ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಕ್ಕೆ ಮಾವಿನಕಾಯಿ: ಸೇವೆಗೆ ವೋಟು

Last Updated 25 ಏಪ್ರಿಲ್ 2013, 9:20 IST
ಅಕ್ಷರ ಗಾತ್ರ

ಕೋಲಾರ: ಸಮಾಜಕ್ಕೆ ನೀಡುವ ಎಲ್ಲ ಬಗೆಯ ಸೇವೆ, ದಾನ, ಉಪಕಾರಗಳು ಫಲಾಪೇಕ್ಷೆಯ ಪರಿಧಿಯಿಂದ ಹೊರಗಿದ್ದರೆ ನೀಡಿದವನಿಗೂ ಪಡೆದವನಿಗೂ ಗೌರವ. ಆದರೆ `ಉಪಕಾರ' ಎನ್ನುವುದು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ದಾಳಿ ಸ್ವರೂಪ ಪಡೆದಿದೆ. ಈ ದಾಳಿಗೆ ಚುನಾವಣಾ ವ್ಯವಸ್ಥೆಯು ತನ್ನನ್ನು ಬಿಕರಿಗೆ ಇಟ್ಟುಕೊಂಡಂತೆ ಕಾಣಿಸುತ್ತದೆ.

ದಶಕದ ಹಿಂದೆ, ಜನರ ಬಾಯಾರಿಕೆ ಬೇರೆ ಆಗಿತ್ತು. ಇಂದಿನ ದಾಹದ ರೀತಿಯೇ ಬೇರೆ ಆಗಿದೆ. ನೀಡುವ ಕೈಗಳು ಬೇಡುವ ಕೈಗಳಾಗಿವೆ. ಈ ಮಾತು ಮತದಾರನಿಗೂ ಅನ್ವಯ ಆಗುತ್ತದೆ. ಕೊಡುಗೈ ದಾನಿಗೂ ಒಪ್ಪುತ್ತದೆ. ದಾನ ನೀಡಿ ದೊಡ್ಡವರಾಗಿದ್ದವರು ಮತಕ್ಕಾಗಿ ಬೇಡುವ ಸ್ಥಿತಿಗೆ ಇಳಿದಿದ್ದಾರೆ. ಸಹಾಯ ಪಡೆದಾಗ `ಪುಣ್ಯಾತ್ಮ' ಎಂದು ಹರಸಿದವರು ದಾನದ ಬಗೆಗೇ ಗುಮಾನಿಪಡುವಂತಾಗಿದೆ. ಎಲ್ಲವೂ `ವೋಟಿನಾಟ'ದ ಲೀಲೆ.

ಮಾಲೂರಿನಿಂದ ಮಾಸ್ತಿಗೆ ಹೋಗುವ ರಸ್ತೆಯಲ್ಲಿ ಸಿಗುವ ಕುಡಿಯನೂರು ಗ್ರಾಮದಲ್ಲಿ ಅಂಗಿ, ಖಾಕಿ ನಿಕ್ಕರ್ ತೊಟ್ಟ ರೈತರೊಬ್ಬರು ಮಾತಿಗೆ ಸಿಕ್ಕರು. ಮಣಿಶೆಟ್ಟಿಹಳ್ಳಿಯವರು. ಚುನಾವಣೆ ವಿಷಯ ಪ್ರಸ್ತಾಪಿಸಿದಾಗ, `ನಮ್ಮ ಜನರಿಗೆ ತಿನ್ನೋ ತಟ್ಟೆಗೆ, ದೇವರ ಫೋಟೊಗೆ ಗತಿ ಇಲ್ಲವೇ...' ಎಂದು ಕಣ್ಣು ಕೆಂಪಾಗಿಸಿಕೊಂಡೇ ಮಾತು ಆರಂಭಿಸಿದರು.

ಮತದಾರರನ್ನು ಋಣದ ಹಂಗಿಗೆ ದೂಡಿ ವೋಟ್ ಗಿಟ್ಟಿಸುವಂತಹ ಹೊಸ ಜಾಡು ದಶಕದ ಹಿಂದೆ ತೆರೆದುಕೊಂಡಿದ್ದು ಇದೇ ಕ್ಷೇತ್ರದಿಂದ. ಗಂಗಾಜಲ, ತಿರುಪತಿ ಲಡ್ಡು, ತೀರ್ಥಯಾತ್ರೆ, ಉಡುಗೊರೆಗಳನ್ನು ಚುನಾವಣೆ ಗೆಲ್ಲುವ ಅಸ್ತ್ರಗಳನ್ನಾಗಿ ಪರಿವರ್ತಿಸಿದರು ಎಸ್.ಎನ್.ಕೃಷ್ಣಯ್ಯ ಶೆಟ್ಟಿ (ಈ ಸಲ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ). ಇದರ ಬೀಸು ಈಗ ಹೊಸ ಎತ್ತರಗಳನ್ನು ಕಂಡಿದೆ. ಬೇಡಿ ಮತ ಪಡೆಯುವುದು ರೂಢಿ. ನೀಡಿ ಒಲಿಸಿಕೊಳ್ಳುವ `ಆಟ' ಮಾಲೂರಿನಿಂದ ಕೋಲಾರಕ್ಕೆ ಕಳೆದ ಚುನಾವಣೆಯಲ್ಲಿ ವಿಸ್ತರಿಸಿತು. ಇಲ್ಲಿ ಗೆಲುವು ಪಡೆದ ವರ್ತೂರು ಪ್ರಕಾಶ್ ಹಲವರಿಗೆ ಪ್ರೇರಣೆಯಾದರು. ಈಗ ಬಂಗಾರಪೇಟೆ, ಚಿಂತಾಮಣಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿಗೂ ಚಾಚಿಕೊಂಡಿದೆ. ಜಿಲ್ಲೆಯ ಆಚೆಗೂ ವಿಸ್ತರಿಸಿದೆ.

ಮಾಲೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಆಮಿಷ ಒಡ್ಡಲಾಗಿದೆ. ಇದನ್ನು ಪಡೆಯಲು ಟೋಕನ್ ವಿತರಿಸಲಾಗಿದೆ. ಯುಗಾದಿ ಹಿಂದಿನ ದಿನ ಅಭ್ಯರ್ಥಿಯೊಬ್ಬರು ಮನೆ ಮನೆಗೂ ಸೀರೆ ಹಂಚಿದ್ದಾರೆ. ಇಬ್ಬರು ಪಕ್ಷೇತರರೂ ಸೇರಿದಂತೆ ಮೂವರು ಉಮೇದುವಾರರ ನಡುವೆ ಉಡುಗೊರೆ, ದೇಣಿಗೆ ನೀಡುವ ವಿಷಯದಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. `ಶೆಟ್ಟರು ಲಡ್ಡು ಹಂಚಿದರೆ, ಗೌಡರದು ಬಾಡೂಟ. ಅರಳೇರಿಯಲ್ಲಿ ಮೊನ್ನೆ ಬಾಡೂಟ ಕಾರ್ಯಕ್ರಮ ಇತ್ತು. ಪೊಲೀಸರಿಗೆ ಗೊತ್ತಾದ ಕಾರಣ ಅನ್ನ-ಸಾರನ್ನು ಕೆರೆಗೆ ಸುರಿದಿದ್ದಾರೆ' ಎಂದು ಅನ್ನ ಮಣ್ಣುಪಾಲಾಯಿತು ಎಂಬ ಅರ್ಥದಲ್ಲಿ ಮಂಜುನಾಥ ತುಸು ಬೇಸರದಿಂದಲೇ ನೆನೆದರು.

ಮಾಲೂರು ತಾಲ್ಲೂಕಿನಲ್ಲಿ ಯಾರ ಮನೆಗೆ ಕಾಲಿಟ್ಟರೂ ಕೃಷ್ಣಯ್ಯ ಶೆಟ್ಟಿ ಕೊಡುಗೆಯಾದ ತಿರುಪತಿ ವೆಂಕಟೇಶ್ವರನ ಪಟವೇ ಮೊದಲು ಕಾಣಿಸುತ್ತದೆ. ಬಾಗೇಪಲ್ಲಿ ಭಾಗದಲ್ಲಿ ಎಸ್.ಎನ್. ಸುಬ್ಬಾರೆಡ್ಡಿ ಹೆಸರಿನ ಗೋಡೆ ಗಡಿಯಾರ ಕಾಣಸಿಗುತ್ತದೆ. ಬಂಗಾರಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಜೇಬಿನ ಮೇಲೆ `ಎಸ್‌ಎನ್' ಇನಿಷಿಯಲ್ ಇರುವ ಟಿ-ಷರ್ಟ್‌ಗಳನ್ನು ತೊಟ್ಟ ಯುವಕರು ಹಳ್ಳಿ ಹಳ್ಳಿಗೂ ಸಿಗುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಟ್ರೇಡ್‌ಮಾರ್ಕ್ ಎಸ್‌ಎನ್. ಇದೇ ಹೆಸರಿನಲ್ಲಿ ಚಾರಿಟಬಲ್ ಟ್ರಸ್ಟ್ ಇದೆ.

ಎತ್ತ ಬೀಸುತ್ತಿದೆ ಗಾಳಿ ಎಂದು ಕೇಳಿದ್ದಕ್ಕೆ, `ಹೇಳೋಕೆ ಆಗೋದಿಲ್ಲ. ಎಸ್‌ಎನ್ ಕಡೆಯವರು, ತುಮಕೂರು ಜಿಲ್ಲೆಯ ಗೊರವನಹಳ್ಳಿ ಲಕ್ಷ್ಮೀ ದೇವಾಲಯಕ್ಕೆ ಮಹಿಳೆಯರಿಗೆ ಬಸ್ ಮಾಡಿಸಿಕೊಟ್ಟು ಕಳುಹಿಸಿಕೊಟ್ಟಿದ್ದಾರೆ. ಮೊನ್ನೆ ಮೊನ್ನೆ ಸ್ವೆಟರ್ ಕೊಟ್ಟಿದ್ದಾರೆ. ಹಳ್ಳಿಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಕೊಟ್ಟವರೆ. ಜನ ಏನು ಮಾಡ್ತಾರೊ ನೋಡ್ಬೇಕು...' ಎಂದು ವಡಗೂರಿನಲ್ಲಿ ಹೊಲ ಉಳುಮೆ ಮಾಡುತ್ತಿದ್ದ ರೈತರೊಬ್ಬರು ಪ್ರತಿಕ್ರಿಯಿಸಿದರು. ಮಹಿಳಾ ಸ್ವ-ಸಹಾಯ ಸಂಘಗಳಿಗೆ ತಲಾ 25 ಸಾವಿರ ರೂಪಾಯಿ ದೇಣಿಗೆ ನೀಡುವ ಭರವಸೆ ಮಾಲೂರಿನಲ್ಲಿ ಹೊರಬಿದ್ದಿದೆ.

ಚಿಂತಾಮಣಿ ಕ್ಷೇತ್ರದಲ್ಲಿ ಹುಡುಗರು ಜೆ.ಕೆ ಹೆಸರು ಜಪಿಸುತ್ತಾರೆ. ಜೆಡಿಎಸ್ ಅಭ್ಯರ್ಥಿ ಕೃಷ್ಣಾರೆಡ್ಡಿ ಇಲ್ಲಿ ಜೆ.ಕೆ ಎಂದೇ ಪರಿಚಿತರು. ಬೆಂಗಳೂರು ನಿವಾಸಿ. `ಗ್ರೌಂಡ್' ಹದಗೊಳಿಸಲು ಒಂದೆರಡು ವರ್ಷಗಳಿಂದ ಕ್ಷೇತ್ರದಲ್ಲಿ ರಾಜಕೀಯ ಕೃಷಿ ನಡೆಸಿದ್ದಾರೆ. ಆಂಜನೇಯರೆಡ್ಡಿ ಮತ್ತು ಗಂಗಿರೆಡ್ಡಿ ಕುಟುಂಬಗಳಿಗೇ ಮಾನ್ಯವೆನಿಸಿದ ಈ ಕ್ಷೇತ್ರದಲ್ಲಿ ದೇಣಿಗೆಗಳ ಬಲದಿಂದ ಮೊದಲ ಬಾರಿಗೆ ಬಿರುಕು ಕಾಣಿಸಿಕೊಂಡಿದೆ. `ಹಳಬರು ಯಾರನ್ನೂ ಹಚ್ಚಿಕೊಳ್ಳೋದಿಲ್ಲ. ಹೊಸಬರು (ಜೆ.ಕೆ) ಊರೂರು ತಿರುಗುತ್ತಿದ್ದಾರೆ' ಎಂದು ಚೊಕ್ಕಿರೆಡ್ಡಿಹಳ್ಳಿಯ ಶೀನಪ್ಪ ಹೇಳಿದರು. `ನಾವು ಕಾಂಗ್ರೆಸಿಗರು. ಎಂ.ಸಿ.ಸುಧಾಕರ್ ಕಾಂಗ್ರೆಸ್ ತೊರೆದ ಕಾರಣ ನಾವೂ ಅವರನ್ನು ಹಿಂಬಾಲಿಸಿದ್ದೇವೆ' ಎಂದರು.

ತಮ್ಮದೇ ಹೆಸರಿನ ಟ್ರಸ್ಟ್ ಮೂಲಕ 13 ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ನಡೆಸುತ್ತಿರುವ ಸುಬ್ಬಾರೆಡ್ಡಿ, ಬಾಗೇಪಲ್ಲಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಗಡಿದಂ (ದೇವರಗುಡಿಹಳ್ಳಿ) ಕ್ಷೇತ್ರದಲ್ಲಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ಜೋಡಿಗಳು ವಿವಾಹ ಬಂಧನಕ್ಕೆ ಒಳಗಾಗಿವೆ. ಆಯ್ದ ದಂಪತಿಗಳಿಗೆ ಉಡುಗೊರೆಯಾಗಿ ಸುಮಾರು 40 ಸಾವಿರ ರೂಪಾಯಿ ಬೆಲೆಬಾಳುವ ಸೀಮೆಹಸುಗಳನ್ನು ನೀಡಲಾಗಿದೆ. ದುಡ್ಡು ಕೇಳಿದರೆ, `ಲೆಯಿರಾ ಪೈಕಿ' (ಎದ್ದೇಳು ಮೇಲೆ) ಎಂದು ಖಡಕ್ಕಾಗಿ ಕಡ್ಡಿ ಮುರಿಯುವ ಸಿಪಿಎಂನ ಜಿ.ವಿ. ಶ್ರೀರಾಮ ರೆಡ್ಡಿ ಅವರನ್ನು ಬರಿ ತತ್ವಬಲದಿಂದ ಗೆಲ್ಲಿಸುವುದು ಹೇಗೆ ಎಂದು ಆ ಪಕ್ಷದ ಕಾರ್ಯಕರ್ತರೊಬ್ಬರು ಚಿಂತೆ ತೋಡಿಕೊಂಡರು. `ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್' ಮೂಲಕ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಕೆ. ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.

ಭೂವ್ಯವಹಾರದಲ್ಲಿ ತೊಡಗಿದವರು, ಹೋಟೆಲ್ ಉದ್ಯಮಿಗಳು ಸೇವಾ ಕಾರ್ಯ ಹಾಗೂ ದೇಣಿಗೆಗಳ ಮೂಲಕ ಗಮನ ಸೆಳೆದು ಬಳಿಕ ಅದನ್ನೇ ರಾಜಕೀಯ ಮೆಟ್ಟಿಲಾಗಿಸಿಕೊಂಡಿದ್ದಾರೆ. ಈ ಬೆಳವಣಿಗೆ, ಸಾಂಪ್ರದಾಯಿಕ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ಸಾಮಾನ್ಯ ಮತದಾರ ಎಂದೂ ಇಲ್ಲದ ಗೊಂದಲಕ್ಕೆ ಒಳಗಾಗಿದ್ದಾನೆ. ಯಾರನ್ನೇ ಕೇಳಿದರೂ `ಹೇಳಲಿಕ್ಕೆ ಆಗುವುದಿಲ್ಲ' ಎನ್ನುತ್ತಾರೆ. ದೊಡ್ಡ ರಾಜಕೀಯ ಪಕ್ಷಗಳ ಪಕ್ಕೆಲುಬು ಮುರಿಯಲು ಪಕ್ಷೇತರರ ದಂಡು ಹಣದ ಥೈಲಿ ಹಿಡಿದು ನಿಶಾಚರರಂತೆ ಸಂಚರಿಸುತ್ತಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಕಂಪನಗಳನ್ನು ಹುಟ್ಟಿಸಿದೆ. ಇದರ ಮಧ್ಯೆ, ಪಾತಾಳಕ್ಕೆ ಇಳಿಯುತ್ತಿರುವ ಅಂತರ್ಜಲ, ಹೂಳಿನಿಂದ ಮುಚ್ಚಿಹೋಗುತ್ತಿರುವ ಕೆರೆಗಳು ಯಾರ ಕಣ್ಣಿಗೂ ಕಾಣುತ್ತಿಲ್ಲ.

`ಗುಮ್ಮ'ನ ಭಯ ಇಲ್ಲ
ಹೊಸ `ತಂತ್ರ'ಗಳಿಗೆ ಬೆನ್ನು ತಿರುಗಿಸಿ, ಹಳೆಯ ವರಸೆಯನ್ನೇ ನೆಚ್ಚಿಕೊಂಡಿರುವ ಕ್ಷೇತ್ರ ಶ್ರೀನಿವಾಸಪುರ. ಸುತ್ತ ದಾನ, ಸೇವೆಗಳ ಭೂತಕೋಲ ನಡೆದಿದ್ದರೂ ಅದ್ಯಾವುದರ ಪರಿವೆ ಇಲ್ಲದಂತೆ ಇಲ್ಲಿನ ಮತದಾರರು ಹಿಂದಿನ ಚುನಾವಣೆಯ ಮತಗಳ ಜಮೆ-ಖರ್ಚಿನ ಲೆಕ್ಕದಲ್ಲೇ ಇದ್ದಾರೆ.ಪಕ್ಷಗಳು ಇಲ್ಲಿ ನೆಪಮಾತ್ರ. ಎಲ್ಲವೂ ವ್ಯಕ್ತಿನಿಷ್ಠ.

ಒಂದು ಕಡೆ ಸ್ವಾಮಿ ಪಕ್ಷ (ಕೆ.ಆರ್.ರಮೇಶಕುಮಾರ್- ಕಾಂಗ್ರೆಸ್), ಮತ್ತೊಂದು ಕಡೆ ರೆಡ್ಡಿ ಪಕ್ಷ (ಜಿ.ಕೆ. ವೆಂಕಟಶಿವಾರೆಡ್ಡಿ- ಜೆಡಿಎಸ್). ಇಬ್ಬರ ನಡುವೆ ಜಿದ್ದಾಜಿದ್ದಿ ಹೋರಾಟ. `ಬೇರೆ ಯಾರೂ ಲೆಕ್ಕಕ್ಕೇ ಇಲ್ಲ' ಎಂದು ಎರಡೂ ಕಡೆಯ ಕಾರ್ಯಕರ್ತರು ಹೆಮ್ಮೆಯಿಂದ ಬೀಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT