ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿ ಡೆವಲಪರ್ಸ್‌ನಿಂದ ಇನ್ನೊಂದು ವಂಚನೆ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಂತ್ರಿ ಡೆವಲಪರ್ಸ್‌ ಅಂಗಸಂಸ್ಥೆಯಾದ ಹಮಾರಾ ಶೆಲ್ಟರ್ಸ್‌ ಸಂಸ್ಥೆಯು ಸಂಪಿಗೆ ರಸ್ತೆ ಬಳಿ ಕೋಟ್ಯಂತರ ರೂಪಾಯಿ ಬೆಲೆಬಾಳುವ 2.31 ಎಕರೆ ಸರ್ಕಾರಿ ಭೂಮಿಗೆ ಅಕ್ರಮವಾಗಿ ಖಾತೆ ಪಡೆದು ಬಳಿಕ ಆ ಭೂಮಿಯನ್ನೇ ಬಿಬಿಎಂಪಿಗೆ ನೀಡಿ ವಂಚಿಸಿರುವುದು ಬಯಲಾಗಿದೆ!

ಸಂಪಿಗೆ ರಸ್ತೆಯ ಸ್ಥಳೀಯರು, ಶಾಸಕರು ಹಾಗೂ ಪಾಲಿಕೆ ಸದಸ್ಯರ ದೂರಿನ ಹಿನ್ನೆಲೆಯಲ್ಲಿ ಬಿಬಿಎಂಪಿ ನಡೆಸಿದ ಜಂಟಿ ತನಿಖೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಹಮಾರಾ ಶೆಲ್ಟರ್ಸ್‌ ಸರ್ಕಾರಿ ಭೂಮಿಯನ್ನೇ ಪಾಲಿಕೆಗೆ ನೀಡಿ ಟಿಡಿಆರ್ ಪಡೆದಿತ್ತು ಎಂಬ ವಿಷಯವೂ ಈ ತನಿಖೆಯಲ್ಲಿ ಪತ್ತೆಯಾಗಿದೆ.

ಸಿ.ಟಿ.ಎಸ್. ಸಂಖ್ಯೆ 3593 ಹಾಗೂ 3593/1ರಲ್ಲಿ ಹಿಂದಿನ ಜಕ್ಕಸಂದ್ರ ಗ್ರಾಮದ ನಕ್ಷೆ ಪ್ರಕಾರ ಸಾರ್ವಜನಿಕ ರಸ್ತೆಗೆ ಮೀಸಲಿಡಲಾದ 2.31 ಎಕರೆ ಭೂಮಿ ಇದೆ. ಕಾನೂನಿನ ಪ್ರಕಾರ ಈ ಭೂಮಿಯನ್ನು ರಸ್ತೆಗೆ ಮೀಸಲಿಡಬೇಕಾಗುತ್ತದೆ.

ಏಕೆಂದರೆ ಕಂದಾಯ ಮತ್ತು ಸರ್ವೇ ಇಲಾಖೆ ಪ್ರಾಧಿಕಾರಗಳು 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ 68ನೇ ನಿಯಮ ಹಾಗೂ 1966ರ ಕರ್ನಾಟಕ ಭೂಕಂದಾಯ ನಿಯಮ 96ರ ಅನ್ವಯ ರಸ್ತೆಯನ್ನು ರದ್ದುಪಡಿಸಿರುವುದು ಕಂಡು ಬಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇಷ್ಟಾದರೂ ಸರ್ಕಾರಿ ಭೂಮಿಯನ್ನು ತನ್ನ ಜಮೀನು ಎಂದು ಸುಳ್ಳು ಮಾಹಿತಿ ನೀಡಿ ಪಾಲಿಕೆಯಿಂದ ಖಾತೆ ಪಡೆದಿರುವ ಹಮಾರಾ ಶೆಲ್ಟರ್ಸ್‌ ಸಂಸ್ಥೆಯು ವಾಸ್ತವದಲ್ಲಿ 28 ಗುಂಟೆ ಭೂಮಿಯನ್ನಷ್ಟೇ ನೀಡಿದ್ದರೂ 3 ಎಕರೆ ಭೂಮಿ ನೀಡಿರುವುದಾಗಿ ಹೇಳಿ ಟಿಡಿಆರ್ ಹಕ್ಕು ಪಡೆದಿದೆ. ಇದನ್ನು ಕೂಡಲೇ ರದ್ದುಪಡಿಸಬೇಕು. ಹಾಗೆಯೇ ಸುಳ್ಳು ಮಾಹಿತಿ ನೀಡಿದ ಹಮಾರಾ ಶೆಲ್ಟರ್ಸ್‌ ಸಂಸ್ಥೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಹಾಗೆಯೇ ವಾಸ್ತವಾಂಶವನ್ನು ಮುಚ್ಚಿಟ್ಟು ಸುಳ್ಳು ಮಾಹಿತಿ ನೀಡಿ ಪಾಲಿಕೆಯಿಂದ ಪಡೆದಿರುವ ಖಾತೆಯನ್ನು ರದ್ದುಪಡಿಸಬೇಕು. ಪಾಲಿಕೆ ವತಿಯಿಂದ ರಸ್ತೆ ನಿರ್ಮಿಸಬೇಕು ಎಂದೂ ಹೇಳಿದೆ. ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)- 1995 ಹಾಗೂ ಪರಿಷ್ಕೃತ ಮಹಾನಕ್ಷೆ- 2015ರಲ್ಲಿ ತಿಳಿಸಿರುವಂತೆ ಜಕ್ಕಸಂದ್ರ ಗ್ರಾಮ ನಕ್ಷೆಯಲ್ಲಿ 2.31 ಎಕರೆ ಭೂಮಿಯಲ್ಲಿ ಹಳೆಯ ಬೆಂಗಳೂರು- ತುಮಕೂರು ರಸ್ತೆ ಎಂದು ನಮೂದಾಗಿದೆ.

ಹಾಗಿದ್ದರೂ ಇದನ್ನು ಪರಿಶೀಲಿಸದೇ ಟಿಡಿಆರ್ ನೀಡಲು ಶಿಫಾರಸು ಮಾಡಿರುವ ನಗರ ಯೋಜನಾ ಇಲಾಖೆಯ ಅಂದಿನ ಜಂಟಿ ನಿರ್ದೇಶಕರು/ ಉಪ ನಿರ್ದೇಶಕರು/ ರಸ್ತೆ ವಿಸ್ತರಣೆ ವಿಭಾದ ಎಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
|
`ಪ್ರಭಾವಶಾಲಿಗಳಿಗೆ ಬಗ್ಗುವುದಿಲ್ಲ~
ಬೆಂಗಳೂರು:
`ಸರ್ಕಾರಿ ಭೂಮಿ ಕಬಳಿಕೆ ಮಾಡಿಕೊಂಡವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಮಣಿಯುವ ಪ್ರಶ್ನೆಯೇ ಇಲ್ಲ. ಸಂಪಿಗೆ ರಸ್ತೆ ಸಮೀಪ ಮಂತ್ರಿ ಡೆವಲಪರ್ಸ್‌ ಸಂಸ್ಥೆಯು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ವಶಕ್ಕೆ ಪಡೆಯಲಾಗುವುದು~ ಎಂದು ಗೃಹ ಸಚಿವ ಆರ್. ಅಶೋಕ ಸ್ಪಷ್ಟಪಡಿಸಿದರು.

ಬನಶಂಕರಿ ದೇವಸ್ಥಾನ ವಾರ್ಡ್ ವ್ಯಾಪ್ತಿಯಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
`ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಮುಂದಾದಾಗ ಒತ್ತಡ ಹೇರುವುದನ್ನು ಸಹಿಸಲಾಗುವುದಿಲ್ಲ. ಯಾವುದೇ ರೀತಿಯ ಒತ್ತಡ ಹೇರಿ ಭೂಕಬಳಿಕೆಯಿಂದ ಪಾರಾಗಬಹುದು ಎಂಬ ಭ್ರಮೆ ಬೇಡ~ ಎಂದರು.

`ಮಂತ್ರಿ ಡೆವಲಪರ್ಸ್‌ ಸಂಸ್ಥೆ ಅಪಾರ್ಟ್‌ಮೆಂಟ್ ನಿರ್ಮಿಸಿರುವ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್‌ಅನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಈ ಪ್ರದೇಶದಲ್ಲಿರುವ ಪಾಲಿಕೆ ಭೂಮಿಯನ್ನು ವಶಕ್ಕೆ ಪಡೆಯುವಂತೆ ಪಾಲಿಕೆಗೆ ಸೂಚಿಸಲಾಗುವುದು~ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವಾಸಿಗಳು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಚಿವರಲ್ಲಿ ಅಳಲು ತೋಡಿಕೊಂಡರು. ಬಳಿಕ ಪ್ರತಿಕ್ರಿಯೆ ನೀಡಿದ ಅಶೋಕ, `ಈ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ನಿಯಮಿತವಾಗಿ ತ್ಯಾಜ್ಯ ವಿಲೇವಾರಿಯಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.
ಪಾಲಿಕೆ ಸದಸ್ಯ ಎ.ಎಚ್. ಬಸವರಾಜು ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT