ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ತೆನೆಗಟ್ಟುತ್ತಿರುವ ಬತ್ತ

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಮಂಡ್ಯ: ಬತ್ತದ ಬೆಳೆ ತೆನೆ ಕಟ್ಟುತ್ತಿದೆ. ನಾಲ್ಕು ವಾರಗಳಲ್ಲಿ ಕಾಳು ಬಲಿಯುತ್ತವೆ. ಆ ಮೇಲೆ ಕಟಾವು ಮಾಡಬೇಕು. ಈ ಹಂತದಲ್ಲಿ ನೀರು ನಿಲ್ಲಿಸಿ ಬಿಟ್ಟರೆ ಇಲ್ಲಿಯವರೆಗೆ ಹಾಕಿರುವ ಶ್ರಮ, ಹಣ ಎಲ್ಲವೂ ತಮಿಳುನಾಡಿಗೆ ಬಿಡುವ ನೀರಿನಲ್ಲಿ ಹರಿದು ಹೋಗುತ್ತದೆ.ಬತ್ತದ ಬೆಳೆ ಹಾಳಾದರೆ ಮನೆಯಲ್ಲಿ ತಿನ್ನುವ ಅನ್ನಕ್ಕೂ ಕುತ್ತು ಬರುತ್ತದೆ. ಜತೆಗೆ ಬೇಸಿಗೆಯಲ್ಲಿ ನಾಲೆಗಳ ಆಧುನೀಕರಣ ಕೈಗೆತ್ತಿಕೊಳ್ಳುವುದರಿಂದ ಬೇಸಿಗೆಯ ಬತ್ತವನ್ನೂ ಬೆಳೆಯುತ್ತಿಲ್ಲ. ಮುಂದಿನ ವರ್ಷದ ಆಗಸ್ಟ್‌ನಲ್ಲಿ ಬತ್ತ ನಾಟಿ ಮಾಡಿ, ಡಿಸೆಂಬರ್‌ನಲ್ಲಿ ಬತ್ತದ ಫಸಲು ಬರುವವರೆಗೂ ಜೀವನ ಸಾಗಿಸುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿದೆ.

ಬತ್ತದ ಬೆಳೆಗಾಗಿ ತೆನೆಗಟ್ಟಲು ಎರಡು ತಿಂಗಳು ದುಡಿದಿದ್ದೇವೆ. ರಸಗೊಬ್ಬರ, ಕೂಲಿ ಕಾರ್ಮಿಕರ ಮೇಲೆ ರೂ 10 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದೇವೆ. ಈಗ ಬೆಳೆ ಕೈಕೊಟ್ಟರೆ, ಸಂಕಷ್ಟಕ್ಕೆ ಸಿಲುಕುತ್ತೇವೆ ಎನ್ನುತ್ತಾರೆ ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದ ರೈತ ಶಿವಚನ್ನಯ್ಯ. ಇದು ಇವರೊಬ್ಬರದ್ದೇ ಅಲ್ಲ, ಜಿಲ್ಲೆಯ ಲಕ್ಷಾಂತರ ರೈತರದ್ದೂ ಇದೇ ಧ್ವನಿಯಾಗಿದೆ.

ಕೋರ್ಟ್ ಹೇಳಿದೆ ಅಂತ ತಮಿಳುನಾಡಿಗೆ ನೀರು ಬಿಟ್ಟು ಬಿಡ್ತಾರಾ ಸಾರ್ ಎಂದು ಬತ್ತದ ಬೆಳೆಗೆ ಬೇಕಾಗಿರುವ ನೀರಿನ ಬಗೆಗೆ ಕೇಳಲು ಹೋಗಿದ್ದ `ಪ್ರಜಾವಾಣಿ' ಪ್ರತಿನಿಧಿಯನ್ನೇ ಪ್ರಶ್ನಿಸಿದರು. ಇನ್ನು ನಿರ್ಧಾರವಾಗಿಲ್ಲ. ಸಭೆ ಮಾಡುತ್ತಿದ್ದಾರೆ ಎನ್ನುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಅವರು, ಕಾಟಾಚಾರಕ್ಕೆ ಸಭೆ ಮಾಡ್ತಾರೆ. ಬಿಡುವುದಿಲ್ಲ ಎನ್ನುತ್ತಲೇ ರಾತ್ರೋರಾತ್ರಿ ನೀರು ಬಿಡುತ್ತಾರೆ ಬಿಡಿ. ಮೊದಲಿನಿಂದ್ಲೂ ಇದೇ ನಡೆದಿದೆ. ನಮ್ಮ ಹಣೆ ಬರಾನೇ ಸರಿ ಇಲ್ಲ ಎಂದು ತಮ್ಮನ್ನೇ ದೂರಿಕೊಳ್ಳುತ್ತಾರೆ.

ಜಿಲ್ಲೆಯಲ್ಲಿ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಬಿತ್ತನೆ ಮಾಡಲಾಗಿದೆ. ಜಿಲ್ಲೆಯ ಶ್ರೀರಂಗಪಟ್ಟಣ ಹಾಗೂ ಮಂಡ್ಯ ತಾಲ್ಲೂಕುಗಳ ಕೆಲವು ರೈತರು ಬತ್ತದ ನಾಟಿಯನ್ನು ಆಗಸ್ಟ್‌ನಲ್ಲಿ ಮಾಡಿದ್ದಾರೆ. ಅವರ ಬತ್ತದ ಬೆಳೆ ಡಿಸೆಂಬರ್ ಅಂತ್ಯಕ್ಕೆ ಕೊಯ್ಲಿಗೆ ಬರಲಿದೆ. ಮದ್ದೂರು ಮುಂತಾದ ಭಾಗದಲ್ಲಿ ಬತ್ತದ ನಾಟಿಯನ್ನು ಸೆಪ್ಟೆಂಬರ್ ಅಂತ್ಯದಲ್ಲಿ ಮಾಡಲಾಗಿದ್ದು, ಅವರ ಬತ್ತವು ಜನವರಿ 15ರ ನಂತರ ಕೊಯ್ಲಿಗೆ ಬರಲಿದೆ.ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟವು 97 ಅಡಿಗೆ (12.5 ಟಿಎಂಸಿ ಅಡಿ) ಕುಸಿದಿದೆ. ನಿತ್ಯ 5,145 ಕ್ಯೂಸೆಕ್‌ನಷ್ಟು ನೀರನ್ನು ಹೊರ ಬಿಡಲಾಗುತ್ತಿದೆ. ಇನ್ನು 24 ದಿನಗಳಿಗಾಗುವಷ್ಟು ನೀರಿದೆ. ಆದರೆ, ರೈತರಿಗೆ ಇನ್ನೂ ಒಂದೂವರೆ ತಿಂಗಳು ನೀರು ಬೇಕಿದೆ.

ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ ಈಗಿರುವ ನೀರಿನಲ್ಲಿ 4.3 ಟಿಎಂಸಿ ಅಡಿಯಷ್ಟು ನೀರನ್ನು ಬಿಡಬೇಕು ಎಂದಿದೆ. ಕಾವೇರಿ ನಿರ್ವಹಣಾ ಸಮಿತಿಯು ಏನು ಹೇಳಲಿದೆಯೋ ಗೊತ್ತಿಲ್ಲ. ಕೋರ್ಟ್ ಆದೇಶದ ಪ್ರಕಾರ ನೀರು ಬಿಟ್ಟರೆ ನೀರಿನ ಮಟ್ಟ 8 ಟಿಎಂಸಿ ಅಡಿಗೆ ಕುಸಿಯಲಿದೆ.8 ಟಿಎಂಸಿ ಅಡಿ ನೀರು ಮಾತ್ರ ಉಳಿಯಲಿದೆ. ಇದರಿಂದ 16 ದಿನಗಳ ಕಾಲ ಮಾತ್ರ ನೀರು ಬಿಡಲು ಸಾಧ್ಯವಾಗಲಿದೆ. ಆಗ, ತೆನೆ ಕಟ್ಟುತ್ತಿರುವ ಬತ್ತದ ಕಾಳುಗಳು ಕುಗ್ಗಿ ಹೋಗಲಿವೆ. ಇಳುವರಿ ಕಡಿಮೆಯಾಗಿ ಅರ್ಧದಷ್ಟು ಬೆಳೆ ಹಾಳಾಗಲಿದೆ. ಜಿಲ್ಲೆಯಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿನ ಬೆಳೆ ಇದೆ. ಕಬ್ಬಿಗೆ ಫೆಬ್ರುವರಿ ಮಧ್ಯದವರೆಗೂ ನೀರು ಬೇಕು. ಆದರೆ, ಅಷ್ಟು ನೀರು ಜಲಾಶಯದಲ್ಲಿ ಇಲ್ಲ. ಪರಿಣಾಮ ಕಬ್ಬಿನ ಫಸಲಿನ ಚಿಂತೆ ಕೈಬಿಟ್ಟ ಹಾಗೆಯೇ ಸರಿ ಎನ್ನುವುದು ರೈತರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT