ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಹಗರಣಗಳ ಸರಮಾಲೆ....!

Last Updated 19 ಜುಲೈ 2013, 7:09 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಒಂದಾದ ಮೇಲೊಂದು ಹಗರಣಗಳು ಬಯಲಾಗುತ್ತಿವೆ. ದೂರು ದಾಖಲಾಗುತ್ತಿದ್ದಂತೆಯೇ ಆರೋಪಿಗಳಲ್ಲಿ ನಡುಕ ಉಂಟಾಗಿದೆ. ಕೆಲವರು ಈಗಾಗಲೇ ತಲೆ ಮರೆಸಿಕೊಂಡಿದ್ದಾರೆ.

ಕಳೆದ ಒಂದು ವಾರದಲ್ಲಿ ಮುಡಾ ಹಣ ವಂಚನೆ, ಮೇಲುಕೋಟೆ ವಜ್ರಾಂಗಿಯ ತೂಕದಲ್ಲಿ ವ್ಯತ್ಯಾಸ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ರೈತ ಸಾಲ ಮನ್ನಾ ಯೋಜನೆ ದುರುಪಯೋಗ ಕುರಿತಂತೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಮುಡಾ ಆಯುಕ್ತರು ಹಾಗೂ ಕಾಂಗ್ರೆಸ್ ಮುಖಂಡರೊಬ್ಬರನ್ನು ಆರೋಪಿ ಸ್ಥಾನದಲ್ಲಿ ಮುಡಾ ಹಣ ವಂಚನೆ ಪ್ರಕರಣದ ವ್ಯಾಪ್ತಿಯು ಈಗ ರಾಮನಗರದವರೆಗೂ ವಿಸ್ತರಿಸಿಕೊಂಡಿದೆ.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 5 ಕೋಟಿ ರೂಪಾಯಿ ವಂಚನೆಯ ಆರೋಪಕ್ಕೆ ಈಗ ರಾಮನಗರ-ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ (ರಾಚ) 9.90 ಕೋಟಿ ರೂಪಾಯಿಯೂ ಸೇರಿಕೊಂಡಿದೆ. ಜತೆಗೆ ಇನ್ನೂ 8 ಕೋಟಿ ರೂಪಾಯಿಯಷ್ಟು ಹಣ ವಂಚನೆಯಾಗಿರುವ ಬಗೆಗೂ ಮಾತುಗಳು ಕೇಳಿ ಬರುತ್ತಿವೆ.

ಮುಡಾ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಖಾತೆಯಿಂದ ಯಾವ, ಯಾವ ಖಾತೆಗೆ ಹಣ ಹೋಗಿದೆ ಎಂಬುದರ ಪರಿಶೀಲನೆ ಆರಂಭವಾಗಿದ್ದು, ಅವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿಯೇ ಇದೆ ಎನ್ನಲಾಗುತ್ತಿದೆ.

ಆರೋಪಿ ಚಂದ್ರಶೇಖರ್ ಖಾತೆಗೆ ಜಮಾ ಆಗಿರುವ 2 ಕೋಟಿ ರೂಪಾಯಿ ಮೂಲದ ಪತ್ತೆಯೂ ನಡೆದಿದೆ. ಅನುಮಾನ ಬಂದ ಕೆಲವರನ್ನು ಕರೆಯಿಸಿ ವಿಚಾರಣೆಯನ್ನೂ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆಯೇ ಕೇಂದ್ರ ಸರ್ಕಾರವು 2008-09ನೇ ಸಾಲಿನಲ್ಲಿ ಮಾಡಿದ್ದ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎರಡು ಸಹಕಾರ ಬ್ಯಾಂಕ್‌ಗಳ ವಿರುದ್ಧ ದೂರು ದಾಖಲಾಗಿದೆ. ಇನ್ನೊಂದು ಬ್ಯಾಂಕಿನ ವಿರುದ್ಧವೂ ಪ್ರಕರಣ ದಾಖಲಾಗಲಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಸಂಕಷ್ಟದಲ್ಲಿರುವ ರೈತ ಸಾಲ ಮನ್ನಾಕ್ಕಾಗಿ ಆರಂಭಿಸಿದ್ದ ಯೋಜನೆಯನ್ನು ಬ್ಯಾಂಕಿನ ಕೆಲವರು, ವಾಣಿಜ್ಯ ಉದ್ದೇಶಕ್ಕಾಗಿ ತೆಗೆದುಕೊಂಡಿದ್ದವರ ಸಾಲಗಳನ್ನೂ ಅದರಲ್ಲಿ ಸೇರಿಸಿದ್ದಾರೆ ಎಂದು ಸಿಇಸಿ ವರದಿ ತಿಳಿಸಿದೆ.

ಈ ನಡುವೆಯೇ ಬೇರೆ ಸಾಲಗಳನ್ನು ಮನ್ನಾ ಪಟ್ಟಿಯಲ್ಲಿ ಸೇರಿಸುವಲ್ಲಿ ಬ್ಯಾಂಕಿನ ಕೆಲವರು ಆರ್ಥಿಕ ಲಾಭ ಪಡೆದುಕೊಂಡಿದ್ದಾರೆ ಎಂದು ಮಾಜಿ ಅಧ್ಯಕ್ಷ ಶಂಕರೇಗೌಡ ಆರೋಪಿಸಿದ್ದಾರೆ.

ಮಂಡ್ಯ ಸಿಟಿ ಕೋ ಆಪ್‌ರೇಟಿವ್ ಬ್ಯಾಂಕ್, ಮದ್ದೂರು ಶಿಂಷಾ ಸಹಕಾರ ಬ್ಯಾಂಕ್ ಹಾಗೂ ಮಂಡ್ಯದ ಲೋಕಪಾವನಿ ಮಹಿಳಾ ಬ್ಯಾಂಕ್ ಸೇರಿ 1,652 ಮಂದಿ ರೈತರ ಹೆಸರಿನಲ್ಲಿ 4 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಮನ್ನಾ ಮಾಡಿಸಿಕೊಂಡಿವೆ ಎಂದು ಸಿಎಜಿ ವರದಿ ತಿಳಿಸಿದೆ. ಅದರ ಆಧಾರದ ಮೇಲೆ ಸಹಕಾರ ಇಲಾಖೆ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭವಾಗಿದೆ.

ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಸ್ಥಾನದ ವಜ್ರಾಂಗಿ ಆಭರಣದ ತೂಕದಲ್ಲಿ ವ್ಯತ್ಯಾಸ ಆಗಿದೆ. ಈ ಕುರಿತು ಹೆಚ್ಚಿನ ತನಿಖೆ ಕೈಗೊಳ್ಳಬೇಕು ಎಂದು ಪಾಂಡವಪುರ ಉಪವಿಭಾಗಾಧಿಕಾರಿ ವರದಿ ನೀಡಿದ್ದರು. ಆರೋಪ ಹೊತ್ತಿದ್ದ ಅರ್ಚಕ ನರಸರಾಜಭಟ್ಟರ ಅವರನ್ನು ಅಮಾನತುಗೊಳಿಸಲಾಗಿತ್ತು.

ವಿಧಾನಸಭೆಯಲ್ಲಿ ಚರ್ಚೆಗೆ ಬಂದ ನಂತರ ಬುಧವಾರ ಅವರ ವಿರುದ್ಧವೂ ಪ್ರಕರಣ  ದಾಖಲಿಸಲಾಗಿದೆ.

ಎರಡು ಸಹಕಾರಿ ಬ್ಯಾಂಕ್‌ಗಳ ವಿರುದ್ಧ ಪ್ರಕರಣ ದಾಖಲು
ಮಂಡ್ಯ:  ಕೇಂದ್ರ ಸರ್ಕಾರ 2008-09 ರಲ್ಲಿ ಜಾರಿಗೊಳಿಸಿದ್ದ ರೈತರ ಸಾಲ ಮನ್ನಾ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಜಿಲ್ಲೆಯ ಎರಡು ಸಹಕಾರಿ ಬ್ಯಾಂಕ್‌ಗಳ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇನ್ನೊಂದು ಬ್ಯಾಂಕಿನ ವಿರುದ್ಧವೂ ದೂರು ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮದ್ದೂರಿನ ಶಿಂಷಾ ಸಹಕಾರ ಬ್ಯಾಂಕ್‌ನಲ್ಲಿ ವಾಣಿಜ್ಯ ಸೇರಿದಂತೆ ವಿವಿಧ ಉದ್ದೇಶಕ್ಕಾಗಿ ತೆಗೆದುಕೊಳ್ಳಲಾಗಿದ್ದ 1,113 ಮಂದಿ ರೈತರ ಹೆಸರಿನಲ್ಲಿ ರೂ 2.64 ಕೋಟಿ, ಮಂಡ್ಯ ಸಿಟಿ ಕೋ ಆಪ್‌ರೇಟಿವ್ ಬ್ಯಾಂಕಿನಲ್ಲಿ 292 ಮಂದಿ ರೈತರ ಹೆಸರಿನಲ್ಲಿ ರೂ 62.4 ಲಕ್ಷ ನಗದನ್ನು ತೆಗೆದುಕೊಳ್ಳಲಾಗಿದೆ. ಎರಡೂ ಬ್ಯಾಂಕ್‌ಗಳ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಾಗಿದೆ ಮಂಡ್ಯದ ಲೋಕಪಾವನಿ ಮಹಿಳಾ ಸಹಕಾರ ಬ್ಯಾಂಕ್‌ನಲ್ಲಿಯೂ 247 ಮಂದಿ ರೈತರ ಹೆಸರಿನಲ್ಲಿ ರೂ 81.2 ಲಕ್ಷ ಸಾಲ ಮನ್ನಾ ಆದ ಬಗ್ಗೆಯೂ ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ. ಆ ಪ್ರಕರಣದ ವಿರುದ್ಧವೂ ದೂರು ದಾಖಲಿಸಲು ಆದೇಶ ಬಂದಿದ್ದು, ಶೀಘ್ರದಲ್ಲಿಯೇ ಪ್ರಕರಣ ದಾಖಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮದ್ದೂರಿನ ಶಿಂಷಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಅಪ್ಪಾಜಯ್ಯ, ಉಪಾಧ್ಯಕ್ಷ ಬೋರಯ್ಯ ಹಾಗೂ ವ್ಯವಸ್ಥಾಪಕ ಲಕ್ಷ್ಮೀನಾರಾಯಣಗೌಡ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬ್ಯಾಂಕಿನಿಂದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತಷ್ಟು ವಂಚನೆ....!
ಮಂಡ್ಯ: ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಕುರಿತು `ರಾಚ'ದಿಂದ ಮಂಡ್ಯದ ಮೂರು ಬ್ಯಾಂಕ್‌ಗಳಿಗೆ ಪತ್ರ ಬಂದಿದ್ದು, ಬ್ಯಾಂಕ್ ಅಧಿಕಾರಿಗಳು ತಮ್ಮ ಬ್ಯಾಂಕಿನಲ್ಲಿ ಯಾವುದೇ ಠೇವಣಿ ಇಲ್ಲ ಎಂದು ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬ್ಯಾಂಕ್‌ಗಳ ಹೆಸರಿನಲ್ಲಿ ನಕಲಿ ಬಾಂಡ್ ಬಳಸಿ, ಹಣವನ್ನು ಠೇವಣಿ ಇಟ್ಟಿರುವ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದ್ದು, ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಆ ಬ್ಯಾಂಕ್‌ಗಳಿಗೂ ತೆರಳಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡ್ಯ: ರಾಮನಗರ-ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು, `ರಾಚ' ಆಯುಕ್ತ ಚಿದಾನಂದ ಅವರನ್ನು ಮಂಡ್ಯಕ್ಕೆ ಕರೆ ತಂದಿದ್ದರು.

ಆರೋಪಿ ಚಿದಾನಂದ ಅವರೊಂದಿಗೆ ಬ್ಯಾಂಕೊಂದಕ್ಕೆ ತೆರಳಿದ್ದು ಅವರು, ಅಲ್ಲಿನ ಅಧಿಕಾರಿಗಳಿಂದ ಠೇವಣಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡಿದ್ದಾರೆ.

ಮದ್ದೂರಿನಲ್ಲಿ ಪ್ರತಿಭಟನೆ
ಪ್ರಜಾವಾಣಿ ವಾರ್ತೆ
ಮದ್ದೂರು: ಪಟ್ಟಣದ ಶಿಂಷಾ ಸಹಕಾರ ಬ್ಯಾಂಕ್‌ನಲ್ಲಿ ನಡೆದಿರುವ ಸಾಲ ಮನ್ನಾ ಯೋಜನೆಯ ಅಕ್ರಮ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಬ್ಯಾಂಕಿನ ಗ್ರಾಹಕರು ಹಾಗೂ ಸಾರ್ವಜನಿಕರು ಗುರುವಾರ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.

ಬ್ಯಾಂಕ್‌ನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ ಅವರು, ಒಂದು ಗಂಟೆಗೂ ಹೆಚ್ಚು ಕಾಲ ಬ್ಯಾಂಕಿನ ಎದುರು ಧರಣಿ ನಡೆಸಿದರು.

ಮುಖಂಡ ಚನ್ನವೀರೇಗೌಡ, ತೆಂಗು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್, ನಗರಕೆರೆ ಶೇಖರ್, ಕುಮಾರ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT