಅವರ ನಿಧನಾನಂತರ 1984ರಲ್ಲಿ ನಡೆದ  ಉಪಚುನಾವಣೆಯಲ್ಲಿ ಅವರ ಪತ್ನಿ ಜಯವಾಣಿ ಮಂಚೇಗೌಡ ಅವರು ಆಯ್ಕೆಯಾಗುತ್ತಾರೆ. ನಂತರ ಇವರ ಪುತ್ರ ಡಾ.ಮಹೇಶ್‌ಚಂದ್ ಶಾಸಕರಾಗಿದ್ದರು.

2008ರಲ್ಲಿ ಎಂ.ಎಸ್. ಸಿದ್ದರಾಜು ಅವರು ಮದ್ದೂರಿನಿಂದ ಶಾಸಕರಾದರು. ಅವರ ನಿಧನಾನಂತರ 2009ರಲ್ಲಿ ನಡೆದ ಚುನಾವಣೆಯಲ್ಲಿ ಕಲ್ಪನಾ ಸಿದ್ದರಾಜು ಆಯ್ಕೆಯಾದರು. `ಈ ಬಾರಿ ಪಕ್ಷೇತರರಾಗಿಯಾದರೂ ಸ್ಪರ್ಧಿಸುತ್ತೇನೆ' ಎನ್ನುತ್ತಿದ್ದಾರೆ ಅವರು.

1952ರಲ್ಲಿ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಎಂ.ಕೆ. ಶಿವನಂಜಪ್ಪ ಆಯ್ಕೆಯಾಗಿದ್ದರು. ಮುಂದಿನ ಮೂರು ಬಾರಿಯೂ ಅವರೇ ಗೆಲುವು ಸಾಧಿಸಿದರು. ಒಂದು ಬಾರಿ ಅವರ ಪತ್ನಿ ಲೀಲಮ್ಮ ವಿಧಾನಪರಿಷತ್ ಸದಸ್ಯರಾಗಿದ್ದರು. ಇವರ ಪುತ್ರ ಎಂ.ಎಸ್. ಆತ್ಮಾನಂದ 1978, 89 ಹಾಗೂ 99ರಲ್ಲಿ ಶಾಸಕರಾಗಿದ್ದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಆತ್ಮಾನಂದ ಅವರು ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ.

1985, 94ರಲ್ಲಿ ಎಸ್.ಡಿ. ಜಯರಾಂ, ಮಂಡ್ಯ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾದರು. ಅವರ ನಿಧನಾನಂತರ 1997ರಲ್ಲಿ ಅವರ ಪತ್ನಿ ಪ್ರಭಾವತಿ ಜಯರಾಂ ಶಾಸಕಿಯಾದರು. ಈಗ ಅವರ ಪುತ್ರ ಅಶೋಕ ಜಯರಾಂ ಅವರು ಜೆಡಿಎಸ್ ಆಕಾಂಕ್ಷಿಯಾಗಿದ್ದಾರೆ.

1957ರಲ್ಲಿ ಶ್ರೀರಂಗಪಟ್ಟಣದಿಂದ ಎ.ಜೆ. ಚುಂಚೆಗೌಡರು ಕಾಂಗ್ರೆಸ್‌ನಿಂದ ಆಯ್ಕೆಯಾದರು. ಮುಂದೆ ಅವರ ಪುತ್ರ ಎ.ಸಿ. ಶ್ರೀಕಂಠಯ್ಯ ಅವರು ಚುನಾವಣೆಗೆ ಸ್ಪರ್ಧಿಸಿದರೂ ಗೆದ್ದಿರಲಿಲ್ಲ. ಅವರ ನಿಧನಾನಂತರ 1999ರಲ್ಲಿ ಪಾರ್ವತಮ್ಮ ಶ್ರೀಕಂಠಯ್ಯ ಅವರು ಆಯ್ಕೆಯಾದರು. ಈ ಬಾರಿ ಅವರ ಪುತ್ರ, ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಕಾಂಗ್ರೆಸ್‌ನಿಂದ ಆಕಾಂಕ್ಷಿಯಾಗಿದ್ದಾರೆ.

1983, 85ರಲ್ಲಿ ಎ.ಎಸ್. ಬಂಡಿಸಿದ್ದೇಗೌಡರು ಶ್ರೀರಂಗಪಟ್ಟಣದಿಂದ ಶಾಸಕರಾಗಿದ್ದರು. ಅವರ ನಿಧನಾನಂತರ ನಡೆದ 1986, 94, 2004ರ ಚುನಾವಣೆಯಲ್ಲಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಶಾಸಕಿಯಾದರು. 2008ರಲ್ಲಿ ಅವರ ಪುತ್ರ ರಮೇಶ್‌ಬಾಬು ಶಾಸಕರಾಗಿದ್ದಾರೆ. ಈ ಬಾರಿ ಅವರೇ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

ಕ್ಷೇತ್ರ ಮರುವಿಂಗಡಣೆಯಲ್ಲಿ ಮರೆಯಾದ ಕಿರುಗಾವಲು ಕ್ಷೇತ್ರದಿಂದ ಜಿ. ಮಾದೇಗೌಡ ಅವರು 1962 ರಿಂದ 85ರ ವರೆಗೆ ಆರು ಬಾರಿ ಆಯ್ಕೆಯಾಗಿದ್ದರು. ಸಂಸದರೂ ಆಗಿದ್ದರು. ಅವರ ಪುತ್ರ ಮಧು ಮಾದೇಗೌಡ ವಿಧಾನ ಪರಿಷತ್ ಸದಸ್ಯರಾಗಿದ್ದರು. ಈ ಬಾರಿ ಅವರು ಮದ್ದೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT