ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿಮಂಡಲ ಸಭೆ ನಡೆಸಿದ ಎಮ್ಮೆಗಳು!

Last Updated 18 ಜನವರಿ 2012, 9:55 IST
ಅಕ್ಷರ ಗಾತ್ರ

ಚಾಮರಾಜನಗರ : ಒಮ್ಮೆಲೆ ಚಾಮರಾಜೇಶ್ವರ ದೇಗುಲದ ಮುಂದೆ ಎಮ್ಮೆಗಳ ಆಗಮನವಾಯಿತು. ಸರಕು ಸಾಗಣೆ ಆಟೋದಲ್ಲಿ ಬಂದು ಎಮ್ಮೆಗಳ ಹಿಂಡು ನೋಡಿ ನಾಗರಿಕರು ಕಕ್ಕಾಬಿಕ್ಕಿಯಾದರು. ರಸ್ತೆಬದಿಯಲ್ಲಿ ಹೋಗುತ್ತಿದ್ದವರು ದೇವಾಲಯದ ಆವರಣದತ್ತ ಮುಖ ಮಾಡಿದರು. ಅಲಂಕೃತ ಎಮ್ಮೆಗಳ ಮೇಲೆ ಬರೆದಿದ್ದ ಬರಹ ನೋಡಿ ಮುಸಿ ಮುಸಿ ನಕ್ಕರು!

ಜಿಲ್ಲಾ ಕೇಂದ್ರಕ್ಕೆ ಮುಖ್ಯಮಂತ್ರಿ ಭೇಟಿ ನೀಡುವುದಿಲ್ಲ. ಕೆಲವು ಸಚಿವರು ಕೂಡ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಡಿ ಹಮ್ಮಿಕೊಂಡಿದ್ದ `ಎಮ್ಮೆಗಳ ಮಂತ್ರಿಮಂಡಲ ಸಭೆ~ ನಗರದಲ್ಲಿ ಮಂಗಳವಾರ ಯಶಸ್ವಿಯಾಗಿ ನಡೆಯಿತು.

ದೇವಾಲಯದ ಮುಂಭಾಗ ಶಾಮಿಯಾನ ಹಾಕಿ ಆಸನದ ವ್ಯವಸ್ಥೆ ಮಾಡಲಾಗಿತ್ತು. `ಶ್ರೀಚಾಮರಾಜನಗರದ ಮುಖ್ಯಮಂತ್ರಿ~ಯೆಂದು ನಾಮಾಂಕಿತಗೊಂಡಿದ್ದ ಎಮ್ಮೆ ವೇದಿಕೆಯತ್ತ ಧಾವಿಸಿತು. ಬಳಿಕ 27 ಜಿಲ್ಲೆಗಳನ್ನು ಪ್ರತಿನಿಧಿಸುತ್ತಿದ್ದ ವಿವಿಧ ಖಾತೆ ಹೊಂದಿದ್ದ ಎಮ್ಮೆಗಳು ಮುಖ್ಯಮಂತ್ರಿಯ ಹಿಂದೆಯೇ ಬಂದವು. ಈ ವಿನೂತನ ಪ್ರತಿಭಟನೆ ಕಂಡು ನಾಗರಿಕರು ಕೇಕೆ ಹಾಕಿ ಸಂಭ್ರಮಿಸಿದರು.

ಬಳಿಕ ವೇದಿಕೆ ಏರಿದ ವಾಟಾಳ್ ನಾಗರಾಜ್ ಸರ್ಕಾರದ ವಿರುದ್ಧ ಕಿಡಿಕಾರಲು ಆರಂಭಿಸಿದರು. `ಮೂಢನಂಬಿಕೆಗೆ ಜೋತುಬಿದ್ದು ಮುಖ್ಯಮಂತ್ರಿ, ಸಚಿವರು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಿಲ್ಲ. ಸಂಸದರು ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ. ಮಠಾಧೀಶರು, ಪ್ರಗತಿಪರ ಚಿಂತಕರು ಕೂಡ ಮೌನವಹಿಸಿದ್ದಾರೆ~ ಎಂದು ದೂರಿದರು.

`ಮುಖ್ಯಮಂತ್ರಿ~ಯಾಗಿದ್ದ ಎಮ್ಮೆಯ ಮುಂದೆ ಬಂದ ಅವರು ಹೊಕ್ಕೊತ್ತಾಯ ಮಂಡಿಸಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಜಿಲ್ಲಾ ಕೇಂದ್ರಕ್ಕೆ ತಿ.ನರಸೀಪುರ ದಿಂದ 2ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಬೇಕು. ಜಿಲ್ಲೆಯ 1 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲು ಎರಡು ಬೃಹತ್ ಕೈಗಾರಿಕೆ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಗಡಿ ಜಿಲ್ಲೆಯಲ್ಲಿಯೇ ವರ್ಷದಲ್ಲಿ ಎರಡು ಬಾರಿ ಮಂತ್ರಿ ಮಂಡಲ ಸಭೆ ನಡೆಸಬೇಕು. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸೌಲಭ್ಯ ಕಲ್ಪಿಸಲು ಶೌಚಾಲಯ ನಿರ್ಮಿಸಬೇಕು. ಕೂಡಲೇ, ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಬೇಕು. ಪಟ್ಟಣ ಪ್ರದೇಶದ ನಿವಾಸಿಗಳಿಗೆ ಉಪ ನಗರ ನಿರ್ಮಿಸಿ 10 ಸಾವಿರ ನಿವೇಶನ ಹಂಚಬೇಕು. ಎಲ್ಲ ಹಳ್ಳಿಗಳಿಗೂ ನದಿಪಾತ್ರದಿಂದ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.

ನೆನೆಗುದಿಗೆ ಬಿದ್ದಿರುವ ಕಬಿನಿ 2ನೇ ಹಂತದ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು. ಚಾಮರಾಜೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ 5 ಕೋಟಿ ರೂ ನೀಡಬೇಕು. ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು. ಮೆಟ್ಟುಪಾಳ್ಯಂ ಯೋಜನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ತ್ವರಿತವಾಗಿ ಮಲೆಮಹದೇಶ್ವರ ಬೆಟ್ಟದಲ್ಲಿ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸಬೇಕು. ಪ್ರವಾಸೋದ್ಯಮ ತಾಣವಾಗಿ ಹೊಗೇನಕಲ್ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ `ಮುಖ್ಯಮಂತ್ರಿ ಎಮ್ಮೆ~ಗೆ ಮನವಿ ಸಲ್ಲಿಸಿದರು. ಮುಖಂಡರಾದ ಕಾರ್‌ನಾಗೇಶ್, ಶಾ. ಮುರಳಿ, ಚಾ.ರಂ. ಶ್ರೀನಿವಾಸಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT